ಸಂವಿಧಾನಬದ್ಧವಾಗಿ ಕಲಾಪ ನಿರ್ವಹಣೆ: ಸಭಾಪತಿ ಸಲೀಂ ಅಹ್ಮದ್
ಬೆಂಗಳೂರು, ಆಗಸ್ಟ್ 25 (ಕರ್ನಾಟಕ ವಾರ್ತೆ) : “ವಿಧಾನ ಪರಿಷತ್ತಿನ ಸಭಾಪತಿಯಾಗಿ ಇದು ನನ್ನ ಮೊದಲ ಅಧಿವೇಶನವಾಗಿದ್ದು, ಸದನವನ್ನು ಸಂಪೂರ್ಣ ನಿಷ್ಪಕ್ಷಪಾತ ಹಾಗೂ ಸಂವಿಧಾನಬದ್ಧವಾಗಿ ನಡೆಸಿದ ಆತ್ಮತೃಪ್ತಿ ನನಗಿದೆ. ಆದರೆ, ಚಿಂತಕರ ಚಾವಡಿ ಎನಿಸಿದ ಮೇಲ್ಮನೆಯಲ್ಲಿ ಜನಹಿತಕ್ಕಾಗಿ ಅರ್ಥಪೂರ್ಣ ಚರ್ಚೆ ನಡೆಯಲು ಪ್ರತಿಪಕ್ಷಗಳ ಸದಸ್ಯರು ಸೂಕ್ತ ಸಹಕಾರ ನೀಡಲಿಲ್ಲ,” ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ತಿಳಿಸಿದರು.
ಇಂದು ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ 159 ನೇ ವಿಧಾನ ಪರಿಷತ್ತಿನ ಅಧಿವೇಶನದ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬರ ಪರಿಸ್ಥಿತಿ, ಕುಡಿಯುವ ನೀರು, ರೈತರ ಮತ್ತು ನೀರಾವರಿ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರತಿಪಕ್ಷಗಳಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಸಚಿವ ನಾಗೇಂದ್ರ ಅವರ ರಾಜೀನಾಮೆ ಹಾಗೂ ಹನೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಚರ್ಚಿಸಲು ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದರೂ, ಬಿಎಸ್‌ಸಿ ಸಭೆಯ ನಿರ್ಧಾರಗಳನ್ನು ಮೀರಿ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಕಲಾಪಕ್ಕೆ ಅಡ್ಡಿಪಡಿಸಿದರು ಎಂದು ತಿಳಿಸಿದರು.
ಪ್ರತಿಭಟನೆ ಮಾಡುವುದು ಪ್ರತಿಪಕ್ಷದ ಹಕ್ಕಾಗಿದ್ದರೂ, ಕಲಾಪವೇ ನಡೆಯದಂತೆ ಮಾಡುವುದು ಸಂಸದೀಯ ವ್ಯವಸ್ಥೆಗೆ ಸೂಕ್ತವಲ್ಲ. ಸಭಾಪತಿ ಪೀಠಕ್ಕೆ ಹಾಗೂ ಸಂವಿಧಾನದ ಘನತೆಗೆ ಚ್ಯುತಿ ತರುವಂತ ಅಸಂಸದೀಯ ಭಾಷಾ ಪ್ರಯೋಗವನ್ನು ಸಹಿಸುವುದಿಲ್ಲ. ಆಡಳಿತ ಪಕ್ಷದ ಸಚಿವರು ಮತ್ತು ಸದಸ್ಯರು ಸಹ ಸದನದಲ್ಲಿ ಕಡ್ಡಾಯವಾಗಿ ಹಾಜರಿದ್ದು ಸಹಕರಿಸಬೇಕು ಎಂದು ಸಭಾಪತಿಯವರು ತಿಳಿಸಿದರು.
159ನೇ ಅಧಿವೇಶನದ ಕಾರ್ಯಕಲಾಪಗಳ ಅಂಕಿ-ಅಂಶಗಳು :
ಅಧಿವೇಶನವು ಆಗಸ್ಟ್ 13 ರಿಂದ ಆಗಸ್ಟ್ 24, 2026 ರವರೆಗೆ ಒಟ್ಟು 8 ದಿನಗಳ ಕಾಲ (25 ಗಂಟೆ 30 ನಿಮಿಷಗಳು) ಕಲಾಪ ನಡೆದಿದೆ. ಅಗಲಿದ 15 ಗಣ್ಯರಿಗೆ ಸದನ ಸಂತಾಪ ಸೂಚಿಸಿದೆ. ವಿಧಾನಸಭೆಯಿಂದ ಅಂಗೀಕೃತಗೊಂಡ 16 ಪ್ರಮುಖ ವಿಧೇಯಕಗಳಿಗೆ ವಿಧಾನ ಪರಿಷತ್ತು ಸಹಮತಿ ನೀಡಿದೆ ಎಂದು ತಿಳಿಸಿದರು.
ಸ್ವೀಕರಿಸಲಾದ 1,210 ಪ್ರಶ್ನೆಗಳಲ್ಲಿ 84 ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದ್ದು, 610 ಲಿಖಿತ ಉತ್ತರಗಳನ್ನು ಮಂಡಿಸಲಾಗಿದೆ. ಪಂಚಾಯತ್ ರಾಜ್, ಸಾರ್ವಜನಿಕ ಲೆಕ್ಕಪತ್ರ ಹಾಗೂ ಹಕ್ಕುಬಾಧ್ಯತಾ ಸಮಿತಿ ವರದಿಗಳನ್ನು ಮಂಡಿಸಲಾಯಿತು ಶಿಕ್ಷಕರ ವೇತನ ತಾರತಮ್ಯ ನಿವಾರಣಾ ಸಮಿತಿಗೆ 6 ತಿಂಗಳು ಕಾಲಾವಕಾಶ.
ಅಕ್ರಮ ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳ ಪರಿಶೀಲನಾ ಜಂಟಿ ಸಮಿತಿಗೆ 12 ತಿಂಗಳ ಕಾಲಾವಕಾಶ ವಿಸ್ತರಿಸಲಾಯಿತು ಎಂದು ತಿಳಿಸಿದರು.
ಸದನ ಸುಗಮವಾಗಿ ನಡೆಯಲು ಸಹಕರಿಸಿದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಭಾನಾಯಕರು, ವಿರೋಧ ಪಕ್ಷದ ನಾಯಕರು, ಶಾಸಕರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸಭಾಪತಿ ಸಲೀಂ ಅಹ್ಮದ್ ಅವರು ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಕಾರ್ಯದರ್ಶಿ ಜ್ಯೋತಿ ಉಪಸ್ಥಿತರಿದ್ದರು.
