IMG 20230114 WA0014

JD(S) :ಕಾಂಗ್ರೆಸ್ ಶಕ್ತಿ 60-70 ಸೀಟು ಮಾತ್ರ; ಜೆಡಿಎಸ್ ಪಕ್ಷಕ್ಕೆ ಬಹುಮತ ಬರುತ್ತದೆ…!

POLATICAL STATE

ರಾಜ್ಯಕ್ಕೆ ಮೋದಿ. ಅವರು ನೂರು ಬಾರಿ ಬಂದರೂ ಬಿಜೆಪಿ ಗೆಲ್ಲುವುದಿಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ

ಕಾಂಗ್ರೆಸ್ ಶಕ್ತಿ 60-70 ಸೀಟು ಮಾತ್ರ; ಜೆಡಿಎಸ್ ಪಕ್ಷಕ್ಕೆ ಬಹುಮತ ಬರುತ್ತದೆ ಎಂದು ಮಾಜಿ ಸಿಎಂ ವಿಶ್ವಾಸ

ಪ್ರೆಸ್ ಕ್ಲಬ್ ಮಾಧ್ಯಮ ಸಂವಾದದಲ್ಲಿ ಭಾಗಿ


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ನೂರು ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಜೆಡಿಎಸ್ ಪಕ್ಷಕ್ಕೆ ಯಾವ ಆತಂಕವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹೆಸರಿಟ್ಟುಕೊಂಡೇ ರಾಜ್ಯದ ಬಿಜೆಪಿ ನಾಯಕರು ಚುನಾವಣೆಗೆ ಹೋಗುತ್ತಿದ್ದಾರೆ. ಮೋದಿ ನಾಮಬಲ ಇಲ್ಲದಿದ್ದರೆ ರಾಜ್ಯ ಬಿಜೆಪಿ ಶೂನ್ಯ. ಕಾಂಗ್ರೆಸ್ ನವರು ಭಾರತ್ ಜೋಡೋ ಅಂತಾರೆ. ಆದರೆ ನಾವು ಪಂಚರತ್ನ ಕಾರ್ಯಕ್ರಮಗಳ ಆಧಾರದ ಮೇಲೆ ಜನರ ಬಳಿಗೆ ಹೋಗುತ್ತಿದ್ದೇವೆ ಎಂದರು.

ಬಿಜೆಪಿಯವರ ನಡವಳಿಕೆಯಿಂದ ಜನ ಬೇಸತ್ತು ಹೋಗಿದ್ದಾರೆ. ಮಂಡ್ಯಕ್ಕೆ ಅಮಿತ್ ಶಾ ಬಂದು ಹೋಗಿರೋದು ಯಾವುದೇ ಪರಿಣಾಮ ಬೀರಲ್ಲ. ಬೇಕಿದ್ದರೆ ಬರದಿಟ್ಟುಕೊಳ್ಳಿ, ಮಂಡ್ಯದಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಈ ಬಾರಿ ಜೆಡಿಎಸ್ ಮತ್ತೊಮ್ಮೆ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದರು.

ಬಡತನ ನಿವಾರಣೆ ನನ್ನ ಅಜೆಂಡಾ:

ನನ್ನ ನಿಲುವು ಬಡತನ ಹೋಗಲಾಡಿಸುವುದು. ಇದು ನನ್ನ ಅಜೆಂಡಾ. ನಾಡಿನ ಜನತೆ ಏನು ಬಯಸುತ್ತಾರೋ ಅದನ್ನು ಈಡೇರಿಸುವ ನಿಲುವು ನಮ್ಮದು. ಆದರೆ ಎರಡೂ ರಾಷ್ಟ್ರೀಯ ಪಕ್ಷಗಳು ಕೇವಲ ರಾಜಕೀಯ ಮಾಡಿಕೊಂಡು ಹೋಗುತ್ತಿವೆ. ಇದು ಚೆನ್ನಾಗಿ ಅರ್ಥವಾಗುತ್ತಿದೆ ಎಂದರು ಅವರು.

