Sep 12 2026 03 08 51 PM e1789206586102

ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ….!

National - ಕನ್ನಡ POLATICAL STATE
  • ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ವಿಜಯೇಂದ್ರ
  • ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರ ಆರೋಪ

ಬೆಂಗಳೂರು: ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಯಾವುದೇ ಮಟ್ಟಕ್ಕೂ ಇಳಿಯುತ್ತಿದೆ. ಆದರೆ ಬಿಜೆಪಿ **‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’** ಎಂಬ ಧ್ಯೇಯದೊಂದಿಗೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ **ಬಿ.ವೈ. ವಿಜಯೇಂದ್ರ** ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದ **‘ವಂದೇ ಮಾತರಂ’** ಗೀತೆಗೆ ಕಾಂಗ್ರೆಸ್ ಗೌರವ ನೀಡುತ್ತಿಲ್ಲ ಎಂದು ಟೀಕಿಸಿದರು.

ಮೀಸಲಾತಿ ಸೇರಿದಂತೆ ವಿವಿಧ ವಿಚಾರಗಳಲ್ಲಿ ಕಾಂಗ್ರೆಸ್ ಸರ್ಕಾರ ಹೇಳುವುದೊಂದು, ನಡೆದುಕೊಳ್ಳುವುದೊಂದು ಮಾಡುತ್ತಿದೆ. ಬಿಜೆಪಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ದೇಶವನ್ನು ಮುನ್ನಡೆಸಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಒಂದು ಸಮುದಾಯವನ್ನು ಓಲೈಸಿ ಮತ ಪಡೆಯಲು ಮುಂದಾಗಿದೆ ಎಂದು ವಿಜಯೇಂದ್ರ ದೂರಿದರು.

ಭಾರತ್ ಜೋಡೊ’ ಹೆಸರಿನಲ್ಲಿ ಜನರಿಗೆ ಕಿವಿ ಮೇಲೆ ಹೂ

ಗ್ಯಾರಂಟಿ ಯೋಜನೆಗಳಿಲ್ಲದೆ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್‌ಗೆ ಮನವರಿಕೆಯಾಗಿದೆ. ಹೀಗಾಗಿ ‘ಭಾರತ್ ಜೋಡೊ’ ಸಂಘಗಳ ಮೂಲಕ ರಾಜ್ಯದ ಜನರ ಕಿವಿಗೆ ಹೂ ಇಟ್ಟು ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಮತ್ತು ಅಭಿವೃದ್ಧಿಯ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

 ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಬಿಜೆಪಿ ಕೊಡುಗೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸಲಾಗಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರ ಸಂಪುಟದಲ್ಲಿರುವ 71 ಸಚಿವರಲ್ಲಿ 37 ಮಂದಿ ಹಿಂದುಳಿದ ಸಮುದಾಯಕ್ಕೆ ಸೇರಿದವರು ಎಂದು ವಿಜಯೇಂದ್ರ ಹೇಳಿದರು. ವಿಶ್ವಕರ್ಮ ಸೇರಿದಂತೆ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.

ಗೊಲ್ಲ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ:

ಗೊಲ್ಲ ಸಮುದಾಯ ಸ್ವಾಭಿಮಾನಕ್ಕೆ ಮತ್ತೊಂದು ಹೆಸರಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮುದಾಯ ಮತ್ತಷ್ಟು ಪ್ರಗತಿ ಸಾಧಿಸಬೇಕು. ರಾಜಕೀಯವಾಗಿಯೂ ಸೂಕ್ತ ಪ್ರಾತಿನಿಧ್ಯ ದೊರೆಯಬೇಕು ಎಂದು ವಿಜಯೇಂದ್ರ ಹೇಳಿದರು.

ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ನೀಡಿರುವಂತೆ ಗೊಲ್ಲ ಸಮುದಾಯಕ್ಕೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಮುಂದಿನ ದಿನಗಳಲ್ಲಿ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದರು. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಒಂದು ಕಡೆ ಚಿವುಟುತ್ತಾ ಮತ್ತೊಂದೆಡೆ ಕಣ್ಣೀರು ಒರೆಸುವ ನಾಟಕ ಮಾಡುತ್ತಿದೆ ಎಂದು ಅವರು ಟೀಕಿಸಿದರು.

