IMG 20230815 WA0050

JD (S) : ಸೀಸನ್‌, ಚಾಪ್ಟರ್ ಲೆಕ್ಕದಲ್ಲಿ ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರ…!

POLATICAL STATE

*ಸೀಸನ್‌, ಚಾಪ್ಟರ್ ಲೆಕ್ಕದಲ್ಲಿ ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರ!!*

*ಕಾಂಗ್ರೆಸ್‌ ಸರಕಾರದ ವಿರುದ್ಧ ಮತ್ತೆ ಗುಡುಗಿದ ಹೆಚ್.ಡಿ.ಕುಮಾರಸ್ವಾಮಿ*

*ನನ್ನ ಪೆನ್‌ ಡೈವ್‌ ಖಾಲಿ ಇಲ್ಲ; ಕ್ರಮ ಕೈಗೊಳ್ಳುವ ಎದೆಗಾರಿಕೆ ಸಿಎಂಗೆ ಇದೆಯಾ?: ಮಾಜಿ ಸಿಎಂ ಸವಾಲು*

*//ಮುಖ್ಯಾಂಶಗಳು//*
*ಬುದ್ಧಿಭ್ರಮಣೆ ಎಂದ ವ್ಯಕ್ತಿಗೆ ಚಾಟಿ
*ನಮಗೆ ಅಜ್ಜಯ್ಯನ ರಕ್ಷಣೆ ಇಲ್ಲವಾ?
*ಹಿಟ್‌ ಅಂಡ್‌ ರನ್‌ ಎಂದ ಸಿಎಂಗೆ ಚಾಟಿ
*ನಾನೇನು ಬಿಜೆಪಿ ಅಡಿಯಾಳಲ್ಲ
*ಮೇಕೆದಾಟು ಪಾದಯಾತ್ರೆ ಮಾಡಿದವರು ಏನು ಮಾಡುತ್ತಾರೋ ನೋಡೋಣ
***
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರದ ಲಂಚಾವತಾರದ ನಾಟಕಗಳ ಒಂದೊಂದೇ ಅಂಕ ತೆರೆದುಕೊಳ್ಳುತ್ತಿದೆ. ಸೀಸನ್‌ 1, ಸೀಸನ್‌ 2 ಎನ್ನುವ ರೀತಿಯಲ್ಲಿ ಎಲ್ಲವೂ ಬಯಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.

ಜಾತ್ಯತೀತ ಜನತಾದಳ ಪಕ್ಷದ ಕಚೇರಿಯಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಕನ್ನಡದಲ್ಲಿ ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚೆಚ್ಚು ಬರುತ್ತಿವೆ. ಚಾಪ್ಟರ್ 1, ಚಾಪ್ಟರ್ 2 ಎಂದೆಲ್ಲಾ ಬರುತ್ತಿವೆ. ಅದೇ ರೀತಿ ಈ ಸರಕಾರದ ಭ್ರಷ್ಟಾಚಾರದ ಹಗರಣಗಳು ಕೂಡ ಅದೇ ರೀತಿ ಹೊರಗೆ ಬರುತ್ತಿವೆ. ಸಿನಿಮಾ ಎಂದ ಮೇಲೆ ಕೊನೆ ಎಂಬುದು ಇರಲೇಬೇಕು, ನಾಟಕ ಎಂದರೆ ಅದಕ್ಕೆ ಅಂತಿಮ ತೆರೆ ಎಳೆಯಲೇಬೇಕು. ಈ ಸರಕಾರದ ಲಂಚಾವತಾರಕ್ಕೂ ಅಂತಿಮ ತೆರೆ ಬೀಳುವ ದಿನ ದೂರವಿಲ್ಲ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ನನಗೆ ಬುದ್ಧಿಭ್ರಮಣೆ ಆಗಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದಾರೆ. ನನ್ನ ಬಗ್ಗೆ ಅವರು ಚಿಂತಿಸುವುದು ಬೇಡ ಎಂದ ಅವರು; ನಮ್ಮ ಕುಟುಂಬದಲ್ಲೇ ಸಾಕಷ್ಟು ಜನ ವೈದ್ಯರಿದ್ದಾರೆ. ಇನ್ನೊಬ್ಬರಿಂದ ನಾನು ಸರ್ಟಿಫಿಕೇಟ್ ತಗೆದುಕೊಳ್ಳಬೇಕಾಗಿಲ್ಲ. ನನಗೆ ಬುದ್ಧಿಭ್ರಮಣೆ ಆಗಿದ್ದರೆ ನಾನು ತಪಾಸಣೆ ಮಾಡಿಸಿಕೊಳ್ಳುತ್ತೇನೆ. ಆದರೆ, ಮತ ಹಾಕಿದ ಮತದಾರ ಪ್ರಭುಗಳ ಬುದ್ಧಿಗೆ ಮಣ್ಣೆರಚುವ ರೀತಿಯಲ್ಲಿ ಇವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇಂಥ ಕೆಟ್ಟ ಸರಕಾರ ಹಿಂದೆ ಇರಲಿಲ್ಲ, ಮುಂದೆಯೂ ಬರಲ್ಲ ಎಂದು ಕಿಡಿಕಾರಿದರು.

ಸೋಮವಾರದ ದಿನ ಕಾಂಗ್ರೆಸ್ ಕಚೇರಿಯಲ್ಲಿ ಸಭೆಯೊಂದು ನಡೆದಿದೆ. ಆ ಸಭೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರೂ ವೀರಾವೇಶದಲ್ಲಿ ಮಾತಾಡಿದ್ದಾರೆ. ಮುಖ್ಯಮಂತ್ರಿ ಪೆನ್‌’ಡ್ರೈವ್‌ʼಗೆ ಪ್ರತಿಯಾಗಿ ಪೆನ್‌ ತೆಗೆದು ತೋರಿಸಿ ಅಭಿನಯ ಮಾಡಿದ್ದಾರೆ. ಅವರ ಅಭಿನಯಕ್ಕೆ ಉತ್ತರ ಕೊಡದೇ ಇರಲಾರೆ. ನಾನು ಇಡುವ ಸಾಕ್ಷ್ಯಕ್ಕೆ ಪ್ರತಿಯಾಗಿ ಆರೋಪಿತ ವ್ಯಕ್ತಿಯ ಮೇಲೆ ಕ್ರಮ ಜರಿಗಿಸುವ ಎದೆಗಾರಿಕೆ ಮುಖ್ಯಮಂತ್ರಿಗೆ ಇದೆಯಾ? ಇದ್ದರೆ ಹೇಳಲಿ ಎಂದು ಮಾಜಿ ಮುಖ್ಯಮಂತ್ರಿಗಳು ಸವಾಲು ಹಾಕಿದರು.

ಸಭೆಯಲ್ಲಿ ವೀರಾವೇಶ ತೋರಿದವರ ಹಿನ್ನೆಲೆಯನ್ನು ಹೊಸದಾಗಿ ತಿಳಿಯಬೇಕಿಲ್ಲ. 40 ಪರ್ಸೆಂಟ್ ಡಿಮಾಂಡ್‌ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರು ಹಾದಿ ಬೀದಿಲಿ ಮಾತನಾಡುತ್ತಿದ್ದರು. ಅವರೇ ಬಾಣಲೆಯಿಂದ ಬೆಂಕಿಗೆ ಬಿದ್ದೆವು ಎಂದು ಮಾಧ್ಯಮಗಳಿಗೇ ಹೇಳಿದರು. ಆದರೆ ಈಗ ಅವರ ವರಸೆಯೇ ಬದಲಾಗಿದೆ. ಮನುಷ್ಯನಾದವನಿಗೆ ಗಟ್ಟಿತನ ಬೇಕು, ಧೈರ್ಯವಾಗಿ ಮಾತಾಡಬೇಕು. ನಾನು ವಿದೇಶಕ್ಕೆ ಹೋಗುವ ಮುನ್ನ ಗುತ್ತಿಗೆದಾರರು ನಮ್ಮ ಮನೆಗೆ ಬಂದಿದ್ದರು. ಸಾಕಷ್ಟು ವಿಚಾರ ಚರ್ಚೆ ಮಾಡಿ ತಮ್ಮ ನೋವು ತೋಡಿಕೊಂಡರು. ಅವರಿಗೆ ಬೆಂಬಲ ನೀಡುವುದಾಗಿ ನಾನು ಪ್ರಾಮಾಣಿಕವಾಗಿ ಭರವಸೆ ಕೊಟ್ಟೆ ಎಂದು ಕುಮಾರಸ್ವಾಮಿ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.IMG 20230815 WA0059