IMG 20230114 WA0008

ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇಲ್ಲ:

2006ರಲ್ಲಿ ನಾವು 58 ಸ್ಥಾನ ಗೆದ್ದಿದ್ದೆವು. ಆಗ ಎಂ.ಪಿ.ಪ್ರಕಾಶ್ ಸೇರಿದಂತೆ ಆನೇಕ ನಾಯಕರು ಇದ್ದರು. ನಂತರ ಬಿಟ್ಟು ಹೋದರು. 2008,2013 ಹಾಗೂ 2018ರಲ್ಲಿ ನಮ್ಮದು ಏಕಾಂಗಿ ಹೋರಾಟ ಆಯಿತು. ಏಕಾಂಗಿ ಹೋರಾಟದಲ್ಲೂ ನಾವು 25 ಸ್ಥಾನಗಳನ್ನು ಗೆದ್ದಿದ್ದೇವೆ. ಕಾಂಗ್ರೆಸ್ ಗೆದ್ದಿದ್ದು ನಮ್ಮ ದುಡಿಮೆಯಿಂದ. ಬಿ.ಎಸ್.ಯಡಿಯೂರಪ್ಪ ಆಗ ಬಿಜೆಪಿ ಬಿಟ್ಟಿದ್ದರಿಂದ ಅವರು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

2018ತಳ್ಳಿ ಬಿಜೆಪಿ ಬಿ ಟೀಂ ಅವರ ಪರ ಮತ ಹಾಕಬೇಡಿ ಅಂತ ಇಡೀ ರಾಜ್ಯದಲ್ಲಿ ನಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದರು. ಆದರೂ ನಮ್ಮ ಪಕ್ಷ ಏಕಾಂಗಿ ಹೋರಾಟ ನಡೆಸಿ ತೃಪ್ತಿಕರ ಸಾಧನೆ ಮಾಡಿತು. ಆದರೆ, ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಶಕ್ತಿ 60-70 ಸೀಟು ಮಾತ್ರ. ನಮಗೆ ಹಣದ ಕೊರತೆ ಇತ್ತು. ನಮಗೆ ಜನರ ಪ್ರೀತಿಯ ಕೊರತೆ ಇಲ್ಲ. ನಾನು ಈಗ ನಿತ್ಯ ಹಳ್ಳಿಗಳ ಕಡೆ ಹೋಗುತ್ತಿದ್ದೇನೆ. 116 ಕ್ಷೇತ್ರಗಳನ್ನು ಮಾರ್ಚ್ ವೇಳೆಗೆ ಪೂರ್ಣಗೊಳಿಸುತ್ತೇನೆ. ಉತ್ತರ ಕರ್ನಾಟಕಕ್ಕೆ ಹೋಗೋದೆ ಇಲ್ಲ ಅಂದರು. ಇಂದು ಹೋಗಿ ಬಂದಿದ್ದೇನೆ ಎಷ್ಟು ಜನ ಸೇರಿದ್ದಾರೆ ನೋಡಿ ಎಂದು ವಿವರಿಸಿದರು.

2023 ನಮ್ಮ ರಾಜ್ಯಕ್ಕೆ ವಿಶೇಷವಾದ ವರ್ಷ. ಅನೇಕ ಸವಾಲುಗಳು ವಿವಿಧ ರಂಗಗಳಲ್ಲಿ ಇವೆ. ಇದು ಸವಾಲುಗಳ ವರ್ಷ, ಶ್ರಮ ಪಡುವ ವರ್ಷ. ಚುನಾವಣೆಗೂ ಮುಂಚೆ ನಾಲ್ಕು ತಿಂಗಳ ಸಮಯ ಇದೆ. ಕಳೆದ ನಾಲ್ಕುವರೆ ವರ್ಷಗಳಲ್ಲಿ ಹಾಗು ಹೋಗುಗಳು ಹಾಗೂ ಮುಂದಿನ ದಿನಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡುವ ದಿನವಾಗಿದೆ. ಅನೇಕರಿಗೆ ಒಂದೊಂದು ಅನುಭವ ಆಗಿವೆ
ಮೈತ್ರಿ ಸರ್ಕಾರದ ಪತನದ ನಂತರ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂತು. ಅವರು ಅನೇಕ ಸವಾಲು ಗಳನ್ನು ಎದುರಿಸಿದರು. ಕೊರೊನಾ, ಅಕಾಲಿಕ ಮಳೆ ಮತ್ತಿತರ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದು ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎಂದರು.

