DSC4389 1 scaled

Tumkur:ಯುವಕರ ಕೌಶಲ್ಯ ಹೆಚ್ಚಿಸಲು ತರಬೇತಿ ಕೇಂದ್ರ ತೆರೆಯುವ ಚಿಂತನೆ….!

DISTRICT NEWS ತುಮಕೂರು

ಪಾವಗಡ : ತುಂಗಭದ್ರಾ ಕುಡಿಯುವ ನೀರಿನ ಯೋಜನೆಯನ್ನು ಪ್ರತಿಯೊಂದು ಹಳ್ಳಿಗೂ ತಲುಪಿಸುವಲ್ಲಿ ನಮ್ಮ ಸರ್ಕಾರ ಬದ್ಧ

ಯುವಕರ ಕೌಶಲ್ಯ ಹೆಚ್ಚಿಸಲು ತರಬೇತಿ ಕೇಂದ್ರ ತೆರೆಯುವ ಚಿಂತನೆ : ಸಚಿವರಿಂದ ಸ್ಥಳ ಪರಿಶೀಲನೆ
ತುಮಕೂರು(ಕ.ವಾ.) ಜು.10: ಜಿಲ್ಲೆಯಲ್ಲಿ ವಿವಿಧ ಪದವಿ ಹೊಂದಿದವರ ಕೌಶಲ್ಯವನ್ನು ಹೆಚ್ಚಿಸಲು ನಗರ ಕೇಂದ್ರ ಗ್ರಂಥಾಲಯದ ಮೂರನೇ ಮಹಡಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ತೆರೆಯುವ ಚಿಂತನೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಗರ ಕೇಂದ್ರ ಗ್ರಂಥಾಲಯದಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಕಲಿಯುವುದು ಅನಿವಾರ್ಯವಾಗಿದೆ. ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರ್ ಕಾಲೇಜುಗಳಿಂದ ಉತ್ತೀರ್ಣರಾಗಿ ಹೊರಬರುವ ವಿದ್ಯಾರ್ಥಿಗಳಿಗೆ ಉದ್ಯಮಶೀಲತಾಭಿವೃದ್ಧಿ ತರಬೇತಿ ನೀಡಿ ಅವರ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ಉದ್ಯೋಗ ಪಡೆಯಲು ಅನುವು ಮಾಡಿಕೊಡಬೇಕೆಂಬ ಸದುದ್ದೇಶದಿಂದ ಕೌಶಲ್ಯ ತರಬೇತಿ ಕೇಂದ್ರವನ್ನು ತೆರೆಯಲು ಸರ್ಕಾರ ಉದ್ದೇಶಿಸಿದೆ ಎಂದು ತಿಳಿಸಿದರು.

DSC4435ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರ ಗ್ರಂಥಾಲಯದ 3ನೇ ಮಹಡಿಯಲ್ಲಿ ಸುಮಾರು 11,000 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಕಟ್ಟಡದಲ್ಲಿ ಯುವ ಉದ್ಯೋಗಾಕಾಂಕ್ಷಿಗಳಿಗಾಗಿ ಕೌಶಲ್ಯ ತರಬೇತಿ ಕೇಂದ್ರವನ್ನು ತೆರೆಯುವ ಬಗ್ಗೆ ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳೊಂದಿಗೆ ಚರ್ಚಿಸಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದೆಂದರು.

