ಪ್ರತಿದಿನ ಡೆತ್ ಆಡಿಟ್ ನಡೆಸಲು ಸೂಚನೆ: ಡಾ.ಕೆ. ಸುಧಾಕರ್
ತುಮಕೂರು: ಪ್ರತಿ ಹಳ್ಳಿಗೊಂದು ಟಾಸ್ಕ್ ಫೋರ್ಸ್ ಕಮಿಟಿ ರಚಿಸಿ, ಕೊರೋನ ಬಗ್ಗೆ ಜನ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಕೋವಿಡ್ ಸ್ಥಿತಿಗತಿಗಳ ಪರಿಶೀಲನೆ ನಡೆಸಿ ಶನಿವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
330 ಗ್ರಾಮ ಪಂಚಾಯತಿ ಪೈಕಿ ಪ್ರತಿ ಹಳ್ಳಿಯಲ್ಲೂ ಟಾಸ್ಕ್ ಫೋರ್ಸ್ ಕಮಿಟಿ ರಚಿಸಿ. ಈ ತಂಡ ಹದಿನೈದು ದಿನಕ್ಕೊಮ್ಮೆ ಕಡ್ಡಾಯವಾಗಿ ಮನೆ ಮನೆಗೂ ತೆರಳಿ ಕೊರೋನ ಮುನ್ನೆಚ್ಚರಿಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಜೊತೆಗೆ ಇತರೆ ರೋಗಗಳಿಂದ ಬಳಲುತ್ತಿರುವ ಮತ್ತು ಹಿರಿಯ ನಾಗರಿಕರ ಬಗ್ಗೆ ಮಾಹಿತಿ ಪಡೆಯುವ ಕೆಲಸವಾಗಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಮರಣ ಪ್ರಮಾಣ ಶೇ.2.1 ರಷ್ಟಿದೆ ಎಂಬ ಅಧಿಕಾರಿಗಳ ಮಾಹಿತಿಗೆ ಬೇಸರಗೊಂಡ ಸಚಿವರು, ಸಾವಿನ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮ ಕೈಗೊಂಡಿದ್ದೀರಿ? ಪ್ರತಿ ಸಾವಿನ ಆಡಿಟ್ ಮಾಡುವ ಮೂಲಕ ಲೋಪಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಎಲ್ಲಾ ಸಾವನ್ನು ಕೊರೋನ ಎಂದೇ ವರದಿ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ವಾರಕ್ಕೊಮ್ಮೆ ಡೆತ್ ಆಡಿಟ್ ಮಾಡುವ ಬದಲು, ಪ್ರತಿ ದಿನ ಡೆತ್ ಆಡಿಟ್ ಆಗಲೇ ಬೇಕು, ನಂತರ ಆ ವರದಿ ಸಲ್ಲಿಸಿ ಎಂದು ನಿರ್ದೇಶನ ನೀಡಿದರು.
ಖಾಲಿ ಹುದ್ದೆಗಳಿಗೆ ಸೀನಿಯರ್ ರೆಸಿಡೆಂಟ್ ವೈದ್ಯರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಿಂದ ಸರಿಯಾಗಿ ಮಾಹಿತಿ ನೀಡದ ಹಿನ್ನಲೆ ಯಲ್ಲಿ ನೇಮಕ ಸಾಧ್ಯವಾಗಿಲ್ಲ ಎಂದ ಸಚಿವರು, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಪ್ರತಿ ಜಿಲ್ಲೆಗಳಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸೀನಿಯರ್ ರೆಸಿಡೆಂಟ್ ವೈದ್ಯರನ್ನು ನೇಮಿಸಿದ್ದೇವೆ. ಆದರೆ, ತುಮಕೂರಿನಿಂದ ಈ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿಯೇ ಬಂದಿಲ್ಲ. ಹೀಗಿರುವಾಗ ಹೇಗೆ ನೇಮಿಸಲು ಹೇಗೆ ಸಾಧ್ಯ? ತಕ್ಷಣ ವರದಿ ನೀಡಿದರೆ ಹುದ್ದೆ ನಿರೀಕ್ಷೆಯಲ್ಲಿ ಇರುವ ಸೀನಿಯರ್ ರೆಸಿಡೆಂಟ್ ವೈದ್ಯರನ್ನು ನೇಮಿಸುವುದಾಗಿ ಭರವಸೆ ನೀಡಿದರು.
* ತುಮಕೂರಿನ ಕೆಲ ತಾಲೂಕಿನಲ್ಲಿ ಕನಿಷ್ಠ ಬೆಡ್‌ಗಳು ಇಲ್ಲ.
ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಹೈಫ್ಲೋ ಆಕ್ಸಿಜನ್ ಇರುವ ಕನಿಷ್ಠ 100 ಬೆಡ್‌ಗಳನ್ನು ಕಡ್ಡಾಯವಾಗಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು
* ಕೊರೋನ ಟೆಸ್ಟ್ ಪ್ರಮಾಣವನ್ನು ಹೆಚ್ಚಿಸುವಂತೆ ಸಲಹೆ ನೀಡಿದರು.