ನನ್ನ ಆರೋಗ್ಯದ ಬಗ್ಗೆ ಚರ್ಚೆ ಆಗುತ್ತಿದೆ:

ನಾಲ್ಕುವರೆ ವರ್ಷದಲ್ಲಿ ಜೆಡಿಎಸ್ ಬಗ್ಗೆ ಅನೇಕ ವ್ಯಾಖ್ಯಾಗಳೂ ಬಂದಿವೆ. ಜೆಡಿಎಸ್ ಶಕ್ತಿ ಸಂಪೂರ್ಣ ಕ್ಷೀಣಿಸಬಹುದು ಎಂದು ಹೇಳಿದ್ದು ಇದೆ. ಇದನ್ನೂ ನಾನು ಗಮನಿಸಿದ್ದೇವೆ. ಪಕ್ಷದ ಸಂಘಟನೆಯ ಹೆಸರಲ್ಲಿ ನಾನು ಕೊರೊನಾ ಸಮಯದಲ್ಲಿ ಜನರಿಗೆ ತೊಂದರೆ ಕೊಡೋದು ಬೇಡವೆಂದು ಸಮ್ಮನಿದ್ದೆ. ಆಗ ರಾಜಕೀಯ ಸಂಘಟನೆಯ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ದೇವೇಗೌಡರಿಗೆ ವಯಸ್ಸಾಗಿದೆ, ಆರೋಗ್ಯ ಸಮಸ್ಯೆ ಇದೆ. ಕುಮಾರಸ್ವಾಮಿ ರಾಜಕೀಯ ನಿರಾಸಕ್ತಿ ಇದೆ ಅಂತ ನಮ್ಮ ಪಕ್ಷದ ಕೆಲವು ಮುಖಂಡರು ಅಂದುಕೊಂಡಿದ್ದೂ ನಿಜ. ಅವರ ರಾಜಕೀಯ ಭವಿಷ್ಯಕ್ಕೆ ಅವರು ನಿರ್ಧಾರ ಮಾಡಿಕೊಂಡರು. ಅನೇಕರು ವಾಪಸ್ ಬರದೇ ಇದ್ದವರೂ ಇದ್ದಾರೆ, ವಾಪಸ್ ಬಂದವರೂ ಇದ್ದಾರೆ ಎಂದು ಹೇಳಿದರು.

ಪಂಚರತ್ನ ಯೋಜನೆ ಯಾಕೆ ಮಾಡಬೇಕು ಎಂಬ ಚರ್ಚೆ ಬಂದಾಗ, ಜನರ ಬದುಕು ನನಗೆ ಮುಖ್ಯವಾಗಿತ್ತು. ಇಂದೂ ಅನೇಕ ಜನರು ನನ್ನ ಮನೆ ಬಾಗಿಲಿಗೆ ಬರುತ್ತಾರೆ. ಆರೋಗ್ಯ, ಶಿಕ್ಷಣ ಅಂತ ಬಂದು ಹೋಗ್ತಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಒಂದಿಷ್ಟು ಯೋಜನೆ ಬೇಕೇಬೇಕು. ಒಂದು ಕಡೆ ದೇಶ ಬೆಳೆಯುತ್ತಿದೆ. ಮತ್ತೊಂದೆಡೆ ಬಡತನವೂ ಹೆಚ್ಚಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸೋದಕ್ಕೆ ಹಿಂದೆ ಮುಂದೆ ನೋಡ್ತಾ ಇದ್ದಾರೆ. ಖಾಸಗಿ ಶಾಲೆಗಳಿಗೆ ಸೇರಿಸುವವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳ ಭವಿಷ್ಯದಿಂದ ಖಾಸಗಿ ಶಾಲೆಗಳಿಗೇನೋ ಸೇರಿಸ್ತಾರೆ. ಆದರೆ ನಂತರ ಶುಲ್ಕ ಕಟ್ಟಲು ಸಮಸ್ಯೆಯಾಗಿದೆ ಅಂತಾರೆ. ಆರೋಗ್ಯ ಅಥವಾ ಈಗಿನ ಆಸ್ಪತ್ರೆಗಳ ವ್ಯವಸ್ಥೆ ಬಗ್ಗೆ ಮಾತಾಡಲ್ಲ. ಪಿಹೆಚ್ ಸಿ ಸೆಂಟರ್ ನಲ್ಲಿ ವೈದ್ಯರು ಒಂದೆರಡು ಗಂಟೆ ಬಂದು ಕೆಲಸ ಮಾಡಿದ್ರೆ ಮುಗೀತು. ಸರ್ಕಾರಗಳು ಕಟ್ಟಡ ಕಟ್ಟಿಸಲು ಆಸಕ್ತಿ ವಹಿಸುತ್ತಾರೆ. ಆದರೆ ಕಟ್ಟಡಕ್ಕೆ ಬೇಕಾದ ಸಿಬ್ಬಂದಿ ನೇಮಕಾತಿಯ ಬಗ್ಗೆ ಆಸಕ್ತಿ ಇರೋದಿಲ್ಲ. ಹೆಚ್ಚು ಹೊರೆ ಬೀಳಲಿದೆ ಅಂತ ಮಂತ್ರಿಗಳು, ಅಧಿಕಾರಿಗಳು ಹೇಳ್ತಾರೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಶೇ. 50 ರಷ್ಟು ಶಿಕ್ಷಕರ ಕೊರತೆ ಇದೆ ಅಂತ ಕೇಂದ್ರವೇ ಮಾಹಿತಿ ಕೊಟ್ಟಿದೆ ಎಂದರು ಕುಮಾರಸ್ವಾಮಿ ಅವರು.