ಕೌಶಲ್ಯ ತರಬೇತಿ ಕೇಂದ್ರದಲ್ಲಿ ಪ್ರಮುಖವಾಗಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದಲ್ಲಿ ಕೌಶಲ್ಯ ಹೆಚ್ಚಿಸುವ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆಯಲ್ಲದೆ, 10ನೇ ತರಗತಿ/ ಪಿಯುಸಿ/ಐಟಿಐ ಅನುತ್ತೀರ್ಣರಾದವರಿಗೂ ತರಬೇತಿ ನೀಡಲು ಯೋಜಿಸಲಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಹೆಚ್ಚಿಸಲು ಈ ಕೇಂದ್ರ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಚಿವರು ಗ್ರಂಥಾಲಯದ ಮೊದಲ ಮಹಡಿಯಲ್ಲಿರುವ ಗ್ರಂಥಾಲಯದ ವಿಭಾಗ, ಡಿಜಿಟಲ್ ಗ್ರಂಥಾಲಯ ವಿಬಾಗ, ಮಕ್ಕಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳ ಗ್ರಂಥಾಲಯ ವಿಭಾಗದಲ್ಲಿ ವಯೋಮಾನದ ಅಧಾರದಲ್ಲಿ ಮಕ್ಕಳಲ್ಲಿ ಕುತೂಹಲ ಹೆಚ್ಚಿಸುವ ಪುಸ್ತಕಗಳನ್ನು ಇಡಬೇಕೆಂದು ಸಲಹೆ ನೀಡಿದರಲ್ಲದೆ ಮಕ್ಕಳ ವಿಭಾಗದ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತರಬೇತಿ ಕೇಂದ್ರ ತೆರೆಯುವುದು ಹೇಳಿಕೆಯಾಗಿಯೇ ಉಳಿಯಬಾರದು. ಕಾರ್ಯರೂಪಕ್ಕೆ ತರಬೇಕೆಂಬ ಹಿನ್ನೆಲೆಯಲ್ಲಿ ಗೃಹ ಸಚಿವರ ಸಲಹೆ ಮೇರೆಗೆ ಈ ಭೇಟಿ ನೀಡಿದ್ದೇನೆ ಎಂದರಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ನೀರಿನ ಘಟಕ ಕೆಟ್ಟು ನಿಂತಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶುದ್ಧ ನೀರಿನ ಘಟಕದ ನಿರ್ವಹಣೆಯನ್ನು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದ್ದು, ಇನ್ನು ಮುಂದೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಎಲ್ಲ ಶುದ್ಧ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡಲು ಈಗಾಗಲೇ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಮುಂದಿನ ಐದಾರು ತಿಂಗಳೊಳಗಾಗಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಗ್ರಂಥಾಲಯದ ವಾತಾವರಣದಲ್ಲಿ ತರಬೇತಿಯಂತಹ ಇನ್ನಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಿರುದ್ಯೋಗಿ ವಿದ್ಯಾರ್ಥಿಗಳ ಉದ್ಯೋಗಾವಕಾಶಕ್ಕಾಗಿಯೇ ತರಬೇತಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆಯೇ ಹೊರತು ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ. ಜಿಲ್ಲಾ ಸಚಿವರು, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.

ಪಾವಗಡ ತಾಲ್ಲೂಕಿಗೆ ಭೇಟಿ :

ಪಾವಗಡ ತಾಲ್ಲೂಕಿಗೆ ಭೇಟಿತುಮಕೂರು ನಗರದ ಭೇಟಿಗೂ ಮುನ್ನ ಸಚಿವರು ಜಿಲ್ಲೆಯ ಪಾವಗಡ ತಾಲ್ಲೂಕಿಗೆ ಭೇಟಿ ನೀಡಿ ತಾಲೂಕಿನ ಶುದ್ಧ ಕುಡಿಯುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಪ್ರಾಯೋಗಿಕ ಚಾಲನೆಯನ್ನು ಪರಿವೀಕ್ಷಿಸಿದರು. ಪಾವಗಡ ಹಾಗೂ ಚಳ್ಳಕೆರೆ ಭಾಗದ ಸುಮಾರು 1138 ಗ್ರಾಮಗಳಿಗೆ ನೀರೊದಗಿಸುವ 2300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬೃಹತ್ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತುಂಗಭದ್ರಾ ಕುಡಿಯುವ ನೀರಿನ ಯೋಜನೆಯನ್ನು ಪ್ರತಿಯೊಂದು ಹಳ್ಳಿಗೂ ತಲುಪಿಸುವಲ್ಲಿ ನಮ್ಮ ಸರ್ಕಾರ ಬದ್ಧ. ಸಚಿವ ಪ್ರಿಯಾಂಕ ಖರ್ಗೆ.

