* ಆಕ್ಸಿಜನ್ ಕೊರತೆ ನೀಗಿಸಲು ಗುಜರಾತ್‌ನೊಂದಿಗೆ ಒಡಂಬಡಿಕೆ
ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ: ಡಾ.ಕೆ. ಸುಧಾಕರ್
ತುಮಕೂರು: ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಹೇಳಿಕೆ ನೀಡುವಷ್ಟು ನಾನು ದೊಡ್ಡವನಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ತುಮಕೂರಿನಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್‌ನನ್ನು ಶನಿವಾರ ಉದ್ಘಾಟಿಸಿ,
ಮುಖ್ಯಮಂತ್ರಿ ಬದಲಾವಣೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.
ದಿಲ್ಲಿಯಿಂದ ಮುಖ್ಯಮಂತ್ರಿಗಳೇ ಬೆಂಗಳೂರಿಗೆ ಆಗಮಿಸಿದ್ದಾರೆ, ಅವರಿಂದಲೇ ಅಧಿಕೃತವಾಗಿ ಮಾಹಿತಿ ಪಡೆದುಕೊಳ್ಳಿ, ಸತ್ಯ ಗೊತ್ತಿಲ್ಲದೇ ಮನಸೋ ಇಚ್ಚೇ ಮಾತನಾಡುವುದು ಸರಿಯಲ್ಲ. ನಾನು ಸಹ ಈ ಬಗ್ಗೆ ಏನೂ ಹೇಳುವುದಿಲ್ಲ. ಕೆಲವರು ಮಂತ್ರಿ ಆಗುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದಾರೆ, ಅದೇನು ಅಪರಾಧ ಅಲ್ಲವಲ್ಲಾ? ಈ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಗಳೇ ಉತ್ತರಿಸುತ್ತಾರೆ ಎಂದರು.
ಎಲ್ಲದರಲ್ಲೂ ರಾಜಕೀಯ ಸರಿಯಲ್ಲ:
ರಾಜ್ಯದಲ್ಲಿ ಕೊರೋನ ಪ್ರಕರಣ ಹೆಚ್ಚುತ್ತಿದ್ದು, ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಸುಧಾಕರ್ ಅವರು,
ರಾಜ್ಯದಲ್ಲಿ ಕೋರೋನ ಪ್ರಕರಣ 5 ಲಕ್ಷಕ್ಕೇರಿದೆ ಎನ್ನುವುದಕ್ಕಿಂತ ಸೋಂಕಿತರ ಪೈಕಿ 4 ಲಕ್ಷ ಮಂದಿ ಗುಣಮುಖರಾಗಿದ್ದಾರೆ ಎಂಬುದು ಗಮನಾರ್ಹ. ಅಷ್ಟೆ ಅಲ್ಲದೆ, ಕೋರೊನ ಸಾವಿನ ಪ್ರಮಾಣ ದೇಶದ ಸಾವಿ ಸರಾಸರಿಗೆ ಹೋಲಿಸಿದರೆ ರಾಜ್ಯದಲ್ಲಿ ಶೇ.1.56 ರಷ್ಟು ಕಡಿಮೆ ಇದೆ. ಹೀಗಿರುವಾಗ ನಿರ್ಲಕ್ಷ್ಯದ ಪ್ರಶ್ನೆ ಎಲ್ಲಿಂದ ಬರುತ್ತದೆ. ವಿರೋಧ ಪಕ್ಷದ ನಾಯಕರು ಅಂಕಿ-ಅಂಶ ಆಧರಿಸಿ ಹೇಳಿಕೆ ನೋಡಲಿ. ಎಲ್ಲದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಲ್ಯಾಬ್ ಉದ್ಘಾಟನೆ:
ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್ ಉದ್ಘಾಟನೆಯಿಂದ ತುಮಕೂರಿನಲ್ಲಿ ಪ್ರತಿನಿತ್ಯ 2 ಸಾವಿರ ಕೊರೋನ ಟೆಸ್ಟ್ ಮಾಡಲು ಸಾಧ್ಯವಾಗಲಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಉದ್ಘಾಟನೆ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಓದಿದ ಕಾಲೇಜಿನಲ್ಲಿಯೇ ಲ್ಯಾಬ್ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಇದೂ ಸೇರಿ ತುಮಕೂರಿನಲ್ಲಿ ಒಟ್ಟು ಮೂರು ಅತ್ಯಾಧುನಿಕ ಕೋವಿಡ್ ಪರೀಕ್ಷಾ ಲ್ಯಾಬ್ ತೆರೆಯಲಾಗಿದ್ದು, ಇದರಿಂದ ಈ ಭಾಗದಲ್ಲಿ ಕೊರೊನ ಪರೀಕ್ಷಾ ಪ್ರಮಾಣ ಹೆಚ್ಚಲಿದೆ ಎಂದರು.
