*ರಾಹುಲ್ ಗಾಂಧಿ ಅವರೇ ಬೆಂಗಳೂರಿಗೆ ಯಾವಾಗ ಬರುತ್ತೀರಿ?*
*ನವದೆಹಲಿಯಲ್ಲಿ ರಾಹುಲ್ ಗಾಂಧಿಗೆ ಒತ್ತಾಯಿಸಿದ ಹೆಚ್ಡಿಕೆ; ರಾಷ್ಟ್ರ ರಾಜಧಾನಿ ಮುಟ್ಟಿದ ಕೆಪಿಎಸ್ಸಿ ಅಕ್ರಮದ ವಿವಾದ*
*AEE ನೇಮಕ ಅಕ್ರಮದಲ್ಲಿ ಪ್ರಿಯಾಂಕ್ ಖರ್ಗೆಗೆ ಸಂಬಂಧವಿದೆ ಎಂದ ಹೆಚ್.ಡಿ. ಕುಮಾರಸ್ವಾಮಿ*
*ಕೆಪಿಎಸ್ಸಿ ಕುರಿತು ರಾಜ್ಯ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ಮುಂದುವರಿಸಿದ ಕೇಂದ್ರ ಸಚಿವರು*
*ಪರೀಕ್ಷೆಗಳನ್ನು ಶಾಲಾ ಕಾಲೇಜುಗಳಲ್ಲಿ ಬರಿಸುತ್ತಾರೆ, ಕಾಂಗ್ರೆಸ್ ಕಾಲದಲ್ಲಿ ರೆಸಾರ್ಟ್’ಗಳಲ್ಲಿ ಪರೀಕ್ಷೆ ನಡೆಯುತ್ತದೆ!!!*
*ನವದೆಹಲಿ 31 ಆಗಸ್ಟ್ 2026* ಕೆಪಿಎಸ್ಸಿ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ; ಕೆಪಿಎಸ್ಸಿ ಸಂತ್ರಸ್ಥರ ಜತೆ ಚರ್ಚೆ ನಡೆಸಲು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಯಾವಾಗ ಬೆಂಗಳೂರಿಗೆ ಬರುತ್ತಾರೆ? ಎಂದು ಪ್ರಶ್ನಿಸಿದರು.
ಸೋಮವಾರ ಬೆಳಗ್ಗೆ ಬೆಂಗಳೂರಿನಿಂದ ನವದೆಹಲಿ ತಲುಪಿದ ಸಚಿವ ಕುಮಾರಸ್ವಾಮಿ ಅವರು ತಮ್ಮ ಗೃಹ ಕಚೇರಿಯಲ್ಲಿ ತುರ್ತು ಮಾಧ್ಯಮಗೋಷ್ಠಿ ಕರೆದು ಮಾತನಾಡಿ; ರಾಷ್ಟ್ರೀಯ ಮಟ್ಟದಲ್ಲೂ ಕೂಡ ಕೆಪಿಎಸ್ಸಿ ಹಗರಣದಿಂದ ಕರ್ನಾಟಕದ ಬಗ್ಗೆ ನಕಾರಾತ್ಮಕವಾಗಿ ಚರ್ಚೆಯಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಕಾರಣ. ಇದರ ಬಗ್ಗೆ ರಾಹುಲ್ ಗಾಂಧಿ ಮಾತನಾಡಬೇಕಾಗುತ್ತದೆ ಎಂದರು.
