ಸರ್ಕಾರಿ ನೌಕರರ ಸೇವೆ ಶ್ಲಾಘನೀಯ: ಶಾಸಕ ಎಚ್. ವಿ. ವೆಂಕಟೇಶ್
ಪಾವಗಡ: ಸರ್ಕಾರದ ಯೋಜನೆಗಳನ್ನು ಸಕ್ರಮವಾಗಿ ಜನಗಳಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಶ್ಲಾಘನೀಯವೆಂದು ಶಾಸಕ
ಹೆಚ್ ವಿ ವೆಂಕಟೇಶ್ ತಿಳಿಸಿದರು.
ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ತಾಲ್ಲೂಕು ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಳ್ಳಿಯಿಂದ ದಿಲ್ಲಿಯವರೆಗೂ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ ಎಂದರು.
ಸರ್ಕಾರಿ ನೌಕರರ ಒಗ್ಗಟ್ಟಿನಿಂದಲೇ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು , ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದರು.
ಕಾಂಗ್ರೆಸ್ ಸರ್ಕಾರ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ, ರಾಷ್ಟ್ರೀಕೃತ ಬ್ಯಾಂಕಿನಿಂದ ಒಂದು ಕೋಟಿಗೂ ಅಧಿಕ ವಿಮಾ ಸೌಲಭ್ಯ ಸೇರಿದಂತೆ ಏಳನೇ ವೇತನ ಆಯೋಗದ ಪರಿಷ್ಕರಣಿ ಯಾಗುತ್ತಿದೆ ಎಂದರು.
ಶಿಕ್ಷಕರಿಗೆ ರಾಜಕೀಯದ ಬಗ್ಗೆ ಬಹಳಷ್ಟು ಜ್ಞಾನವಿದೆ ಎಂದು, ನಾವು ಹೆಸರಿಗೆ ರಾಜಕೀಯ ಮಾಡುತ್ತೇವೆ, ಆದರೆ ಶಿಕ್ಷಕರು ರಾಜಕಾರಣಿಗಳಿಗಿಂತಲೂ ಹೆಚ್ಚಿನ ರಾಜಕೀಯ ಚತುರತೆಯನ್ನು ಹೊಂದಿದ್ದಾರೆ ಎಂದು, ಯಾವಾಗ ಯಾರನ್ನು ಏರಿಸಬೇಕು, ಇಳಿಸಬೇಕು, ಎಂಬುದರ ಬಗ್ಗೆ ಅವರಿಗೆ ಹೆಚ್ಚಿನ ಅರಿವಿದೆ ಎಂದರು.
ಶಾಸಕನಾಗಿ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದು ಆಶ್ವಾಸನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಧುಗಿರಿ ಉಪ ವಿಭಾಗ ಅಧಿಕಾರಿ ಗೋಟೂರು ಶಿವಪ್ಪ ಮಾತನಾಡಿ,
ಎಲ್ಲಾ ಸರ್ಕಾರಿ ನೌಕರರು ಸರ್ಕಾರದ ಆಶಯದಂತೆ ಕೆಲಸ ಮಾಡಬೇಕು.
ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮಾತನಾಡಿ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಇತ್ತೀಚಿಗೆ ಹಲವಾರು ಬದಲಾವಣೆಗಳನ್ನು ನೋಡಬಹುದೆಂದು, ನೌಕರರಿಗೆ ಅನುಕೂಲವಾಗುವಂತ ಆದೇಶಗಳನ್ನು ಸರ್ಕಾರದಿಂದ ಮಾಡಿಸಿ, ನೌಕರರ ಅಭಿವೃದ್ಧಿಗೆ ಸಂಘ ಶ್ರಮಿಸುತ್ತದೆ ಎಂದರು.
ಸರ್ಕಾರಿ ನೌಕರನ ಬೆನ್ನೆಲುಬಾಗಿ ಸಂಘ ಕಾರ್ಯ ನಿರ್ವಹಿಸಲಿದೆ ಎಂದರು.
