IMG 20201021 215736

ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ….!

DISTRICT NEWS

ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ: ಬಿ.ಸಿ.ಪಾಟೀಲ್

ಕೊಪ್ಪಳ,ಅ.21: ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇನ್ನೂ ಮೂರು ವರ್ಷ ಇರಲಿದ್ದು, ಮೂರುವರ್ಷ ನಂತರ ಚುನಾವಣೆ ನಡೆದಾಗ ಶಾಸಕಾಂಗ ಸಭೆ ಬಳಿಕ ಯಾರು ಮತ್ತೆ ಮುಖ್ಯಮಂತ್ರಿಗಳಾಗುತ್ತಾರೆ ಎನ್ನುವುದು ತೀರ್ಮಾನವಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳದ ಕೋಳೂರಿನಲ್ಲಿ ಸುದ್ದಿಗಾರರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯತ್ನಾಳ್ ಪಕ್ಷದ ಶಾಸಕರಾಗಿ ಈ ರೀತಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವುದು ಸರಿಯಲ್ಲ.ಇದು ಅಶಿಸ್ತು.ಮುಂದೆ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದವರು ಆಗುತ್ತಾರೆಯೋ ದಕ್ಷಿಣ ಕರ್ನಾಟಕದವರು ಆಗುತ್ತಾರೆಯೋ ಎಂಬುದು ಮುಂದಿನ ಮೂರು ವರ್ಷಗಳ ಚುನಾವಣೆ ಬಳಿಕ ತೀರ್ಮಾನವಾಗಲಿದೆ. ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿಯೂ ಇಲ್ಲ, ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಈ ಹಿಂದೆ ತುಕ್ಕು ಹಿಡಿದಿದ್ದ ಕೃಷಿ ಇಲಾಖೆಯನ್ನು ನಾನು ಬಂದ ಮೇಲೆ ಸರಿ ಮಾಡುವ ಕೆಲಸ ಮಾಡುತ್ತಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಸಹಿಸದೇ ಅನಾಮಧೇಯ ಪತ್ರ ಬರೆದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ನಿಂದಕರಿರಬೇಕು ಹಂದಿಯಂತೆ ಎಂಬ ಮಾತಿನಂತೆ ನಮ್ಮನ್ನು ನಿಂದಿಸುವವರು ಇದ್ದಾಗಲೇ ಅದನ್ನು ಸವಾಲಾಗಿ ಸ್ವೀಕರಿಸಿ ಸರಿಯಾಗಿ ಕೆಲಸ ಮಾಡಲು ಸಾಧ್ಯ.ತಾವು ಕೃಷಿ ಸಚಿವರಾಗಿ ಬಂದ ಮೇಲೆ ಇಲಾಖೆಗೆ ಚುರುಕು ಮುಟ್ಟಿದೆ.ಇದು ಕೆಲವರಿಗೆ ನೋವಾಗಿರಬಹುದು. ಆದರೆ ಇಂತಹ ಅನಾಮಧೇಯ ಪತ್ರಕ್ಕೆಲ್ಲ ಹೆದರುವುದಿಲ್ಲ ಎಂದರು.
ಎನ್.ಡಿ.ಆರ್.ಎಫ್ ಎಸ್.ಡಿ.ಆರ್.ಎಫ್ ನಿಯಮಾನುಸಾರ ನೆರೆ ಪರಿಹಾರ ಸಿಗಲಿದೆ. ಬೆಳೆ ನಷ್ಟ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು, ಪರಿಶೀಲಿಸಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಿದೆ. ಹುಟ್ಟು ಸಾವು ಸಹಜವಾದರೂ ಮನುಷ್ಯ ಬದುಕಿನ ಬಗ್ಗೆ ಆಶಾದಾಯವಾಗಿರಬೇಕು. ಚೆನ್ನಾಗಿ ಇರುತ್ತೇವೆ ಎಂಬ ಆಶಾಭಾವನೆಯೊಂದಿಗೆ ಬದುಕಬೇಕು ಎಂದು ಸಚಿವರು ಸ್ಫೂರ್ತಿಯ ಮಾತುಗಳನ್ನಾಡಿದರು.