ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಅಹಿಂದ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಹಾದಿಯಲ್ಲಿ ಐತಿಹಾಸಿಕ ಮೈಲಿಗಲ್ಲು
ಬೆಂಗಳೂರು | ಆಗಸ್ಟ್ 03, 2026
ಕರ್ನಾಟಕ ಸಚಿವ ಸಂಪುಟದ ಇತ್ತೀಚಿನ ವಿಸ್ತರಣೆ ಹಾಗೂ ಪ್ರಮುಖ ಸಾಂವಿಧಾನಿಕ ಮತ್ತು ಶಾಸನಸಭಾ ಹುದ್ದೆಗಳ ನೇಮಕಾತಿಯು ರಾಜ್ಯದ ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯ ಆಡಳಿತದ ಪಯಣದಲ್ಲಿ ಅತ್ಯಂತ ಐತಿಹಾಸಿಕ ಮೈಲಿಗಲ್ಲಾಗಿದೆ. ಇದು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ಸಿದ್ಧಾಂತ ಹಾಗೂ ಸಮಾನ ಪ್ರಾತಿನಿಧ್ಯದ ಕುರಿತು ಕಾಂಗ್ರೆಸ್ ಪಕ್ಷಕ್ಕಿರುವ ಧೃಡ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ.
ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ—ಸಚಿವರು, ವಿಧಾನಸಭೆಯ ಅಧ್ಯಕ್ಷರು (ಸ್ಪೀಕರ್), ವಿಧಾನಸಭೆಯ ಉಪಾಧ್ಯಕ್ಷರು (ಡೆಪ್ಯುಟಿ ಸ್ಪೀಕರ್), ವಿಧಾನ ಪರಿಷತ್ತಿನ ಸಭಾಪತಿ ಹಾಗೂ ವಿಧಾನ ಪರಿಷತ್ತಿನ ಉಪಸಭಾಪತಿ ಒಳಗೊಂಡಂತೆ—ಒಟ್ಟು 37 ಪ್ರಮುಖ ಸಾಂವಿಧಾನಿಕ ಮತ್ತು ಶಾಸನಸಭಾ ಹುದ್ದೆಗಳಲ್ಲಿ 23 ಸ್ಥಾನಗಳನ್ನು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗಗಳು (OBC) ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ನಾಯಕರಿಗೆ ನೀಡಲಾಗಿದೆ.
ಇದು ರಾಜ್ಯದ ಇತಿಹಾಸದಲ್ಲೇ ಅಹಿಂದ ಸಮುದಾಯಗಳಿಗೆ ಸಿಕ್ಕಿರುವ ಅತ್ಯಂತ ದೊಡ್ಡ ಮಟ್ಟದ ಪ್ರಾತಿನಿಧ್ಯವಾಗಿದೆ.
ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ.
ಸಾಂವಿಧಾನಿಕ ಮೌಲ್ಯಗಳು, ಸಾಮಾಜಿಕ ನ್ಯಾಯ ಮತ್ತು ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಸಂಬಂಧಿಸಿದಂತೆ ಅವರ ನಿರಂತರ ಬದ್ಧತೆಯು ಕಾಂಗ್ರೆಸ್ ಪಕ್ಷದ ಆಡಳಿತ ಮಾದರಿಗೆ ಸದಾ ಸ್ಪೂರ್ತಿಯಾಗಿದೆ.
ನೇರ ಪ್ರಸಾರ – Live
ಸಾಮಾಜಿಕ ಪ್ರಾತಿನಿಧ್ಯದ ವಿವರಣೆ:
- ಪರಿಶಿಷ್ಟ ಜಾತಿ (SC): 5 ಸಚಿವರು
- 3 ಸಚಿವರು – ಪರಿಶಿಷ್ಟ ಜಾತಿ (ಬಲ)
- 2 ಸಚಿವರು – ಪರಿಶಿಷ್ಟ ಜಾತಿ (ಎಡ)
- ಪರಿಶಿಷ್ಟ ಪಂಗಡ (ST): 3 ಸಚಿವರು
- ಅಲ್ಪಸಂಖ್ಯಾತರು:
- 3 ಸಚಿವರು – ಮುಸ್ಲಿಂ ಸಮುದಾಯ
- 1 ಸಭಾಪತಿ – ಕರ್ನಾಟಕ ವಿಧಾನ ಪರಿಷತ್ತು (ಮುಸ್ಲಿಂ ಸಮುದಾಯ)
- ಹಿಂದುಳಿದ ವರ್ಗಗಳು (OBC):
- 7 ಸಚಿವರು – ಹಿಂದುಳಿದ ವರ್ಗ
- 1 ಉಪಾಧ್ಯಕ್ಷರು – ಕರ್ನಾಟಕ ವಿಧಾನಸಭೆ (ಹಿಂದುಳಿದ ವರ್ಗ)
- 1 ಉಪಸಭಾಪತಿ – ಕರ್ನಾಟಕ ವಿಧಾನ ಪರಿಷತ್ತು (ಹಿಂದುಳಿದ ವರ್ಗ)
ಈ ಅಭೂತಪೂರ್ವ ಸಾಮಾಜಿಕ ಸಂಯೋಜನೆಯು, ಆಡಳಿತವು ಸಮಾಜದ ವೈವಿಧ್ಯತೆಯನ್ನು ಪ್ರತಿಬಿಂಬಿಸಬೇಕು ಮತ್ತು ಪ್ರತಿಯೊಂದು ವಂಚಿತ ವರ್ಗಕ್ಕೂ ಅರ್ಥಪೂರ್ಣ ಪ್ರಾತಿನಿಧ್ಯವನ್ನು ನೀಡಬೇಕು ಎಂಬ ಕಾಂಗ್ರೆಸ್ ಪಕ್ಷದ ದೃಢವಾದ ನಂಬಿಕೆಯನ್ನು ಪ್ರದರ್ಶಿಸುತ್ತದೆ.
ಸಾಮಾಜಿಕ ನ್ಯಾಯ ಎಂಬುದು ಕೇವಲ ರಾಜಕೀಯ ಘೋಷಣೆಯಲ್ಲ, ಬದಲಿಗೆ ಆಡಳಿತದ ಮೂಲ ತತ್ವ ಎಂಬುದನ್ನು ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಸಾಬೀತುಪಡಿಸಿದೆ.
ಕಾರ್ಯಾಂಗ ಮತ್ತು ಶಾಸಕಾಂಗ ಎರಡರಲ್ಲೂ ವ್ಯಾಪಕ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಮೂಲಕ, ಕಾಂಗ್ರೆಸ್ ಸರ್ಕಾರವು ಒಳಗೊಳ್ಳುವಿಕೆಯ ಆಡಳಿತ ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಅಲ್ಲದೆ, ಸಮಾಜದ ಎಲ್ಲಾ ವರ್ಗಗಳ ಸಮಾನತೆ, ಸಬಲೀಕರಣ ಮತ್ತು ಭಾಗವಹಿಸುವಿಕೆಯ ನಾಯಕತ್ವಕ್ಕೆ ತನಗಿರುವ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
