IMG 20241018 WA0018

ತುಮಕೂರು : ಶಿಖರ ಬಸವ ಜಾತ್ರೆಯ ನಿಡುಗಲ್ಲು ದುರ್ಗ…!

DISTRICT NEWS ತುಮಕೂರು

*ಶಿಖರ ಬಸವ ಜಾತ್ರೆಯ ನಿಡುಗಲ್ಲು ದುರ್ಗ*

ಹಕ್ಕಿ ಹಾರದ ಕೋಟೆ
* ಪಕ್ಷಿ ತೂರದ ಕೋಟೆ
* ರಕ್ಕಸ ಕೋಟೆ
* ರಣಕೋಟೆ ನಿಡುಗಲ್ಲು” ಎಂದು ಖ್ಯಾತಿಯನ್ನು ಪಡೆದಿದ್ದ ದಕ್ಷಿಣದ ಹಂಪೆ ನಿಡಗಲ್ಲು ದುರ್ಗ,

ಪಾವಗಡ : ತುಮಕೂರು ಜಿಲ್ಲೆಯ ಪ್ರಮುಖ ಐತಿಹಾಸಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಪಾವಗಡ ತಾಲ್ಲೂಕಿನ ಪ್ರಮುಖ ಆಕರ್ಷಣೆಯಾಗಿದೆ. ಈ ದುರ್ಗವು ಗತಕಾಲದ ಐತಿಹಾಸಿಕ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ವಿಚಾರಗಳನ್ನು ಭವಿಷ್ಯದ ಜನತೆಗೆ ತಿಳಿಸಿಕೊಡುವ ಸ್ಮಾರಕ ಕ್ಷೇತ್ರವಾಗಿ ಉಳಿದಿದೆ.

ಪ್ರತಿ ವರ್ಷ ಶ್ರಾವಣದ ಕೊನೆಯ ಸೋಮವಾರದಂದು ಶಿಖರ ಬಸವನ ಜಾತ್ರೆ ಇತಿಹಾಸ ಕಾಲದಿಂದಲೂ ನಡೆಯುತ್ತಾ ಸಾಗಿಬಂದಿದೆ. ಸಾವಿರಾರು ಮಂದಿ ಜಾತ್ರೆಯ ಪ್ರಯುಕ್ತ ಬೆಟ್ಟವನ್ನೇರುವುದು ಇಲ್ಲಿನ ವಾಡಿಕೆ.

ನೊಳಂಬರು, ಪಲ್ಲವರು, ಚೋಳರು, ಹರತಿ ಮತ್ತು ನಿಡಗಲ್ ಪಾಳೆಗಾರ ರಾಜಮನೆತನಗಳು ಈ ದುರ್ಗವನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯಬಾರ ಮಾಡಿದ್ದಾರೆ.

ಎಲ್ಲೆಡೆ ಕೋಟೆ ಕೊತ್ತಲುಗಳು, ಕಲ್ಯಾಣಿಗಳು, ಗುಡಿ ಗೋಪುರಗಳು, ಶಾಸನ, ವೀರಗಲ್ಲುಗಳು ಪಿರಂಗಿಗಳು ಕಂಡುಬರುತ್ತಿದ್ದು, ಅಧ್ಯಯನ ಮಾಡುವವರಿಗೆ, ಪ್ರವಾಸಿಗರು, ಚಾರಣ ಪ್ರಿಯರಿಗೆ, ಇತಿಹಾಸ ತಜ್ಞರ ಪಾಲಿಗೆ ಮನಸೆಳೆಯುವ ಸ್ಥಳವಾಗಿದೆ.

ಕಿಲೋಮೀಟರ್ ಗಟ್ಟೆಲೆ ವಿಸ್ತಾರವಾಗಿ ಕಟ್ಟಲ್ಪಟ್ಟಿರುವ ಏಳು ಸುತ್ತಿನ ಕೋಟೆ, ಏಳು ಕೋಟೆ ಬಾಗಿಲುಗಳಿಂದ ನಿರ್ಮಾಣಗೊಂಡಿರುವ ನಿಡಗಲ್ಲು ದುರ್ಗವು ದೊಣೆಗಳು, ಉಗ್ರಾಣಗಳು, ಮದ್ದಿನ ಮನೆಗಳು, ಫಿರಂಗಿ, ಅರಮನೆಯ ಪಳಯುಳಿಕೆಗಳು, ತುಪ್ಪದ ಕಣಜ, ಕಾಳಿನ ಕಣಜ, ಮದ್ದುಗುಂಡುಗಳ ಕಣಜಗಳು ಇತ್ಯಾದಿ ನೋಡತಕ್ಕವುಗಳನ್ನು ಒಳಗೊಂಡಿದೆ.

ಬೆಟ್ಟದ ಶಿಖರ ನಿಡಿದಾಗಿ ಇರುವುದರಿಂದ ಈ ಸ್ಥಳಕ್ಕೆ ನಿಡುಗಲ್ಲು ಎಂದು ಹೆಸರು ಪ್ರಾಪ್ತವಾಗಿದೆ ಎಂದು ತಿಳಿದು ಬರುತ್ತದೆ.

