IMG 20201021 WA0024

ಜನರ ಕಷ್ಟಕ್ಕೆ ಸ್ಪಂದಿಸಲು ರಾಜ್ಯದಲ್ಲಿ ಸರ್ಕಾರವೇ ಇಲ್ಲ…!

DISTRICT NEWS ತುಮಕೂರು

*ಜನರ ಕಷ್ಟಕ್ಕೆ ಸ್ಪಂದಿಸಲು ರಾಜ್ಯದಲ್ಲಿ ಸರ್ಕಾರವೇ ಇಲ್ಲ: ಡಿ.ಕೆ ಶಿವಕುಮಾರ್*

ತುಮಕೂರು: ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂತ್ರಿಗಳು ಹಿಂದೆಯೂ ಹೋಗಿಲ್ಲ, ಈಗಲೂ ಹೋಗುವುದಿಲ್ಲ. ಒಬ್ಬರು ಪ್ರವಾಹ ಬಂದಿಲ್ಲ ಅಂತಾರೆ, ಮತ್ತೊಬ್ಬರು ಆರೋಗ್ಯ ಸರಿ ಇಲ್ಲ ಅಂತಾರೆ, ಮತ್ತೊಬ್ಬರು ತಮಗೆ ಸಮಸ್ಯೆ ಇದೆ ಅಂತಾರೆ. ಇನ್ನು ಶಿರಾದಲ್ಲಿ ರೈತರು ಬೆಳೆದ ಕಡಲೆಕಾಯಿ ಮಳೆಯಿಂದ ಕೊಚ್ಚಿಕೊಂಡು ಹೋಗುತ್ತಿದ್ದರೂ ಆ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರವೇ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸುತ್ತಿರುವ ಶಿವಕುಮಾರ್ ಅವರು, ಬುಧವಾರ ಮಾಧ್ಯಮಗಳ ಜತೆ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು:

* ರಾಜ್ಯದಲ್ಲಿ ಸರ್ಕಾರ ಇಲ್ಲದಿರುವ ಕಾರಣಕ್ಕೆ ಯಡಿಯೂರಪ್ಪನವರು ಈ ಚುನಾವಣೆಯನ್ನು ನನ್ನ ಮಗನ ನೇತೃತ್ವದಲ್ಲಿ ನಡೆಸುತ್ತೇವೆ ಎಂದಿದ್ದಾರೆ.

* ಅಶ್ವಥ್ ನಾರಾಯಣ ಅವರು ವೈದ್ಯಕೀಯ ಶಿಕ್ಷಣ ಸಚಿವರು, ನನ್ನ ವರ್ಣಿಸಲು ಅವರ ಡಿಕ್ಷ್ ನರಿಯಲ್ಲಿ ಬೇರೆ ಪದ ಸಿಕ್ಕರೆ ಅದನ್ನೂ ಹೇಳಲಿ ನಾನು ಸ್ವೀಕರಿಸುತ್ತೇನೆ.

* ಬಿಜೆಪಿಯವರು ಯಡಿಯೂರಪ್ಪನವರನ್ನು ಕೆಳಗಿಳಿಸಲು ಏನೇನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ನಮ್ಮ ಬಳಿಯೂ ಬೇರೆ ಬೇರೆ ಮಾಹಿತಿ ಇದೆ. ಅವರ ಪಾರ್ಟಿ ಅವರು ಏನಾದರೂ ಮಾಡಿಕೊಳ್ಳಲಿ.

* ನಾನು ಪಕ್ಷ ಕಟ್ಟಲು ಒಬ್ಬ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ. ಪಕ್ಷದಲ್ಲಿ ಯಾವ ರೇಸು ಇಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಮೊದಲು ಕಾರ್ಯಕರ್ತ. ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ.

IMG 20201021 WA0022

* ನನ್ನ ಮೇಲೆ ವಿವಿಧ ಇಲಾಖೆಗಳ ಮೂಲಕ ದಾಳಿ ಮಾಡಿರುವುದು ಒಳ್ಳೆಯದೋ ಅಥವಾ ಕೆಟ್ಟದ್ದೊ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ನಾವು ಸದ್ಯಕ್ಕೆ ಚುನಾವಣೆ ಮಾಡೋಣ.

* ನಾವು ಚುನಾವಣೆ ಬಗ್ಗೆ ನಮ್ಮ ಆಂತರಿಕ ಸಮೀಕ್ಷೆ ನಡೆಸಿ ವರದಿ ಪಡೆದಿದ್ದೇವೆ. ನಮಗೆ ಅಚ್ಚರಿಯಾಗೋ ರೀತಿಯಲ್ಲಿ ಜನ ಬೆಂಬಲ ತೋರಿಸುತ್ತಿದ್ದಾರೆ. ನಮಗೆ ಶೇ.44ರಷ್ಟು ಜನ ಬೆಂಬಲ ನೀಡಿದರೆ, ಒಂದು ಪಕ್ಷಕ್ಕೆ ಶೇ.22 ಹಾಗೂ ಮತ್ತೊಂದು ಪಕ್ಷಕ್ಕೆ ಶೇ.21ರಷ್ಟು ಬೆಂಬಲ ನೀಡಿದ್ದಾರೆ.

* ಸಿ.ಟಿ ರವಿ ಅವರು ರಾಷ್ಟ್ರೀಯ ನಾಯಕರು. ಅವರ ಬಗ್ಗೆ ನಾವು ಮಾತನಾಡಲು ಸಾಧ್ಯವಿಲ್ಲ. ನಮ್ಮ ಪಕ್ಷದ ನಾಯಕರ ಬೆಂಬಲ ಇದೆ ಅಂತಾರೆ, ಅವರಿಗೆ ಒಳ್ಳೆಯದಾಗಲಿ. ಸಾಮಾನ್ಯ ಪ್ರಜ್ಞೆ ಇರುವವರ ಜತೆ ಮಾತನಾಡಬಹುದು, ಹಳ್ಳಿ ಜನಕ್ಕಾದರೂ ಪ್ರಜ್ಞೆ ಇರುತ್ತೆ. ಆದರೆ ಪ್ರಜ್ಞೆ ಇಲ್ಲದವರ ಹೇಳಿಕೆ ಬಗ್ಗೆ ನಾನು ಏನಂತಾ ಪ್ರತಿಕ್ರಿಯೆ ನೀಡಲಿ? ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಗ್ರಾಮ ಪಂಚಾಯ್ತಿ ಸದಸ್ಯನಂತೆ ಮಾತನಾಡಿದರೆ ಏನು ಹೇಳೋಣ? ಅವರ ಪಕ್ಷದ ಘನತೆ ಏನು ಎಂಬುದು ಅವರ ಮಾತುಗಳೇ ಹೇಳುತ್ತಿವೆ.

* ನಮ್ಮ ವಿಜಯೇಂದ್ರ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಎರಡು ವಿಧಾನಸಭಾ ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದು ಯಡಿಯೂರಪ್ಪನವರು ನಿನ್ನೆ ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿದ ಮೇಲೆ ಸಿ.ಟಿ ರವಿ, ಅಶ್ವಥ್ ನಾರಾಯಣ ಯಾರೂ ಇಲ್ಲ. ಇವರೆಲ್ಲ ಡಮ್ಮಿ ಅಂತಾ ಗೊತ್ತಾಯಿತಲ್ಲ. ಇಲ್ಲಿ ಬೇರೆಯವರ ನಾಯಕತ್ವವೇ ಇಲ್ಲ. ಇರುವುದು ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಮಾತ್ರ. ಯಡಿಯೂರಪ್ಪ ಅವರೇ ಹೇಳಿದ ಮೇಲೆ ಸಿ.ಟಿ ರವಿಗಾಗಲಿ, ಅಶ್ವಥ್ ನಾರಾಯಣ ಅವರಿಗಾಗಲಿ ಮಾತನಾಡಲು ಏನು ಹಕ್ಕಿದೆ?

* ಶಿರಾ ಹಾಗೂ ಆರ್ ಆರ್ ನಗರ ಕ್ಷೇತ್ರಗಳಲ್ಲಿ ನಮಗೆ ಎರಡೂ ಪಕ್ಷಗಳು ನಮಗೆ ನೇರ ಪ್ರತಿಸ್ಪರ್ಧಿಗಳೇ, ಯಾರೂ ಹೆಚ್ಚಲ್ಲ, ಯಾರೂ ಕಡಿಮೆ ಅಲ್ಲ.

* ಕೊರೋನಾ ವಿಚಾರದಲ್ಲಿ ವಿರೋಧ ಪಕ್ಷವಾಗಿ ಕಾಂಗ್ರೆಸ್ ಸಕ್ರಿಯ ಹೋರಾಟ ಮಾಡಿದೆ. ಸರ್ಕಾರಕ್ಕೆ ನಾವು ಸಲಹೆ ಮಾರ್ಗದರ್ಶನವನ್ನು ಕೊಟ್ಟಿದ್ದೇವೆ, ಅವರ ತಪ್ಪುಗಳನ್ನು ಖಂಡಿಸಿದ್ದೇವೆ. ಆಮೇಲೆ ಎಲ್ಲ ವರ್ಗಕ್ಕೂ ಸಹಾಯವಾಗಿ ನಿಂತಿದ್ದೇವೆ. ರಾಜ್ಯದಲ್ಲಿ ನಾವು ಮಾಡಿರುವಷ್ಟು ಹೋರಾಟ ಬೇರೆ ಯಾವ ರಾಜ್ಯದಲ್ಲೂ ಮಾಡಿರುವುದಿಲ್ಲ. ಮನೆ ಮನೆಗೆ ಹೋಗಿ ಸರ್ಕಾರ ಮಾಡಿರುವ ಅನ್ಯಾಯವನ್ನು ತಿಳಿಸಿದ್ದೇವೆ. ರೈತರು, ಶ್ರಮಿಕರು, ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡಿದ್ದೇವೆ.

* ಈ ಚುನಾವಣೆಯಿಂದ ಸರ್ಕಾರ ಬದಲಾಗುತ್ತದೆ ಎಂದು ಭಾವಿಸುವುದಿಲ್ಲ. ನಮ್ಮ ಸರ್ಕಾರ ಇದ್ದಾಗ ನಾವು ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆ ಗೆದ್ದೆವು. ಬಳ್ಳಾರಿ ಲೋಕಸಭೆ ಚುನಾವಣೆ ಗೆದ್ದೆವು. ಹೀಗಾಗಿ ಉಪಚುನಾವಣೆ ದಿಕ್ಸೂಚಿ ಎಂದು ಪರಿಗಣಿಸಲು ಆಗಲ್ಲ. ಆದರೆ ಆಡಳಿತ ಪಕ್ಷಕ್ಕೆ ಒಂದು ಸಂದೇಶ ನೀಡಬೇಕು.

* ರೈತ ವಿರೋಧಿ ಕಾಯ್ದೆಗಳು ಸರ್ಕಾರದ ವಿರುದ್ಧವಾಗಬೇಕು. ಈ ನೀತಿಗಳು ನಮ್ಮ ಭವಿಷ್ಯಕ್ಕೆ ಮಾರಕ ಎಂಬುದನ್ನು ಮತದಾರ ಮನದಟ್ಟಾಗುವಂತೆ ಮಾಡುವುದು ನಿಮ್ಮ ನಮ್ಮ ಕರ್ತವ್ಯ.