ಹಗಲಲ್ಲಿ ವೀರಾವೇಶ ತೋರಿ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿ ಎಂದು ಸವಾಲು ಹಾಕಿದವರು, ರಾತ್ರಿಯಾಗುವ ಹೊತ್ತಿಗೆ ತಣ್ಣಗಾಗಿದ್ದಾರೆ. ಅವರನ್ನು ತಣ್ಣಗೆ ಮಾಡಿದವರು ಯಾರು? ಅವರ ಮೇಲೆ ಒತ್ತಡ ಹೇರಿ ಮಧ್ಯಸ್ಥಿಕೆ ವಹಿಸಿ, “ನಾನು ಭಾವುಕತೆಯಿಂದ ಈ ಆರೋಪ ಮಾಡಿದೆ” ಎಂದು ಹೇಳಿಕೆ ಕೊಡಿಸಿದರು ಎಂದು ಕುಮಾರಸ್ವಾಮಿ ಅವರು ದೂರಿದರು.

ಆತ್ಮಹತ್ಯೆ ಪ್ರಕರಣದಲ್ಲಿ ದುಡ್ಡು ಕೊಟ್ಟು ಸರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕೊಬ್ಬರು ಮಾತಾಡಿದ್ದಾರೆ. ಅವರು ದುಡ್ಡಿನಿಂದ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ. ಸಿನಿಮಾ ರೀತಿ ರಾಜಕಾರಣವೂ ಕೂಡ ಸೀಜನ್ 1, ಸೀಜನ್ 2 ರೀತಿ ಆಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

*ನಾನು ಹಿಟ್ ಅಂಡ್ ರನ್ ಅಲ್ಲ:*

ಕುಮಾರಸ್ವಾಮಿ ಅವರದು ನಾನು ಹಿಟ್ ಅಂಡ್ ರನ್ ಎಂದಿರುವ ಸಿದ್ದರಾಮಯ್ಯ ಅವರಿಗೆ ತೀಕ್ಷ್ಣವಾಗಿ ಉತ್ತರ ನೀಡಿದ ಕುಮಾರಸ್ವಾಮಿ ಅವರು, ನಾನು ಹಿಟ್ ಅಂಡ್ ರನ್ ಎಂದು ಅವರು ಹೇಳುತ್ತಾರೆ. ನಮ್ಮ ಬಳಿ ಇರುವುದು ಖಾಲಿ ಪೆನ್ ಡ್ರೈವ್ ಅಲ್ಲ. ಹಿಂದೆ ವೀರಪ್ಪ ಮೊಯಿಲಿ ಅವರ ಕಾಲದಲ್ಲಿ ಒಂದು ಟೇಪ್‌ ಆಚೆಗೆ ಬಂತು. ನಮಗೆ ಹಣದ ಆಮಿಷ ಒಡ್ಡಿದರು ಎಂದು ಮಾಧ್ಯಮಗಳ ಮುಂದೆ ನೋಟಿನ ಕಂತೆಗಳನ್ನು ಪ್ರದರ್ಶನ ಮಾಡಿದರು. ಕೊನೆಗೆ ಅದರ ಕಥೆ ಏನಾಯಿತು? ನಾವು ಕೊಡುವ ದಾಖಲೆಗಳನ್ನು ಇವರು ಪ್ರಾಮಾಣಿಕವಾಗಿ ತನಿಖೆ ಮಾಡಿಸುತ್ತಾರಾ? ಸಚಿವರ ವಿರುದ್ಧ ರಾಜ್ಯಪಾಲರಿಗೆ ಬರೆದ ಪತ್ರದ ಬಗ್ಗೆ ತನಿಖೆಗೆ ಮೊದಲೇ ನಕಲಿ ಪತ್ರ ಎಂದರನ್ನು ಹೇಗೆ ನಂಬುವುದು? ಎಂದು ಅವರು ಪ್ರಶ್ನಿಸಿದರು.

ಇವರು (ಸಿದ್ದರಾಮಯ್ಯ) ಪ್ರತಿಪಕ್ಷ ನಾಯಕರಾಗಿದ್ದಾಗ ಎಷ್ಟು ದಾಖಲೆ ಬಿಡುಗಡೆ ಮಾಡಿದ್ದರು? ಇವರ ಯೋಗ್ಯತೆಗೆ ಒಂದೇ ಒಂದು ದಾಖಲೆಯನ್ನೂ ಬಿಡುಗಡೆ ಮಾಡಿರಲಿಲ್ಲ. ಇಂಥವರು ಇನ್ನೊಬ್ಬರ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ. ಪ್ರತಿದಿನ ನಾವು ಗ್ಯಾರಂಟಿ ಕೊಟ್ಟಿದ್ದೇವೆ ಕೊಚ್ಚಿಕೊಳ್ಳುತ್ತಿದ್ದೀರಿ. ನೀವೇನು ಕಾಂಗ್ರೆಸ್ ಕಚೇರಿಯಿಂದ, ನಿಮ್ಮ ಮನೆ ದುಡ್ಡಿನಿಂದ ಕೊಟ್ಟಿದ್ದೀರಾ..? ಅದಕ್ಕೆ ಪ್ರತೀದಿನ ಜಾಹೀರಾತು.. ಬಣ್ಣಬಣ್ಣದ ಕೂಲಿಂಗ್ ಗ್ಲಾಸುಗಳನ್ನು ಹಾಕಿಕೊಂಡು ಪೋಸು ಕೊಡುವುದು ಬೇರೆ? ಹಿಂದೆ ನಿಮ್ಮನ್ನು ಜನ ಯಾಕೆ ಮನೆಗೆ ಕಳಿಸಿದ್ದರು? ನಿಮ್ಮ ಪಾಪದ ಕೊಡ ತುಂಬಿದೆ ಅಂತಲೇ ಕಳಿಸಿದ್ದರು. ಈಗಲೂ ಅಷ್ಟೇ, ಮೂರೇ ತಿಂಗಳಿಗೇ ನಿಮ್ಮ ಬಣ್ಣ ಬಯಲಾಗಿದೆ ಎಂದು ಕುಮಾರಸ್ವಾಮಿ ಅವರು ಛೇಡಿಸಿದರು..

*ಅಜ್ಜಯ್ಯನ ರಕ್ಷಣೆ ಇರೋದು ಇವರೊಬ್ಬರಿಗೇನಾ?:*

ಉಪ ಮುಖ್ಯಮಂತ್ರಿ ಅವರು ನಮ್ಮ ಅಜ್ಜಯ್ಯನ ಕಥೆ ಇವರಿಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಮಗೆ ಅಜ್ಜಯ್ಯನ ರಕ್ಷಣೆ ಇಲ್ಲ, ಅವರೊಬ್ಬರಿಗೆ ಮಾತ್ರ ಅಜ್ಜಯ್ಯನ ರಕ್ಷಣೆ ಇರೋದು. ಹಾಗಿದ್ದರೆ, ನಮ್ಮ ರಕ್ಷಣೆ ಮಾಡೋರು ಯಾರು? ನಾಡಿನ ಜನರನ್ನು ರಕ್ಷಣೆ ಮಾಡುವವರು ಯಾರು? ಈ ಬಗ್ಗೆ ಅವರು ಹೇಳಬೇಕಲ್ಲವೇ? ಎಂದು ಡಿಕೆ ಶಿವಕುಮಾರ್ ಅವರ ಹೆಸರು ಹೇಳದೆಯೇ ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.

