ಸಂವಿಧಾನ ಮತ್ತು ವಿಧಾನಮಂಡಲದ ಸ್ವಾಯತ್ತತೆಗೆ ಧಕ್ಕೆ
• ಪೇಮೆಂಟ್ ಕೋಟ ಹಾಗೂ ಮ್ಯಾನೇಜ್‍ಮೆಂಟ್ ಕೋಟದಡಿ ಸಚಿವಸಂಪುಟಕ್ಕೆ
• ಪಕ್ಷ ವಿರೋಧಿಗಳಿಗೂ ಸ್ಥಾನದ ಕುರಿತು ಶಾಸಕರ ಆರೋಪ
• ಕಾಂಗ್ರೆಸ್ಸಿಗ ಎನ್ನಲೂ ನಾಚಿಕೆ ಎಂದು ಟಿ.ಬಿ.ಜಯಚಂದ್ರ
• ಯುವಕರ ಹೋರಾಟದ ಅಪಹಾಸ್ಯ ಸರಿಯಲ್ಲ
• ನಾಗೇಂದ್ರ ಮರುಸೇರ್ಪಡೆಗೆ ಭಯ ಕಾರಣವಾಯಿತೇ?
ಬೆಂಗಳೂರು: ಈ ಸಚಿವ ಸಂಪುಟ ವಿಸ್ತರಣೆ ರಾಜ್ಯದ ಹಿತದೃಷ್ಟಿಯಿಂದ ನಡೆದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರದ ಪೈಪೆÇೀಟಿ ಮತ್ತು ಹೈಕಮಾಂಡ್‍ನ ರಾಜಕೀಯ ಸಮೀಕರಣಗಳೇ ಸಚಿವ ಸಂಪುಟ ವಿಸ್ತರಣೆಯ ಹಿಂದಿನ ಪ್ರಮುಖ ಕಾರಣಗಳಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ” ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಎರಡು ತಿಂಗಳ ನಂತರದಲ್ಲಿ ಸಚಿವಸಂಪುಟ ವಿಸ್ತರಣೆ ಮಾಡಿದ್ದಾರೆ. ರೇಟ್ ಫಿಕ್ಸ್ ಆಗದೇ ಡೇಟ್ ಫಿಕ್ಸ್ ಆಗುತ್ತಿಲ್ಲ ಎಂದು ನಾನು ಹಲವಾರು ಬಾರಿ ಈ ಹಿಂದೆ ಹೇಳಿದ್ದೇನೆ. ಒಂದೋ ಪೇಮೆಂಟ್ ಕೋಟದಲ್ಲಿ ಅಥವಾ ಮ್ಯಾನೇಜ್‍ಮೆಂಟ್ ಕೋಟದಡಿ ಸಚಿವಸಂಪುಟಕ್ಕೆ ಸೇರಬೇಕಿತ್ತು. ಎರಡು ಬಿಟ್ಟರೆ ಮೂರನೇ ಕೋಟಾ ಇರಲಿಲ್ಲ. ಕೆಲವರು ಪೇಮೆಂಟ್ ಕೋಟದಲ್ಲಿ ಹಾಗೂ ಇನ್ನೂ ಕೆಲವರು ಮ್ಯಾನೇಜ್‍ಮೆಂಟ್ ಕೋಟದಡಿ ಸಚಿವಸಂಪುಟಕ್ಕೆ ಸೇರಿದ್ದಾರೆ ಎಂದು ವಿಶ್ಲೇಷಿಸಿದರು.
ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿಸಿದ್ದು ಯಾಕೆ?
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಚಾರ್ಜ್‍ಶೀಟ್ ಸಲ್ಲಿಕೆಯಾಗಿರುವ ಹಾಗೂ ನ್ಯಾಯಾಂಗ ಪ್ರಕ್ರಿಯೆ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದನ್ನು ವಿಜಯೇಂದ್ರ ಪ್ರಶ್ನಿಸಿದರು. ಭ್ರμÁ್ಟಚಾರ ರಹಿತ ಆಡಳಿತದ ಬಗ್ಗೆ ಮಾತನಾಡುವ ಕಾಂಗ್ರೆಸ್ ತನ್ನದೇ ನೈತಿಕತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.
ಮರು ಸೇರ್ಪಡೆಗೆ ಹೈಕಮಾಂಡ್ ಭಯವೇ ಕಾರಣವೇ?
ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ಹೈಕಮಾಂಡ್‍ಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ನಾಗೇಂದ್ರ ಅವರು ಬೆದರಿಕೆ ಹಾಕಿದ ಬಳಿಕವೇ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕುರಿತು ಕಾಂಗ್ರೆಸ್ ನಾಯಕರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಸಚಿವಸಂಪುಟ ವಿಸ್ತರಣೆ ಬಳಿಕ ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರ ಹೇಳಿಕೆಯನ್ನು ತಾವು ಮತ್ತೊಮ್ಮೆ ಗಮನಿಸಬೇಕಾಗುತ್ತದೆ. ಹಿರಿಯ ಶಾಸಕ ತನ್ವೀರ್ ಸೇಠ್ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೂ ಸಚಿವ ಸ್ಥಾನ ಸಿಕ್ಕಿದೆ ಎಂದಿದ್ದಾರೆ. ಮತ್ತೊಬ್ಬ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರು ನಾನು ಕಾಂಗ್ರೆಸ್ಸಿಗ ಎನ್ನಲೂ ನಾಚಿಕೆ ಆಗುತ್ತದೆ ಎಂದು ಹೇಳಿದ್ದಾರೆ. ಶಾಸಕ ಎಸ್.ಆರ್.ಶ್ರೀನಿವಾಸ್ ಅವರು, ನಾನೊಬ್ಬ ಸಾಮಾನ್ಯ ರೈತನ ಮಗ. ಯಾರ ತಲೆ ಒಡೆದೂ ಸಂಪಾದನೆ ಮಾಡಿಲ್ಲ. ಪೇಮೆಂಟ್ ಕೊಡಲಾಗದ ಕಾರಣ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ತಿಳಿಸಿದ್ದಾಗಿ ಗಮನ ಸೆಳೆದರು.
ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯು ರಾಜ್ಯದ ಅಭಿವೃದ್ಧಿ, ಜನಹಿತ ಅಥವಾ ಉತ್ತಮ ಆಡಳಿತದ ಉದ್ದೇಶದಿಂದ ನಡೆದಿಲ್ಲ. ಅಧಿಕಾರದ ಹಂಚಿಕೆ, ಹಣಬಲ, ಗುಂಪುಗಾರಿಕೆ ಹಾಗೂ ಹೈಕಮಾಂಡ್ ರಾಜಕಾರಣದ ಫಲವಾಗಿ ಸಚಿವ ಸಂಪುಟ ವಿಸ್ತರಣೆ ನಡೆದಿದೆ ಆರೋಪಿಸಿದರು.
‘ರೇಟ್ ಫಿಕ್ಸ್ ಆಗದೆ ಡೇಟ್ ಫಿಕ್ಸ್ ಆಗಲಿಲ್ಲ’
ಸಚಿವ ಸಂಪುಟ ವಿಸ್ತರಣೆ ಕುರಿತು ತಾವು ಆರಂಭದಿಂದಲೂ “ರೇಟ್ ಫಿಕ್ಸ್ ಆಗದೆ ಡೇಟ್ ಫಿಕ್ಸ್ ಆಗಲಿಲ್ಲ” ಎಂದು ಹೇಳಿದ್ದೆ. ಇಂದು ಕಾಂಗ್ರೆಸ್‍ನ ಹಿರಿಯ ನಾಯಕರು, ಮಾಜಿ ಸಚಿವರು ಮತ್ತು ಶಾಸಕರು ನೀಡಿರುವ ಬಹಿರಂಗ ಹೇಳಿಕೆಗಳೇ ತಮ್ಮ ಆರೋಪಕ್ಕೆ ಪುಷ್ಟಿ ನೀಡಿವೆ. ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನವೇ ಸಚಿವ ಸಂಪುಟ ರಚನೆಯ ಹಿಂದಿನ ವಾಸ್ತವವನ್ನು ಬಯಲಿಗೆಳೆಯುತ್ತಿದೆ ಎಂದರು.
‘ಹಣ ಕೊಟ್ಟವರಿಗೆ ಮಾತ್ರ ಸಚಿವ ಸ್ಥಾನ’ ಆರೋಪಕ್ಕೆ ಉತ್ತರಿಸಿ
ಮಾಜಿ ಸಚಿವ ತಿಮ್ಮಾಪುರ್ ಅವರು ಕಾಂಗ್ರೆಸ್ ಹೈಕಮಾಂಡ್‍ಗೆ ಹಣ ನೀಡಿದವರಿಗೆ ಹಾಗೂ ಪ್ರಭಾವ ಹೊಂದಿದವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ. ಇಂತಹ ಗಂಭೀರ ಆರೋಪದ ಕುರಿತು ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ
ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರ, ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ. ಕೊನೆಯ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಡುವ ಮೂಲಕ ಮಹಿಳೆಯರ ಬಗ್ಗೆ ತನ್ನ ನಿಜವಾದ ಮನೋಭಾವವನ್ನು ಕಾಂಗ್ರೆಸ್ ಪ್ರದರ್ಶಿಸಿದೆ ಎಂದು ಟೀಕಿಸಿದರು.
ಖಾತೆ ಹಂಚಿಕೆಗೂ ದೆಹಲಿಯ ನಿರ್ಧಾರವೇ ಅಂತಿಮ
ಸಚಿವರ ಆಯ್ಕೆ ಮಾತ್ರವಲ್ಲ, ಯಾರಿಗೆ ಯಾವ ಖಾತೆ ನೀಡಬೇಕು ಎಂಬುದನ್ನೂ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳು ಮತ್ತೆ ಮತ್ತೆ ದೆಹಲಿಗೆ ತೆರಳಿ ಅನುಮೋದನೆ ಪಡೆಯಬೇಕಾದ ಪರಿಸ್ಥಿತಿ ರಾಜ್ಯದ ರಾಜಕೀಯ ಇತಿಹಾಸದಲ್ಲೇ ಅಪರೂಪವಾಗಿದೆ ಎಂದು ಹೇಳಿದರು.
ಸಂವಿಧಾನ ಮತ್ತು ವಿಧಾನಮಂಡಲದ ಸ್ವಾಯತ್ತತೆಗೆ ಧಕ್ಕೆ
ವಿಧಾನಸಭೆಯ ಸ್ಪೀಕರ್, ಉಪಸಭಾಧ್ಯಕ್ಷರು, ವಿಧಾನ ಪರಿಷತ್ತಿನ ಸಭಾಪತಿ ಹಾಗೂ ಉಪಸಭಾಪತಿ ಹುದ್ದೆಗಳ ಕುರಿತು ಎಐಸಿಸಿ ಲೆಟರ್‍ಹೆಡ್‍ನಲ್ಲಿ ನಿರ್ದೇಶನ ನೀಡಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇಂತಹ ನಡೆ ವಿಧಾನಮಂಡಲದ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತದ್ದು ಎಂದು ವಿಜಯೇಂದ್ರ ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಯುವಕರ ಹೋರಾಟದ ಅಪಹಾಸ್ಯ ಸರಿಯಲ್ಲ
ಪಿಡಿಒ ನೇಮಕಾತಿ, ಕೃಷಿ ಇಲಾಖೆಯ ಎಒ ಮತ್ತು ಎಎಒ ನೇಮಕಾತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಕರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ. ಸಮಸ್ಯೆ ಬಗೆಹರಿಸುವ ಬದಲು ಪ್ರತಿಭಟನಾಕಾರರನ್ನು ಅಪಹಾಸ್ಯ ಮಾಡುವುದು ಸರ್ಕಾರದ ಅಹಂಕಾರವನ್ನು ತೋರಿಸುತ್ತದೆ ಎಂದು ಹೇಳಿದರು.
ವೈಯಕ್ತಿಕ ಹಿತಾಸಕ್ತಿಗಳೇ ಕಾಂಗ್ರೆಸ್‍ಗೆ ಆದ್ಯತೆ
ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಯಾವುದೇ ಮಹತ್ವದ ಕೊಡುಗೆ ನೀಡಿಲ್ಲ. ಮುಂದಿನ ದಿನಗಳಲ್ಲಿಯೂ ಜನಹಿತಕ್ಕಿಂತ ವೈಯಕ್ತಿಕ ಹಾಗೂ ರಾಜಕೀಯ ಹಿತಾಸಕ್ತಿಗಳೇ ಸರ್ಕಾರದ ಆದ್ಯತೆಯಾಗಿವೆ. ರಾಜ್ಯದ ಜನತೆ ಈ ಸರ್ಕಾರದ ನಿಜಸ್ವರೂಪವನ್ನು ಅರಿತಿದ್ದು, ಸೂಕ್ತ ಸಮಯದಲ್ಲಿ ಪ್ರಜಾಪ್ರಭುತ್ವದ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು ಎಸ್. ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಮತ್ತು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಉಪಸ್ಥಿತರಿದ್ದರು.