 ‘ಮತ್ತೆ ಸಿಎಂ’ ಎಂಬ ಡಿ.ಕೆ.ಶಿವಕುಮಾರ್ ಕನಸು ನನಸಾಗದು

2028ರ ವಿಧಾನಸಭಾ ಚುನಾವಣೆಯ ನಂತರ ಮತ್ತೆ ತಾನೇ ಮುಖ್ಯಮಂತ್ರಿ ಆಗಬೇಕು ಎಂಬ ಕನಸನ್ನು ಡಿ.ಕೆ. ಶಿವಕುಮಾರ್ ಕಾಣುತ್ತಿದ್ದಾರೆ. ಆದರೆ ಆ ಕನಸು ನನಸಾಗುವುದಿಲ್ಲ ಎಂಬ ಅರಿವು ಅವರಿಗೂ ಇದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗೊಲ್ಲ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಜೆಪಿಯ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಪಂಚ ಗ್ಯಾರಂಟಿಗಳ ನೆಪದಲ್ಲಿ ಕಾಂಗ್ರೆಸ್ ರಾಜ್ಯದ ಜನರಿಗೆ ದ್ರೋಹ ಮಾಡಿದೆ ಎಂದು ಅವರು ಆರೋಪಿಸಿದರು.

ಇದೇ ವೇಳೆ, ಸರ್ಕಾರದ ಅಧಿಕಾರ ಬಳಸಿಕೊಂಡು ಟನಲ್ ರಸ್ತೆ, ಬಿಡದಿ ಟೌನ್‌ಶಿಪ್ ಹಾಗೂ ಕನಕಪುರ ವಿಮಾನ ನಿಲ್ದಾಣದಂತಹ ಯೋಜನೆಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಆರೋಪಿಸಿದರು.

ರಾಜ್ಯದ ಹಲವು ಭಾಗಗಳಲ್ಲಿ ಇಸ್ಪೀಟ್ ದಂಧೆ ಹಾಗೂ ಮಾದಕ ವಸ್ತುಗಳ ಅಕ್ರಮ ಹೆಚ್ಚುತ್ತಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ. ಯುವಕರಿಗೆ ಸಂಘಗಳ ಮೂಲಕ ಹಣ ನೀಡುವುದಾಗಿ ಹೇಳುವ ಸರ್ಕಾರ, ಖಾಲಿ ಇರುವ ಸುಮಾರು ಎರಡೂವರೆ ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿಲ್ಲ ಎಂದು ದೂರಿದರು.

17ರಿಂದ ಸೇವಾ ಸಂಕಲ್ಪ ಅಭಿಯಾನ: ಬಿ.ವೈ.ವಿಜಯೇಂದ್ರ

 ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಜೀ ಅವರ ಅಪೇಕ್ಷೆಯಂತೆ ಇದೇ ಸೆ.17ರಿಂದ ಅಕ್ಟೋಬರ್ 17ರವರೆಗೆ ಸೇವಾ ಸಂಕಲ್ಪ ಅಭಿಯಾನವನ್ನು ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ 25 ವರ್ಷಗಳ ಸಾರ್ವಜನಿಕ ಸೇವೆಯ ಹಿನ್ನೆಲೆಯಲ್ಲಿ ಅಭಿಯಾನ ನಡೆಯಲಿದೆ. ಪ್ರತಿ ಬೂತ್‍ನಲ್ಲಿ ಹಾಗೂ ರಾಜ್ಯದ ಮನೆಮನೆಗಳಲ್ಲಿ ಆಶೀರ್ವಾದದ ದೀಪ ಸೇರಿ 12 ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.
‘ಭಾರತದ ಕನಸು’ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಭಾಷಣ ಸ್ಪರ್ಧೆ ಆಯೋಜಿಸಲಾಗುವುದು. ನಮೋ ಸೇವಾ ಬೀದಿನಾಟಕ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರದ ಪರಿವರ್ತನೆಯನ್ನು ತಿಳಿಸಲಾಗುವುದು. ಅಂಗನವಾಡಿ ಮಿಲನ ಎಂಬ ಕಾರ್ಯಕ್ರಮವನ್ನೂ ಏರ್ಪಡಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
‘ಬದಲಾವಣೆಯ ಕಥೆ’ ಮೂಲಕ ಮೋದಿಜೀ ಅವರ ಯೋಜನೆಗಳು ಮತ್ತು ಫಲಾನುಭವಿಗಳ ಮೇಲೆ ಆದ ಪರಿಣಾಮವನ್ನು ತಿಳಿಸಿಕೊಡಲಿದ್ದೇವೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ, ಸೇವಾ ಜ್ಯೋತಿ ಯಾತ್ರೆಯೂ ನಡೆಯಲಿದೆ. ಇದು ರಾಷ್ಟ್ರವ್ಯಾಪಿ ಯಾತ್ರೆ ಎಂದು ತಿಳಿಸಿದರು.
ವಾರಣಾಸಿಗೆ ನದಿಗಳ ಪವಿತ್ರ ಜಲವನ್ನು ಒಯ್ಯುವ ಯಾತ್ರೆಯೂ ಇದೆ. ಸೇವೆಯೇ ನನ್ನ ಕೊಡುಗೆ ಎಂಟನೆಯದು. ಇದರಡಿ ರಕ್ತದಾನ ಶಿಬಿರ, ಸಸಿ ನೆಡುವುದು, ಸ್ವಚ್ಛತಾ ಕಾರ್ಯಕ್ರಮ, ಆರೋಗ್ಯ ಶಿಬಿರ, ಪ್ಲಾಸ್ಟಿಕ್ ಜಾಗೃತಿ, ಸೈಬರ್ ಭದ್ರತಾ ಜಾಗೃತಿ ಸೇರಿ 25 ಸೇವಾ ಚಟುವಟಿಕೆಗಳಿರುತ್ತವೆ ಎಂದು ವಿವರಿಸಿದರು.
ಸೇವಾ ಸೇತು ಅಭಿಯಾನದ ಮೂಲಕ ಕೇಂದ್ರ ಸರಕಾರದ ಜನಕಲ್ಯಾಣ ಯೋಜನೆಗಳ ಮಾಹಿತಿ ಕೊಡಲಿದ್ದೇವೆ. ಅರ್ಹರನ್ನು ನೋಂದಣಿ ಮಾಡಲಿದ್ದೇವೆ. ರಂಗೋಲಿ ರಾಷ್ಟ್ರ ಎಂಬ ಇನ್ನೊಂದು ಕಾರ್ಯಕ್ರಮವೂ ಇದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಆವಿಷ್ಕಾರ ಸವಾಲು ಎಂಬ ಕಾರ್ಯಕ್ರಮದಡಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ನವ ಉದ್ಯಮಿಗಳು ಭಾಗವಹಿಸಬಹುದು ಎಂದರು. ಜನಸೇವಕ ಮಹಾಕುಂಭ ಎಂಬ 12ನೇ ಕಾರ್ಯಕ್ರಮವಿದ್ದು, ಪಂಚಾಯಿತಿ ಮಟ್ಟದಿಂದ ಸಂಸದರವರೆಗೆ ಎಲ್ಲ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ಹೇಳಿದರು. ಸಾಮೂಹಿಕವಾಗಿ ವಂದೇ ಮಾತರಂ ಹಾಡುವ ಕಾರ್ಯಕ್ರಮ ನಡೆಯಲಿದ್ದು, 1.25 ಲಕ್ಷ ಜನಪ್ರತಿನಿಧಿಗಳು ಭಾಗವಹಿಸಿ ಹಾಡಿನ ಎಲ್ಲ ಚರಣಗಳನ್ನು ಹಾಡುತ್ತಾರೆ. ಇದೊಂದು ವಿಶ್ವ ದಾಖಲೆ ಆಗಲಿದೆ ಎಂದು ತಿಳಿಸಿದರು.
ಮೋದಿಜೀ ಅವರು ಯಾವುದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲದೇ, ಸ್ವಚ್ಛ ಚಾರಿತ್ರ್ಯವಂತ ಆಡಳಿತವನ್ನು ನೀಡಿದ್ದಾರೆ. ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ಮುಂದಿಟ್ಟು, ದೇಶದಪ್ರಧಾನ ಸೇವಕ ಎಂಬ ಭಾವನೆಯಿಂದ ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೇ ಭಾರತದ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್, ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಹಾಗೂ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಗೊಲ್ಲ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *