IMG 20250501 WA0007

Karnataka: ಮೀಸಲಾತಿಯಲ್ಲಿ ಶೇ.50% ಗರಿಷ್ಠ ಪರಿಮಿತಿಯನ್ನು ಸಡಿಲಗೊಳಿಸಬೇಕು…!

Genaral STATE

*ಮೀಸಲಾತಿಯಲ್ಲಿ ಶೇ.50% ಗರಿಷ್ಠ ಪರಿಮಿತಿಯನ್ನು ಸಡಿಲಗೊಳಿಸಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು: ಸಿ.ಎಂ ಸಿದ್ದರಾಮಯ್ಯ ಒತ್ತಾಯ*

*ಜಾತಿಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ  ಸಮೀಕ್ಷೆಯೂ ನಡೆಯಬೇಕು*: *ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ*

*ರಾಹುಲ್ ಗಾಂಧಿ ಅವರ ಸಾಮಾಜಿಕ ನ್ಯಾಯದ ಬದ್ಧತೆಗೆ ಸಿಕ್ಕ ಮಾನ್ಯತೆ: ಸಿ.ಎಂ*

ಬೆಂಗಳೂರು, ಮೇ 01: ಜನಗಣತಿ ಯೊಂದಿಗೆ ಜಾತಿಗಣತಿ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಅದರೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ  ಸಮೀಕ್ಷೆಯೂ ನಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು  ಆಗ್ರಹಿಸಿದರು.

ಅವರು ಇಂದು ಕಾವೇರಿ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದರು.ದೇಶದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿ ಗಣತಿ ಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಮೀಸಲಾತಿಯಲ್ಲಿ ಶೇ.50% ಗರಿಷ್ಠ ಪರಿಮಿತಿಯನ್ನು ಸಡಿಲಗೊಳಿಸಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು.‌

ಜಾತಿ ಗಣತಿಗೆ ಕೂಡಲೇ ದಿನಾಂಕ ನಿಗದಿಗೊಳಿಸಬೇಕು ಎಂದರು.

ರಾಹುಲ್ ಗಾಂಧಿಯವರು ಕೂಡಾ ಇದನ್ನೇ ಆಗ್ರಹಿಸಿದ್ದು, ಜಾತಿ ಗಣತಿ ವೇಳೆ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಲು  ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

*ಬಡವರು, ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಅನುಕೂಲ*
ಸಾಮಾಜಿಕವಾಗಿ , ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನ ಹೇಳುತ್ತದೆ. ಜಾತಿ ಗಣತಿ ಯೊಂದಿಗೆ ಸಾಮಾಜಿಕ, ಆರ್ಥಿಕ ,  ಶೈಕ್ಷಣಿಕ ಮಾಡಿದರೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡಲು ಅನುಕೂಲವಾಗುತ್ತದೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದರು.

*ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸಮೀಕ್ಷೆ

ಈ ರೀತಿಯ 2015 ರಲ್ಲಿಯೇ ನಮ್ಮ ಸರ್ಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ 192 ಕೋಟಿ ವೆಚ್ಚ ಮಾಡಿ  1. 33 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ . ಇದರಿಂದ  ಪ್ರೇರಿತವಾಗಿ ಮತ್ತು  ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು
ಕೇಂದ್ರ ಸರ್ಕಾರವು ಈಗ ಸಮೀಕ್ಷೆಗೆ ಮುಂದಾಗಿದೆ ಎಂದರು.

*ಮೇ 9 ಕ್ಕೆ ಸಚಿವ ಸಂಪುಟ ಸಭೆ*

ಪ್ರಸಕ್ತ  ಸಚಿವ ಸಂಪುಟದಲ್ಲಿ ಮಂಡಿಸಿರುವ  ಸಾಮಾಜಿಕ , ಶೈಕ್ಷಣಿಕ ಸಮೀಕ್ಷೆಯನ್ನು ಮೇ 9 ರಂದು ನಡೆಯುವ ಸಚಿವ ಸಂಪುಟದಲ್ಲಿ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದರು.

50% ಮೀಸಲಾತಿಯನ್ನು ಬದಲಾಯಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ 15 ವಿಧಿ, ಕಲಂ (5) ರಂತೆ ಮೀಸಲಾತಿಯನ್ನು ಕೊಡಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಇದನ್ನು ಪರಿಗಣಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.

*ಬಿಜೆಪಿ ಸಾಮಾಜಿಕ ನ್ಯಾಯದ ಪರ ಎಂದಿಗೂ ಇಲ್ಲ*
ಕೇವಲ ಘೋಷಣೆ ಮಾಡಿದರೆ ಸಾಲದು, ಅದನ್ನು ಜಾರಿಗೆ ತರಬೇಕು. 73-74 ರ ತಿದ್ದುಪಡಿಗಳನ್ನು ಬಿಜೆಪಿ ವಿರೋಧಿಸಿತ್ತು. ಇತಿಹಾಸ ನೋಡಿದರೆ ಬಿಜೆಪಿ ಸಾಮಾಜಿಕ ನ್ಯಾಯದ ಪರ ಎಂದಿಗೂ ಇಲ್ಲ. ಕೂಡಲೇ ಯಾವ ದಿನಾಂಕದಿಂದ ಜನಗಣತಿ, ಜಾರಿ ಗಣತಿ ಮಾಡುತ್ತಾರೆ ಎಂದು ತಿಳಿಸಬೇಕು. ಜಾತಿ ಗಣತಿ ಮಾಡುವಾಗ ಸಾಮಾಜಿಕ ಆರ್ಥಿಕ ಸಮೀಕ್ಷೆ ಕೂಡ ಆಗಬೇಕು. ಇಲ್ಲಿಯವರೆಗೂ ಇದನ್ನು ವಿರೋಧಿಸುತ್ತಿದ್ದವರು ಈಗ ಸಮೀಕ್ಷೆ ನಡೆಸುವ ಘೋಷಣೆ ಮಾಡಿದ್ದಾರೆ ಎಂದರು.

*ಕುಮಾರಸ್ವಾಮಿ ಸಚಿವರನ್ನು ಹೆದರಿಸಿ ವರದಿ ಪಡೆಯಲಿಲ್ಲ*

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಜಾತಿ ಗಣತಿ ಹಾಗೂ ಜನಗಣತಿ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಹಾಡಿ ಹೊಗಳಿದ್ದು, ರಾಜ್ಯ ಸರ್ಕಾರದ ಸಮೀಕ್ಷೆಗೆ ಯಾವುದೇ ಪಾವಿತ್ರ್ಯತೆ ಇಲ್ಲ ಏನು ಹೇಳಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಸಮ್ಮಿಶ್ರ ಸರ್ಕಾರದಲ್ಲಿ ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಸಚಿವರಾಗಿದ್ದಾಗ ಜಾತಿ ಗಣತಿ ವರದಿ ಪಡೆಯಲು ದಿನಾಂಕ ನಿಗದಿ ಮಾಡಿದಾಗ ಅವರನ್ನು ಅಮಾನತು ಮಾಡುವುದಾಗಿ ಹೆದರಿಸಿ ವರದಿಯನ್ನು ಪಡೆಯಲಿಲ್ಲ ಎಂದರು.

*ಸಚಿವರು ಅಂತಿಮ ಅಭಿಪ್ರಾಯ ಕೊಟ್ಟ ನಂತರ ತೀರ್ಮಾನ*

ಸಮೀಕ್ಷೆಯ ಬಗ್ಗೆ ಈ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆಯೇ ಎಂಬ ಪ್ರಶ್ನೆ ಉತ್ತರಿಸಿದ ಮುಖ್ಯಮಂತ್ರಿಗಳು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸಚಿವರು ಅಂತಿಮ ಅಭಿಪ್ರಾಯ ಕೊಟ್ಟ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಏರಿಕೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು. ಮೀಸಲಾತಿ ಏರಿಕೆಯಾಗಬೇಕಾದರೆ ಸಂವಿಧಾನಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕು. ರಾಜ್ಯ ಸರ್ಕಾರ ಕೇಂದ್ರಕ್ಕೆ ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಬೇಕೆಂದು ತಿಳಿಸಬಹುದು. ಆಗ ಸಂವಿಧಾನ ತಿದ್ದುಪಡಿ ಮಾಡಿ ಏರಿಕೆ ಮಾಡಬಹುದು ಎಂದರು.

*ನೆಹರೂ ಬಗ್ಗೆ ಅಪಪ್ರಚಾರ*

ಧರ್ಮೇಂದ್ರ ಪ್ರಧಾನ್ ಅವರು ನೆಹರೂ ಅವರು ಹಿಂದೆ ಜಾತಿ ಗಣತಿಯನ್ನು ವಿರೋಧಿಸಿದ್ದರು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಇದೆಲ್ಲಾ ಸುಳ್ಳು ಹಾಗೂ ಅಪಪ್ರಚಾರ ಎಂದರು.

*ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅನುಸರಿಸಿದೆ*
ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಮೀಕ್ಷೆಯನ್ನು ನಕಲು ಮಾಡುತ್ತಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದಾಗ ಕೇಂದ್ರ ಸರ್ಕಾರ ಅದನ್ನು ವಿರೋಧಿಸಿ, ಟೀಕಿಸಿತ್ತು. ಈಗ ಅದನ್ನೇ ಅವರೂ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಬಡವರು, ಜನಸಂಖ್ಯೆ, ಶೈಕ್ಷಣಿಕವಾಗಿ, ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಹಿಂದುಳಿದವರಿಗೆ ಮೀಸಲಾತಿ ನಿಗದಿ ಮಾಡಬೇಕೆಂದು ಸಂವಿಧಾನದ ವಿಧಿ ಕಲಂ 14,15,16 ಹೇಳುತ್ತದೆ.

