DSC 4448

Tumkur: ಜಿಲ್ಲೆಯಲ್ಲಿ ಮೇ 20, 21ರಂದು ಸಿಇಟಿ ಪರೀಕ್ಷೆ: ಸಮರ್ಥ ನಿರ್ವಹಣೆಗೆ ಸೂಚನೆ

DISTRICT NEWS ತುಮಕೂರು

ಜಿಲ್ಲೆಯಲ್ಲಿ ಮೇ 20, 21ರಂದು ಸಿಇಟಿ ಪರೀಕ್ಷೆ: ಸಮರ್ಥ ನಿರ್ವಹಣೆಗೆ ಸೂಚನೆ
ತುಮಕೂರು,(ಕ.ವಾ)ಮೇ.16: ಜಿಲ್ಲೆಯಲ್ಲಿ 2023ನೇ ಸಾಲಿನ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ಬಿ.ಎಸ್‍ಸಿ(ನರ್ಸಿಂಗ್) ಸೇರಿದಂತೆ ಮತ್ತಿತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಮೇ 20 ಮತ್ತು 21ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದ್ದು, ಯಾವುದೇ ಲೋಪಬಾರದಂತೆ ಪರೀಕ್ಷೆಯನ್ನು ಉತ್ತಮ ಹಾಗೂ ಸಮರ್ಥವಾಗಿ ನಿರ್ವಹಣೆ ಮಾಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ಜಿಲ್ಲೆಯ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು ಸಿಇಟಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಅಧಿಕಾರಿಯನ್ನು ವೀಕ್ಷಕರನ್ನಾಗಿ ನೇಮಿಸಬೇಕು. ಸಿಇಟಿ ಪರೀಕ್ಷೆ ಬರೆಯುವ ಮಕ್ಕಳ ಪೋಷಕರು/ಹತ್ತಿರದ ಸಂಬಂಧಿಕರನ್ನು ವೀಕ್ಷಕರನ್ನಾಗಿ ನೇಮಕ ಮಾಡಬಾರದು ಹಾಗೂ ವಿಜ್ಞಾನ ವಿಷಯದ ಉಪನ್ಯಾಸಕರನ್ನು ಪರೀಕ್ಷಾ ಕೇಂದ್ರಗಳಿಗೆ ಪರಿವೀಕ್ಷಕರನ್ನಾಗಿ ನೇಮಿಸಬಾರದೆಂದು ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