ಸಂವಿಧಾನದ ಪುಸ್ತಕವನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ರಾಹುಲ್ ಗಾಂಧಿ ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತುಟಿ ಬಿಚ್ಚಬೇಕಾಗಿದೆ. ಅವರು ಬೆಂಗಳೂರಿಗೆ ಬರಬೇಕು. ಅಲ್ಲಿ ಕೆಪಿಎಸ್ಸಿ ಸಂತ್ರಸ್ಥ ಯುವಕರ ಜೊತೆ ಚರ್ಚೆ ನಡೆಸಬೇಕು. ಕಾಂಗ್ರೆಸ್ ಪಕ್ಷದ ಅವರ ಸರ್ಕಾರ ಏನೇನು ಅಕ್ರಮಗಳಲ್ಲಿ ಭಾಗಿಯಾಗಿದೆ ಎಂಬುದನ್ನು ಸ್ವತಃ ಅರಿಯಬೇಕು. ರಾಹುಲ್ ಗಾಂಧಿ ಅವರು ನೀಟ್ ವಿಷಯವನ್ನು ಯಾವ ರೀತಿ ಹೇಗೆ ಎತ್ತಿಕೊಂಡು ಹೋರಾಟ ನಡೆಸಿದರೋ ಅದೇ ರೀತಿಯಲ್ಲಿ ಕೆಪಿಎಸ್ಸಿ ಹಗರಣದ ಬಗ್ಗೆಯೂ ಹೋರಾಟ ನಡೆಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಆಗ್ರಹಿಸಿದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಗ್ರೇಟ್ 1 ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಯಲ್ಲಿ ನಡೆದಿರುವ ಅಕ್ರಮದಿಂದ ಪ್ರಿಯಾಂಕ ಖರ್ಗೆ ಅವರು ನುಣನಚಿಕೊಳ್ಳಲು ಸಾಧ್ಯವಿಲ್ಲ. ಅಭ್ಯರ್ಥಿಗಳನ್ನು ರೆಸಾರ್ಟ್’ನಲ್ಲಿ ಕೂರಿಸಿ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ಓಎಂಆರ್ ಶೀಟ್ಗಳಲ್ಲಿ ಗುರುತು ಹಾಕಿಸಿರುವ ಅಕ್ರಮದಿಂದ ಅವರು ಪಾರಾಗಲು ಸಾಧ್ಯವಿಲ್ಲ. ಇದು ನನಗೆ ಸಂಬಂಧವಿಲ್ಲ ಎಂದು ಅವರು ಹೇಗೆ ಹೇಳುತ್ತಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಕಟುವಾಗಿ ಪ್ರಶ್ನಿಸಿದರು.
ದೇಶದಲ್ಲಿ ನಡೆಯುವ ಎಲ್ಲಾ ವಿಷಯಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಅವರಿಗೆ ಮಾಹಿತಿ ಇರುತ್ತದೆ. ಆದರೆ ಸ್ವತಃ ತಾವೇ ನಿರ್ವಹಿಸುತ್ತಿರುವ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎಂಬುದು ಗೊತ್ತಾಗುವುದಿಲ್ಲ ಎಂದರೆ ಹೇಗೆ? ಇಂತಹ ಅತಿಯಾದ ಜಾಣತನ ಪ್ರದರ್ಶಿಸುವ ಅಗತ್ಯವಿಲ್ಲ. ಜನರು ಬಹಳ ಬುದ್ಧಿವಂತರಿದ್ದಾರೆ. ಎಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಚಾಟಿ ಬೀಸಿದರು.
*ಕರ್ನಾಟಕಕ್ಕೆ ಬಂದರೆ ನಿಮ್ಮ ಅನುಭವ ವಿಸ್ತಾರಗೊಳ್ಳುತ್ತದೆ:*
ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಗ್ರೇಟ್ 1 ಹುದ್ದೆ ಮತ್ತು ಪಶುವೈದ್ಯಾಧಿಕಾರಿಗಳ ಆಯ್ಕೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿಯವರು ಬೆಂಗಳೂರಿನಲ್ಲಿ ಬಹಿರಂಗವಾಗಿ ಯುವಜನರ ಜೊತೆ ಸಂವಾದ ನಡೆಸಬೇಕು. ಅವರು ಎಲ್ಲಿದ್ದಾರೋ ಗೊತ್ತಿಲ್ಲ. ದೇಶದಲ್ಲಿಯೇ ಇದ್ದರೆ ಅವರು ತಕ್ಷಣವೇ ಬೆಂಗಳೂರಿಗೆ ಬಂದು ನಿರುದ್ಯೋಗಿ ಯುವಕರ ಮನವಿಗಳನ್ನು ಆಲಿಸಬೇಕು. ಆಗ ಅವರ ಅನುಭವ ಮತ್ತಷ್ಟು ವಿಸ್ತಾರಗೊಳ್ಳುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.
