IMG 20230811 WA0006

Karnataka : ಶೀಘ್ರದಲ್ಲೇ ಹೊಸ ಪ್ರವಾಸೋದ್ಯಮ ನೀತಿ ಜಾರಿ….!

Genaral STATE

ಶೀಘ್ರದಲ್ಲೇ ಹೊಸ ಪ್ರವಾಸೋದ್ಯಮ ನೀತಿ ಜಾರಿ: ಸಚಿವ ಎಚ್.ಕೆ.ಪಾಟೀಲ್

ಕಾನೂನು ಸುಧಾರಣೆಗೆ ಸಿದ್ಧತೆ; ತಜ್ಞರೊಂದಿಗೆ ಸಭೆ

· ಬಡವರಿಗೂ ಏಟುಕುವಂತೆ ಪ್ರವಾಸೋದ್ಯಮ ಅಭಿವೃದ್ಧಿ

· ಶ್ರದ್ಧಾ ಪ್ರವಾಸಿ ಕೇಂದ್ರಗಳ ಕೇಂದ್ರೀಕೃತ ನೀತಿಗೆ ಆದ್ಯತೆ

· ನಂದಿ ಬೆಟ್ಟದ ಸಮಗ್ರ ಅಭಿವೃದ್ಧಿಗೂ ಚಿಂತನೆ

ಬೆಂಗಳೂರು: ಮುಂದಿನ ಒಂದು ತಿಂಗಳ ಒಳಗಾಗಿ ರಾಜ್ಯ ಹೊಸ ಪ್ರವಾಸೋದ್ಯಮ ನೀತಿ ಜಾರಿಯಾಗಲಿದೆ ಎಂದು ಪ್ರವಾಸೋದ್ಯಮ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್ ಅವರು ತಿಳಿಸಿದರು.

ಶುಕ್ರವಾರ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸ ಮತ್ತು ವಿಶ್ವಪ್ರಸಿದ್ಧ ನಂದಿಗಿರಿಧಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 95 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 200 ಆಸನಗಳ ಸಾಮರ್ಥ್ಯದ ಸಮ್ಮೇಳನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.

ಇಷ್ಟು ದಿನಗಳ ಕಾಲ ಪ್ರವಾಸೋದ್ಯಮ‌ ಎಂದರೆ ಶ್ರೀಮಂತರಿಗೆ ಎಂಬ ಭಾವನೆ ಇತ್ತು. ಪ್ರವಾಸೋದ್ಯಮ ಇಲಾಖೆ ಆ ರೀತಿಯ ಅಪವಾದವನ್ನು ತೊಡೆದು ಹಾಕಿ ಶ್ರಮಿಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆ ತರಲು ಚಿಂತನೆ ನಡೆಸಿದೆ. ಕೃಷಿ, ಶಿಕ್ಷಣ ಮತ್ತು ಶ್ರದ್ಧಾ ಪ್ರವಾಸಿ ಕೇಂದ್ರಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವುಗಳ ಬೆಳವಣಿಗೆಗೆ ಪೂರಕವಾಗಿ ಮತ್ತು ಸಹಕಾರಿಯಾಗಿ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯತೆಯನ್ನು ಸರ್ಕಾರ ಕಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿ ಮಾಡಲು ನಿರ್ಧರಿಸಿದೆ. ಇನ್ನು ಒಂದು ತಿಂಗಳೊಳಗಾಗಿ ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಯಾಗಲಿದೆ ಎಂದರು.

ನಂದಿ ಬೆಟ್ಟದಲ್ಲಿ ಕೆಎಸ್ ಡಿಟಿಸಿ ಬಂದ ಮೇಲೆ ಪ್ರವಾಸಿಗರಿಗೆ ಎಲ್ಲಿ ಏನಿದೆ ಎಂದು ತಿಳಿಯಲು ಸೂಚನಾ ಫಲಕಗಳನ್ನು ಹಾಕಲಾಗಿದೆ. ಶೌಚಾಲಯ ವ್ಯವಸ್ಥೆಯನ್ನು ಉತ್ತಮ ಗೊಳಿಸಲಾಗಿದೆ, ಬೆಟ್ಟದ ಸ್ಚಚ್ಚತೆಗೆ 20 ಮಂದಿ ಸಿಬ್ಬಂದಿ ನೇಮಿಸಲಾಗಿದೆ ಎಂದು ಸಚಿವರು ತಿಳಿಸಿದರು.

ನಂದಿ ಸಮಗ್ರ ಅಭಿವೃದ್ಧಿ:

ಬ್ಯಾಂಬೊ ವಾಕ್ ವೇಯನ್ನು ಪುನರ್ ಅಭಿವೃದ್ಧಿ ಪಡಿಸಲಾಗಿದೆ. ನೆಲ್ಲಿಕಾಯಿ ಬಸವಣ್ಣ ದೇವಾಲಯವನ್ನು ಹೊಸದಾಗಿ ನವೀಕರಣ ಮಾಡಲಾಗಿದೆ. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 150 ಸೊಲಾರ್ ದೀಪಗಳನ್ನು ಅಳವಡಿಸಲಾಗಿದೆ. ಉತ್ತಮ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರವಾಸಿಗರು ಕುಳಿತುಕೊಳ್ಳಲು ಹೊಸದಾಗಿ 50 ವಿಶ್ರಾಂತಿ ಆಸನಗಳನ್ನು ಅಳವಡಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯನ್ನು ಉತ್ತಮ ಪಡಿಸಿ 4 ತಿಂಗಳಲ್ಲಿ ಸುಮಾರು 6 ಕೋಟಿ ಆದಾಯ ತಂದು ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಆದಾಯ ಹೆಚ್ಚಿಸಲು ಯೋಜಿಸಲಾಗಿದೆ. ಒಟ್ಟಾರೆ ನಂದಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಕೆ.ಎಸ್.ಟಿ.ಡಿ. ನಿಗಮದ ಸ್ಥಳೀಯ ಅಧಿಕಾರಿಗಳು ಸೇರಿದಂತೆ ಪ್ರವಾಸೋದ್ಯಮ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.