ಹಿಂದಿನ ಬಿಜೆಪಿ ಸರ್ಕಾರದ ನಾಯಕರು ತುಂಗಭದ್ರಾ ಕುಡಿಯುವ ನೀರಿನ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸದೆ ಬರಿ ಕಾಲ ಕಳೆದುಕೊಂಡು ಹೋಗಿದ್ದಾರೆ ಎಂದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನ ಸಚಿವರಾದ ಪ್ರಿಯಾಂಕ ಖರ್ಗೆ

ತಾಲ್ಲೂಕಿನ ಕಾರನಾಗನಹಟ್ಟಿ ಯಲ್ಲಿ ನಡೆಯುತ್ತಿರುವ ತುಂಗಾ ಭದ್ರಾ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಪರಿಶೀಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಾವಗಡ ತಾಲ್ಲೂಕಿನ ಜನರ ಹಲವು ವರ್ಷಗಳ ಕನಸಾಗಿದ್ದ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯು ಶೀಘ್ರದಲ್ಲಿ ಕಾರ್ಯರಂಭವಾಗುವುದು ಎಂದರು.

WhatsApp Image 2024 07 10 at 7.59.31 PM

ತುಂಗಭದ್ರಾ ಕುಡಿಯುವ ನೀರಿನ ಯೋಜನೆ 2132 ಕೋಟಿ ವೆಚ್ಚದಿಂದ ನಿರ್ಮಾಣವಾಗುವ ಯೋಜನೆ ಎಂದು, ಚಳ್ಳಕೆರೆಯಿಂದ ಪಾವಗಡ ತಾಲ್ಲೂಕಿಗೆ ಕುಡಿಯುವ ನೀರನ್ನು ಇನ್ನು ಎರಡುವರೆ ತಿಂಗಳ ಒಳಗೆ ಪ್ರಾರಂಭಿಸಲಾಗುವುದು ಎಂದರು.

2500 ಕಿಲೋಮೀಟರು ವ್ಯಾಪ್ತಿಯ ಯೋಜನೆ ಇದಾಗಿದ್ದು, ಚಳ್ಳಕೆರೆ ಶಾಸಕ ರಘುಮೂರ್ತಿ, ಪಾವಗಡ ಶಾಸಕ ಎಚ್ ಬಿ ವೆಂಕಟೇಶ್ ಕ್ರಿಯಾಶೀಲರಾಗಿ ಯೋಜನೆ ಕಾರ್ಯಗತಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.

ಮಳೆಗಾಲ ವಾಗಿದ್ದರಿಂದ ಡ್ಯಾಮ್ ನಲ್ಲಿ ನೀರಿರುವಾಗಲೇ ಕಾಮಗಾರಿ ಸಂಪೂರ್ಣಗೊಳಿಸಿ ಎರಡು ಬಾರಿ ಟ್ರಯಲ್ ರನ್ ಮಾಡಲಾಗುವುದು ಎಂದರು. ರಾಜ್ಯದಲ್ಲಿ ಮೊದಲ ಬಾರಿಗೆ ಏ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ವಾಟರ್ ಮ್ಯಾನೇಜ್ಮೆಂಟ್ ಎಂಬ ಯೋಜನೆಯ ತಂದ ಏಕೈಕ ಸರ್ಕಾರ ಕಾಂಗ್ರೆಸ್ ಎಂದರು.

ಸುಮಾರು 13 ಲಕ್ಷ ಲೀಟರ್ ಸಾಮರ್ಥ್ಯದ ತುಂಗಭದ್ರಾ ಕುಡಿಯುವ ನೀರಿನ ಟ್ಯಾಂಕ್ ಬಳಿಗೆ ತೆರಳಿ ಕಾಮಗಾರಿ ಪರಿಶೀಲನೆ ನಡೆಸಿದರು ತುಂಗಾ ಭದ್ರೆಯಿಂದ ನೀರು ಸರಬರಾಜು ಮಾಡಲು ಪೈಪ್ ಲೈನ್ ಮಾಡಿರುವುದನ್ನು ನಕ್ಷೆಯ ಮೂಲಕ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು, ಶಾಸಕರಾದ ಹೆಚ್.ವಿ.ವೆಂಕಟೇಶ್, ಚಳ್ಳಕೆರೆ ಶಾಸಕ ರಘುಮೂರ್ತಿ, ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ಶಾಸಕ ಜ್ಯೋತಿಗಣೇಶ್, ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ದರ್ಶನ್, ಮಹಾ ನಗರ ಪಾಲಿಕೆ ಆಯುಕ್ತ ಬಿ.ವಿ. ಆಶ್ವಿಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರವೀಶ್, ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಸರೋಜಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.