ಏಷಿಯನ್ ಪಿಜಿಪಿಆರ್ ಸಮ್ಮೇಳನ ಉದ್ಘಾಟನೆ
ಬೆಂಗಳೂರು, ಸೆಪ್ಟೆಂಬರ್ 19 (ಕರ್ನಾಟಕ ವಾರ್ತೆ) :
ಏಷಿಯನ್ ಪಿಜಿಪಿಆರ್ ಸಂಘಟನೆ, ಬೆಂಗಳೂರು ತೋಟಗಾರಿಕೆ ವಿಶ್ವವಿದ್ಯಾಲಯ, ಸಸ್ಯರೋಗಶಾಸ್ತ್ರ ವಿಭಾಗ ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಸೆಪ್ಟೆಂಬರ್ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ಯಲಹಂಕದಲ್ಲಿರುವ ರಾಯಲ್ ಆರ್ಕಿಡ್ ವಸತಿ ಗೃಹ ಸಮುದಾಯ ಭವನದಲ್ಲಿ “ಸಮಗ್ರ ಸಸ್ಯ ಆರೋಗ್ಯ ನಿರ್ವಹಣೆಗಾಗಿ ಪ್ರಯೋಜನಕಾರಿ ಸೂಕ್ಷ್ಮ ಜೀವಿಗಳು” ಎಂಬ ಶೀರ್ಷಿಕೆಯಡಿ 8ನೇ ಏಷ್ಯಾ ಪಿಜಿಪಿಆರ್ ರಾಷ್ಟ್ರೀಯ ಸಮ್ಮೇಳನವನ್ನು ಇಂದು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ವಿ.ಸುರೇಶ್ ಅವರು ಉದ್ಘಾಟಿಸಿದರು.
ಆಹಾರ ಭದ್ರತೆ ಮತ್ತು ಪರಿಸರ ಸಂರಕ್ಷಣೆ ಅಂತರಾಷ್ಟ್ರೀಯ ಕಾಳಜಿ – ಆತಂಕಗಳ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ರಾಸಾಯನಿಕ ಪದಾರ್ಥಗಳ ಬಳಕೆ ತಗ್ಗಿಸುವ ನಿಟ್ಟಿನಲ್ಲಿ ಸಸ್ಯ ಸಮೃದ್ಧಿ ಉತ್ತೇಜಕಗಳ ಬಳಕೆ ಅರ್ಥಪೂರ್ಣವೆನಿಸುತ್ತದೆ. ಪಿಜಿಪಿಆರ್ ಸಂಬಂಧಿತ ತಂತ್ರಜ್ಞಾನಗಳು ಪ್ರಸ್ತುತ ಕಾಲಘಟ್ಟದಲ್ಲಿ ಕುಂಠಿತವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಿಜಿಪಿಆರ್ ಉದ್ಯಮಶೀಲರು ಒಂದೆಡೆ ಕಲಿತು ವಿಷಯ ವಿನಿಮಯ ನಿಟ್ಟಿನಲ್ಲಿ ಈ ಸಮ್ಮೇಳನ ಒಂದು ವೇದಿಕೆ ಕಲ್ಪಿಸುತ್ತದೆ.
ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಕೀಟನಾಶಕಗಳು ಇದ್ದೇ ಇರುತ್ತವೆ. ಇದರಿಂದ ದೇಹಕ್ಕೆ ಹಾನಿಕಾರಕ ಅಂಶಗಳು ಸೇರುವ ಸಾಧ್ಯತೆ ಇದೆ. ಈ ವಿಷಕಾರಕ ಕೀಟನಾಶಕಗಳಿಂದ ಹೇಗೆ ಮುಕ್ತವಾಗಬೇಕೆಂಬುದನ್ನು ನಾವು ಕಂಡುಕೊಳ್ಳಬೇಕಿದೆ. ಈ ಸಮ್ಮೇಳನದ ಮುಖ್ಯ ಉದ್ದೇಶ ಕೀಟನಾಶಕ, ರಾಸಾಯನಿಕಗಳ ಬಳಕೆಯನ್ನು ಕೃಷಿ, ತೋಟಗಾರಿಕಾ ಬೆಳೆಗಳಿಗೆ ಕಡಿಮೆ ಮಾಡಿ ಸಮಾಜಕ್ಕೆ ರಾಸಾಯನಿಕ ಮುಕ್ತ ಆಹಾರ ನೀಡುವುದೇ ಆಗಿದೆ.
ಸಮಾರಂಭದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್, ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಎಂ.ಕೆ.ಹೆಗಡೆ, ನವದೆಹಲಿಯ ಐಸಿಎಆರ್ ತೋಟಕಾರಿಕೆ ನಿಕಟವರ್ತಿ ಡಿಡಿಜಿ ಡಾ.ಎ.ಕೆ. ಕೃಷ್ಣಕುಮಾರ್, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಂ.ಕೆ. ಹೊನ್ನಭೈರಯ್ಯ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಸಹಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರಾದ ಡಾ.ವಿ.ದೇವಪ್ಪ, ಏಷಿಯನ್ ಪಿಜಿಪಿಆರ್ ಸೊಸೈಟಿಯ ಅಧ್ಯಕ್ಷರಾದ ಪ್ರೊ.ಎಂ.ಎಸ್.ರೆಡ್ಡಿ ಮತ್ತು ವಿಜ್ಞಾನಿಗಳಾದ ಎಂ ಎಸ್ ರಾವ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.