ಸಾಮಾನ್ಯವಾಗಿ ಪರೀಕ್ಷೆಗಳು ಶಾಲಾ-ಕಾಲೇಜುಗಳಲ್ಲಿ ನಡೆಯುತ್ತವೆ ಎಂಬುದು ನನಗೆ ಗೊತ್ತಿರುವ ವಿಷಯ. ಆದರೆ ಪ್ರಿಯಾಂಕ ಖರ್ಗೆಯವರ ಇಲಾಖೆಗೆ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ರೆಸಾರ್ಟ್ ನಲ್ಲಿ ಕೂರಿಸಿ ಪರೀಕ್ಷೆ ಬರಿಸಲಾಗಿದೆ! ನನಗೆ ಗೊತ್ತಿರುವ ಪ್ರಕಾರ ದೇಶದಲ್ಲಿಯೇ ಇದು ಮೊತ್ತ ಮೊದಲ ಪ್ರಯೋಗ. ಇದಕ್ಕಾಗಿ ಪ್ರಿಯಾಂಕ ಖರ್ಗೆ ಅವರನ್ನು ಭೇಷ್ ಎನ್ನಲೇಬೇಕು. ದುಡ್ಡು ಕೊಟ್ಟ ವಿದ್ಯಾರ್ಥಿಗಳಿಗೆ ಮೊದಲೇ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ಉತ್ತರ ಬರೆಸಲಾಗಿದೆ. ರಾಜ್ಯ ಸರ್ಕಾರದ ನಿಷ್ಕ್ರಿಯತೆ ಇಲ್ಲಿ ಸ್ಪುಟವಾಗಿ ಕಾಣುತ್ತದೆ. ಸಾಂವಿಧಾನಿಕ ಸಂಸ್ಥೆಯಾದರೂ ಅಕ್ರಮಗಳ ಆಗರವಾಗಿರುವ ಕೆಪಿಎಸ್ಸಿ ರಾಜ್ಯ ಸರ್ಕಾರದ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿದೆ ಎಂದು ಸಚಿವರು ಟೀಕಾಪ್ರಹಾರ ನಡೆಸಿದರು.
*ಪ್ರಿಯಾಂಕ್ ಖರ್ಗೆ ಅವರಲ್ಲಿ ಏನೋ ಹೊಕ್ಕಿದೆ!:*
ಪ್ರಿಯಾಂಕ್ ಖರ್ಗೆ ಅವರ ವರ್ತನೆಯ ಬಗ್ಗೆ ನನಗೆ ಬಹಳ ಅಚ್ಚರಿ ಆಗುತ್ತಿದೆ. ಅವರಿಗೆ ಗೃಹ ಇಲಾಖೆ ಸಿಕ್ಕಿದ್ದು ಕೂಡಲೇ ಅವರಲ್ಲಿ ಏನೋ ಹೊಕ್ಕಿದೆ. ಅದು ದೆವ್ವದ ಶಕ್ತಿ ಎಂದು ನಾನು ಹೇಳುವುದಿಲ್ಲ. ಆದರೆ ಅವರು ಸಮತೋಲನ ಮೀರಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸತ್ಯ. ಬೆಳಗ್ಗೆಯಿಂದ ಸಂಜೆಯವರೆಗೆ ಬರೀ ಆರ್ ಎಸ್ ಎಸ್ ಜಪ ಮಾಡುವುದೇ ಆಗಿದೆ. ಕೊಟ್ಟ ಕೆಲಸ ಮಾಡುವುದು ಬಿಟ್ಟು ಇನ್ನೊಬ್ಬರಿಗೆ ಬೋಧನೆ ಮಾಡುವುದೇ ಆಗಿದೆ. ನನಗೇ ಜ್ಞಾನ ಹೇಳಿಕೊಡಲು ಬಂದಿದ್ದಾರೆ ಅವರು ಎಂದು ಸಚಿವರು ಕೆಂಡಕಾರಿದರು.
