IMG 20230205 WA0009

JD (S) : ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಸಂಕಲ್ಪ ಯಾತ್ರೆ ಮಾಡಲಿ…!

POLATICAL STATE

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಸಂಕಲ್ಪ ಯಾತ್ರೆ ಮಾಡಲಿ ಎಂದು ಟಾಂಗ್

ವಾರದಲ್ಲಿ ಎರಡನೇ ಪಟ್ಟಿ: ಎ.ಮಂಜು ಅವರಿಗೆ ಕ್ಲಿಯರ್ ಆಗಿದೆ ಎಂದ ಮಾಜಿ ಸಿಎಂ
ಜೆಡಿಎಸ್ ಸೇರಿದ ಸ್ವಯಂ ನಿವೃತ್ತ ನ್ಯಾಯಮೂರ್ತಿ
*
*

ಬೆಂಗಳೂರು: ಪಂಚರತ್ನ ರಥಯಾತ್ರೆ ಬಗ್ಗೆ ಲಘುವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಬಿಜೆಪಿ ನಾಯಕರು ವಿಜಯ ಸಂಕಲ್ಪ ಯಾತ್ರೆ ಮಾಡುವ ಬದಲು ‘ ಸಿಡಿ ಸಂಕಲ್ಪ ಯಾತ್ರೆ ‘ ಮಾಡಿದರೆ ಲೇಸು ಎಂದು ಕುಟುಕಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಕೇಂದ್ರ ಸಚಿವರು ತಾವು ಕೂತಿರುವ ಹುದ್ದೆಯ ಘನತೆಯನ್ನು ಮರೆತು ಮಾತನಾಡಿದ್ದಾರೆ. ಅವರಿಗೆ ಅವರದೇ ಭಾಷೆಯಲ್ಲಿ ಹೇಳುವುದಾದರೆ, ಅವರು ವಿಜಯ ಸಂಕಲ್ಪ ಯಾತ್ರೆ ಮಾಡುವ ಬದಲು ‘ ಸಿಡಿ ಸಂಕಲ್ಪ ಯಾತ್ರೆ ‘ ನಡೆಸಲಿ. ಅವರ ಯಾತ್ರೆಗೆ ಸಿಡಿ ಸಂಕಲ್ಪ ಯಾತ್ರೆ ಎನ್ನುವುದು ಸರಿಯಾದ ಹೆಸರು ಎಂದು ಪ್ರಹ್ಲಾದ್ ಜೋಷಿ ಅವರಿಗೆ ಟಾಂಗ್ ನೀಡಿದರು.

ಬಿಜೆಪಿಯವರು ಸಿಡಿ ಸಂಕಲ್ಪ ಅಂತ ಹೆಸರಿಟ್ಟು ಹೋದರೆ ನಾನು ನವಗ್ರಹ ಅಂತ ಹೆಸರು ಬದಲಾಯಿಸುತ್ತವೆ. ಕೇಂದ್ರದ ಮಂತ್ರಿಯಾಗಿ ಅವರು ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಅದೇ ಧೂಳು ಮಿಶ್ರಿತ ರಸ್ತೆಗಳು, ಸ್ವಚ್ಚತೆ ಇಲ್ಲದ ಗ್ರಾಮಗಳನ್ನು ಅವರು ನೋಡಿದ್ದರೆಯೇ? ಅವರ ಸರಕಾರದ ಸ್ವಚ್ಚ ಭಾರತದ ಹಣೆಬರಹ ಏನಾಗಿದೆ ಎನ್ನುವುದನ್ನು ಅವರು ಉತ್ತರ ಕರ್ನಾಟಕದ ಹಳ್ಳಿಗಳಿಗೆ ಬಂದು ನೋಡಲಿ ಎಂದು ಕುಮಾರಸ್ವಾಮಿ ಅವರು ಚಾಟಿ ಬೀಸಿದರು.

ಪಂಚರತ್ನ ರಥಯಾತ್ರೆ ವೇಳೆ ಪ್ರತಿನಿತ್ಯ ನೂರಾರು ಜನರ ಸಮಸ್ಯೆ ಆಲಿಸಿದ್ದೇನೆ. ನಿಮ್ಮ ಮನೆ ಮುಂದೆ ಬರುವಂತವರು ಯಾರು ಅಂತ ಗೊತ್ತಿದೆ. ಪಂಚರತ್ನ ರಥಯಾತ್ರೆಯ ಯಶಸ್ಸು ಸಹಿಸಲಾಗದೆ ಹೀಗೆ ಮಾತನಾಡುತ್ತಿದ್ದೀರಿ. ಇಂಥ ಹೇಳಿಕೆಗಳಿಗೆ ನಾನು ಕೇರ್ ಮಾಡಲ್ಲ. ನಮ್ಮ ಬಗ್ಗೆ ಮಾತಾಡಿದಷ್ಟು ನಿಮಗೆ ಸಿಗುವ ಸ್ಥಾನಗಳು ಕಡಿಮೆ ಆಗುತ್ತವೆ, ನೆನಪಿರಲಿ. ಅವರಿಗೆ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಅವರು ಪ್ರಹ್ಲಾದ್ ಜೋಷಿ ಅವರನ್ನು ತರಾಟೆಗೆ ತೆಗೆದುಕೊಂಡರು.