ಒಂದು ಕಂಡಗ ಕಡಲೆಯನ್ನು ತೆಗೆದುಕೊಂಡು ಒಂದೊಂದು ದೇವರಿಗೆ ನೈವೇದ್ಯವಾಗಿ ಇಡುತ್ತಾ ಬಂದರೂ ಒಂದು ಬಸವನಿಗೆ ಕಡಿಮೆಯಾಗಿ ಬಸವ ಮುಖ ತಿರುವಿಸಿದ್ದಾನೆ ಎಂಬ ಕಥೆ ಈ ಕ್ಷೇತ್ರಕ್ಕೆ ಅಂಟಿಕೊಂಡಿದ್ದು, ಇಲ್ಲಿನ ದೇವಾಲಯಗಳ ಸಂಖ್ಯೆಯ ಸೂಚಕವಾಗಿದೆ. ಇಂದಿಗೂ ಇಲ್ಲಿ ಅನೇಕ ದೇವಾಲಯಗಳು ಕಂಡುಬರುತ್ತಿದ್ದು, ದಕ್ಷಿಣದ ಹಂಪೆ ಎಂದು ಹೆಸರು ಗಳಿಸಿದೆ.

ಬೆಟ್ಟದ ಬುಡದ ಗ್ರಾಮದಲ್ಲಿ ಪಟ್ಟಾಭಿರಾಮ, ಆಂಜನೇಯ, ಬಸವಣ್ಣ, ಮಾರಿಕಾಂಭ, ಕಾಶಿವಿಶ್ವನಾಥ, ಸಾರ್ವಾಡೇಶ್ವರ ದೇವಾಲಯಗಳು, ಮಿರ್ಜಾಹುಸೇನವಾಲಿ ಸಮಾದಿ ದರ್ಶನವಾಗುತ್ತವೆ.

ಬೆಟ್ಟದ ಬುಡದಿಂದ ತುದಿಯವರೆಗೆ ಬೆಟ್ಟವನ್ನು ಏರುವವರನ್ನು ರಾಮತೀರ್ಥದ ರಾಮಲಿಂಗೇಶ್ವರ, ಬಸವೇಶ್ವರ, ಲಕ್ಷ್ಮಣೇಶ್ವರ, ಸೋಮೇಶ್ವರ, ಪಾರ್ಶ್ವನಾಥ ಜೈನ ಬಸದಿ, ವೀರಭದ್ರ, ಉಗ್ರನರಸಿಂಹ, ದುರ್ಗಿ, ಆದಿನಾರಾಯಣ, ಮಳೇ ಮಲ್ಲಿಕಾರ್ಜುನ, ಇತ್ಯಾದಿ ದೇವಾಲಯಗಳು ಆಕರ್ಷಿಸುತ್ತವೆ.

ಶಿಖರದಲ್ಲಿ ಕಾಳಹಸ್ತೀಶ್ವರ, ಶಿಖರ ಬಸವ ದರ್ಶನ ನೀಡುತ್ತಾರೆ.

ಪ್ರಕೃತಿ ಸೌಂದರ್ಯ ಆರಾಧಕರಿಗೆ ನಿಡಗಲ್ಲು ಹೇಳಿ ಮಾಡಿಸಿದಂತಿದೆ. ಮಳೆಗಾಲದಲ್ಲಿ ಹಸಿರನ್ನು ಹೊದ್ದು ಕಂಗೊಳಿಸುವ ಪ್ರದೇಶ, ಗಿಡಮರಗಳು, ಗಿಡಮೂಲಿಕೆಗಳು, ವಿವಿಧ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿದೆ. ಮುಸ್ಸಂಜೆ ವೇಳೆಯಲ್ಲಿ ಎತ್ತರವಾದ ಸ್ಥಳದಲ್ಲಿ ನಿಂತರೆ ಸಾಕು, ನವಿಲುಗಳ ನರ್ತನ, ಉಳಿಡುವ ತೋಳ, ನರಿಗಳ ಹಿಂಡು, ಗುಂಪು ಗುಂಪಾಗಿ ಅಡ್ಡಾಡುವ ಕಾಡು ಹಂದಿಗಳು, ಮರಿಗಳ ಜೊತೆ ಚೆಲ್ಲಾಟವಾಡುವ ಕರಡಿಗಳು ಇತ್ಯಾದಿ ವನ್ಯ ಜೀವಿಗಳು ದರ್ಶನಕೊಡುತ್ತವೆ. .

ಈ ಕ್ಷೇತ್ರದ ಪ್ರಗತಿಗಾಗಿ ಇತ್ತೀಚಿನ ದಿನಗಳಲ್ಲಿ ಕೆಲ ಸಂಘ ಸಂಸ್ಥೆಗಳು ನಿಡಗಲ್ಲು ಉತ್ಸವವನ್ನು ಪ್ರಾರಂಭಿಸಿದ್ದು, ಉತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಗಣ್ಯರು ಬಂದು ಭಾಗವಹಿಸುತ್ತಾ, ದುರ್ಗದ ಮಹತ್ವವನ್ನು ಪಸರಿಸುತ್ತಿದ್ದಾರೆ. ಅನೇಕ ಸಂಶೋದಕರು ಕ್ಷೇತ್ರ ಕಾರ್ಯ ಕೈಗೊಂಡು ಅನೇಕ ಲೇಖನಗಳನ್ನು, ಕೃತಿಗಳನ್ನು ರಚಿಸಿದ್ದಾರೆ.