ಇನ್ನು ರೈತರ ಬದುಕು ಕೇಳಲೇಬೇಡಿ. ರೈತರ ಆದಾಯವನ್ನು ದ್ವಿಗುಣ ಮಾಡ್ತೀವಿ ಅಂತ ಕೇಂದ್ರ ಸರಕಾರ ಹೇಳಿತ್ತು. ಆದರೆ ರೈತರ ಖರ್ಚು ದ್ವಿಗುಣ ಆಗಿದೆ ಅಷ್ಟೆ. ಕಲಬುರಗಿ, ಬೀದರ್ ಮತ್ತಿತರ ಜಿಲ್ಲೆಗಳಲ್ಲಿ ತೊಗರಿ ಬೆಳೆ ಬೆಳೆಯುತ್ತಾರೆ. ಅದಕ್ಕೆ ರೋಗ ಹೆಚ್ಚಾಗಿ ಅವರು ಬೆಳೆದ ಬೆಳೆ ಸರಿಯಾಗಿ ಬರುತ್ತಿಲ್ಲ.
ರೈತರು ಮತ್ತೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅವರು ನೋವು ವ್ಯಕ್ತಪಡಿಸಿದರು.

2006ರಲ್ಲೂ ಸಾಲ ಮನ್ನಾ ಮಾಡಿದ್ದೆ, ಕಳೆದ ಬಾರಿಯೂ ಸಾಲ ಮನ್ನಾ ಮಾಡಿದ್ದೆ. ಹೀಗಾಗಿ ಸಾಲ ಮನ್ನಾ ಮಾಡಿದ್ರೆ ಮತ್ತೆ ರೈತ ಸಾಲ ಮಾಡುತ್ತಾನೆ. ಅದಕ್ಕಾಗಿಯೇ ನಾನು ರೈತರಿಗೆ ಒಂದು ಯೋಜನೆ ನೀಡಲು ಚಿಂತಿಸಿದ್ದೇನೆ ಎಂದು ಅವರು ಹೇಳಿದರು.

ಮನೆ ಕಟ್ಟಿ ಕೊಡುತ್ತೇವೆ ಎಂದು ಹೇಳಿದ ಸರ್ಕಾರ ಕಟ್ಟಿಕೊಡಲಿಲ್ಲ. ಸಿದ್ದರಾಮಯ್ಯ ಸಿಎಂ ಆದಾಗ ಮನೆ ಕಟ್ಟಿ ಕೊಡ್ತೀವಿ ಅಂದ್ರು, ಅದು ಆಗಲಿಲ್ಲ. ಬಿಜೆಪಿ ಸರ್ಕಾರ ಬಂದಾಗ ಬಿದ್ದೋದ ಮನೆಗೆ ಹಣ ಕೊಡ್ತೀವಿ ಅಂದರು ಎಲ್ಲಿ ಕೊಟ್ಟರು?. ನಾನು ಸಿಎಂ ಆಗಿದ್ದಾಗ ಮನೆ ಕಟ್ಟಿ ಕೊಟ್ಟೆ, ಕಟ್ಟುವವರಿಗೆ ಸಹಾಯ ಮಾಡಿದೆ. ಮನೆಯ ಅವಶ್ಯಕತೆ ಹಲವಾರು ಜನರಿಗೆ ಇದೆ. ಇದೆಲ್ಲವನ್ನೂ ನೋಡಿಯೇ ಪಂಚರತ್ನ ಯೋಜನೆ ಶುರು ಮಾಡಿರುವುದು. ಪ್ರಾರಂಭದಲ್ಲಿ ಇದರ ಬಗ್ಗೆ ಲಘುವಾಗಿ ಮಾತನಾಡಿದರು. ರೈತರ ಸಾಲಮನ್ನದ ವ್ಯಾಲ್ಯೂ ಏನು ಅಂತ ಈಗ ಹೇಳ್ತಾ ಇದ್ದಾರೆ. ಹಾಗಾಗಿ ಈ ಬಾರಿ ನಾವು ಕೈ ಹಿಡಿತೀವಿ ಅಂತಿದ್ದಾರೆ ಎಂದು ನುಡಿದರು.

