ಅದ್ದೂರಿಯಾಗಿ ನಡೆದ ಅಂತ್ಯ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವ …
ಪಾವಗಡ: ಅಂತ್ಯ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧಿ ಹೊಂದಿರುವ ತಾಲ್ಲೂಕಿನ ನಾಗಲಮಡಿಕೆಯ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಪುಷ್ಯ ಶುದ್ಧ ಷಷ್ಠಿ ಯ ಅಂಗವಾಗಿ ಬುಧವಾರ ವಿಜೃಂಭಣೆಯಿಂದ ನಡೆಯಿತು. ಉತ್ಸವ ಮೂರ್ತಿಗಳನ್ನು ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ,
ಬೆಳಿಗ್ಗೆ 11.30 ಕ್ಕೆ ಬ್ರಹ್ಮರಥೋತ್ಸವಕ್ಕೆ ಉಪ ವಿಭಾಗಾಧಿಕಾರಿ ರಿಷಿ ಆನಂದ್, ತಹಶೀಲ್ದಾರ್ ವರದರಾಜು, ಎನ್.ಮೂರ್ತಿ, ಕಂದಾಯ ನಿರೀಕ್ಷಕ ರವಿ ಚಾಲನೆ ನೀಡಿದರು.
ಸಾವಿರಾರು ಜನರು ರಥೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಬ್ರಹ್ಮಣ್ಯೇಶ್ವರನ ಮೂಲ ವಿಗ್ರಹದ ದರ್ಶನಕ್ಕಾಗಿ ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡಿರು. ದೇಗುಲದ ಮುಂಭಾಗದ ಇರುವ ನಾಗ ವಿಗ್ರಹಗಳನ್ನು ಸ್ವಚ್ಛಗೊಳಿಸಿ, ಹಾಲೆರೆದು ಪೂಜೆ ಸಲ್ಲಿಸಿದರು.
ದೇವಾಲಯದಲ್ಲಿ ಏಕಾದಶ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಧ್ವಜಾರೋಹಣ, ವಲ್ಲಿ ದೇವಸೇನಾ ಸಮೇತ ಸುಬ್ರಹ್ಮಣ್ಯೇಶ್ವರ ಸ್ವಾಮಿ ಕಲ್ಯಾಣೋತ್ಸವ, ಅಭಿಷೇಕ, ಪ್ರಾಕಾರೋತ್ಸವ ನಡೆಯಿತು.
ರಥೋತ್ಸವದ ನಂತರ ಸುಬ್ರಹ್ಮಣ್ಯಸ್ವಾಮಿ ಉತ್ಸವ ಮೂರ್ತಿಯನ್ನು ಸಂಪ್ರದಾಯದಂತೆ ಅನ್ನದ ರಾಶಿಯ ಮೇಲೆ ಇರಿಸಿ ಪೂಜೆ ಸಲ್ಲಿಸಲಾಯಿತು. ಪ್ರಧಾನ ಅರ್ಚಕ ಪಿ. ಬದರಿನಾಥ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ವರದಿ: ಶ್ರೀನಿವಾಸಲು ಎ