ಪಾವಗಡ: ದೂರ ತರಂಗ ಶಿಕ್ಷಣ ಕೇಂದ್ರದ ಉದ್ಘಾಟನೆ ಹಾಗೂ ಶತಮಾನವನ್ನು ಕಂಡಿದ್ದ ಸರ್ಕಾರಿ ಮಾದರಿ ಹಿರಿಯ ಬಾಲಕರ ಉನ್ನತೀಕರಿಸಿದ ಶಾಲೆಯ ದತ್ತು ಸ್ವೀಕಾರ
ಶಿಕ್ಷಣ ಕ್ಷೇತ್ರದಲ್ಲಿ ಒಂದು ಹೊಸ ಆಯಾಮವನ್ನೇ ಸೃಷ್ಟಿಸಿರುವ ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ ಜಂಟಿಯಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದೆ. ಇಂದು ಪಾವಗಡದ ಸರ್ಕಾರಿ ಮಾದರಿ ಹಿರಿಯ ಬಾಲಕರ ಉನ್ನತೀಕರಿಸಿದ ಶಾಲೆ ಶತಮಾನೋತ್ಸವವನ್ನು ಕಂಡಿರುವ ಅತಿ ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಲ್ಲಿ ಬಂದಿರುವಂತಹ ಮಕ್ಕಳಿಗೆ ಆಧುನಿಕತೆಯ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಶಿಕ್ಷಣವನ್ನು ನೀಡುವಂತಹ ಯೋಜನೆ ಚಾಲನೆ ನೀಡಲಾಯಿತು.
ಪಾವಗಡ ತಾಲ್ಲೂಕಿನ ಶಾಸಕರಾದ ಶ್ರೀವೆಂಕಟರಮಣಪ್ಪ ರವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಯೋಜನೆಯ ರೂವಾರಿಗಳಾದ ಪೂಜ್ಯ ಸ್ವಾಮಿ ಜಪಾನಂದಜೀ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಒಂದು ರೀತಿಯ ಸಂಚಲನವನ್ನು ಉಂಟು ಮಾಡಿದ ಯೋಜನೆ ಪಾವಗಡ ತಾಲ್ಲೂಕಿನಿಂದ ಆರಂಭವಾಗಿದ್ದು ನಿಜಕ್ಕೂ ಒಂದು ಮಹತ್ಕಾರ್ಯವೇ ಸರಿ. ಈ ಯೋಜನೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಅಂದರೆ ಮಧುಗಿರಿ, ಕೊರಟಗೆರೆ, ಶಿರಾ ಮತ್ತು ಪಾವಗಡ ತಾಲ್ಲೂಕಿನ 40 ಶಾಲೆಗಳ ಸುಮಾರು 10000ಕ್ಕೂ ಮಿಗಿಲಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಈ ಸೌಲಭ್ಯವನ್ನು ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ರವರ ಅನುಷ್ಠಾನ ಜವಾಬ್ಧಾರಿಯೊಂದಿಗೆ ಕಾರ್ಯಕ್ರಮ ನಡೆಯುತ್ತಿದೆ ಎಂದು ಸ್ವಾಮೀಜಿಯವರು ತಿಳಿಸಿದರು.
ಗಡಿ ಭಾಗದ ತಾಲ್ಲೂಕಾದ ಈ ಪ್ರದೇಶದಲ್ಲಿ ಗ್ರಾಮಾಂತರ ಭಾಗದ ಅದರಲ್ಲಿಯೂ ಪಾವಗಡ ತಾಲ್ಲೂಕಿನ ಕುಗ್ರಾಮಗಳಾದ ಗೌಡೇಟಿ, ನಾಗಲಮಡಿಕೆ, ದೊಡ್ಡಹಳ್ಳಿ, ಮರಿದಾಸನಹಳ್ಳಿ ಮೊದಲನೇ ಹಂತದಲ್ಲಿ ಈ ಗ್ರಾಮಗಳಲ್ಲಿ ಈ ಯೋಜನೆಯನ್ನು ಚಾಲನೆ ಮಾಡಲಾಗುವುದು. ತದನಂತರ ಉಳಿದ ಗ್ರಾಮಗಳಿಗೆ ವಿಸ್ತರಿಸಲಾಗುವುದು. ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಯಾಮವನ್ನೇ ಪಾವಗಡ ತಾಲ್ಲೂಕಿನ ಮೂಲಕ ಆರಂಭಿಸಿದಂತಾಗಿದೆ ಎಂದು ಪೂಜ್ಯ ಸ್ವಾಮೀಜಿಯವರು ತಿಳಿಸಿದರು.
ತದನಂತರ ಮಾತನಾಡಿದ ಶ್ರೀ ಸುದೇಶ್ ಕುಮಾರ್, ಅಧ್ಯಕ್ಷರು, ಆರ್ಯವೈಶ್ಯ ಮಂಡಲಿ ಹಾಗೂ ಸದಸ್ಯರು, ಪಾವಗಡ ಪುರಸಭೆ ರವರು ಮಾತನಾಡಿ ಪೂಜ್ಯ ಸ್ವಾಮೀಜಿಯವರ ಯೋಜನೆಗಳು ನಿಜಕ್ಕೂ ಅತ್ಯಂತ ಹಿಂದುಳಿದ ಗ್ರಾಮಾಂತರ ಪ್ರದೇಶಗಳಿಗೆ ಮುಟ್ಟಿಸುವಂತಾಗಿದೆ ಎಂದು ರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಯೋಜನೆಗಳನ್ನು ಮನಃಪೂರ್ವಕವಾಗಿ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಆಯ್ದ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ನೀಡಲಾಯಿತು. ಸದರಿ ಶಾಲೆಯ ಎಲ್ಲ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ನೋಟ್ ಪುಸ್ತಕಗಳನ್ನು ನೀಡಲಾಯಿತು. ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀ ವೆಂಕಟರಮಣಪ್ಪ ರವರು ಕಳೆದ 3 ದಶಕಗಳಿಗಿಂತಲೂ ಮಿಗಿಲಾಗಿ ಪೂಜ್ಯ ಸ್ವಾಮೀಜಿಯವರು ಅತ್ಯಂತ ಸನಿಹದಿಂದ ತಾವು ಕಂಡಿರುವುದಾಗಿ ಹಾಗೂ ಅನೇಕ ಯೋಜನೆಗಳಲ್ಲಿ ತಾವೂ ಸಹ ಪಾಲ್ಗೊಂಡಿರುವುದಾಗಿ ತಿಳಿಸಿದರು.
ಪಾವಗಡದಂತಹ ತಾಲ್ಲೂಕಿನಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಸಾವಿರಾರು ಜನರಿಗೆ ಆರೋಗ್ಯ ಹಾಗೂ ಬರಗಾಲದ ಸಮಯದಲ್ಲಿ ಪರಿಹಾರ ಯೋಜನೆಗಳನ್ನು ನಿರಂತರವಾಗಿ ನಡೆಸುತ್ತಾ ಶಿಕ್ಷಣ ಕ್ಷೇತ್ರದಲ್ಲೂ ಪೂಜ್ಯ ಸ್ವಾಮೀಜಿಯವರು ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಎಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಸ್ವಾಮೀಜಿಯವರ ಆಸ್ಪತ್ರೆಯ ಅಂಕಿ ಅಂಶಗಳನ್ನು ಮತ್ತೆ ನೆರೆದ ಸಭೆಗೆ ತಿಳಿಸುತ್ತಾ ಆರೂವರೆ ಲಕ್ಷಕ್ಕೂ ಮಿಗಿಲಾದ ಜನರಿಗೆ ಆರೋಗ್ಯ ಸೇವೆಯನ್ನು ಸಲ್ಲಿಸಿದ ಪೂಜ್ಯ ಸ್ವಾಮೀಜಿಯವರ ಕಾರ್ಯವೈಖರಿ ನಿಜಕ್ಕೂ ಅದ್ಭುತ ಎಂದು ಬಣ್ಣಿಸಿದರು.
ದೂರತರಂಗ ಶಿಕ್ಷಣದ ಯೋಜನೆ ಖಂಡಿತವಾಗಿ ನಾಡಿನ ಮೂಲೆ ಮೂಲೆಯಲ್ಲಿ ತಲುಪುವಂತಾಗುತ್ತಿದೆ, ಇದಕ್ಕೆ ಮೂಲ ಕಾರಣಕರ್ತರಾದ ಶ್ರೀಮತಿ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಪೌಂಡೇಷನ್ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮ ಇವರ ಸಂಯುಕ್ತಾಶ್ರಯದಲ್ಲಿ ನಮ್ಮ ತಾಲ್ಲೂಕಿನಲ್ಲಿ ನೆರವೇರುತ್ತಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು. ಕಾರ್ಯಕ್ರಮವು ಶಾಲೆಯ ಮುಖ್ಯೋಪಾಧ್ಯಾಯರಿಂದ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಶ್ರೀರಾಮಂಜನಪ್ಪ, ಅಧ್ಯಕ್ಷರು, ಪುರಸಭೆ, ಶ್ರೀಮತಿ ಸುಧಾಲಕ್ಷ್ಮಿ ಪ್ರಮೋದ್, ಉಪಾಧ್ಯಕ್ಷರು, ಶ್ರೀ ಸಿದ್ದಗಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶ್ರೀ ಸುದೇಶ್ ಕುಮಾರ್ ಹಾಗೂ ವಿದ್ಯಾ ಇಲಾಖೆಯ ಎಲ್ಲ ಅಧಿಕಾರಿಗಳು ಭಾಗವಹಿಸಿ ಜೊತೆಯಲ್ಲಿ ಇನ್ಫೋಸಿಸ್ ಸಮರ್ಪಣ ತಂಡ, ಸಾಹಸ್ ತಂಡ ಹಾಗೂ ವಿವೇಕ ಬ್ರಿಗೇಡ್ ಸದಸ್ಯರು ಭಾಗವಹಿಸಿದ್ದರು.