IMG 20201021 WA0000

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಂದೇಶ ಶಿರಾದಿಂದಲೇ ರವಾನೆ…!

DISTRICT NEWS ತುಮಕೂರು

ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಂದೇಶ ಶಿರಾದಿಂದಲೇ ರವಾನೆ: ಡಿ.ಕೆ ಶಿವಕುಮಾರ್

ತುಮಕೂರು: ಈ ಉಪಚುನಾವಣೆಯಿಂದ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರ ಆಗಲಿ ಬೀಳುವುದಿಲ್ಲ. ಆದರೆ ಶಿರಾ ಕ್ಷೇತ್ರದ ಜನ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸಂದೇಶವನ್ನು ರವಾನಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿರಾ ಉಪಚುನಾವಣೆ ನಿಮಿತ್ತ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಮಂಗಳವಾರ ತೆರಳಿ ವ್ಯಾಪಕ ಪ್ರಚಾರ ನಡೆಸಿದ ಡಿ.ಕೆ ಶಿವಕುಮಾರ್ ಅವರು ಒಟ್ಟಾರೆ ಹೇಳಿದ್ದಿಷ್ಟು:

‘ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ತಾವು ತೋರಿದ ಪ್ರೀತಿ, ವಿಶ್ವಾಸ, ಅಭಿಮಾನದಿಂದ ಇಡೀ ರಾಜ್ಯಕ್ಕೆ ಈಗಾಗಲೇ ಬಹುದೊಡ್ಡ ಸಂದೇಶ ಹೋಗಿದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇಲ್ಲಿಗೆ ಬಂದಿಲ್ಲ. ನಿಮ್ಮನ್ನು ಅಭಿನಂದಿಸಲು ಹಾಗೂ ನಿಮ್ಮ ಕಷ್ಟ ಸುಖದ ಜತೆಗೆ ನಿಲ್ಲುತ್ತೇವೆ, ನಿಮ್ಮಲ್ಲಿ ನಾನು ಒಬ್ಬನಾಗಿದ್ದೇನೆ ಎಂದು ಹೇಳಲು ಬಂದಿದ್ದೇನೆ.

ಹಳ್ಳಿ ಜನರ ಆಶೀರ್ವಾದ ಬಹಳ ಮುಖ್ಯ. ಕಾಂಗ್ರೆಸ್ ಸರ್ಕಾರ ಇದ್ದಾಗ ಟಿ.ಬಿ ಜಯಚಂದ್ರ ಹಾಗೂ ಕಾಂಗ್ರೆಸ್ ಸರಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ನಿಮಗೆ ಕೊರೋನಾ ಸಮಯದಲ್ಲಿ ಹಿಂದೆ ಸಿದ್ದರಾಮಯ್ಯನವರು ಕೊಟ್ಟ ಅನ್ನಭಾಗ್ಯದ ಅಕ್ಕಿ ಬಿಟ್ಟರೆ ಬೇರೇನಾದರೂ ಬಂತಾ? ನಿಮಗೆ ಪರಿಹಾರ ಮೊತ್ತ ಬಂತಾ? ಸವಿತಾ ಸಮಾಜ, ಚಾಲಕರು, ರೈತರಿಗೆ ಸಹಾಯ ಆಯ್ತಾ? ವಿದ್ಯಾರ್ಥಿಗಳು, ಅವರ ಪೋಷಕರ ಗೋಳನ್ನು ಯಾರಾದರೂ ಕೇಳಿದ್ದಾರಾ? ಯಾವುದೂ ಇಲ್ಲ ಎಂದ ಮೇಲೆ ಈ ಸರಕಾರ ಯಾಕಿರಬೇಕು? ವಿಜಯೇಂದ್ರ ಅವರು, ಕುಮಾರಸ್ವಾಮಿ ಅವರು ಇಲ್ಲಿ ಬಂದು ಯಾಕೆ ಮತ ಕೇಳುತ್ತಿದ್ದಾರೆ? ಪಕ್ಷದ ಗುರಿತಿನ ಹಸ್ತ ನಮ್ಮದಷ್ಟೇ ಅಲ್ಲ, ಅದು ನಿಮ್ಮದು ಕೂಡ.

IMG 20201021 WA0001

ಜಯಚಂದ್ರ ಅವರನ್ನು ಹಾರೈಸಿ ಶಿರಾ ಕ್ಷೇತ್ರದ ಜನರು ರಾಜ್ಯಕ್ಕೆ ಒಂದು ದೊಡ್ಡ ಸಂದೇಶ ರವಾನಿಸಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನಿಮ್ಮ ಅಪಾರ ಸೇವೆ ಮಾಡಲಿದೆ.