ಸರ್ಕಾರಿ ನೌಕರರಿಗೆ ಆರೋಗ್ಯ ಸಮಸ್ಯೆ ಇದ್ದಾಗ ವೇತನ ಸಹಿತ ರಜೆ ನೀಡಲು ಸಂಘ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದೆ ಎಂದರು.
ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಮಾದರಿಯಲ್ಲಿ ವೇತನ ನೀಡಬೇಕು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ, ಮನೆ ಬಾಡಿಗೆ ಹಾಗೂ ಇತರೆ ಭತ್ಯೆಗಳಲ್ಲಿ ಶೇ 20 ರಷ್ಟು ವ್ಯತ್ಯಾಸ ಇದೆ. ಕೇಂದ್ರ ಸರ್ಕಾರಿ ನೌಕರರಷ್ಟೇ ಕೆಲಸ ಮಾಡಿದರೂ ನಮ್ಮ ನೌಕರರು ಅವರಿಗಿಂತ ₹ 20 ರಿಂದ ₹ 30 ಸಾವಿರ ಕಡಿಮೆ ವೇತನ ಪಡೆಯುತ್ತಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಸಂಘವು ಸರ್ಕಾರದ ಗಮನಸೆಳೆಯುತಿದೆ ಎಂದರು.
ನೌಕರರಿಗೆ ನಗದು ರಹಿತ ಚಿಕಿತ್ಸೆ ಯೋಜನೆ ಮಾಡಬೇಕಿದ್ದು, ಒಂದು ತಿಂಗಳ ಒಳಗೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಎನ್‌ಪಿಎಸ್ ಬದಲಾಗಿ ಒಪಿಎಸ್ ಜಾರಿ ಆಗುವ ಭರವಸೆ ಇದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವರದರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಗೌಡ ಹೆಚ್, ಗೌರವಾಧ್ಯಕ್ಷರಾದ ಬಸವರಾಜು, ಉಪಾಧ್ಯಕ್ಷರಾದ ಚೇತನ್‌ಕುಮಾರ್, ರಾಜ್ಯ ಕಾರ್ಯದರ್ಶಿ ಪ್ರಭಾಕರ್, ತುಮಕೂರು ಜಿಲ್ಲಾಧ್ಯಕ್ಷರಾದ ಎಸ್.ಹೆಚ್.ರಮೇಶ್, ಮಧುಗಿರಿ ಜಿಲ್ಲಾಧ್ಯಕ್ಷರಾದ ರಂಗಪ್ಪ, ಜಿಲ್ಲಾ ಎನ್.ಪಿ.ಎಸ್ ಅಧ್ಯಕ್ಷ ಹರಿಶ್ ಎಸ್.ಹೆಚ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹೆಚ್ ವಿ ರವಿಕುಮಾರ್, ನಿರ್ದೇಶಕರಾದ ಮಾರುತೇಶ್, ಪುರಸಭೆ ಅಧ್ಯಕ್ಷ ಸುದೇಶ್ ಬಾಬು, ಎಸ್ ಎಸ್ ಕೆ ಸಂಘದ ಅಧ್ಯಕ್ಷ ಅನಿಲ್ ಕುಮಾರ್,
ಜಪಾನಂದ ಸ್ವಾಮೀಜಿ, ರಾಜ್ಯಪರಿಷತ್ ಸದಸ್ಯರು, ಪದಾಧಿಕಾರಿಗಳು ನಿರ್ದೇಶಕರು, ನಾಮ ನಿರ್ದೇಶನ ಸದಸ್ಯರು, ಸರ್ಕಾರಿ ನೌಕರರ ಸಂಘದ ಎಲ್ಲಾ ವೃಂದ ಸಂಘಗಳ ಅಧ್ಯಕ್ಷರು, ಪಾದಾಧಿಕಾರಿಗಳು ಹಾಗೂ ತಾಲ್ಲೂಕಿನ ಸರ್ಕಾರಿ ನೌಕರರು ಭಾಗವಹಿಸಿದ್ದರು.
ವರದಿ : ಶ್ರೀನಿವಾಸಲು ಎ
