20240719 080350

BJP : ಸಿಎಂ ರಾಜೀನಾಮೆ ಕೊಡುವವರೆಗೆ ಬಿಜೆಪಿ ಹೋರಾಟ….!

POLATICAL STATE

20240719 080506

ಸಿಎಂ ರಾಜೀನಾಮೆ ಕೊಡುವವರೆಗೆ ಬಿಜೆಪಿ ಹೋರಾಟ
ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಾದ
ಪ್ರಸಂಗ ಸೃಷ್ಟಿ: ಬಿ.ವೈ.ವಿಜಯೇಂದ್ರ ವಿಶ್ಲೇಷಣೆ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣ ಇವತ್ತು ಮುಖ್ಯಮಂತ್ರಿ ಮನೆಬಾಗಿಲಿಗೆ ಬಂದು ನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಈ ಸಂಬಂಧ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಬಿಜೆಪಿ ಶಾಸಕರು ಇಂದು ವಿಧಾನಸೌಧದ ಮುಂಭಾಗದಲ್ಲಿ ಭಿತ್ತಿಫಲಕಗಳೊಂದಿಗೆ ಪ್ರತಿಭಟನೆ ನಡೆಸಿದರು. ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಯಿತು.
ಇದೇವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಜಯೇಂದ್ರ ಅವರು, ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಾದ ಪ್ರಸಂಗ ಈಗಾಗಲೇ ಸೃಷ್ಟಿಯಾಗಿದೆ. ನಾವು ಸದನದ ಒಳಗೆ ಮಾತ್ರವಲ್ಲದೆ, ಹೊರಗಡೆಯೂ ಹೋರಾಟ ಮಾಡಿದ್ದೇವೆ. ಆದರೆ, ಸರಕಾರ ಪೊಲೀಸರ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೂ ಕೂಡ ನಮ್ಮ ಕಾರ್ಯಕರ್ತರು ವಿಧಾನಸೌಧ ಮುತ್ತಿಗೆ ಹಾಕುವ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು.
ಸದನದ ಒಳಗಡೆಯೂ ನಾವು ಹೋರಾಟ ಮಾಡುತ್ತಿದ್ದೇವೆ. ಇವರು ಮನಸ್ಸಿಗೆ ಬಂದಂತೆ ಉತ್ತರ ಕೊಡುತ್ತಿದ್ದಾರೆ. ಇತಿಹಾಸವನ್ನು ಹೇಳುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಕಿವಿಗೆ ಹೂವು ಮುಡಿಸುವ ಕೆಲಸಕ್ಕೆ ಹೊರಟಿದ್ದು, ಇದು ನಡೆಯುವುದಿಲ್ಲ ಎಂದು ಟೀಕಿಸಿದರು. ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವವರೆಗೆ ಈ ಹೋರಾಟ ಮುಂದುವರೆಯುತ್ತದೆ ಎಂದು ಪ್ರಕಟಿಸಿದರು.

20240719 080336

ಅಹಿಂದಕ್ಕೆ ಅವಮಾನ, ಅನ್ಯಾಯ..
ಪರಿಶಿಷ್ಟ ಜಾತಿ ಪಂಗಡಗಳ ಕುರಿತು ಉದ್ದುದ್ದ ಭಾಷಣ ಬಿಗಿಯುವ, ಅಹಿಂದದ ಕುರಿತು ಮಾತನಾಡುವ ಸಿದ್ದರಾಮಯ್ಯನವರು ಅಹಿಂದಕ್ಕೆ ಅವಮಾನ, ಅನ್ಯಾಯ ಮಾಡುತ್ತಿದ್ದಾರೆ. ಹೆಂಡ ಖರೀದಿಸಿ ಚುನಾವಣೆ ವೇಳೆ ಹಂಚಿದ್ದು ಗೊತ್ತಾಗಿದೆ ಎಂದು ವಿಜಯೇಂದ್ರ ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡಿನ ಎಟಿಎಂ ಮಾಡುವುದಾಗಿ ಹಿಂದೆಯೇ ಹೇಳಿದ್ದೆವು. ಹಗರಣಕ್ಕೆ ಪ್ರೂಫ್ ಎಲ್ಲಿದೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕೇಳುತ್ತಿದ್ದರು. ವಾಲ್ಮೀಕಿ ನಿಗಮದ ಹಣ ದೋಚಿದ ಸರಕಾರವು ಅದನ್ನು ಲೋಕಸಭಾ ಚುನಾವಣೆಯಲ್ಲಿ ಉಪಯೋಗಿಸಿದೆ. ಆಂಧ್ರ, ತೆಲಂಗಾಣ, ಕರ್ನಾಟಕದಲ್ಲಿ ಇದನ್ನು ಬಳಸಲಾಗಿದೆ. ಯಾವ್ಯಾವ ಕ್ಷೇತ್ರಕ್ಕೆ ಬಳಸಿದ್ದಾರೆ ಎಂಬುದೂ ಬಹಿರಂಗವಾಗುತ್ತಿದೆ ಎಂದು ಅವರು ತಿಳಿಸಿದರು.

ಸಿಎಂ ಅವರು ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರ ಡೆತ್ ನೋಟಿನಲ್ಲಿ ಕೂಡ ಅಧಿಕಾರಿಗಳ ಹೆಸರನ್ನು ಮಾತ್ರ ಉಲ್ಲೇಖಿಸಿದ್ದಾರೆ. ಸಚಿವ ನಾಗೇಂದ್ರರ ಒತ್ತಡ, ನಿಗಮದ ಅಧ್ಯಕ್ಷ ದದ್ದಲ್ ಅವರ ಒತ್ತಡವನ್ನು ಉಲ್ಲೇಖವೇ ಮಾಡಿಲ್ಲ. ಇನ್ನೊಂದೆಡೆ ಡಿಸಿಎಂ ಶಿವಕುಮಾರ್ ಅವರು, ನಾಗೇಂದ್ರ ಅವರು ನಿರಪರಾಧಿಯಾಗಿ ಹೊರಬರುವುದಾಗಿ ಹೇಳಿದ್ದಾರೆ. ಸದನದಲ್ಲಿ ಸಿಎಂ, ಡಿಸಿಎಂ ಅವರ ಮುಖವಾಡ ಬಯಲಾಗಿದೆ ಎಂದು ಆರೋಪಿಸಿದರು.

ಬೇಕಾದಂತೆ ಡೆತ್ ನೋಟ್ ಓದಿದ್ದು, ಅಕ್ಷಮ್ಯ ಅಪರಾಧ..
ಆರೋಪಗಳೆಲ್ಲವನ್ನೂ ಅಧಿಕಾರಿಗಳ ಮೇಲೆ ಹಾಕಿ ಮಾಜಿ ಸಚಿವರು, ಶಾಸಕರು, ಉಳಿದ ಸಚಿವರನ್ನು ರಕ್ಷಿಸುವ ಕೆಲಸಕ್ಕೆ ಸಿಎಂ, ಡಿಸಿಎಂ ಅವರು ಹೊರಟಿದ್ದಾರೆ. ಇದು ಅಕ್ಷಮ್ಯ ಅಪರಾಧ. ಸದನದ ಒಳಗಡೆ ಅವರಿಗೆ ಬೇಕಾದಂತೆ ಡೆತ್ ನೋಟ್ ಓದಿದ್ದು, ಅಕ್ಷಮ್ಯ ಅಪರಾಧ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು.

ಪ್ರಕರಣವನ್ನು ಮುಚ್ಚಿಹಾಕುವ ಷಡ್ಯಂತ್ರ- ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಡೆತ್ ನೋಟಿನಲ್ಲಿ ಸಚಿವರೇ ಕಾರಣ ಎಂದು ತಿಳಿಸಿದ್ದರೂ, ಮುಖ್ಯಮಂತ್ರಿಯಾದವರು ಸದನವನ್ನು ತಪ್ಪು ದಾರಿಗೆ ಎಳೆದಿದ್ದಾರೆ. ಮುಖ್ಯಮಂತ್ರಿಯವರು ಈ ಪ್ರಕರಣವನ್ನು ಮುಚ್ಚಿಹಾಕುವ ಷಡ್ಯಂತ್ರ ಮಾಡಿರುವುದು ಇದರಿಂದ ಸ್ಪಷ್ಟಗೊಂಡಿದೆ ಎಂದು ಆಕ್ಷೇಪಿಸಿದರು.
ಮತದಾರರಿಗೆ ಮದ್ಯ ಹಂಚಲು ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದ ಹಣ ಬಳಸಿದ್ದಾಗಿ ಇ.ಡಿ. ಪ್ರೆಸ್ ನೋಟ್ ತಿಳಿಸಿದೆ. ಸಿಎಂ ಅವರಿಗೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಹೇಳಿದರು. ಸಿಎಂ ಅವರು ಸದನದಲ್ಲಿ ಒಂದು ಗಂಟೆಯ ಹೇಳಿಕೆಯಲ್ಲಿ 5 ನಿಮಿಷ ಮಾತ್ರ ವಾಲ್ಮೀಕಿ ನಿಗಮದ ಕುರಿತು ಮಾತನಾಡಿದ್ದಾರೆ. ಉಳಿದ ಅವಧಿಯಲ್ಲಿ ಸಂವಿಧಾನ ಎಂದರೇನು?, ಸಂವಿಧಾನದಲ್ಲಿ ಏನೇನಿದೆ? ಡಾ. ಅಂಬೇಡ್ಕರ್ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಕಳೆದ 2 ದಿನಗಳಿಂದ ಲೂಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ಲೂಟಿ ಹೊಡೆದ ಬಗ್ಗೆ ಪ್ರಸ್ತಾವನೆಯೇ ಇಲ್ಲ ಎಂದು ದೂರಿದರು.
ಪ್ರತಿಭಟನೆ- ‘ಕರ್ನಾಟಕ ರಾಜ್ಯದಲ್ಲಿ ದಲಿತರ ಹೆಸರಿನಲ್ಲಿ ನುಂಗಿದರಣ್ಣ ನುಂಗಿದರಣ್ಣ ಸಿದ್ದರಾಮಣ್ಣ ಸಿದ್ದರಾಮಣ್ಣ’, ‘ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣದಲ್ಲಿ ಇದ್ದರಣ್ಣ ಇದ್ದರಣ್ಣ ಸಿದ್ದರಾಮಣ್ಣ ಸಿದ್ದರಾಮಣ್ಣ’, ‘ಡೆತ್ ನೋಟ್ ಪತ್ರದಲ್ಲಿ ಆರೋಪಿ ಹೆಸರನ್ನು ಬಿಟ್ಟರಣ್ಣ ಬಿಟ್ಟರಣ್ಣ ಸಿದ್ದರಾಮಣ್ಣ ಸಿದ್ದರಾಮಣ್ಣ’- ಇವೇ ಮೊದಲಾದ ಬರಹಗಳ ಫಲಕಗಳೊಂದಿಗೆ ಜನಪ್ರತಿನಿಧಿಗಳ ಪ್ರತಿಭಟನೆ ನಡೆಯಿತು.