ಈ ಚುನಾವಣೆಯಿಂದ ಯಡಿಯೂರಪ್ಪನವರೂ ಕೆಳಗೆ ಇಳಿಯುವುದಿಲ್ಲ, ಮೋದಿಯವರೂ ಇಳಿಯುವುದಿಲ್ಲ. ನಾವ್ಯಾರು ಸತ್ಯನಾರಾಯಣ ಅವರಿಗೆ ಕೆಟ್ಟದ್ದು ಬಯಸಿರಲಿಲ್ಲ. ಅವರ ಧರ್ಮಪತ್ನಿಯವರ ಮೇಲೆ ನಮಗೆ ಯಾವುದೇ ದ್ವೇಷ ಇಲ್ಲ. ಅವರನ್ನು ನಾವು ಗೌರವಿಸುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಪರ ಮಾತನಾಡಲು ಶಕ್ತಿ ಇಲ್ಲ. ಆ ಶಕ್ತಿ ಇರೋದು ಜಯಚಂದ್ರ ಅವರಿಗೆ ಮಾತ್ರ. ಶಿರಾ ಕ್ಷೇತ್ರದ ಜನರ ಧ್ವನಿಯಾಗಿ ಜಯಚಂದ್ರ ಅವರು ವಿಧಾನಸೌಧದಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷದ ಎಲ್ಲ ನಾಯಕರು ನಿಮ್ಮ ಜತೆ ಹಾಗೂ ಜಯಚಂದ್ರ ಅವರ ಜತೆ ಇದ್ದೇವೆ.

ಶ್ರೀರಾಮಚಂದ್ರನ ತಂದೆ ದಶರಥನ ದೇಗುಲ ಎಲ್ಲೂ ಇಲ್ಲ. ಆದರೆ ರಾಮನ ಭಂಟ, ನಿಷ್ಠಾವಂತ ಭಕ್ತ ಆಂಜನೇಯನ ದೇವಸ್ಥಾನ ಎಲ್ಲ ಕಡೆ ಇವೆ. ಈ ಜಯಚಂದ್ರ ಕೂಡ ಆಂಜನೇಯನ ಹಾಗೆ ನಿಮ್ಮ ನಿಷ್ಠಾವಂತ ಭಕ್ತ. ನಿಮ್ಮ ಸೇವೆಗೆ ಸದಾ ಬದ್ಧ. ನೀವು ಇಂಥವರ ಕೈ ಹಿಡಿಯುವ ವಿಶ್ವಾಸ ನನಗಿದೆ.

ನಿಮ್ಮ ಕೈ ಬಲಪಡಿಸಲು ನಮ್ಮ ಪಕ್ಷದ ಇಷ್ಟೂ ನಾಯಕರು ಇಲ್ಲಿಗೆ ಬಂದಿದ್ದೇವೆ. ಜಯಚಂದ್ರ ಅವರನ್ನು ಸೋಲಿಸಿ, ಬೇರೆಯವರನ್ನು ಗೆಲ್ಲಿಸಿದಕ್ಕೆ ನಿಮಗೆ ಏನಾದರೂ ಲಾಭ ಆಯ್ತಾ? ಒಂದು ವರ್ಷ ಬಿಜೆಪಿ ಸರ್ಕಾರದಿಂದ ಒಂದು ಚೂರಾದರೂ ಒಳ್ಳೆಯದಾಗಿದೆಯಾ?

ಜಯಚಂದ್ರ ಅವರು ಆಯ್ಕೆಯಾಗಿದ್ದಾಗ ನೂರಾರು ಕೆರೆಗಳಿಗೆ ನೀರು ತುಂಬಿಸಿದ್ದಾರೆ. ಕಟ್ಟಡ, ಆಸ್ಪತ್ರೆ, ಮಿನಿ ವಿಧಾನಸೌಧ ಕಟ್ಟಿಸಿದ್ದಾರೆ, ರಸ್ತೆ ಮಾಡಿಸಿದ್ದಾರೆ. ಸಾವಿರಾರೂ ಕೋಟಿ ರುಪಾಯಿಯ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ. ನಾವು ಮಾಡಿರುವ ಕೆಲಸಕ್ಕೆ ಮತವನ್ನು ಕೂಲಿಯಾಗಿ ಕೊಡಿ ಎಂದು ಕೇಳಲು ಇಲ್ಲಿಗೆ ಬಂದಿದ್ದೇವೆ.

ನೀವು ನೂರಾರು ರಾಜೇಶನನ್ನು ಸೃಷ್ಟಿಸಬಹುದು. ಆದರೆ ಮತ್ತೊಬ್ಬ ಜಯಚಂದ್ರರನ್ನು ತಯಾರು ಮಾಡಲು ಸಾಧ್ಯವಿಲ್ಲ. 40 ವರ್ಷದ ರಾಜಕೀಯ ಸೇವೆಯಲ್ಲಿ ಹಳ್ಳಿ ಹಳ್ಳಿಗೂ ತಿರುಗಿ ಕೆಲಸ ಮಾಡಿದ್ದಾರೆ.

ನಮ್ಮಿಂದ ಸಣ್ಣ ತಪ್ಪಾಗಿದ್ದರೆ ನಾವು ತಿದ್ದಿಕೊಳ್ಳುತ್ತೇವೆ. ನೀವೆಲ್ಲಾ ಪಕ್ಷಬೇಧ ಮರೆತು, ಜಾತಿ-ಬೇಧ ಮರೆತು ಒಗ್ಗಟ್ಟಿನಿಂದ ಚುನಾವಣೆ ಮಾಡಿ ಜಯಚಂದ್ರ ಅವರನ್ನು ಗೆಲ್ಲಿಸಬೇಕು, ಆಶೀರ್ವದಿಸಬೇಕು.

ಪ್ರಚಾರದ ನಡುವೆ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ:

ಶಿರಾ ಕ್ಷೇತ್ರದಲ್ಲಿ ಯುವ ಸಮುದಾಯದಿಂದ ಹಿಡಿದು ಎಲ್ಲ ವರ್ಗದವರು ನಮಗೆ ತೋರಿಸುತ್ತಿರುವ ಪ್ರೀತಿ ಅಭಿಮಾನ, ದೇಶ ಮತ್ತು ರಾಜ್ಯಕ್ಕೆ ಉತ್ತಮ ಸಂದೇಶ ಕೊಡುತ್ತಿದೆ. ಕಳೆದ 15 ತಿಂಗಳಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ರೈತರಿಗಾಗಲಿ, ಕಾರ್ಮಿಕರಿಗಾಗಲಿ, ವರ್ತಕರಿಗಾಗಲಿ, ಶ್ರಮಿಕರಿಗಾಗಲಿ ಶೇ.5 ರಷ್ಟು ಸಹಾಯವಾಗಿಲ್ಲ. ಎಲ್ಲ ವರ್ಗದವರನ್ನು ಕೇಳಿದ್ದೇನೆ. ಎಲ್ಲರೂ ತಮಗೆ ಪರಿಹಾರ ಸಿಕ್ಕಿಲ್ಲ ಅಂತಿದ್ದಾರೆ.

ನಾವು ಬೇರೆ ಪಕ್ಷದ ಅಭ್ಯರ್ಥಿಗಳ ಬಗ್ಗೆ ಮಾತನಾಡುವುದಿಲ್ಲ. ವಿಧಾನಸೌಧದಲ್ಲಿ ಶಿರಾ ಕ್ಷೇತ್ರದ ಪ್ರತಿನಿಧಿ ಸ್ಥಾನದಲ್ಲಿ ಯಾರು ಕೂತು ಜನರ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಗಮನಿಸಿ ಆಯ್ಕೆ ಮಾಡುತ್ತಾರೆ. ಬಿಜೆಪಿ ಸರ್ಕಾರದ ಆಡಳಿತ ಸರಿಯಿಲ್ಲ ಎಂಬ ಸಂದೇಶವನ್ನು ಕ್ಷೇತ್ರದ ಮಹಾಜನತೆ ನೀಡಲಿದ್ದಾರೆ. ಜಯಚಂದ್ರ ಅವರು ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗಾಗಿ ಜನರು ಅವರಿಗೆ ಮತ ನೀಡಲಿದ್ದಾರೆ.

ಬಿಜೆಪಿ ನಾಯಕರ ಬಗ್ಗೆ ಅವರದೇ ಪಕ್ಷದ ನಾಯಕರು ಯಾವ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂಬುದನ್ನು ನೋಡಿಕೊಂಡು ಅದನ್ನು ಸರಿಪಡಿಸಿಕೊಳ್ಳಲಿ. ಸಿ.ಟಿ ರವಿ ಅವರ ಹೇಳಿಕೆಗೆ ಉತ್ತರ ಕೊಡುವುದೇನಿಲ್ಲ.