ಕೇಂದ್ರ ಸರ್ಕಾರದ ಜನಗಣತಿ ಮತ್ತು ಜಾತಿ ಗಣತಿ ವರದಿ ರಾಜ್ಯ ಸರ್ಕಾರದ ಸಮೀಕ್ಷೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಸುದ್ದಿಗಾರರ ಜೊತೆ ಪ್ರತಿಕ್ರಿಯೆ ನೀಡಿ ಸಚಿವ ಸಂಪುಟದ ಮುಂದೆ ವರದಿಯನ್ನು ಈಗಾಗಲೇ ಮಂಡಿಸಲಾಗಿದೆ ಎಂದರು.IMG 20250501 WA0006

*ಹಿಂದೆ ಇದ್ದ ಶೇ 50% ರ ಗರಿಷ್ಠ ಪರಿಮಿತಿಯನ್ನು ಹೆಚ್ಚು ಮಾಡಲು ಒತ್ತಾಯ*
ರಾಜ್ಯ ಸರ್ಕಾರದ ಸಮೀಕ್ಷೆ ಅವೈಜ್ಞಾನಿಕ ಎಂದು ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಹಾಗು ಧರ್ಮೇಂದ್ರ ಪ್ರಧಾನ್ ಅವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರದ್ದೇ ಪಕ್ಷದ ಬೆಂಬಲಿಗರು ಬಿಹಾರದಲ್ಲಿ ನಡೆಸಿರುವ ಸಮೀಕ್ಷೆ ಬಗ್ಗೆ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರಗಳಿಗೆ ಜಾತಿ ಅಥವಾ ಜನಗಣತಿ ಮಾಡಲು ಹಕ್ಕಿಲ್ಲ ಎಂದು ಸಂವಿಧಾನದಲ್ಲಿ ಹೇಳಿದೆಯೇ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರದಲ್ಲಿ ದಲಿತರೂ ಸೇರಿ 51% ಮೀಸಲಾತಿ ಇದೆ. ಹಿಂದೆ ಇದ್ದ ಶೇ 50% ರ ಗರಿಷ್ಠ ಪರಿಮಿತಿಯನ್ನು ಹೆಚ್ಚು ಮಾಡಬೇಕೆಂದಿದೆ ಎಂದರು.

ನಮ್ಮದು ಸಾಮಾಜಿಕ , ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಾಗಿದ್ದು ಕೇಂದ್ರವೂ ಅದನ್ನೇ ಮಾಡಲಿ ಎಂದು ಒತ್ತಾಯಿಸುತ್ತೇವೆ ಎಂದರು.

.*ಶೇ 93% ಜನಸಂಖ್ಯೆ ಸಮೀಕ್ಷೆಗೆ ಒಳಪಟ್ಟಿದ್ದಾರೆ*
ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ 5.90 ಕೋಟಿ ಜನರನ್ನು ಒಳಪಡಿಸಲಾಗಿದೆ. ಶೇ 93% ಜನಸಂಖ್ಯೆ ಸಮೀಕ್ಷೆಗೆ ಒಳಪಟ್ಟಿದ್ದು, ಶೆ 100% ಸಮೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದರು.

ಮುಂದಿನ ಸಚಿವ ಸಂಪುಟದಲ್ಲಿ ಅಭಿಪ್ರಾಯ ಪಡೆದು ಚರ್ಚೆ ಮಾಡಿ, ನಮ್ಮ ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಬಜೆಟ್ ರೂಪಿಸುವಾಗ ಇದನ್ನು ಆಧಾರವಾಗಿಟ್ಟುಕೊಂಡು ಮಾಡಲಾಗುವುದು ಎಂದರು.
ಮೇ 9 ರಂದು ಬಹುತೇಕ ಸಚಿವ ಸಂಪುಟ ಸಭೆಯನ್ನು ನಿಗದಿ ಮಾಡಲಾಗುವುದು ಎಂದರು.

*ಸಮಾನತೆ ತರಲು ಎಲ್ಲರಿಗೂ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಸಾಮಾಜಿಕವಾಗಿ ಪಾಲಿರಬೇಕು*
ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ಸಮೀಕ್ಷೆಯ ವರದಿನ್ನು ಪಡೆಯಲಿಲ್ಲ ಎಂದರು. ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ದೊರಕಿಸಲು, ಸಮಾನತೆ ತರಲು ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಸಾಮಾಜಿಕವಾಗಿ ಪಾಲಿರಬೇಕು ಎಂಬ ಉದ್ದೇಶದಿಂದ ಸಮೀಕ್ಷೆ ನಡೆಸಲಾಯಿತು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

 

 

Leave a Reply

Your email address will not be published. Required fields are marked *