ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು….!
ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಶ್ರೀ ಚೌಡೇಶ್ವರಿ ಶಿಕ್ಷಣ ಸಂಸ್ಥೆಯು 20 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದು, ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಟಿ.ಉಮೇಶ್ ತಿಳಿಸಿದರು.
ಶಾಲೆಯಲ್ಲಿ ಹಮ್ಮಿಕೊಂಡಿದ್ದ 20ನೇ ವಾರ್ಷಿಕೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಗೆ ಮೂಲಭೂತ ಶಿಕ್ಷಣ ಅತ್ಯಗತ್ಯ. ಪ್ರಾಥಮಿಕ ಹಂತದಲ್ಲಿ ಕಲಿತ ಕಲಿಕೆಯು ಇಡೀ ಜೀವಮಾನದ ಕಲಿಕೆಯ ಮೇಲೆ ಗಾಡ ಪ್ರಭಾವ ಬೀರುತ್ತದೆ. ಹಾಗಾಗಿ ಮೊದಲ ಹಂತದ ಕಲಿಕೆಗೆ ನಮ್ಮ ಶಾಲೆಯಲ್ಲಿ ಹೆಚ್ಚು ಒತ್ತು ನೀಡುತ್ತಿದ್ದೇವೆ. ಇದರ ಫಲವಾಗಿ ವಿದ್ಯಾರ್ಥಿಗಳು ಮುಂದಿನ ಹಂತಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.
ಪ್ರತಿಭಾ ಕಾರಂಜಿ, ಸ್ಪರ್ಧಾಟಗಳು ಮತ್ತು ಪಠ್ಯ ಚಟುವಟಿಕೆಗಳಲ್ಲಿ ಎಲ್ಲಾ ಶಾಲೆಗಳಿಗೆ ಸ್ಪರ್ಧೆಗಳಲ್ಲಿ ಸವಾಲು ಒಡ್ಡುವ ರೀತಿಯಲ್ಲಿ ಪ್ರಗತಿ ಕಾಣುತ್ತಿರುವುದು ಹೆಮ್ಮ ಎನಿಸುತ್ತಿದೆ ಎಂದರು.
ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಲೆಗಳನ್ನು ಮತ್ತು ನೃತ್ಯಗಳನ್ನು ಪ್ರದರ್ಶಿಸಿದರು. ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಚಂದ್ರಪ್ಪ, ಜಿ.ಬಿ.ಸತ್ಯನಾರಾಯಣ, ಪಿ.ಬಿ.ವಿಶ್ವನಾಥ, ಮುಖ್ಯ ಶಿಕ್ಷಕ ರಾಜಪ್ಪ ಮತ್ತು ಶಿಕ್ಷಕ ವೃಂದ ಹಾಜರಿದ್ದರು.
ವರದಿ : ನಂದೀಶ್ ನಾಯ್ಕ ಪಿ