ಕುಮಾರಸ್ವಾಮಿ ಅವರು ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಲಿ ಎಂದು ಪ್ರಿಯಾಂಕ ಖರ್ಗೆ ಅವರು ಬಾಲಿಶ ಹೇಳಿಕೆ ನೀಡಿದ್ದಾರೆ. ಅವರಿಗೆ ತಿಳಿವಳಿಕೆ ಮಟ್ಟ ಕಡಿಮೆ ಎಂಬುದು ಇದರಿಂದ ಅರ್ಥವಾಗುತ್ತದೆ. ಇವರಿಗೆ ನಾನು ಕೆಪಿಎಸ್ಸಿ ಹಗರಣಗಳ ಬಗ್ಗೆ ಚರ್ಚೆ ಮಾಡಿರುವ ಎಲ್ಲ ಸಂದರ್ಭಗಳಲ್ಲಿಯೂ ದಾಖಲೆಗಳನ್ನು ಮುಂದಿಟ್ಟೇ ಮಾತನಾಡಿದ್ದೇನೆ. ತನಿಖಾ ವರದಿ, ಕಾರ್ಬನ್’ನಿಂದ ತಿದ್ದಿದ ಓಎಂಆರ್ ಶೀಟ್’ಗಳು, ಸಬ್ ಕಮಿಟಿ ವರದಿ ಇತ್ಯಾದಿಗಳನ್ನು ಬಿಡುಗಡೆ ಮಾಡಿದ್ದೇನೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಗ್ರೇಟ್ 1 ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ರಾಜ್ಯದ ಮುಖ್ಯಮಂತ್ರಿಯೇ ಸದನದಲ್ಲಿ ಉತ್ತರ ನೀಡಿದ್ದಾರೆ. ಅದನ್ನು ಕೂಡ ಬಿಡುಗಡೆ ಮಾಡಿದ್ದೇನೆ. ಇದಕ್ಕಿಂತ ಇನ್ನೇನು ದಾಖಲೆಗಳನ್ನು ಒದಗಿಸಬೇಕು? ಒಂದು ವೇಳೆ ಅವರಿಗೆ ಅರ್ಥವಾಗದಿದ್ದರೆ ಎಲ್ಲಾ ದಾಖಲೆಗಳನ್ನು ಅವರು ಮನೆಗೆ ಕಳಿಸುತ್ತೇನೆ ಎಂದು ಸಚಿವರು ಕಿಡಿಕಾರಿದರು.
ಒಂದು ನಿರ್ದಿಷ್ಟ ಇಲಾಖೆಗೆ ನೇಮಕಾತಿ ಪ್ರಕ್ರಿಯೆಗಳು ಆರಂಭವಾದಾಗ ಸಂಬಂಧಪಟ್ಟ ಸಚಿವರಿಗೆ ಮಾಹಿತಿ ಇರುವುದಿಲ್ಲ ಎಂದರೆ ಆ ಸಚಿವರು ಸುಳ್ಳು ಹೇಳುತ್ತಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ. ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಗುಮಾನಿ ಬರುವುದೇ ಇಲ್ಲಿ. ಅವರ ಮಾತುಗಳಲ್ಲಿ ಪ್ರಾಮಾಣಿಕತೆ ಕಾಣುತ್ತಿಲ್ಲ. ಹಗರಣವನ್ನು ಮುಚ್ಚು ಹಾಕುವುದಕ್ಕೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು ಕೇಂದ್ರ ಸಚಿವರು.
*ಸಂವಿಧಾನದ ಬಗ್ಗೆ ಗೊತ್ತಿಲ್ಲ ಎಂದರೆ ನಿಮ್ಮ ಅಪ್ಪನನ್ನು ಕೇಳಿ:*
ದಿನ ಸಂವಿಧಾನ ಹಿಡಿದುಕೊಂಡು ಓಡಾಡುತ್ತಿರಾ ಅಲ್ಲವೇ? ಸಂವಿಧಾನದ ಬಗ್ಗೆ ನಿಮಗೆ ಗೊತ್ತಿಲ್ಲ ಎಂದರೆ ನಿಮ್ಮ ಅಪ್ಪನನ್ನು ಕೇಳಿ ತಿಳಿದುಕೊಳ್ಳಿ. ಮೊದಲು ಒಂದು ಕಮಿಟಿ ಮಾಡುತ್ತಾರೆ. ಅವರು ವರದಿ ಕೊಡುವುದಿಲ್ಲ. ನಂತರ ಐವರ ಸಮಿತಿ ಮತ್ತೆ ಮಾಡುತ್ತಾರೆ. ಅವರು 40 ಸಭೆಗಳನ್ನು ಮಾಡುತ್ತಾರೆ. ಎಲ್ಲಾ ಅಕ್ರಮಗಳಿಗೂ ಅಂದಿನ ಕಾರ್ಯದರ್ಶಿಯ ಕಾರಣ ಎಂದು ಸಚಿವರು ಹೇಳಿದರು.
