ಟೆಡ್ ಎಕ್ಸ್ ಟಾಕ್ಸ್: ‘ಗಡಿ ಮೀರಿದ ವಿಚಾರಗಳು’ – ಚಿಂತನ ಮಂಥನ
- ಖಗೋಳ ಭೌತಶಾಸ್ತ್ರದ ಕೌತುಕಗಳ ಕುರಿತು ಆರ್ತಿತ್ ರಾಜನಾಥ್ ಎಂ ಚಿಂತನೆ
ಬೆಂಗಳೂರು, ಸೆ. 12: ವಿಜ್ಞಾನ, ಶಿಕ್ಷಣ, ತಂತ್ರಜ್ಞಾನ, ನಾಯಕತ್ವ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ವಿವಿಧ ಕ್ಷೇತ್ರಗಳ ಕುರಿತು ಚಿಂತನ-ಮಂಥನ ನಡೆಸುವ ‘ಟೆಡ್ ಎಕ್ಸ್ ಟಾಕ್ಸ್–ಗಡಿ ಮೀರಿದ ವಿಚಾರಗಳು’ ಕಾರ್ಯಕ್ರಮ ಬೆಂಗಳೂರಿನ ಸೇಂಟ್ ಪೌಲ್ಸ್ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕ್ರೈಸ್ಟ್ ಐಎಸ್‌ಸಿ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಿರಿಯ ಭೌತಶಾಸ್ತ್ರ ಸಂವಹನಕಾರರಲ್ಲಿ ಒಬ್ಬರಾದ ಆರ್ತಿತ್ ರಾಜನಾಥ್ ಎಂ, ಖಗೋಳ ಭೌತಶಾಸ್ತ್ರದ ಕುರಿತು “ಏಕೆ ಎಂದು ಕೇಳುವುದನ್ನು ದಯವಿಟ್ಟು ನಿಲ್ಲಿಸಿ” ಎಂಬ ವಿಷಯದಡಿ ಹಲವು ಕೌತುಕಕಾರಿ ಹಾಗೂ ವೈಜ್ಞಾನಿಕ ವಿಚಾರಗಳನ್ನು ಹಂಚಿಕೊಂಡರು.
ವಿಜ್ಞಾನ ಕ್ಷೇತ್ರದಲ್ಲಿ ಜೀವನಪರ್ಯಂತ ಕಲಿಕೆ ಅಗತ್ಯವಿದ್ದು, ಎಲ್ಲ ಕ್ಷೇತ್ರಗಳಲ್ಲೂ ಸಂಶೋಧನಾತ್ಮಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಆರ್ತಿತ್ ಅಭಿಪ್ರಾಯಪಟ್ಟರು.
‘ಗಡಿ ಮೀರಿದ ವಿಚಾರಗಳು’ ಕಾರ್ಯಕ್ರಮವು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಸೃಜನಶೀಲತೆ, ನಾಯಕತ್ವ, ಶಿಕ್ಷಣ, ತಂತ್ರಜ್ಞಾನ, ಸಾಮಾಜಿಕ ಜವಾಬ್ದಾರಿ ಹಾಗೂ ವೈಯಕ್ತಿಕ ಪರಿವರ್ತನೆಯ ಮಹತ್ವವನ್ನು ಒತ್ತಿಹೇಳಿತು. ಜಾಗತಿಕ ಪ್ರಸಿದ್ಧ ವ್ಯಕ್ತಿಗಳಷ್ಟೇ ಅಲ್ಲದೆ, ಜನಸಾಮಾನ್ಯರ ವಿಚಾರಗಳು ಮತ್ತು ಸ್ಥಳೀಯ ಧ್ವನಿಗಳಿಗೆ ವೇದಿಕೆ ಕಲ್ಪಿಸುವುದು ಟೆಡ್ ಎಕ್ಸ್ ಕಾರ್ಯಕ್ರಮಗಳ ವಿಶೇಷತೆಯಾಗಿದೆ.
ವೃತ್ತಿಪರ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಪರಿಣಿತರಾದ ರೆವೆರೆಂಡ್ ಫಾದರ್ ಡಾ. ಜೋಸೆಫ್ ಟಿ.ಸಿ., ಡಾ. ಮಹಾಂತೇಶ್, ಪರಿಸರವಾದಿ ರೇವತಿ ಕಾಮತ್, ಲೇಖಕ ಹಾಗೂ ಪ್ರೇರಕ ಭಾಷಣಕಾರ ರಾಮೇಂದ್ರ ಕುಮಾರ್, ಫ್ಲೋಲೈಫ್ ಇಂಡಿಯಾದ ಸಂಸ್ಥಾಪಕಿ ವಿಶಾಲ್ ರಜನಿ, ಕೃತಕ ಬುದ್ಧಿಮತ್ತೆ ಸಂಶೋಧಕಿ ಅನನ್ಯ ವಿನೋದ್, ಸೌರಭ್ ಗುಪ್ತ ಹಾಗೂ ಅಜಯ್ ಶ್ರೀನಿವಾಸ್ ಸೇರಿದಂತೆ ಹಲವರು ತಮ್ಮ ಅನುಭವ ಮತ್ತು ನವೀನ ವಿಚಾರಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಸೇಂಟ್ ಪೌಲ್ಸ್ ಕಾಲೇಜಿನ ಕ್ಯುರೇಟರ್ ಹಾಗೂ ಪರವಾನಗಿದಾರರಾದ ಡಾ. ಪ್ರಶಾಂತ್ ವೇಣುಗೋಪಾಲ್, ಡಾ. ವಿನೋದ್ ಕುಮಾರ್, ಶ್ರೀಮತಿ ಅನನ್ಯ ಹಾಗೂ ಶ್ರೀ ಶಿನೋಸ್ ಆಯೋಜಿಸಿದ್ದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಪೋಷಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