ಇದರ ಪರಿಣಾಮದಿಂದ ನಿಡಗಲ್ಲು ಕ್ಷೇತ್ರದ ಕಡೆಗೆ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಇಂತಹ ಕ್ಷೇತ್ರದಲ್ಲಿ ನಿರಂತರವಾಗಿ ನಿಧಿ ಚೋರರ ಹಾವಳಿ ಕಂಡುಬರುತ್ತಿದೆ. ಅನೇಕ ಸುಂದರ ವಿಗ್ರಹಗಳು ಭಗ್ನಗೊಳ್ಳುತ್ತಲೇ ಇವೆ. ಕೆಲವೊಂದು ವಿಗ್ರಹಗಳು ಮಾಯವಾಗುತ್ತಿವೆ. ದೇವಾಲಯಗಳು ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಅಳಿವಿನಂಚಿಗೆ ಸೇರುತ್ತಿವೆ.

ಇಷ್ಟಾದರೂ ಪ್ರಾಚ್ಯ ವಸ್ತು ಇಲಾಖೆಯಾಗಲೀ ಅಥವಾ ಪ್ರವಾಸೋದ್ಯಮ ಇಲಾಖೆಯಾಗಲೀ, ಅರಣ್ಯ ಇಲಾಖೆಯಾಗಲೀ ಈ ಕ್ಷೇತ್ರ ರಕ್ಷಣೆ ಮತ್ತು ಪ್ರಗತಿ ಒತ್ತು ಕೊಡುತ್ತಿಲ್ಲ. ಇಲ್ಲಿಗೆ ಬಂದು ಹೋಗುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸರ್ಕಾರ ಯಾವುದೇ ಒಬ್ಬ ಮಾರ್ಗದರ್ಶಿಯನ್ನು ನೇಮಕ ಮಾಡಿಲ್ಲ. ಅವಶ್ಯಕ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಮೂಲಭೂತ ಸೌಕರ್ಯಗಳನ್ನು ಸಹಾ ಒದಗಿಸದಿರುವುದು ವಿಷಾದವೇ ಸರಿ.

ಭಕ್ತರ ನಂಬುಗೆಗೆ ಬಲವಾಗಿ, ಸಂಶೋಧಕರಿಗೆ ಸೆಲೆಯಾಗಿ, ಆಸಕ್ತರಿಗೆ ಆಕರ್ಷಣೀಯ ಸ್ಥಳವಾಗಿ, ಚಾರಣಿಗರಿಗೆ ಹುರುಪಾಗಿ, ಪರಿಸರ ಪ್ರಿಯರ ಕಣಿವೆಯಾಗಿ, ದೇಶೀ ವೈದ್ಯರ ಸಂಜೀವಿನಿಯಾಗಿರುವ ನಿಡಗಲ್ಲು ದುರ್ಗದ ಪ್ರತಿಯೊಂದು ಸ್ಥಳವು ವಿಶಿಷ್ಟವಾಗಿದ್ದು, ಅದ್ಭುತ ಅನುಭವವನ್ನು ನೀಡುತ್ತದೆ.

ಚಿತ್ರದುರ್ಗಕ್ಕಿಂತಲೂ ಭದ್ರವಾದ ಕೋಟೆ ಕೊತ್ತಲುಗಳನ್ನು ಹೊಂದಿರುವ, ಹೆಜ್ಜೆ ಹೆಜ್ಜೆ ದೇವಾಲಯಗಳನ್ನು ಹುದುಗಿಸಿಕೊಂಡಿರುವ, ಧಾರ್ಮಿಕ, ಐತಿಹಾಸಿಕ, ಪರಿಸರ ಆಕರ್ಷಣೆಯ ನಿಡಗಲ್ಲು ದುರ್ಗವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಪ್ರವಾಸಿ ಕ್ಷೇತ್ರವನ್ನಾಗಿ ರೂಪಿಸುವುದು ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಜನಪ್ರತಿನಿಧಿಗಳು ಕಾಳಜಿಯುತ ಕಾರ್ಯ ಮಾಡುವರೇ ? ಕಾದು ನೋಡೋಣ.

IMG 20241018 WA0020

ವಿಶೇಷ ಲೇಖನ
ನಂದೀಶ್ ನಾಯ್ಕ.ಪಿ
ವಿಧ್ಯಾರ್ಥಿ
ಪ್ರಥಮ ವರ್ಷದ ಪತ್ರಿಕೋದ್ಯಮ ವಿಭಾಗ
ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು, ಸರಸ್ವತಿಪುರಂ, ತುಮಕೂರ

***

Leave a Reply

Your email address will not be published. Required fields are marked *