ಈ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಒಟ್ಟು 12 ಬಾರಿ ವಿಚಾರಣೆ ನಡೆದಿದೆ. ಎಲ್ಲಾ ಸಂದರ್ಭಗಳಲ್ಲಿ ಏನೋ ಒಂದು ನೆಪ ಹೇಳಿ ವಿಚಾರಣೆಯನ್ನು ಮುಂದಕ್ಕೆ ಹಾಕಿಸಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡುತ್ತದೆ. ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡಿದೆ ತಪ್ಪು ಮಾಡುತ್ತಿದೆ. ಪಶು ವೈದ್ಯಾಧಿಕಾರಿಗಳ ಅಕ್ರಮದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದಾಗ ಈ ಪ್ರಕರಣ ನನ್ನ ಗಮನಕ್ಕೆ ಬಂದಿತು. ಅವರ ಬಗ್ಗೆ ಹೇಳಿದ್ದೇನೆ ವಿನಾ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ವೈಯಕ್ತಿಕ ದ್ವೇಷವಾಗಲಿ ಅಥವಾ ಅಸೂಯೆ ಆಗಲಿ ನನಗೆ ಇಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಪ್ರಿಯಾಂಕ್ ಖರ್ಗೆ ಅವರು ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ನನಗೆ ಸವಾಲು ಹಾಕಿದ್ದಾರೆ. ನಾನು ಅವರ ರಾಜಕೀಯ ನಿವೃತ್ತಿ ಬಯಸುವುದಿಲ್ಲ. ಆದರೆ ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂಬುದೇ ನನ್ನ ಆಗ್ರಹ. ಸಚಿವರು ಪ್ರಾಮಾಣಿಕವಾಗಿ ಹೇಳಲಿ; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿಯಾಗಿ ನೇಮಕಾತಿ ಆದೇಶಗಳನ್ನು ಕೊಡುವಾಗ ಸಂಬಂಧಪಟ್ಟ ಅಭ್ಯರ್ಥಿಗಳ ಆಯ್ಕೆಯ ನೇಮಕಾತಿ ಕಡತ ನಿಮ್ಮ ಮುಂದೆ ಬಂದಿಲ್ಲವೇ? ಎಂದು ಕುಮಾರಸ್ವಾಮಿ ಅವರು ನೇರವಾಗಿ ಪ್ರಶ್ನಿಸಿದರು.
ನನ್ನ ಪ್ರಕಾರ ಅಕ್ರಮ ನಡೆದಿರುವುದು ಎಲ್ಲರಿಗೂ ಗೊತ್ತಿತ್ತು, ಸ್ವತಃ ಪ್ರಿಯಾಂಕ್ ಖರ್ಗೆ ಅವರಿಗೂ ಸೇರಿ ಸರಕಾರದಲ್ಲಿರುವ ಪ್ರತಿಯೊಬ್ಬರಿಗೂ ಈ ಅಕ್ರಮದ ಬಗ್ಗೆ ಮಾಹಿತಿ ಇತ್ತು. ಓಎಂಆರ್ ಶೀಟ್’ಗಳ ತಿದ್ದುಪಡಿ ಬಗ್ಗೆ ಯಾವಾಗ ಆರೋಪಗಳು ಕೇಳಿ ಬಂದು ಜಾರಿ ನಿರ್ದೇಶನಾಲಯ ರಂಗ ಪ್ರವೇಶ ಮಾಡಿತೋ ಅಲ್ಲಿಂದ ಇವರಿಗೆ ಭಯ ಶುರುವಾಯಿತು. ಇಡಿಯನ್ನು ಅಮಿತ್ ಶಾ ಅವರು ಕಳಿಸಿದರಾ? ಪ್ರಿಯಾಂಕ ಖರ್ಗೆ ಅವರೇ.. ಇವತ್ತಿನ ನಿಮ್ಮ ಹೇಳಿಕೆ ನೋಡಿದರೆ ಇಡೀ ಹಗರಣದಲ್ಲಿ ನೀವು ಭಾಗಿಯಾಗಿರುವ ಅನುಮಾನ ಇನ್ನು ಗಟ್ಟಿಯಾಗುತ್ತಿದೆ. ಪರೀಕ್ಷಾ ನಿಯಂತ್ರಣ ಅಧಿಕಾರಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ದೆಹಲಿಗೆ ಹೋಗಿ ಅಲ್ಲೆಲ್ಲೋ ರೆಸಾರ್ಟಿಗೆ ಹೋಗಿದ್ದು, ಆ.