ಈಗ ನಾವು ರಕ್ಷಣೆಗಾಗಿ ಹುಡುಕಬೇಕಾಗಿದೆ. ಇದೆಲ್ಲಾ ಶಾಶ್ವತ ಅಲ್ಲ, ಅಂತ್ಯ ಎನ್ನುವುದು ಇದ್ದೇ ಇರುತ್ತದೆ. ಮುಂದಿನ 20 ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂದಿದ್ದರು ಯಡಿಯೂರಪ್ಪ ಅವರು. ಟೈಂ ಬಂದಾಗ 20 ವರ್ಷವೋ, 20 ದಿನವೋ ಗೊತ್ತಿಲ್ಲ. ಸಿದ್ದರಾಮಯ್ಯ ಮುಂದೆ ಹದಿನೈದು ವರ್ಷಗಳ ಕಾಲ ನಮ್ಮದೇ ಆಡಳಿತ ಅಂದಿದ್ದರು. ಜನ ಈಗ ನಿಮಗೆ ಅವಕಾಶ ಕೊಟ್ಟಿದ್ದಾರೆ. ಅದನ್ನು ನೆಟ್ಟಗೆ ಮಾಡಿ ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.

*ಬಿಜೆಪಿಗೆ ನಾನೇನು ಅಡಿಯಾಳಲ್ಲ:*

ಬಿಜೆಪಿ ಪರ ವಕ್ತಾರಿಕೆ ಮಾಡುವುದಕ್ಕೆ ಅಥವಾ ಅವರ ಪರವಾಗಿ ಮಾತನಾಡುವುದಕ್ಕೆ ನಾನೇನು ಅವರ ಅಡಿಯಾಳಲ್ಲ ಎಂದು ತಮ್ಮ ಟೀಕಾಕಾರಿಗೆ ತಿರುಗೇಟು ನೀಡಿದ ಅವರು; ವಿರೋಧ ಪಕ್ಷದ ಸಾಮಾನ್ಯ ಶಾಸಕನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ ಅಷ್ಟೇ. ಕುಮಾರಸ್ವಾಮಿಗೆ ಹೊಟ್ಟೆ ಉರಿ ಅಂತಾ ಹೇಳುತ್ತಿದಾರೆ. ನನಗೆ ಏನಾಗಿದೆಯೋ ಅದಕ್ಕೆ ಔಷಧಿ ತಗೊಳ್ತೀನಿ. ವಾಸ್ತವ ಮಾತನಾಡಿ, ಜನರಿಗೆ ಆಗುತ್ತಿರುವ ಸಂಕಟಕ್ಕೆ ನಿಮ್ಮಲ್ಲಿ ಪರಿಹಾರ ಏನಿದೆ ಎಂದು ಪ್ರಶ್ನಿಸಿದರು.

ಕಾವೇರಿ ಬಗ್ಗೆ ಕಾದು ನೋಡೋಣ:*

ಕಾವೇರಿ ತಗಾದೆಯ ಬಗ್ಗೆ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಕೋರ್ಟ್ ಏನು ಹೇಳುತ್ತದೆ ಎನ್ನುವುದನ್ನು ಕಾದು ನೋಡೋಣ. ಮೇಕೆದಾಟಿನಿಂದ ಪಾದಯಾತ್ರೆ ಮಾಡಿದ್ರಲ್ಲಾ ಇವರು, ಆ ಬಗ್ಗೆ ಏನು ತೀರ್ಮಾನ ಏನು ಮಾಡುತ್ತಾರೆ ಅಂತ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪಕ್ಷದ ನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ, ಪಕ್ಷದ ಹಿರಿಯ ನಾಯಕರಾದ ನಾರಾಯಣ ರಾವ್, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ ಉಪಸ್ಥಿತರಿದ್ದರು.