ದೇವೆಗೌಡರ ಕುಟುಂಬ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಹಾಗೆಯೇ, ನಿಮ್ಮ ಕುಟುಂಬದ ಹಣೆಬರಹ ಏನು ಎನ್ನುವುದು ಜನತೆಗೆ ಗೊತ್ತಿದೆ. ಬ್ಯಾಂಕ್ ಗಳನ್ನು ನುಂಗಿ ನೀರು ಕುಡಿದಿರುವ ನಿಮ್ಮ ಸಹೋದರನ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ. ಅಂಥ ವಂಚನೆಯ ಕೆಲಸವನ್ನು ನಮ್ಮ ಕುಟುಂಬ ಮಾಡಿಲ್ಲ ಎಂದು ಕೇಂದ್ರ ಸಚಿವರ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಗುಡುಗಿದರು.

ನಾವು ಯಾವುದೇ ಗಲಭೆಗೆ ಅವಕಾಶ ಕೊಡದೇ ಸುಗಮವಾಗಿ ಅಭ್ಯರ್ಥಿ ಆಯ್ಕೆ ಮಾಡ್ತೀವಿ. ಈಗಾಗಲೇ 93 ಜನ ಅಭ್ಯರ್ಥಿಗಳ ಆಯ್ಕೆ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ಇಂಥವರಿಗೆ ನಾವು ಉತ್ತರ ಕೊಡೋದಿಲ್ಲ ಎಂದು ಅವರು ತಿಳಿಸಿದರು.

ಬಿಜೆಪಿ ನಾಯಕರಿಗೆ ಪಂಚರತ್ನ ಯಾತ್ರೆ ಬಗ್ಗೆ ತುಂಬಾ ಯೋಚನೆ ಆಗಿದೆ. ದುಡ್ಡು ಕೊಟ್ಟು ಕರೆದರು ಕೂಡ ಅವರ ಸಭೆಗಳಿಗೆ ಜನ ಬರ್ತಾ ಇಲ್ಲ. ನಮ್ಮ ರಥಯಾತ್ರೆಯ ನಡುರಾತ್ರಿ ಅಷ್ಟೇ ಅಲ್ಲ, ಬೆಳಗಿನ ಜಾವ ಆದರೂ ಜನ ಸೇರುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಪ್ರಹ್ಲಾದ್ ಜೋಷಿ ಅವರು ಇರುವ ಪಾರ್ಟಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ಯಾವ ಪಾರ್ಟಿಯಲ್ಲಿ ಕುಟುಂಬ ರಾಜಕಾರಣ ಇಲ್ಲ, ಹೇಳಿ? ನಮ್ಮ ಪಕ್ಷದಲ್ಲಿ ಮಾತ್ರ ಇದೆಯಾ? ಎಂದು ಅವರು ಪ್ರಶ್ನಿಸಿದರು.

ಹೈದರಾಬಾದ್ ಕರ್ನಾಟಕಕ್ಕೆ ಬಿಜೆಪಿಯವರು ಕಲ್ಯಾಣ ಕರ್ನಾಟಕ ಅಂತ ಹೆಸರು ಇಟ್ಟಿದ್ದಾರೆ. ಅಲ್ಲಿ ಹೋದರೆ ಗೊತ್ತಾಗುತ್ತೆ ಇವರು ಏನು ಕಲ್ಯಾಣ ಮಾಡಿದ್ದಾರೆ ಎಂದು. ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಇವರಿಗೆ ನಾಚಿಕೆ ಆಗಬೇಕು ಎಂದು ಕಿಡಿ ಕಾರಿದರು ಕುಮಾರಸ್ವಾಮಿ ಅವರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನಿಷ್ಠ 40-45 ಸ್ಥಾನ ನೀಡಲು ಜನ ಮುಂದಾಗಿದ್ದಾರೆ. ಜನ ಕೂಡ ಆಶಿರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ರಾತ್ರಿ ಒಂದು ಗಂಟೆಯಾದರೂ ಜನರು ನಿದ್ದೆಗೆಟ್ಟು ರಥಯಾತ್ರೆಯಲ್ಲಿ ಭಾಗಿಯಾಗಿದ್ದರು. ಇದನ್ನು ನಮ್ಮನ್ನು ಟೀಕೆ ಮಾಡುವ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಅವರು ತಿರುಗೇಟು ಕೊಟ್ಟರು.

