ವೈ ಎನ್ ಹೊಸಕೋಟೆ ಯಲ್ಲಿ ಅದ್ದೂರಿ ಬಸವ ಜಯಂತಿ ಆಚರಣೆ
ಪಾವಗಡ: ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಪಾವಗಡ ವೀರಶೈವ ಲಿಂಗಾಯತ ಅಭಿವೃದ್ಧಿ ವೇದಿಕೆ ವೈ.ಎನ್.ಹೊಸಕೋಟೆ ವತಿಯಿಂದ ಸೊಮವಾರದಂದು ಬಸವೇಶ್ವರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬೆಳ್ಳಿ ರಥದಲ್ಲಿ ಬಸವೇಶ್ವರರ ಬಾವಚಿತ್ರವನಿಟ್ಟು ಪುರಮೆರವಣಿಗೆಯನ್ನು ನಡೆಸಲಾಯಿತು. ಸುತ್ತಮುತ್ತಲಿನ ಗ್ರಾಮದ ಸಮುದಾಯದ ಮಹಿಳೆಯರು ಕಳಶಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಂದಿಧ್ವಜ ಮತ್ತು ವೀರಗಾಸೆ ನೃತ್ಯ ಎಲ್ಲರನ್ನು ಆಕರ್ಷಿಸಿತು. ಡ್ರಮ್‍ಸೆಟ್ ವಾದನಕ್ಕೆ ಯುವಕರು ಕುಣಿದು ಕುಪ್ಪಳಿಸಿ ಸಂತಸಿದರು.
ಗ್ರಾಮದ ವೀರಭದ್ರಸ್ವಾಮಿ ದೇವಾಲಯದಿಂದ ಮೆರವಣಿಗೆ ಪ್ರಾರಂಭವಾಗಿ ಕನ್ಯಕಾಪರಮೇಶ್ವರಿ ರಸ್ತೆಯ ಮೂಲಕ ಸಾಗಿ ಗಾಂಧಿ ವೃತ್ತಕ್ಕೆ ಆಗಮಿಸಿ ಹಿಂತಿರುಗಿ ದೇವಾಲಯದಲ್ಲಿ ಕೊನೆಗೊಂಡಿತು.
ಹೋಬಳಿ ಕೇಂದ್ರದ ಸುತ್ತಮುತ್ತಲಿನ ಹಳ್ಳಿಗಳ ವೀರಶೈವ ಲಿಂಗಾಯತ ಸಮುದಾಯದವರು ಕಾರ್ಯಕ್ರಮದಲ್ಲಿ ವಿಶೇಷವಾಗಿ ಪಾಲ್ಗೊಂಡರು
ಕಳೆದ ಕೆಲ ವರ್ಷಗಳಿಂದ ಬಸವಜಯಂತಿ ಆಚರಣೆ ಸ್ಥಗಿತಗೊಂಡಿತ್ತು. ಪಾವಗಡ ತಾಲ್ಲೂಕಿನ ವೈ ಎನ್ ಹೊಸಕೋಟೆ ಹೋಬಳಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ,ಬಸವ ಜಯಂತಿ ಯನ್ನು ವೈ ಎನ್ ಹೊಸಕೋಟೆಯಲ್ಲಿ ಆಚರಿಸಲು ಉತ್ಸವ ಸಮಿತಿ ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ವೇದಿಕೆ ಕಾರ್ಯಕ್ರಮದಲ್ಲಿ ಸಾಹಿತಿ ಬ್ಯಾಡನೂರು ಚನ್ನಬಸವಣ್ಣ ಜಗಜ್ಯೋತಿ ಬಸವೇಶ್ವರರ ಬಗ್ಗೆ ಪ್ರವಚನ ನೀಡಿದರು. ವೀರಭದ್ರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕಗಳು ನಡೆದವು. ಜಯಂತಿಯ ಅಂಗವಾಗಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು
ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಹೆಚ್.ಎಸ್.ರಾಜೇಶ್, ಉಪಾಧ್ಯಕ್ಷ ಬಿ.ಎಸ್.ಮಲ್ಲಿಕಾರ್ಜುನಯ್ಯ, ಖಜಾಂಚಿ ಜಿ.ಟಿ.ಮಂಜುನಾಥ ಸದಸ್ಯರಾದ ಮಲ್ಲೇಶಪ್ಪ, ಶಿವರಾಜು, ರಾಜಶೇಖರ, ಚಂದ್ರಮೌಳಿ, ವಿಜಯಕುಮಾರ್, ಮರಿಸ್ವಾಮಿ, ರಾಜಕುಮಾರ, ದೇವರಾಜ್, ಕೊಟ್ರೇಶ್, ರೇಣುಕಾ ಪ್ರಸಾದ್, ಕಿಶೋರ್ ಇತರರು ಇದ್ದರು.