ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ 1 scaled

ಪರವಾನಗಿ ಇಲ್ಲದ ಬಂದೂಕು ಶಸ್ತ್ರಾಸ್ತ್ರಗಳನ್ನು ನವೆಂಬರ್ 01 ರೊಳಗೆ ಸರ್ಕಾರಕ್ಕೆ ಒಪ್ಪಿಸಿ

Genaral STATE
ಪರವಾನಗಿ ಇಲ್ಲದ ಬಂದೂಕು ಶಸ್ತ್ರಾಸ್ತ್ರಗಳನ್ನು ನವೆಂಬರ್ 01 ರೊಳಗೆ ಸರ್ಕಾರಕ್ಕೆ ಒಪ್ಪಿಸಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು, ಸೆಪ್ಟಂಬರ್ 11 (ಕರ್ನಾಟಕ ವಾರ್ತೆ): ರಾಜ್ಯದ ಜನತೆ  ಪರವಾನಗಿ ಇಲ್ಲದೆ ತಮ್ಮಲ್ಲಿ ಅಕ್ರಮವಾಗಿಟ್ಟುಕೊಂಡಿರುವ ಬಂದೂಕು ಶಸ್ತ್ರಾಸ್ತ್ರಗಳನ್ನು ನವೆಂಬರ್ 01 ರೊಳಗೆ ಸರ್ಕಾರಕ್ಕೆ ಒಪ್ಪಿಸಲು ಅವಕಾಶ ನೀಡಿದೆ. ನವೆಂಬರ್ 01ರ ವರೆಗೆ ಬಂದೂಕುಗಳನ್ನು ಒಪ್ಪಿಸದಿದ್ದರೆ ಮನೆಮನೆ ಶೋಧ ಮಾಡಿ ವಶಪಡಿಸಿಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾವಾಗಿಯೇ ಒಪ್ಪಿಸಿದರೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಇಂದು ಅರಣ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ 2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸಿ  ಮಾತನಾಡಿದ ಅವರು, ಈ ಹಿಂದೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ರಾಮಮೂರ್ತಿ ಅವರು ಅನೇಕರು ಅಕ್ರಮ ನಾಡ ಬಂದೂಕುಗಳನ್ನು ಹೊಂದಿರುವ ಬಗ್ಗೆ  ನನಗೆ ತಿಳಿಸಿದ್ದರು. ಆಗ ನಾನು ನನ್ನ ಕ್ಷೇತ್ರದಲ್ಲಿ 300 ಕ್ಕೂ ಹೆಚ್ಚು ಬಂದೂಕುಗಳನ್ನು ಜನರಿಂದ ಸರ್ಕಾರಕ್ಕೆ ಒಪ್ಪಿಸಿದ್ದೆ ಎಂದರು.

ರಾಜ್ಯದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನವನ್ನು ನಾವೆಂದಿಗೂ ಮರೆಯುವುದಿಲ್ಲ. ಇಂದು ಮಾನವ ವನ್ಯಜೀವಿ ಸಂಘರ್ಷ ತೀವ್ರವಾಗಿದ್ದು, ಮನುಷ್ಯನ ಉಳಿವಿನೊಂದಿಗೆ ವನ್ಯಜೀವಿ ರಕ್ಷಣೆಯು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ಕರ್ತವ್ಯ ಸಾಧನೆಯ ಹಾದಿಯಲ್ಲಿ ಅನೇಕ ಸಂದರ್ಭಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂಧಿಗಳ ತ್ಯಾಗ ಮತ್ತು ಭದ್ರತೆಯಿಂದ ಕರ್ತವ್ಯ ನಿರ್ವಹಿಸಿ ಈ ಸಂಪತ್ತನ್ನು ರಕ್ಷಿಸಲು ಸದಾ ಸಿದ್ದರಿದ್ದು, ಅದಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ.

ನಮ್ಮ ರಾಜ್ಯದಲ್ಲಿ ಅರಣ್ಯ ಸಂಪತ್ತಿನ ರಕ್ಷಣೆ ಮಾಡುವಾಗ ಕಳ್ಳಕಾಕರ, ವನ್ಯಪ್ರಾಣಿಗಳ ಹಾಗೂ ಇತರೆ ದುಷ್ಟ ಶಕ್ತಿಗಳ ದಾಳಿಗೆ ಸಿಲುಕಿ ಈವರೆಗೆ 65 ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಇದರಲ್ಲಿ ಅಕ್ರಮ ಬಂದೂಕುಗಳಿಂದಲೂ ಸಹ ಮರಣ ಹೊಂದಿರುವುದು ನಿಮಗೆ ತಿಳಿದಿದೆ ಎಂದರು.

“ತೇಗದ ಸಿರಿ” ಯೋಜನೆ ಯಶಸ್ಸಿಗೆ ಎಲ್ಲಾ ಅರಣ್ಯ ಅಧಿಕಾರಿಗಳು ಶ್ರಮಿಸಬೇಕು. ಇದರಿಂದ ರೈತರಿಗೂ  ಲಾಭವಾಗುತ್ತದೆ.  ಅರಣ್ಯ ಇಲಾಖೆಯ ಆದಾಯವನ್ನು ಹೆಚ್ಚಿಸುವ ಕಡೆ ಗಮನ ನೀಡಬೇಕು.  ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅರಣ್ಯ ಅಂಚಿನ ಜನರೊಂದಿಗೆ ಸ್ನೇಹಿತರಂತೆ ಇರಬೇಕು. ಅರಣ್ಯ ಒತ್ತುವರಿ ಪ್ರಕರಣಗಳನ್ನು ಕಾನೂನು ಪ್ರಕಾರ ಬಗೆಹರಿಸೋಣ. ಅವರ ಮೇಲೆ ಒತ್ತಡ ಹೇರಬೇಡಿ ಎಂದರು.

ಅರಣ್ಯ ಸಚಿವರು ಸಿಬ್ಬಂದಿಯ ಭತ್ಯೆಯ ವಿಚಾರವಾಗಿ ಮನವಿ ಮಾಡಿದ್ದು, ಭತ್ಯೆಯ ವಿಚಾರವಾಗಿ ಆರ್ಥಿಕ ಇಲಾಖೆಯ ಬಳಿ ಚರ್ಚೆ ನಡೆಸಿ ಪೊಲೀಸ್ ಇಲಾಖೆಯನ್ನೊಳಗೊಂಡಂತೆ ಅತಿ ಶೀಘ್ರವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ಅರಣ್ಯ ಮತ್ತು ವನ್ಯಜೀವಿಗಳು ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಸಮರ್ಪಣೆ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತ್ಯಾಗ ಮತ್ತು ಬಲಿದಾನ ಸ್ಮರಣೆಗಾಗಿ ಪ್ರತೀ ವರ್ಷ ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.

ನಮ್ಮ ರಾಜ್ಯವು ಸಮೃದ್ಧ ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ಹೊಂದಿರುವ ರಾಜ್ಯವಾಗಿದ್ದು, ಕರ್ನಾಟಕ ಅರಣ್ಯ ಇಲಾಖೆಯು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತನ್ನದೇ ಆದ ಸುದೀರ್ಘ ಅಗಾಧ ಇತಿಹಾಸವನ್ನು ಹೊಂದಿದೆ. ನಮ್ಮ ರಾಜ್ಯದಲ್ಲಿ ಪ್ರಮುಖ ವನ್ಯಪ್ರಾಣಿಗಳಾದ ಆನೆ, ಹುಲಿ ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಳವಾಗಿದ್ದು, ಆನೆಗಳ ಸಂಖ್ಯೆಯಲ್ಲಿ ನಮ್ಮ ರಾಜ್ಯವು ಮೊದಲನೇ ಸ್ಥಾನದಲ್ಲಿದ್ದು, ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಒಟ್ಟು 05 ರಾಷ್ಟ್ರೀಯ ಉದ್ಯಾನವನಗಳು, 38 ವನ್ಯಜೀವಿ ಅಭಯಾರಣ್ಯಗಳು, 19 ಸಂರಕ್ಷಿತ ಪ್ರದೇಶಗಳು, 01 ಸಮುದಾಯ ಅರಣ್ಯ ಪ್ರದೇಶ ಇರುತ್ತದೆ.  ಇದರಲ್ಲಿ 05 ಹುಲಿ ಸಂರಕ್ಷಿತ ಪ್ರದೇಶ ಮತ್ತು 02 ಆನೆ ಸಂರಕ್ಷಿತ ಪ್ರದೇಶ ಒಳಗೊಂಡಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಫರ್ವೇಜ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಡಾ.ಮೀನಾಕ್ಷಿ ನೇಗಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *