Amanikere 3

ತುಮಕೂರು ದಸರಾದ ಮೆರುಗು ಹೆಚ್ಚಿಸಲು ಸಂಗೀತ ಕಾರಂಜಿ….!

DISTRICT NEWS ತುಮಕೂರು

ತುಮಕೂರು ದಸರಾದ ಮೆರುಗು ಹೆಚ್ಚಿಸಲು ಸಂಗೀತ ಕಾರಂಜಿ ಹಾಗೂ ತುಮಕೂರು ಸ್ಕ್ವೇರ್ – ಡಾ: ಜಿ. ಪರಮೇಶ್ವರ

ತುಮಕೂರು(ಕ.ವಾ.)ಸೆ.11: ತುಮಕೂರು ದಸರಾ ಹಬ್ಬದ ಪೂರ್ವ ತಯಾರಿಯಾಗಿ ನಗರದ ಅಮಾನಿಕೆರೆಯಲ್ಲಿ ನವೀನ ರೀತಿಯ ತೇಲುವ ‘ಸಂಗೀತ ಕಾರಂಜಿ’ ಅಳವಡಿಕೆ ಹಾಗೂ ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ ‘ತುಮಕೂರು ಸ್ಕ್ವೇರ್’ ನಿರ್ಮಾಣ ಸೇರಿ 2 ಮಹತ್ವದ ಕಾರ್ಯ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಹೇಳಿದರು.
ಅಮಾನಿಕೆರೆಯಲ್ಲಿ ಶುಕ್ರವಾರ ತೇಲುವ ಸಂಗೀತ ಕಾರಂಜಿ ಹಾಗೂ ತುಮಕೂರು ಸ್ಕ್ವೇರ್ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಗಳನ್ನು ಕೇವಲ ದಸರಾ ಹಬ್ಬಕ್ಕಾಗಿ ಮಾಡುತ್ತಿರುವುದಲ್ಲ. ಯೋಜನೆಗಳು ನಗರವಾಸಿಗಳನ್ನು ರಂಜಿಸಲಿದೆಯಲ್ಲದೆ, ನಗರದ ಸೌಂದರ್ಯವೂ ವೃದ್ಧಿಯಾಗಲಿದೆ ಎಂದರು.
ಅಮಾನಿಕೆರೆಯಲ್ಲಿ ಪ್ರಸ್ತುತ ಪ್ರತೀ ಶನಿವಾರ, ಭಾನುವಾರ ಸಂಗೀತ ಕಾರಂಜಿ ಕಾರ್ಯಾಚರಿಸುವಂತೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಕಾರಂಜಿಯು 100 ಮೀಟರ್‍ಗೂ ಹೆಚ್ಚು ಎತ್ತರಕ್ಕೆ ಚಿಮ್ಮಲಿದ್ದು, ಸುಮಾರು 300 ಅಡಿ ವಿಸ್ತೀರ್ಣಕ್ಕೆ ಹರಡಲಿದೆ. ಕಣ್ಣುಗಳಿಗೆ ರಸದೌತಣ ನೀಡಲಿದೆ ಎಂದರು.
ವಿದೇಶಗಳ ಪ್ರಮುಖ ನಗರಗಳಲ್ಲಿ ಜನಾಕರ್ಷಿಸಲು ಕೇಂದ್ರಗಳ ನಿರ್ಮಾಣ, ನ್ಯೂಯಾರ್ಕ್‍ನಲ್ಲಿ ನಿರ್ಮಿಸಿರುವ ನ್ಯೂಯಾರ್ಕ್ ಸ್ಕ್ವೇರ್ ಮಾದರಿಯಲ್ಲಿ ತುಮಕೂರಿನಲ್ಲಿಯೂ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಸ್ಕ್ವೇರ್ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ತುಮಕೂರು ಕೂಡ ಆಧುನಿಕತೆಯಲ್ಲಿ ಮುಂದಿರುವುದನ್ನು ಪ್ರದರ್ಶಿಸಲು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶ್ರೀ ಶಿವಕುಮಾರಸ್ವಾಮಿ ವೃತ್ತ(ಎಸ್‍ಎಸ್ ವೃತ್ತ)ದಲ್ಲಿ ಬೃಹತ್ ಡಿಸ್‍ಪ್ಲೇ ಬೋರ್ಡ್ ಅಳವಡಿಸಲಾಗುವುದು. ಈ ವೃತ್ತದ ಹೆಸರನ್ನು ಬದಲಾಯಿಸುವ ಯಾವುದೇ ಉದ್ದೇಶವಿಲ್ಲ. ಎಸ್‍ಎಸ್ ಸರ್ಕಲ್ ಎಂಬುದು ಹಾಗೆಯೇ ಇರಲಿದೆ. ಆದರೆ ತುಮಕೂರು ಸ್ಕ್ವೇರ್ ಎಂಬ ಇಲೆಕ್ಟ್ರಾನಿಕ್ ಡಿಸ್‍ಪ್ಲೇ ಬೋರ್ಡ್ ಅನ್ನು ಎಲ್ಲ ದಿಕ್ಕುಗಳಲ್ಲಿಯೂ ಅಳವಡಿಸಲಾಗುತ್ತದೆ ಎಂದರು.
ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಡಿಸ್‍ಪ್ಲೇ ಬೋರ್ಡ್‍ನಲ್ಲಿ ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆ, ಐತಿಹಾಸಿಕ ಪ್ರಾಮುಖ್ಯತೆ, ಪ್ರವಾಸಿ ಕೇಂದ್ರ, ಐತಿಹಾಸಿಕ ಸ್ಥಳ, ದೇವಸ್ಥಾನ, ಸಂಸ್ಕøತಿಯನ್ನು ಪ್ರದರ್ಶಿಸಲಾಗುವುದು. ಮನರಂಜನೆಯ ವೇದಿಕೆಯಾಗಿಯೂ ಉಪಯೋಗಿಸಲಾಗುವುದು. ಇದರಿಂದ ತುಮಕೂರಿನ ಸಾಮಾನ್ಯ ಜನರಿಗೆ ದೂರದ ಊರುಗಳ ಪರಿಚಯ ಸಿಗಲಿದೆ. ಗೋಳಗುಮ್ಮಟದಂತಹ ಐತಿಹಾಸಿಕ ಸ್ಥಳಗಳನ್ನು ಇಲ್ಲಿಂದಲೇ ನೋಡಬಹುದು ಎಂದರು.
ಸುಮಾರು 23 ಲಕ್ಷ ಪಿಂಚಣಿದಾರರ ಪಿಂಚಣಿ ಸ್ಥಗಿತಗೊಳಿಸಿರುವ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಸರ್ಕಾರವು ಗರಿಷ್ಠ ಆದಾಯ ಮಿತಿಯನ್ನು 33 ಸಾವಿರ ರೂ.ಗಳಿಂದ 1.2 ಲಕ್ಷ ರೂ. ಗಳಿಗೆ ಏರಿಕೆ ಮಾಡಿದೆ. ಇದೀಗ ಪಿಂಚಣಿ ಸ್ಥಗಿತಗೊಂಡಿರುವ ಪಿಂಚಣಿದಾರರು ಸೂಕ್ತ ವಯಸ್ಸಿನ ದೃಢೀಕರಣ ಪತ್ರ, ಆದಾಯ ಮತ್ತು ವಿಳಾಸ ಪ್ರಮಾಣಪತ್ರಗಳನ್ನು ಒದಗಿಸಿದರೆ ಪಿಂಚಣಿ ಮುಂದುವರಿಯಲಿದೆ. ವಯಸ್ಸು ಆಗದವರು, ಟ್ಯಾಕ್ಸ್ ಕಟ್ಟುವವರು, ಸರ್ಕಾರಿ ನೌಕರರು ಪಿಂಚಣಿ ಪಡೆಯುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಿ. ಚಂದ್ರಶೇಖರ್ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪಾಲಿಕೆ ಆಯುಕ್ತೆ ಶುಭ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *