*ಕಾವೇರಿ ಸರ್ವಪಕ್ಷ ಸಭೆಯಲ್ಲಿ ಸರಕಾರಕ್ಕೆ ಚಾಟಿ ಬೀಸಿದ ಹೆಚ್.ಡಿ.ಕುಮಾರಸ್ವಾಮಿ*
***
*ಸುಪ್ರೀಂ ಕೋರ್ಟಿಗೆ ಆಕ್ಷೇಪ ಸಲ್ಲಿಸುವ ಮುನ್ನ ನೀರು ಹರಿಸಿದ್ದೇಕೆ?*
***
*ಡಿಸಿಎಂ ಮತ್ತು ಅಡ್ವೋಕೇಟ್ ಜನರಲ್ ಹೇಳಿಕೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ತೀವ್ರ ಆಕ್ಷೇಪ*
ಬೆಂಗಳೂರು: ನೆರೆ ರಾಜ್ಯವು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದಾಕ್ಷಣ ರಾಜ್ಯ ಸರಕಾರ ನೀರು ಹರಿಸುವ ನಿರ್ಧಾರ ಕೈಗೊಳ್ಳುವ ಬದಲು ತಮಿಳುನಾಡು ಅರ್ಜಿಗೆ ಪ್ರತಿಯಾಗಿ ಕೂಡಲೇ ತಕರಾರು ಅರ್ಜಿ ಸಲ್ಲಿಸಬೇಕಿತ್ತು. ಈ ವಿಷಯದಲ್ಲಿ ಸರಕಾರದಿಂದ ಲೋಪವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದರು.
ಅಲ್ಲದೆ, ನಮ್ಮ ನೆಲ ಜಲ ಭಾಷೆ ರಕ್ಷಣೆ ಹಾಗೂ ನಮ್ಮ ನೀರಿನ ಹಕ್ಕು, ರೈತರ ಪ್ರಶ್ನೆ ಬಂದಾಗ ಪ್ರತಿಪಕ್ಷಗಳು ಮಾತನಾಡದೆ ಮೌನವಾಗಿರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಕಾವೇರಿ ವಿಷಯಕ್ಕೆ ಸಂಬಂಧಿಸಿ ವಿಧಾನಸಭೆ ಸಮ್ಮೇಳನ ಸಭಾಂಗಣದಲ್ಲಿ ಕರೆಯಲಾಗುತ್ತಿದ್ದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ಅವರು ತಮ್ಮ ಅಭಿಪ್ರಾಯ ಮಂಡಿಸಿದರು.
*ರಾಜಕೀಯ ಎನ್ನಬೇಡಿ:*
ರಾಜ್ಯದ ನೆಲ ಜಲ ಭಾಷೆ ವಿಚಾರದಲ್ಲಿ ಪ್ರತಿಪಕ್ಷಗಳು ಪ್ರಶ್ನೆ ಮಾಡಿದರೆ, ಅದನ್ನು ರಾಜಕೀಯ ಎಂದು ಭಾವಿಸುವುದು ತಪ್ಪು. ಹಾಗೇ ಭಾವಿಸುವ ಪ್ರಶ್ನೆಯೇ ಬೇಕಿಲ್ಲ. ನೀರನ್ನು ಹರಿಸುವ ಮೊದಲೇ ಸರ್ವಪಕ್ಷ ಸಭೆ ಕರೆದಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಈಗ ನೀವು ತಮಿಳುನಾಡಿಗೆ ನೀರು ಹರಿಸುತ್ತಿದ್ದೀರಿ. ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆ ಈಗ ಏನು ಸಮಜಾಯಿಷಿ ನೀಡುತ್ತೀರಿ? ಎಂದು ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಅವರು ಬೇಸರ ವ್ಯಕ್ತಪಡಿಸಿದರು.
*ಸರಕಾರ ಏತಕ್ಕೆ?*
ನೀರು ಬೇಕಾದರೆ ರೈತರೇ ನ್ಯಾಯಾಲಯಕ್ಕೆ ಹೋಗಲಿ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಅವರು ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆ ಸರಿ ಅಲ್ಲ. ರೈತರೇ ನ್ಯಾಯಾಲಕ್ಕೆ ಹೋಗುವುದಾದರೆ ಸರಕಾರ ಏತಕ್ಕೆ ಬೇಕು? ಇಷ್ಟೆಲ್ಲಾ ವ್ಯವಸ್ಥೆ ಅಗತ್ಯ ಏನಿದೆ? ಈ ಬಗ್ಗೆ ತಪ್ಪು ತಿಳಿಯುವ ಅಗತ್ಯ ಇಲ್ಲ ಎಂದು ಕುಮಾರಸ್ವಾಮಿ ಅವರು ನೇರವಾಗಿ ಚಾಟಿ ಬೀಸಿದರು.
ಪ್ರತಿಪಕ್ಷಗಳನ್ನು ರಾಜಕೀಯ ಮಾಡಬೇಡಿ ಎಂದು ಹೇಳುತ್ತೀರಿ, ಆದರೆ ಇಂಥ ಸೂಕ್ಷ್ಮ ವಿಷಯಗಳಲ್ಲಿ ನಿಮ್ಮ ಜವಾಬ್ದಾರಿ ಏನಿದೆ? ಎಂದು ಅವರು ಮತ್ತೆ ಮತ್ತೆ ಖಾರವಾಗಿ ಪ್ರಶ್ನಿಸಿದ ಅವರು; ನೆಲ ಜಲ ಭಾಷೆ ವಿಷಯದಲ್ಲಿ ರಾಜಕೀಯದ ಅಗತ್ಯ ಇಲ್ಲ. ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಆದರೆ, ಸರಕಾರವ್ಯು ಹೊಣೆಗಾರಿಕೆಯಿಂದ ವರ್ತಿಸಬೇಕು ಎಂದರು.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ನಮ್ಮ ಅಧಿಕಾರಿಗಳು ಉತ್ತಮ ರೀತಿಯಲ್ಲಿ ರಾಜ್ಯದ ಪರ ಅಭಿಪ್ರಾಯ ತಿಳಿಸಿದ್ದಾರೆ. ಜಲ ಸಂಕಷ್ಟದ ಬಗ್ಗೆ ವಿವರಿಸಿದ್ದಾರೆ. ಆದರೆ, ಅಲ್ಲಿ ತಮಿಳುನಾಡು ಅಧಿಕಾರಿಗಳು ಪಟ್ಟು ಹಿಡಿದು ಸಭೆಯಿಂದ ಹೊರ ನಡೆದಿದ್ದಾರೆ. ಆದರೆ, ಸರ್ವೋಚ್ಚ ನ್ಯಾಯಾಲಯಕ್ಕೆ ತಮಿಳುನಾಡು ಅರ್ಜಿ ಹಾಕಿದಾಗ ನಾವು ಅಷ್ಟೇ ವೇಗದಿಂದ ಆಕ್ಷೇಪಣಾ ಅರ್ಜಿ ಸಲ್ಲಿಸಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರತಿಪಾದಿಸಿದರು.
ಹಿಂದೆ ದೇವೇಗೌಡರು ಸೇರಿದಂತೆ ಇನ್ನೂ ಹಲವರು ಮುಖ್ಯಮಂತ್ರಿಗಳಾಗಿದ್ದಾಗ ಇಂಥ ಪರಿಸ್ಥಿತಿ ಎದುರಾದಾಗ ಅದನ್ನು ಹೇಗೆ ಎದುರಿಶಾಲಾಯಿತು ಎಂಬುದನ್ನು ಕಾನೂನು ತಜ್ಞರ ತಂಡದ ಮುಖ್ಯಸ್ಥ ಮೋಹನ್ ಕಾತರಕಿ ಅವರು ಈ ಸಭೆಯಲ್ಲಿಯೇ ಹೇಳಿದ್ದಾರೆ. ಅದೆಲ್ಲಾ ವಿಷಯಗಳನ್ನು ಈ ಸರಕಾರ ತಿಳಿದುಕೊಳ್ಳಬೇಕು ಎಂದರು.
*ಯಾರ ಅಭಿಪ್ರಾಯ ಸರಿ ಇದೆ?:*
ಈ ಸಭೆಯಲ್ಲಿ ಏನೇ ವಾದ ಮಾಡಿದರೂ ಕಾವೇರಿ ಪ್ರಾಧಿಕಾರ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ಪರಿಣಾಮಕಾರಿ ವಾದ ಮಂಡಿಸಬೇಕು. ಅಲ್ಲದೆ, ಈ ದಿನ ಪತ್ರಿಕೆಯೊಂದರಲ್ಲಿ ಸಂಕಷ್ಟ ಸೂತ್ರದ ಬಗ್ಗೆ ನಮ್ಮ ಅಡ್ವೋಕೇಟ್ ಜನರಲ್ ಅವರು ಒಂದು ಹೇಳಿಕೆ ನೀಡಿದ್ದಾರೆ. ಆ ಹೇಳಿಕೆ ಸರಿ ಇದೆಯಾ? ಆದರೆ, ಮೋಹನ್ ಕಾತರಕಿ ಅವರು ಇದಕ್ಕೆ ತದ್ವಿರುದ್ದವಾದ ಮಾಹಿತಿಯನ್ನು ಈ ಸಭೆಗೆ ನೀಡಿದ್ದಾರೆ. ಹಾಗಾದರೆ, ಯಾರ ಮಾಹಿತಿ ಸರಿ ಇದೆ? ನನಗೆ ತಿಳಿದಿರುವ ಮಾಹಿತಿಯಂತೆ ಸಂಕಷ್ಟ ಸಮಯದಲ್ಲಿ ನೀರನ್ನು ಹಂಚಿಕೊಳ್ಳುವ ಬಗ್ಗೆ ಯಾವುದೇ ಸೂತ್ರ, ಪರಿಹಾರ ಇಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಬಿಜೆಪಿ
*ಕಾವೇರಿ ನೀರು ಹಂಚಿಕೆ, ಸುಪ್ರೀಂ ಕೋರ್ಟ್ ನಲ್ಲಿ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಸಲಹೆ : ಬಸವರಾಜ ಬೊಮ್ಮಾಯಿ*
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಮದ್ಯಂತರ ಅರ್ಜಿ ಸಲ್ಲಿಸಿ, ರಾಜ್ಯದ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾವೇರಿ ಹಾಗೂ ಮಹದಾಯಿ ನದಿ ನೀರು ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವಪಕ್ಷದ ಸಭೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮದ್ಯಂತರ ಅರ್ಜಿ ಸಲ್ಲಿಸದೇ, ರಾಜ್ಯದ ರೈತರಿಗೆ ನೀರು ಬಿಡದೇ ತಮಿಳುನಾಡಿಗೆ ನೀರು ಬಿಟ್ಟಿರುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಹೇಳಿದ್ದೇವೆ. ಆದರೆ, ಅವರು ಅದನ್ನು ಒಪ್ಪಲು ಸಿದ್ದರಿಲ್ಲ. ನೆಲ ಜಲ ವಿಚಾರದಲ್ಲಿ ನಮ್ಮ ರಾಜ್ಯದ ಹಿತರಕ್ಷಣೆ ಮಾಡುವುದ್ರಲ್ಲಿ ನಾವು ಬೆಂಬಲ ಕೊಡುತ್ತಾ, ಅವರು ಮೊದಲ ಹಂತದಲ್ಲಿ ಎಲ್ಲೆಲ್ಲಿ ಎಡವಿದ್ದಾರೆ ಎಂದು ಹೇಳಿದ್ದೇವೆ.
ಸಿಡಬ್ಲ್ಯುಎಂಎ ದಲ್ಲಿ ಸರಿಯಾಗಿ ವಾದ ಮಾಡುವುದರಲ್ಲಿ,
ಸುಪ್ರೀಂ ಕೋರ್ಟ್ ಗೆ ಹೋಗದೆ ಇರುವುದರಲ್ಲಿ ಎಡವಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ ಅವರು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲಾ ಎಂದರು.
ತಮಿಳುನಾಡಿಗೆ 10 ಸಾವಿರ ಕ್ಯುಸೆಕ್ಸ್ ನೀರು ಬಿಡುವ ಪರಿಸ್ಥಿತಿಯಲ್ಲಿ ಇಲ್ಲಾ. ನಮ್ಮ ರೈತರಿಗೆ ನೀರು ಬಿಡದೆ ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿ ಒದಗಿಸಿಕೊಂಡಿರುವುದು ಸರಿಯಲ್ಲಾ. ಸುಪ್ರೀಂ ಕೋರ್ಟ್ ನಲ್ಲಿ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟು ನೀರು ಬಿಡದಂತೆ ನೊಡಿಕೊಳ್ಳುವುದು ಬಹಳ ಮುಖ್ಯ ಎಂದರು.
ನಮ್ಮ ಜಲಾಶಯಗಳಲ್ಲಿ ಅವತ್ತು 93 ಟಿಎಂಸಿ ನೀರಿತ್ತು. ಇತ್ತು ಈಗ 7೦ ಟಿಎಂಸಿ ಮಾತ್ರ ನೀರು ಇದೆ.ಇದೇ ರೀತಿ ಮಾಡಿದರೆ, ನಮ್ಮ ರೈತರಿಗೆ ನೀರು ಕೊಡಲು ಅಗುವುದಿಲ್ಲ. ಬರುವಂತವ ಎರಡು ತಿಂಗಳ ನಂತರ ಬೆಂಗಳೂರಿಗೂ ಸಂಕಷ್ಟವಾಗುತ್ತದೆ.
ಇದನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು .ತಮಿಳುನಾಡಿನ ಲಾಯರ್ ಯಾವ ರೀತಿ ಹೇಳುತ್ತಾರೆ. ಅದೇ ರೀತಿ ಪರಿಣಾಮಕಾರಿಯಾಗಿ ನಮ್ಮ ರಾಜ್ಯದ ನ್ಯಾಯವಾದಿಗಳು ವಾದ ಮಂಡಿಸಬೇಕು ಎಂದು ಒತ್ತಾಯ ಮಾಡಿದ್ದೇವೆ. ನೆಲಜಲ ವಿಚಾರದಲ್ಲಿ ರಾಜಕಾರಣ ಮಾಡದೇ. ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೆವೆ. ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ. ಏನಾಗುತ್ತದೆಯೋ ಕಾದು ನೋಡೋಣ ಎಂದರು.
ಇನ್ನು ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸದೇ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗುವುದಾಗಿ ಹೇಳಿದರು. ಮೊದಲು ಸುಪ್ತೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ನಂತರ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ಆಲೋಚಿಸುವಂತೆ ಸಲಹೆ ನೀಡಿರುವುದಾಗಿ ತಿಳಿಸಿದರು.