ವಾರದಲ್ಲಿ ಎರಡನೇ ಪಟ್ಟಿ:

ಈ ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ಯಾವುದೇ ಕ್ಷೇತ್ರದ ಅಭ್ಯರ್ಥಿ ಬಗ್ಗೆ ನಮಗೆ ಗೊಂದಲ ಇಲ್ಲ. ಈಗಾಗಲೇ ಘೋಷಿತ ಅಭ್ಯರ್ಥಿಗಳ ಪೈಕಿ ಒಂದಿಷ್ಟು ಬದಲಾವಣೆ ಆಗಬಹುದು. ಆರೇಳು ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ನಮ್ಮ ನಿರೀಕ್ಷೆಗಳಿಗೆ ತಲುಪದೇ ಇರುವ ಅಭ್ಯರ್ಥಿಗಳ ಬದಲಾವಣೆ ಮಾಡುತ್ತೇವೆ ಎಂದರು ಕುಮಾರಸ್ವಾಮಿ ಅವರು.

ನಮ್ಮ ಪಕ್ಷದ ಮಿಷನ್ 123 ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು, 140 ಗುರಿ ಇಟ್ಟುಕೊಂಡು ಹೋಗಿದ್ದಾರೆ. ಆ 140ರಲ್ಲಿ 1 ತೆಗೆದುಬಿಡಿ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.

ಪಕ್ಷ ಉಳಿಸಲು ನಾವು ನಮ್ಮ ಮನೆಯವರಿಗೆ ಟಿಕೆಟ್ ನೀಡಿದ್ದೇವೆ. ಅಂತಹ ಕಾರಣಕ್ಕೆ ನಾನು ಕೂಡ ಎರಡು ಕಡೆ ನಿಂತೆ. ಕೊನೆ ಹಂತದಲ್ಲಿ ಅಭ್ಯರ್ಥಿ ಇಲ್ಲ ಅಂತ ತಲೆ ಕೊಟ್ಟಿದ್ದೇವೆ. ಒಮ್ಮೆ ಸೋತಿದ್ದೇವೆ, ಒಮ್ಮೆ ಗೆದ್ದಿದ್ದೇವೆ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಉಬ್ಬಿಲ್ಲ. ಕುಟುಂಬ ರಾಜಕಾರಣ ಬಗ್ಗೆ ಮಾತಾಡೋಕೆ ನೈತಿಕತೆ ಬೇರೆ ಪಕ್ಷಗಳಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ಹೇಳಿದರು.

ಹಾಸನ ಟಿಕೆಟ್ ವಿಚಾರದ ಬಗ್ಗೆ ಇನ್ನೂ ಯಾವುದೇ ಚರ್ಚ ಆಗಿಲ್ಲ. ಮಾಧ್ಯಮದಲ್ಲಿ ನಾನು ಮಾತಾಡಿರೋದು ಅಷ್ಟೆ. ಎರಡು ಮೂರು ದಿನದಲ್ಲಿ ಚರ್ಚೆ ಮಾಡುತ್ತೇವೆ. ಈ ವಿಷಯದಲ್ಲಿ ದಯಮಾಡಿ ಪದೇಪದೆ ದೇವೇಗೌಡರ ಹೆಸರು ತರಬೇಡಿ ಎಂದು ಅವರು ಮನವಿ ಮಾಡಿದರು.

ಎ.ಮಂಜು ಅವರಿಗೆ ಕ್ಲಿಯರ್ ಆಗಿದೆ:

ಹಾಲಿ ಶಾಸಕರಾದ ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಸಭೆ ಕರೆದಾಗ ಅವರು ಬಂದಿಲ್ಲ. ಎರಡು ವರ್ಷದಿಂದ ಅವರು ಪಕ್ಷದಿಂದ ದೂರ ಇದ್ದಾರೆ. ಈಗಾಗಲೇ ಎ.ಮಂಜು ಅವರ ಜತೆ ಮಾತಾಡಿದ್ದೇನೆ. ರೇವಣ್ಣ ಅವರು ಕೂಡ ಎ.ಮಂಜು ಜತೆ ಮಾತಾಡಿದ್ದಾರೆ. ಎ.ಮಂಜು ಅವರಿಗೆ ಕ್ಲಿಯರ್ ಆಗಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

IMG 20230205 WA0005

ಜೆಡಿಎಸ್ ಸೇರಿದ ನಿವೃತ್ತ ನ್ಯಾಯಮೂರ್ತಿ:

ಚಿತ್ತಾಪುರದಲ್ಲಿ ಸಿವಿಲ್ ನ್ಯಾಯಮೂರ್ತಿ ಆಗಿ ಸ್ವಯಂ ನಿವೃತ್ತಿಯಾದ ಸುಭಾಷ್ ಚಂದ್ರ ರಾಥೋಡ್ ಅವರು ಇಂದು ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಪಕ್ಷ ಸೇರಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ರಾಥೋಡ್ ಅವರಿಗೆ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರ ಮಾಡಿಕೊಂಡರು.

ರಾಥೋಡ್ ಅವರಿಗೆ ಇನ್ನೂ ಸೇವಾವಧಿ ಇತ್ತು. ಆದರೂ ಜನಸೇವೆ ಮಾಡಲು ಮುಂದೆ ಬಂದಿದ್ದಾರೆ. ಅವರಿಗೆ ಚಿತ್ತಾಪುರ ಟಿಕೆಟ್ ನೀಡಲಾಗುವುದು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.