ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಏಕಕಾಲಕ್ಕೆ ಚಾಲನೆ , ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆವಿರಿಸಿದ ಸರಕಾರಬಡವರ ಜೇಬಿಗೆ ಆರ್ಥಿಕ ಶಕ್ತಿ ತುಂಬಿಸುವುದೇ ಸರಕಾರದ ಧ್ಯೇಯ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜೂನ್ 11 (ಕರ್ನಾಟಕ ವಾರ್ತೆ): ಸರಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ರಾಜ್ಯಾದ್ಯಂತ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದದ ಪೂರ್ವದ್ವಾರ(ಗ್ರ್ಯಾಂಡ್‍ಸ್ಟೇಪ್ಸ್)ದ ಬಳಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಹ ಶಕ್ತಿ ಯೋಜನೆಗೆ ಚಾಲನೆ ನೀಡಿದರು.
ಈ ಯೋಜನೆ ಜಾರಿಗೊಳಿಸುವುದರ ಮೂಲಕ ಮಹಿಳಾ ಸಬಲೀಕರಣದತ್ತ ಸರಕಾರ ದಿಟ್ಟ ಹೆಜ್ಜೆ ಇರಿಸಿದೆ.
ಸಾಮಾಜಿಕ,ಆರ್ಥಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶತಶತಮಾನಗಳಿಂದ ಅವಕಾಶವಂಚಿತರಾಗಿದ್ದ ಮಹಿಳೆಯರಿಗೆ ಈ ಮೂಲಕ ಶಕ್ತಿ ತುಂಬುವ ಮತ್ತು ಅವರ ಕನಸುಗಳಿಗೆ ಪ್ರೋತ್ಸಾಹಿಸುವ ಕೆಲಸವನ್ನು ಸರಕಾರ ಮಾಡಿದೆ.
ವಿನೂತನ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಕ್ತಿ ಇಲ್ಲದ ಅಶಕ್ತ ಜನರಿಗೆ ಶಕ್ತಿ ಕೊಡಬೇಕು ಎನ್ನುವುದು ನಮ್ಮ ಸರಕಾರದ ಧ್ಯೇಯ; ಶತಶತಮಾನಗಳಿಂದ ಮಹಿಳೆಯರು ಅವಕಾಶವಂಚಿತರಾಗಿದ್ದಾರೆ. ಯಾವುದೇ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಪುರುಷರಷ್ಟೇ ಮಹಿಳೆಯರು ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸರಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದರ ಮೂಲಕ ‘ಶಕ್ತಿ’ ತುಂಬುವ ಕೆಲಸವನ್ನು ಮಾಡುತ್ತಿದೆ ಎಂದರು.
ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್‍ಗಳನ್ನು 3 ತಿಂಗಳೊಳಗೆ ಉಚಿತವಾಗಿ ಒದಗಿಸಲಾಗುವುದು;ಅಲ್ಲಿವರೆಗೆ ಸರಕಾರದ ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣಿಸಬಹುದಾಗಿದೆ. ಚುನಾವಣೆ ಸಂದರ್ಭದಲ್ಲಿ ನಾವು ಘೋಷಿಸಿದ 5 ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳು ಮಹಿಳೆಯರಿಗೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದವುಗಳಾಗಿವೆ. ಈ ಒಟ್ಟು 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಒಟ್ಟು 59 ಸಾವಿರ ಕೋಟಿ ರೂ.ಗಳ ಅಗತ್ಯವಿದ್ದು, ಎಷ್ಟೇ ಕಷ್ಟ ಬರಲಿ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಈ ಯೋಜನೆಗಳಲ್ಲಿ ಯಾವ ಮಧ್ಯವರ್ತಿಗಳಿಲ್ಲ ಎಂದರು.
ಭಾರತದಲ್ಲಿ ಶೇ.24ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ: 2022ರ ವಿಶ್ವಬ್ಯಾಂಕ್‍ನ ಅಂಕಿ ಅಂಶಗಳಂತೆ ಅಮೆರಿಕಾದಲ್ಲಿ ಶೇ.57ರಷ್ಟು,ಚೀನಾದಲ್ಲಿ ಶೇ.54ರಷ್ಟು, ಆಸ್ಟೇಲಿಯಾದಲ್ಲಿ ಶೇ.65,ಇಂಡೋನೇಷಿಯಾದಲ್ಲಿ ಶೇ.53ರಷ್ಟು ಹಾಗೂ ನಮ್ಮ ದೇಶದ ಪಕ್ಕದ ಬಾಂಗ್ಲಾದೇಶದಲ್ಲಿ ಶೇ.38ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿಯಾಗುತ್ತಿದ್ದು, ಭಾರತದಲ್ಲಿ ಶೇ.24ರಷ್ಟು ಮಹಿಳೆಯರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ ಅವರು ಈ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಎಷ್ಟು ಹಣ ಖರ್ಚು ಮಾಡುತ್ತಾ ಇದ್ದೀವಿ ಎನ್ನುವುದು ಮುಖ್ಯವಲ್ಲ;ಯಾರಿಗೆ ಕೊಡ್ತಾ ಇದ್ದೇವೆ ಎನ್ನುವುದು ಮುಖ್ಯ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು ಗೃಹಜ್ಯೋತಿ ಯೋಜನೆ,ಅನ್ನಭಾಗ್ಯ ಯೋಜನೆ ಜುಲೈ 1ರಿಂದ ಜಾರಿಗೊಳಿಸಲಾಗುತ್ತದೆ. ಗೃಹಲಕ್ಷ್ಮೀ ಯೋಜನೆ ಆಗಸ್ಟ್ 16ರಂದು ಜಾರಿಗೊಳಿಸಲಾಗುತ್ತದೆ ಮತ್ತು ಯುವನಿಧಿಗೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂದರು.
10 ಕೆ.ಜಿ ಆಹಾರಧಾನ್ಯವನ್ನು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‍ದಾರರಿಗೆ ನೀಡುತ್ತೇವೆ;ಇದಕ್ಕೆ ರಾಜ್ಯದಲ್ಲಿ 10100 ಕೋಟಿ ರೂ. ಖರ್ಚಾಗಲಿದೆ. ಯಾರು ಕೂಡ ಹಸಿವಿನಿಂದ ಬಳಲಬಾರದು;ಹಸಿವು ಮುಕ್ತ ರಾಜ್ಯ ನಮ್ಮದಾಗಬೇಕು ಎಂಬ ಸದಾಶಯ ಇದರ ಹಿಂದಿದೆ ಎಂದರು.
ಗೇಲಿ,ಕುಹಕ ಮಾಡುವವರು ಮಾಡಲಿ;ಡೊಂಟ್ ಕೇರ್: ರೈತರ ಸಾಲಮನ್ನಾ ಮಾಡದೇ ಬಂಡವಾಳಶಾಹಿಗಳ ಸಾಲಮನ್ನಾ ಮಾಡುವವರು ಸರಕಾರ ಯಾವ ರೀತಿ ಕಾರ್ಯನಿರ್ವಹಿಸುತ್ತದೇ ಎಂಬುದರ ಕುರಿತು ಪರಿಜ್ಞಾನವಿಲ್ಲದೇ ತರ್ಕರಹಿತವಾಗಿ ಎಡಬಿಡಂಗಿತನದ ರೂಪದಲ್ಲಿ ವಿರೋಧಪಕ್ಷಗಳು ಮಾತನಾಡುತ್ತಿದ್ದು, ಅವುಗಳಿಗೆ ಸೊಪ್ಪು ಹಾಕದೇ ಮತ್ತು ವಿಚಲಿತರಾಗದೇ ಎಲ್ಲ ಜಾತಿಯಲ್ಲಿರುವ, ಎಲ್ಲ ಧರ್ಮದಲ್ಲಿರುವ ಬಡವರಿಗೆ,ಸಾಮಾಜಿಕವಾಗಿ,ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.
ಯೋಜನೆಯ ಲಾಭ ಪಡೆದುಕೊಳ್ಳಿ: ಹೆಣ್ಮಕ್ಕಳು ಇಂದು ಒಂದುಗಂಟೆಯಿಂದ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕು.ಎಲ್ಲ ಮಹಿಳೆಯರಿಗೂ ಸ್ಮಾರ್ಟ್ ಕಾರ್ಡ್‍ಗಳನ್ನು ನೀಡಲಾಗುವುದು. ಈ ಯೋಜನೆ ವಿದ್ಯಾರ್ಥಿನಿಯರಿಗೆ ಅನ್ವಯವಾಗುತ್ತದೆ. ಈ ಯೋಜನೆಯಲ್ಲಿ ಮಧ್ಯವರ್ತಿಗಳಲ್ಲಿ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತದೆ ಎಂದರು.
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎನ್ನುವ ಧ್ಯೇಯದೊಂದಿಗೆ ಟೀಕೆಗಳಿಗೆ ಯಾವುದೇ ರೀತಿಯ ಉತ್ತರ ನೀಡದೇ ರಾಜ್ಯದ ಜನರಿಗೆ ನಾವು ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಎಂದರು.
ಒಂದು ದೇಶ,ರಾಜ್ಯದ ಸ್ಥಿತಿಗತಿ ಹೇಗಿದೆ ಎಂಬುದರ ಅಧ್ಯಯನ ಮಾಡಬೇಕಿದ್ದರೇ ಅಲ್ಲಿನ ಮಹಿಳೆಯರ ಸ್ಥಿತಿಗತಿ ಅರಿತುಕೊಳ್ಳುವುದು ಅವಶ್ಯ ಎಂದು ಹೇಳಿದ ಡಿಸಿಎಂ ಡಿಕೆಶಿ ಅವರು ಈ ಯೋಜನೆಯ ಮೂಲಕ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಮಹಿಳಾ ಪ್ರಯಾಣಿಕರ ಲೆಕ್ಕದ ಉದ್ದೇಶದಿಂದ ಸ್ಮಾರ್ಟ್ ಕಾರ್ಡ್‍ಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸಾರಿಗೆ,ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಅವರು ಮಾತನಾಡಿದರು.
ಇದೇ ವೇಳೆ ಗುಲಾಬಿ ಬಣ್ಣದ ಸ್ಮಾರ್ಟ್ ಕಾರ್ಡ್,ಶಕ್ತಿ ಯೋಜನೆಯ ಲಾಂಛನವನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಸುಮಿತ್ರಾ,ರಾಧಿಕಾ,ಪ್ರೇಮಾ, ಕಲಾವತಿ,ಪವಿತ್ರಾ ಅವರಿಗೆ ಮುಖ್ಯಮಂತ್ರಿಗಳು ಸ್ಮಾರ್ಟ್ ಕಾರ್ಡ್‍ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ,ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ , ಶಾಸಕರು, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳು ಮತ್ತಿತರರು ಇದ್ದರು.
ಉಳಿತಾಯದ ಹಣ ಕುಟುಂಬಕ್ಕೆ: ಮಹಿಳಾ ‘ಶಕ್ತಿ’ಯ ಆಶಯ
ಬಸ್ ನಲ್ಲಿ ಪ್ರಯಾಣಿಸಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳು
ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿ ಉದ್ಘಾಟಿಸಿದ ಮುಖ್ಯಮಂತ್ರಿಗಳು
ಕಾಲೇಜು ಸ್ಟೂಡೆಂಟ್ ಬಸ್ ಪಾಸ್ ಗೆ ಪ್ರತಿ ಸೆಮಿಸ್ಟರ್ ಗೆ 1500 ರೂ. ವೆಚ್ಚವಾಗುತ್ತಿತ್ತು. ಈಗ ಫ್ರೀ ಮಾಡಿರೋದರಿಂದ ವರ್ಷಕ್ಕೆ 3,000 ರೂಪಾಯಿ ಉಳಿತಾಯ ಆಗುತ್ತೆ. ಇದರಲ್ಲಿ ಮನೆಯವರಿಗೆ ಏನಾದರೂ ಕೊಳ್ಳಬಹುದು”- ಮಹಾರಾಣಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸಂಜನಾಳ ನುಡಿ ಇದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೆಯದಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಉದ್ಘಾಟಿಸಿದ ನಂತರ ಮುಖ್ಯಮಂತ್ರಿಯವರೊಂದಿಗೆ ಮೆಜೆಸ್ಟಿಕ್ ವರೆಗೆ ಬಸ್ ಪ್ರಯಾಣ ಮಾಡಿದ ಹೆಮ್ಮೆ ಇವಳದ್ದು. ಬಸ್ ಪ್ರಯಾಣ ಉಚಿತ ಮಾಡಿದ್ದರಿಂದ ಗಾರೆ ಕೆಲಸ ಮಾಡಿ ತಮ್ಮನ್ನು ಓದಿಸುತ್ತಿರುವ ಪೆÇೀಷÀಕರಿಗೆ ಸ್ವಲ್ಪ ಮಟ್ಟಿನ ನಿರಾಳವಾಗಲಿದೆ ಎಂಬ ಆಶಾ ಭಾವನೆ ಸಂಜನಾಳದ್ದು.
ಅಂತೆಯೇ ಮನೆಗೆಲಸಕ್ಕೆಂದು ಗಂಗಾ ನಗರದಿಂದ ಹೆಬ್ಬಾಳದ ವರೆಗೆ ದಿನನಿತ್ಯ ಪ್ರಯಾಣಿಸುವ ಸರಳಾ ಅವರಿಂದ ದಿನಕ್ಕೆ 20 ರೂ. ಬಸ್ ಚಾರ್ಜ್ ಉಳಿತಾಯವಾಗುವುದಂತೆ. ಮನೆಗೆ ಅಗತ್ಯ ವಸ್ತು ಕೊಳ್ಳಲು ಅನುಕೂಲವಾಗುವುದು ಎಂದು ಹೇಳುತ್ತಾರೆ. ಮತ್ತೊಬ್ಬ ಮಹಿಳೆ ಗಂಗಾ ಗೌರಿ ಬಸ್ ಪ್ರಯಾಣ ಫ್ರೀ ಆಗಿರೋದು ತುಂಬಾ ಖುಷಿ ಆಗುತ್ತೆ ಎಂದು ನಗೆ ತುಳುಕಿಸಿ ನುಡಿದರು.
ಮಲ್ಲೇಶ್ವರಂ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿರುವ ಶಶಿಕಲಾಗೆ ತಂದೆ ಇಲ್ಲ. ತಾಯಿ ಗಾರೆ ಕೆಲಸ ಮಾಡಿ ಉದರ ಪೆÇೀಷಣೆ ಮಾಡುತ್ತಿದ್ದಾರೆ. ಬಸ್ ಪ್ರಯಾಣ ಉಚಿತವಾಗಿರುವುದರಿಂದ ನನ್ನ ಬೇರೆ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎಂಬ ಆಶಾವಾದ ಅವಳದ್ದು. ಮೈಸೂರು ಬ್ಯಾಂಕ್ ವೃತ್ತದ ಬಳಿ ಸಣ್ಣ ಉದ್ಯೋಗದಲ್ಲಿರುವ ಅಂಬಿಕಾ ಅವರಿಗೆ ಉಚಿತ ಬಸ್ ಪ್ರಯಾಣದಿಂದ ದಿನಕ್ಕೆ 40 ರೂ. ಉಳಿತಾಯವಾಗುತ್ತದೆ. ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಳ್ಳಲು ಕೈಹಿಡಿತ ಸ್ವಲ್ಪ ಸಡಿಲ ಮಾಡಬಹುದು ಎಂಬ ಆಶಾಭಾವ ಅವರದ್ದು.
ಎಲ್ಲ ಫಲಾನುಭವಿ ಮಹಿಳೆಯರೂ ಉಳಿತಾಯದ ಹಣವನ್ನು ತಮ್ಮ ಕುಟುಂಬದವರಿಗಾಗಿಯೇ ಬಳಸುವ ಚಿಂತನೆ ವ್ಯಕ್ತವಾಯಿತು.
ಬಸ್ ಕಂಡಕ್ಟರ್ ನಂದಿನಿ ಅವರಿಗೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಾರಿಗೆ ಸಚಿವರು ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಿದ ಹೆಮ್ಮೆ. ಇಟಿಎಂ ನಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಣೆಗೆ ಸೂಕ್ತ ಮಾರ್ಪಾಡು ಮಾಡಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ವಿವರಿಸಿದರು.
ಮೊದಲ ಪ್ರಯಾಣದಲ್ಲಿದ್ದ ಮಹಿಳೆಯರಿಗೆ ಟಿಕೆಟ್ ಜೊತೆ ಗುಲಾಬಿ ಹೂವು ಮತ್ತು ಸಿಹಿ ನೀಡಿ ಸತ್ಕರಿಸಲಾಯಿತು.
ಮುಖ್ಯಮಂತ್ರಿಯವರು ಶಕ್ತಿ ಯೋಜನೆಗೆ ಚಾಲನೆ ನೀಡಿದ ನಂತರ ವಿಧಾನಸೌಧದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಿ ರಾಜ್ಯದ ವಿವಿಧ ಭಾಗಗಳಿಗೆ ತೆರಳುವ ಬಸ್ ಗಳಿಗೆ ಚಾಲನೆ ನೀಡಿದರು.
ನಂತರ ಬಿಎಂಟಿಸಿ ಬಸ್ ಸಂಖ್ಯೆ: ಕೆ.ಎ 57 ಎಫ್ 5324 ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ವಿಧಾನಸೌಧದಿಂದ ಹೋಟಲ್ ಕ್ಯಾಪಿಟಲ್, ರಾಜಭವನ ರಸ್ತೆ, ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಕೆ.ಜಿ ರೋಡ್ ಮೂಲಕ ಕೆಂಪೇಗೌಡ (ಮೆಜೆಸ್ಟಿಕ್) ಬಸ್‍ನಿಲ್ದಾಣಕ್ಕೆ ತಲುಪಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಶೂನ್ಯ ಟಿಕೆಟ್ ನೀಡಿದರು
===
ರು.