ಈ ಭಾಗದಲ್ಲಿ ಐಸಿಯು ಬೆಡ್‌ಗಳ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಈಗಾಗಲೇ 50 ಐಸಿಯು ಬೆಡ್ ನಿರ್ಮಾಣ ಮಾಡಿದ್ದು,ಈ ಪ್ರಮಾಣ ಹೆಚ್ಚಿಸಲು ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು..
ಆಕ್ಸಿಜನ್ ಕೊರತೆ ನೀಗಿಸಲು ಕ್ರಮ:
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಆದರೆ, ಮುಂದೆ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಗುಜರಾತ್ ನ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ, ಕೊರತೆ ಬಿದ್ದರೆ ಅಲ್ಲಿಂದ ಆಕ್ಸಿಜನ್ ತರಿಸಲಾಗುವುದು. ಕೇವಲ ಸರಕಾರಿ ಆಸ್ಪತ್ರೆ ಅಲ್ಲದೆ, ಖಾಸಗಿ ಆಸ್ಪತ್ರೆಯಲ್ಲಿ ಕೊರತೆಯಾದರೂ ಸಹ ಅವರಿಗೂ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಕೆಲ ಆಸ್ಪತ್ರೆಗಳಲ್ಲಿ ಕೊರತೆ ಎಂಬ ಮಾತು ಕೇಳಿ ಬಂದಿತ್ತು, ಆದರೆ ಸಾಧ್ಯವಾದಷ್ಟು ಆಯಾ ಜಿಲ್ಲೆಯಲ್ಲಿ ಕೈಗಾರಿಕಾ ವಲಯಗಳ ಸಹಕಾರದೊಂದಿಗೆ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಭವಿಷ್ಯದಲ್ಲಿ ಕೊರತೆ ನೀಗಿಸಲು ಸರಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ದೂರು ಬಂದರೆ ಕ್ರಮ:
ಕೊರೋನ ಹೆಸರಲ್ಲಿ ಹೆಚ್ಚು ಶುಲ್ಕ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲೆಂದೇ ಸರಕಾರ ಕೊರೋನ ಚಿಕಿತ್ಸೆಗೆ ಶುಲ್ಕ ನಿಗದಿ ಮಾಡಿದೆ. ಆದರೂ, ಹೆಚ್ಚು ಶುಲ್ಕ ವಿಧಿಸುತ್ತಿದ್ದರೆ ದೂರು ನೀಡಬಹುದು. ಅಂಥ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಹೆಚ್ಚು ಶುಲ್ಕ ಆರೋಪವನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕು. ಕೆಲವೊಮ್ಮೆ ಕೊರೋನ ಇರುವ ವ್ಯಕ್ತಿಗೆ ಬಹು ಅಂಗಗಳ ವೈಫಲ್ಯವಾಗಿರುತ್ತದೆ. ಅಂಥ ಚಿಕಿತ್ಸೆಗೆ ಪ್ರತ್ಯೇಕ ಶುಲ್ಕವಿರುತ್ತದೆ. ಅದಕ್ಕೂ ಕೊರೋನ ಚಿಕಿತ್ಸೆಗೂ ಸಂಬಂಧವಿರುವುದಿಲ್ಲ. ಇದನ್ನು ಸಹ ಗಮನದಲ್ಲಿಡಬೇಕು ಎಂದರು.