IMG 20240302 WA0009

Karnataka : ಬರ ನಿರ್ವಹಣೆ ಸಚಿವರ ಸಭೆ….!

Genaral STATE

*ಗ್ರಾಮಗಳ ನೀರಿನ ಪರಿಸ್ಥಿತಿ ಅವಲೋಕಿಸಲು ಎರಡು ಸೋಮವಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ: ಸಚಿವ ಪ್ರಿಯಾಂಕ್‌ ಖರ್ಗೆ*

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನ

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಕ ಅಧಿಕಾರಿಗಳು ಪ್ರತಿ ಸೋಮವಾರ ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರವಾಸ ಮಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು, ತಮ್ಮ ಪ್ರವಾಸ ಸಮಯದಲ್ಲಿ ನರೇಗಾ ಕಾಮಗಾರಿಗಳ ವೀಕ್ಷಣೆ, ಕೂಸಿನ ಮನೆ ಹಾಗೂ ಅರಿವು ಕೇಂದ್ರಗಳ ತಪಾಸಣೆಯನ್ನು ಸೇರಿಸಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರತಿ ತಿಂಗಳ ಎರಡನೆ ದಿನಾಂಕದಂದು ನಡೆಯುವ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾಸಿಕ ವಿಡಿಯೋ ಕಾನ್ಪರೆನ್ಸ್‌ ವಿಮರ್ಶಾ ಸಭೆಯಲ್ಲಿ ಸಚಿವರು ಮಾತನಾಡುತ್ತಿದ್ದರು.

ಬೇಸಿಗೆಯ ಪ್ರಖರತೆ ಹೆಚ್ಚಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಜಾಸ್ತಿಯಾಗುತ್ತಿದೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಮುಂದಿನ ಮೂರು ತಿಂಗಳುಗಳ ಕಾಲ ಪ್ರತಿ ಎರಡನೆ ಹಾಗೂ ನಾಲ್ಕನೆ ಸೋಮವಾರಗಳಂದು ಸಭೆ ನಡೆಸಿ ಕುಡಿಯುವ ನೀರಿನ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಬೇಕು, ನೀರಿನ ಅಭಾವ ಎದುರಿಸುವ ಗ್ರಾಮಗಳಿಗೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸಚಿವರು ಸೂಚಿಸಿದರು. ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲಾ ಜಿಲ್ಲಾ ಪಂಚಾಯತಿಗಳಲ್ಲಿ 24/7 ಕಂಟ್ರೋಲ್ ರೂಮ್ ಆರಂಭಿಸಿ, ಸಿಬ್ಬಂದಿಗಳನ್ನು ನಿಯೋಜಿಸಲೂ ಸಚಿವರು ಹೇಳಿದರಲ್ಲದೆ ತಾಲ್ಲೂಕು ಮಟ್ಟದಲ್ಲಿ ಕಾರ್ಯಾನಿರ್ವಾಹಕ ಅಧಿಕಾರಿಗಳ ಮುಖಾಂತರ ಕ್ಷಿಪ್ರ ಕಾರ್ಯಪಡೆ (Rapid taskforce) ರಚಿಸಿ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ನಿರ್ದೇಶನ ನೀಡಿದರು.

ಗ್ರಾಮಗಳಲ್ಲಿನ ನೀರಿನ ಲಭ್ಯತೆ ಹಾಗೂ ಕೊರತೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕುರಿತಂತೆ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುವ ಮಾಹಿತಿ ಹಾಗೂ ತಮಗೆ ಒದಗಿಸಲಾಗುತ್ತಿರುವ ಮಾಹಿತಿಗಳ ನಡುವೆ ಸಾಮ್ಯತೆ ಇಲ್ಲದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

IMG 20240302 WA0011

ಮುಂದಿನ ಮೂರು ತಿಂಗಳ ಕಾಲ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಪತ್ರಿಕಾಗೋಷ್ಠಿ ಕರೆದು ಜಿಲ್ಲೆಯಲ್ಲಿ ನೀರಿನ ಅಭಾವ ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಸಚಿವರು ಆದೇಶ ನೀಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿನ ಎಲ್ಲ ಗ್ರಾಮಗಳ ನೀರು ಸರಬರಾಜು ಬಗ್ಗೆ ಕರಾರುವಕ್ಕು ಮಾಹಿತಿಯನ್ನು ಹೊಂದಬೇಕಲ್ಲದೆ, ಅಭಾವವಿರುವ ಗ್ರಾಮಗಳಿಗೆ ಕಂಟೆಜೆನ್ಸಿ ಅನುದಾನದಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಕಳೆದ ವರ್ಷ ಏಪ್ರಿಲ್‌ 1ರಿಂದ 2024ರ ಫೆಬ್ರವರಿ 27ರವರೆಗೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ 2.12 ಲಕ್ಷ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ, ಗ್ರಾಮೀಣ ನೀರು ಕಲುಷಿತವಾಗದಂತೆ ಜಾಗ್ರತೆ ವಹಿಸಲಾಗಿದೆ ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಕಲುಷಿತವಾಗದಂತೆ ನಿಗಾ ವಹಿಸಲು ಸಚಿವ ಪ್ರಿಯಾಂಕ್‌ ಖರ್ಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹದೇವನ್‌, ಅಂಜುಂ ಪರವೇಜ್‌, ಆಯುಕ್ತರಾದ ಪಿ.ಪ್ರದೀಪ್‌ (ಸಾಮಾಜಿಕ ಪರಿಶೋಧನೆ), ಪ್ರಿಯಾಂಕ ಮೇರಿ ಫ್ರಾನ್ಸಿಸ್‌ (ಪಂಚಾಯತ್‌ ರಾಜ್)‌, ಪವನ್‌ ಕುಮಾರ್‌ ಮಾಲಪಾಟಿ (ನರೇಗ), ಕೆ.ನಾಗೇಂದ್ರ ಪ್ರಸಾದ್‌ (ಗ್ರಾಮೀಣ ನೀರು ಸರಬರಾಜು) ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.