DSC 4442


ಸಿಇಟಿ ಪರೀಕ್ಷಾ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಗೌಪ್ಯ ಬಂಡಲುಗಳನ್ನು ಖಜಾನೆಯಲ್ಲಿ ಸಂರಕ್ಷಿಸಿಡಬೇಕು ಎಂದು ಸೂಚಿಸಿದರಲ್ಲದೆ ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತ ಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಒದಗಿಸಲಾಗುವುದು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಯಾರೂ ಸಹ ವಾಚ್, ಆಭರಣ, ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ. ಎಲ್ಲಾ ಕೇಂದ್ರಗಳಿಗೆ ಸಿಸಿ ಟಿವಿಯನ್ನು ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ಸಮವಸ್ತ್ರ ಸಂಹಿತೆಯನ್ನು ಪಾಲಿಸಬೇಕೆಂದು ತಿಳಿಸಿದರು.
ಅನುಚಿತವಾಗಿ ವರ್ತಿಸುವ ಹಾಗೂ ನಿಯಮಗಳ ಉಲ್ಲಂಘನೆ ಮಾಡುವ ವಿದ್ಯಾರ್ಥಿಗಳು ಕಂಡುಬಂದರೆ ಸಂಬಂಧಿಸಿದ ಕೊಠಡಿ ಮೇಲ್ವಿಚಾರಕರು ಕೂಡಲೇ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮಾಹಿತಿ ರವಾನಿಸಬೇಕು ಎಂದು ಸೂಚನೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಬಸವಲಿಂಗಪ್ಪ ಮಾತನಾಡಿ, ಜಿಲ್ಲೆಯ ತುಮಕೂರು ನಗರದ 14 ಪರೀಕ್ಷಾ ಕೇಂದ್ರದಲ್ಲಿ 6264 ವಿದ್ಯಾರ್ಥಿಗಳು; ತಿಪಟೂರಿನ 2 ಕೇಂದ್ರದಲ್ಲಿ 1608 ವಿದ್ಯಾರ್ಥಿಗಳು; ಶಿರಾ ತಾಲ್ಲೂಕಿನ 2 ಕೇಂದ್ರದಲ್ಲಿ 1124 ಹಾಗೂ ಕುಣಿಗಲ್ ತಾಲ್ಲೂಕಿನ 1 ಪರೀಕ್ಷಾ ಕೇಂದ್ರದಲ್ಲಿ 437 ಸೇರಿದಂತೆ ಒಟ್ಟು 19 ಪರೀಕ್ಷಾ ಕೇಂದ್ರದಲ್ಲಿ 9433 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮೇ 20ರಂದು ಬೆಳಿಗ್ಗೆ 10.30 ರಿಂದ 11.50 ಗಂಟೆಯವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ಗಂಟೆಯವರೆಗೆ ಗಣಿತ ಹಾಗೂ ಮೇ 21ರ ಬೆಳಿಗ್ಗೆ 10.30 ರಿಂದ 11.50 ಗಂಟೆಯವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ಗಂಟೆಯವರೆಗೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಖಜಾನೆ ಅಧಿಕಾರಿ ಮುನಿರೆಡ್ಡಿ, ತುಮಕೂರು ಉಪವಿಭಾಗದ ಡಿವೈ.ಎಸ್‍ಪಿ ಹೆಚ್. ಶ್ರೀನಿವಾಸ್, ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು, ವೀಕ್ಷಕರು, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪರೀಕ್ಷಾ ಕೇಂದ್ರಗಳ ವಿವರ:-
ಕುಣಿಗಲ್ ತಾಲ್ಲೂಕಿನ ಮಹಾತ್ಮಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜು; ಶಿರಾ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು; ತಿಪಟೂರು ತಾಲ್ಲೂಕಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು; ತುಮಕೂರಿನ ಎಸ್‍ಐಟಿ ಬಡಾವಣೆಯ ವಾಸವಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಹೊರಪೇಟೆ ಸರ್ವೋದಯ ಪದವಿ ಪೂರ್ವ ಕಾಲೇಜು, ಬಿ.ಹೆಚ್.ರಸ್ತೆ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು, ಕಾಳಿದಾಸ ನಗರದ ಕಾಳಿದಾಸ ಪದವಿ ಪೂರ್ವ ಕಾಲೇಜು, ಸೋಮೇಶ್ವರ ಬಡಾವಣೆಯ ಇಂದಿರಾ ಪದವಿ ಪೂರ್ವ ಕಾಲೇಜು, ಎಸ್‍ಐಟಿ ಬಡಾವಣೆಯ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜು, ಬಿಹೆಚ್ ರಸ್ತೆಯ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು, ಅಶೋಕ ರಸ್ತೆ ಸರ್ಕಾರಿ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು, ಹೊರಪೇಟೆಯ ಬಾಪೂಜಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಬಸವೇಶ್ವರ ರಸ್ತೆ ಎಸ್‍ಆರ್‍ವಿಪಿ ಪದವಿ ಪೂರ್ವ ಕಾಲೇಜು, ಅಶೋಕ ನಗರದ ಶಾರದಾಂಬ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜು, ಬಿಹೆಚ್ ರಸ್ತೆ ಬಿಷಪ್ ಸಾರ್ಜೆಂಟ್ ಪದವಿ ಪೂರ್ವ ಕಾಲೇಜು, ಬಿಹೆಚ್ ರಸ್ತೆ ಸಿದ್ಧಗಂಗಾ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ.


ಸಿಇಟಿ ಪರೀಕ್ಷೆ: ನಿಷೇಧಾಜ್ಞೆ ಜಾರಿ

DSC 4440


ತುಮಕೂರು,(ಕ.ವಾ)ಮೇ.16: ಜಿಲ್ಲೆಯ ಕುಣಿಗಲ್, ಶಿರಾ, ತಿಪಟೂರು ಹಾಗೂ ತುಮಕೂರು ನಗರ ಸೇರಿದಂತೆ 19 ಪರೀಕ್ಷಾ ಕೇಂದ್ರಗಳಲ್ಲಿ ಮೇ 20 ಮತ್ತು 21ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಬಳಿ ಅಹಿತಕರ ಘಟನೆ, ನಕಲು ಪ್ರೇರಣಾ ಚಟುವಟಿಕೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೈ.ಎಸ್.ಪಾಟೀಲ ಅವರು ಆದೇಶಿಸಿದ್ದಾರೆ.
ಪರೀಕ್ಷೆಯನ್ನು ಸುಸೂತ್ರ ಮತ್ತು ದೋಷರಹಿತವಾಗಿ ನಡೆಸುವ ಸಲುವಾಗಿ ಈ ನಿಷೇಧಾಜ್ಞೆಯನ್ನು ಹೊರಡಿಸಲಾಗಿದ್ದು, ಮೇ 20 ಮತ್ತು 21ರಂದು ಬೆಳಿಗ್ಗೆ 10 ರಿಂದ ಸಂಜೆ 4.30 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ನಿಷೇಧಾಜ್ಞೆಯನ್ವಯ ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತ ಇರುವ eóÉರಾಕ್ಸ್ ಮತ್ತು ಬೆರಳಚ್ಚು ಕೇಂದ್ರಗಳನ್ನು ಮುಚ್ಚತಕ್ಕದ್ದು. ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳು ಎಂದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ನಿಷೇಧಾಜ್ಞೆಯು ಜಾರಿಯಲ್ಲಿರುವ ಅವಧಿಯಲ್ಲಿ ಅನಧಿಕೃತ ವ್ಯಕ್ತಿಗಳು ಯಾರೂ ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವ ಅನಧಿಕೃತ ವ್ಯಕ್ತಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.