ASH04153 scaled

ಮಧುಗಿರಿ: ಮಿನಿ ವಿಜ್ಞಾನ ಕೇಂದ್ರ ಉದ್ಘಾಟನೆ, ಪಾಲಿಟೆಕ್ನಿಕ್ ಕಾಲೇಜಿಗೆ ಶಂಕುಸ್ಥಾಪನೆ…!

DISTRICT NEWS ತುಮಕೂರು

ಮಿನಿ ವಿಜ್ಞಾನ ಕೇಂದ್ರ ಉದ್ಘಾಟನೆ, ಪಾಲಿಟೆಕ್ನಿಕ್ ಕಾಲೇಜಿಗೆ ಶಂಕುಸ್ಥಾಪನೆ

ಮಧುಗಿರಿ ತಾ. ಬೇಡತ್ತೂರಿನಲ್ಲಿ ಉನ್ನತ ಶಿಕ್ಷಣ ಸಚಿವರ ಕಾರ್ಯಕ್ರಮ

ಬೇಡತ್ತೂರು (ಮಧುಗಿರಿ ತಾ): ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಆರಂಭಿಸಲಾಗಿರುವ ಮಿನಿ ವಿಜ್ಞಾನ ಕೇಂದ್ರಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಭಾನುವಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು, ನಲ್ಲೇಕಾಮನಹಳ್ಳಿಯ ಬಯಲಾಂಜನೇಯ ಸ್ವಾಮಿ ದೇವಸ್ಥಾನ ಸಮೀಪ ಸ್ಥಾಪಿಸಲು ಉದ್ದೇಶಿಸಿರುವ ನೂತನ ಸರಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಇವುಗಳ ಅಂಗವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಗಡಿಭಾಗದ ಜನತೆಗೆ ಅವರಿದ್ದಲ್ಲಿಯೇ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಬೇಕು ಎನ್ನುವುದು ಸರಕಾರದ ಸಂಕಲ್ಪವಾಗಿದೆ ಎಂದರು.

ನಮ್ಮ ಯುವಜನರಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ಕೌಶಲಗಳನ್ನು ನಾವು ಕೊಡಬೇಕು. ಇದರಿಂದ ಉದ್ಯೋಗ ಅವಕಾಶಗಳು ಹುಡುಕಿಕೊಂಡು ಬರಲಿವೆ. ಈ ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆಗೆ ವೇಗ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಪ್ರದೇಶಗಳ ಮತ್ತು ಮಹಿಳೆಯರ ಸಬಲೀಕರಣಕ್ಕೆ ಹತ್ತಾರು ರಚನಾತ್ಮಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮುಖ್ಯವಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ 45 ಸಾವಿರ ಕೋಟಿ ರೂಪಾಯಿ ನೆರವು ಒದಗಿಸಲಾಗಿದೆ. ಇದರ ಜತೆಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಕೊಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಇಂದು ಕೃಷಿ ಕ್ಷೇತ್ರದಲ್ಲಿ ಕೂಡ ತಂತ್ರಜ್ಞಾನ ಅಗಾಧ ಪಾತ್ರ ವಹಿಸುತ್ತಿದೆ. ಇದರಿಂದ ಕೃಷಿಕರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ನೆರವು ಸಿಗುತ್ತಿದೆ. ಇದರ ಜತೆಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ರೈತರಿಗೆ ಕಿಸಾನ್ ಸಮ್ಮಾನ್ ತರಹದ ಹಲವು ಯೋಜನೆಗಳ ಮೂಲಕ
ನೆರವು ನೀಡುತ್ತಿವೆ ಎಂದು ಅವರು ವಿವರಿಸಿದರು.

ಈ ಪ್ರದೇಶದಲ್ಲಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಿಂದ ಸ್ಥಳೀಯ ಯುವಜನರಿಗೆ ಯಾವುದೇ ಹೊರೆ ಇಲ್ಲದಂತೆ ತಾಂತ್ರಿಕ ಶಿಕ್ಷಣ ಸಿಗಲಿದೆ. ಕರ್ನಾಟಕದಲ್ಲಿ ಈ ಶಿಕ್ಷಣವನ್ನು ಸಮಗ್ರವಾಗಿ ಪರಿಷ್ಕರಿಸಿದ್ದು, ಇದನ್ನು ವಿದ್ಯಾರ್ಥಿಸ್ನೇಹಿಯನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.

ಸಮಾಜದ ಎಲ್ಲ ಸಮುದಾಯಗಳ ಒಳಿತಿಗೆ ಸರಕಾರವು ಪ್ರತಿಜ್ಞೆ ಮಾಡಿದೆ. ಇದರಿಂದಾಗಿ ದುರ್ಬಲರಿಗೆ ಕೂಡ ದನಿ ಸಿಕ್ಕಿದ್ದು, ಅವರ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತಿದೆ ಎಂದು ಸಚಿವರು ನುಡಿದರು.

ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಜಿಲ್ಲಾ ಪಂಚಾಯತಿ ಸಿಇಒ ವಿದ್ಯಾಕುಮಾರಿ, ಬೇಡತ್ತೂರು ಗ್ರಾಪಂ ಅಧ್ಯಕ್ಷೆ ಭೂಮಿಕಾ, ಮಿಡಿಗೇಶಿ ಗ್ರಾಪಂ ಅಧ್ಯಕ್ಷೆ ಕವಿತಾ ಹಾಜರಿದ್ದರು. ಬಿಜೆಪಿ ಮುಖಂಡ ಎಲ್ ಸಿ ನಾಗರಾಜು ಮುಂತಾದವರು ಉಪಸ್ಥಿತರಿದ್ದರು.