ರೆಸಾರ್ಟ್’ನಲ್ಲಿ ಯಾರೊಂದಿಗೋ ಗಲಾಟೆ ಮಾಡಿಕೊಂಡಿದ್ದು, ನಂತರ ಮತ್ತೆಲ್ಲಿಗೋ ಹೋಗಿದ್ದು, ಅಲ್ಲಿಂದ ಚೆನ್ನೈಗೆ ಬಂದಿದ್ದು, ಚೆನ್ನೈನಿಂದ ದೇವನಹಳ್ಳಿಯ ರೆಸಾರ್ಟಿಗೆ ಬಂದು ಮೂರು ದಿನ ಉಳಿದುಕೊಂಡಿದ್ದು.. ಇದೆಲ್ಲವೂ ಯಾವುದೋ ಸಿನಿಮಾ ಕಥೆ ರೀತಿಯಲ್ಲಿ ಕಂಡುಬರುತ್ತದೆ. ಅದರ ಹಿಂದೆ ಯಾರಿದ್ದಾರೆ ಎಂಬುದು ಈಗ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ. ಸಿಐಡಿ ಪೊಲೀಸರು ಆ ಅಧಿಕಾರಿಯನ್ನು ಉತ್ತರ ಪ್ರದೇಶದಲ್ಲಿ ವಶಕ್ಕೆ ಪಡೆದು ಕರೆದುಕೊಂಡು ಬಂದರು ಎಂದು ಸುಳ್ಳಿ ಹೇಳಿದ್ದೀರಿ. ಆದರೆ ಅಧಿಕಾರಿಯನ್ನು ಎಲ್ಲಿ ಇಟ್ಟು ರಕ್ಷಣೆ ಕೊಟ್ಟಿದ್ದೀರಿ ಸ್ವಲ್ಪ ಹೇಳುವಿರಾ ಖರ್ಗೆ ಅವರೇ.. ಯಾರಿಗೆ ಹೇಳುತ್ತಿದ್ದೀರಿ ಇಂತಹ ಕಥೆಯನ್ನು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಗರಣದ ಬಗ್ಗೆ ಕ್ರಮ ವಹಿಸಿ ಎಂದರೆ ಕೆಪಿಎಸ್ಸಿ ಅಧ್ಯಕ್ಷರನ್ನು ಯಾರು ನೇಮಕ ಮಾಡಿದ್ದು ಎಂದು ಕೇಳುತ್ತಾರೆ. ಹಿಂದೆ 2016-17 ರಲ್ಲಿ ಬಿಡಿಎದಲ್ಲಿ ರೀಡು ಮಾಡಿದ್ದ ಅಸಾಮಿಯೊಬ್ಬರು ಆಮೇಲೆ ಕೆಪಿಎಸ್‌ಸಿ ಅಧ್ಯಕ್ಷರಾಗಿ ಬಂದೂಕುತಿದ್ದು ಎಲ್ಲರಿಗೂ ಗೊತ್ತಿದೆ. ರೀಡು ಮಾಡಿದ್ದರಿಂದ ಮತ್ತೊಂದು ಸಾಂವಿಧಾನಿಕ ಸಂಸ್ಥೆಯ ಆಶ್ರಯ ಪಡೆದು ರಕ್ಷಣೆ ಪಡೆದುಕೊಳ್ಳಲು ಒತ್ತಡ ಹೇರಿ ನೇಮಕಾತಿ ಮಾಡಿಸಿಕೊಂಡ ಆ ಅಧಿಕಾರಿ ಕೆಪಿಎಸ್‌ಸಿಯಲ್ಲಿ ನಡೆಸಿದ ಅಕ್ರಮಗಳ ಬಗ್ಗೆ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ. ಶ್ಯಾಂ ಭಟ್ಟ ಎನ್ನುವ ಅಧಿಕಾರಿಯನ್ನು ಯಾವ ಮಾನದಂಡನ ಮೇಲೆ ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ಮಾಡಿದ್ದೀರಿ ಎಂಬುದನ್ನು ಪ್ರಿಯಾಂಕ ಖರ್ಗೆ ಹೇಳಬೇಕಾಗುತ್ತದೆ. ನೀವು ಕೂಡ ಆ ಸಚಿವ ಸಂಪುಟದಲ್ಲಿ ಸಚಿವರಾಗಿದ್ದೀರಿ ಎಂಬುದನ್ನು ಮರೆತಿದ್ದೀರಾ ಎಂದು ಪ್ರಿಯಾಂಕ ಖರ್ಗೆ ಅವರನ್ನು ಸಚಿವರು ಪ್ರಶ್ನಿಸಿದರು.
