EcUoy7 VcAEQAvN

ಮಲಪ್ರಭಾ, ಘಟಪ್ರಭಾ ಒತ್ತುವರಿ ಸಮಗ್ರ ಸಮೀಕ್ಷೆ

DISTRICT NEWS

ಮಲಪ್ರಭಾ, ಘಟಪ್ರಭಾ ಒತ್ತುವರಿ ಸಮಗ್ರ ಸಮೀಕ್ಷೆ

ಒತ್ತುವರಿ ತಡೆಗೆ ಶಾಶ್ವತ ಯೋಜನೆ- ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ, ಸೆ.19(ಕರ್ನಾಟಕ ವಾರ್ತೆ): ಮಲಪ್ರಭಾ, ಘಟಪ್ರಭಾ ನದಿತೀರದ ಒತ್ತುವರಿ ಪ್ರವಾಹಕ್ಕೆ ಕಾರಣವಾಗಿದೆ. ಆದ್ದರಿಂದ ನದಿತೀರದ ಒತ್ತುವರಿ ಕುರಿತು ಸಮಗ್ರ ಸಮೀಕ್ಷೆ ಕೈಗೊಂಡ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಈ ಸಮಸ್ಯೆಗಳ ನಿವಾರಣೆಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಲಾಗುವುದು ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದರು.

ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಒತ್ತುವರಿ ಜಾಗದ ಸಮಸ್ಯೆಗಳ ಕುರಿತು ಸುವರ್ಣ ವಿಧಾನ ಸೌಧದಲ್ಲಿ ಶನಿವಾರ ನಡೆದ ಜಲಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಂಬಂಧಿಸಿದ ಜಿಲ್ಲಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರವಾಹಕ್ಕೆ ಪ್ರಮುಖ ಕಾರಣ ನದಿ ತೀರದ ಒತ್ತುವರಿ ಕಾರಣವಾಗಿದೆ. ನದಿಗಳು ಸರಾಗವಾಗಿ ಹರಿಯಲು ಅವಕಾಶ ನೀಡಬೇಕಿದೆ. ಆದ್ದರಿಂದ ಮೊದಲು ಸಮೀಕ್ಷೆ ಆಗಲಿ ನಂತರ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮೀಕ್ಷೆ ಬಳಿಕ ಜನಪ್ರತಿನಿಧಿಗಳ ಸಭೆ:

ನದಿತೀರಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಶಾಶ್ವತ ಯೋಜನೆ ರೂಪಿಸಿ ಸರಕಾರದಿಂದ ಅಗತ್ಯ ಹಣಕಾಸಿನ ನೆರವು ಪಡೆದುಕೊಳ್ಳಲಾಗುವುದು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಸಮೀಕ್ಷೆ ಬಳಿಕ ಸಂಬಂಧಿಸಿದ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಸಮಗ್ರ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

ಇದೇ ವೇಳೆ ಮಾತನಾಡಿದ ವಿಧಾನ ಸಭೆಯ ಉಪ ಸಭಾಪತಿ ಆನಂದ ಮಾಮನಿ ಅವರು, ಮೊದಲು ನದಿಗಳ ಒತ್ತುವರಿ ಬಗ್ಗೆ ಸಮೀಕ್ಷೆ ಮಾಡಿ ಗುರುತು ಮಾಡಿದ ಬಳಿಕ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸುವುದು ಸೂಕ್ತ ಎಂದರು.
ನದಿ ತೀರದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕಿದೆ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಿದರು.

ನದಿ ಒತ್ತುವರಿ ಕಾನೂನುಬಾಹಿರ; ಪುನರ್ವಸತಿ ಅಗತ್ಯ:

ನದಿಪಾತ್ರದ ಒತ್ತುವರಿ ಕುರಿತು ಸಭೆಗೆ ಮಾಹಿತಿ ನೀಡಿದ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಮಳೆಗಾಲದಲ್ಲಿ ಪ್ರವಾಹ ಸಾಧ್ಯತೆ ಇರುವುದರಿಂದ ನದಿ ತೀರದ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಪ್ರಕರಣವೊಂದರಲ್ಲಿ ಹೈಕೋರ್ಟ್ ಆದೇಶ ನೀಡಿದೆ ಎಂದರು.

ಕಾನೂನು ಪ್ರಕಾರ ನದಿ ಹಾಗೂ ನದಿ ದಂಡೆ ಸರ್ಕಾರದ ಆಸ್ತಿಯಾಗಿದೆ. ಯಾರಾದರೂ ಮನೆ ಕಟ್ಟಿದರೆ ಅಥವಾ ಸಾಗುವಳಿ ಮಾಡುವುದು ಅತಿಕ್ರಮಣ ಎಂದು ಭಾವಿಸಲಾಗುತ್ತದೆ.
ಮನೆ ಕಟ್ಟಿರುವ ಬಡವರಿಗೆ ನಿರಾಶ್ರಿತರು ಎಂದು ಪರಿಗಣಿಸಿ ಪುನರ್ವಸತಿ ಕಲ್ಪಿಸಬಹುದು. ಇದರಿಂದ ಕಾನೂನು ತೊಡಕು ಎದುರಾಗುವುದನ್ನು ತಪ್ಪಿಸಬಹುದು.

ಡ್ರೋನ್ ಮತ್ತಿತರ ಸೌಲಭ್ಯ ಬಳಸಿಕೊಂಡು ವೈಜ್ಞಾನಿಕವಾಗಿ ಒತ್ತುವರಿ ಸಮೀಕ್ಷೆ ನಡೆಸಬೇಕಿದೆ. ಒತ್ತುವರಿ ತೆರವು ಜತೆಗೆ ನದಿಯ ಹೂಳೆತ್ತುವ ಕೆಲಸಕ್ಕೆ ಆದ್ಯತೆ ನೀಡಬೇಕಿದೆ ಎಂದು ಬಿಸ್ವಾಸ್ ವಿವರಿಸಿದರು.

ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಮತ್ತಿತರರು ಉಪಸ್ಥಿತರಿದ್ದರು.

ಸಮಗ್ರ ವರದಿ ರೂಪಿಸುವ ಕುರಿತು ಚರ್ಚೆ:

ಸಚಿವರು ಸಭೆಯ ಬಳಿಕ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗೂ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ನೇತೃತ್ವದಲ್ಲಿ ಕಂದಾಯ, ನೀರಾವರಿ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಯಿತು.

ನದಿಪಾತ್ರದ ಒತ್ತುವರಿಯ ವೈಜ್ಞಾನಿಕ ಸಮೀಕ್ಷೆ ಹಾಗೂ ಒತ್ತುವರಿ ತೆರವಿಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.
ನೀರಾವರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು ಸಮಗ್ರ ಸಮೀಕ್ಷೆ ನಡೆಸಿ ವರದಿ ರೂಪಿಸಬೇಕಿದೆ ಎಂದು ಬಿಸ್ವಾಸ್ ಹೇಳಿದರು.