ಇದೀಗ ಕಾಂಗ್ರೆಸ್ ನವರು 200 ಯುನಿಟ್ ವಿದ್ಯುತ್ ಕೊಡುತ್ತೇವೆಂದು ಹೇಳುತ್ತಿದ್ದಾರೆ. ನನ್ನ ಕಾರ್ಯಕ್ರಮ ಸರ್ಕಾರದ ಆಸ್ತಿ ಮೌಲ್ಯ ಹೆಚ್ಚಾಗುವಂತದ್ದು. ಉಚಿತ ಕಾರ್ಯಕ್ರಮ ನಿಲ್ಲಿಸಬೇಕೆಂದು ಒಂದು ಕಡೆ ಮೋದಿಯವರು ಹೇಳ್ತಾರೆ. ಜನರ ದುಡ್ಡು ಸುಮ್ನೆ ನಷ್ಟ ಆಗಬಾರದು. ಇದರಿಂದ ಸರ್ಕಾರಕ್ಕೆ ಯಾವುದೇ ಗಳಿಕೆ ಇಲ್ಲ. ಕುಶಲಕರ್ಮಿಗಳಿಗೆ ಏನೋ 10 ಪರ್ಸೆಂಟ್ ಸಪ್ಸಿಡಿ ಕೊಡ್ತೀವಿ ಅಂತ ಬಿಜೆಪಿಯವರು ಜಾಹೀರಾತು ಕೊಟ್ಟಿದ್ದಾರೆ. ಕುಷಲಕರ್ಮಿಗೆ ಅಷ್ಟೊಂದು ಹಣ ಎಲ್ಲಿಂದ ಬರಬೇಕು. ಅದಕ್ಕಾಗಿಯೇ ಜನರ ಮುಂದೆ ಕೇಳ್ತಾ ಇದ್ದೀನಿ. ನಮಗೆ ಒಂದು ಸ್ಪಷ್ಟ ಬಹುಮತದ ಅಧಿಕಾರ ಕೊಡಿ.
ನಾನು ಮತ್ತೆ ಅತಂತ್ರ ಸರ್ಕಾರ ಮಾಡಿದರೆ ಈ ಯೋಜನೆ ಕೊಡಲು ಸಾಧ್ಯವಾಗುವುದಿಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.

IMG 20230114 WA0010

ನಾನು ಐದು ವರ್ಷದಲ್ಲಿ ಈ ಯೋಜನೆ ಕೊಡದೇ ಇದ್ದರೆ ಪಕ್ಷ ವಿಸರ್ಜನೆ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದೇನೆ. ನನ್ನ ದೃಷ್ಟಿ ಕೇವಲ ಕಟ್ಟಡ, ಜಲಾಶಯ, ರಸ್ತೆ ಮಾಡುವುದಲ್ಲ. ಯಾವ ಸರ್ಕಾರ ಬಂದರೂ ಇದನ್ನು ಮಾಡುತ್ತದೆ. ಮೀಸಲಾತಿಯಿಂದ ಎಷ್ಟು ಕುಟುಂಬ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಬಡತನದಿಂದ ಇನ್ನು ಎಷ್ಟು ಜನ ಇದ್ದಾರೆ. ನನ್ನ ಗುರಿ ಎಲ್ಲರಿಗೂ ಸರಿಸಮಾನಾದ ಬದುಕು ಕೊಡುವುದು. 75 ವರ್ಷವಾದರೂ ಸರಿಯಾದ ಬದುಕು ಮಾಡಿಕೊಳ್ಳೋದಕ್ಕೆ ಆಗಲಿಲ್ಲ ಎಂದು ಹೇಳಿದರು.
ಪಂಚರತ್ನ ರಥಯಾತ್ರೆ ಮಾಡಿದ 45 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಇದೆ. ನಾನು ಭೇಟಿ ಕೊಟ್ಟ ಕ್ಷೇತ್ರದಲ್ಲಿ ಜನರ ಶ್ರೀರಕ್ಷೆ ಇದೆ. ನಾಳೆ ಚುನಾವಣೆ ಆದರೂ ಗೆಲ್ಲುವ ಎಲ್ಲಾ ವಾತಾವರಣ ಇದೆ ಎಂದರು ಅವರು.

ಕಟೀಲ್ ಅವರಿಗೆ ಟಾಂಗ್:

ವಿದೇಶಿ ಹೂಡಿಕೆ ಎಷ್ಟಿದೆ. ಅದು ಸಾಲದ ರೂಪದಲ್ಲಿಯೇ ಬರಬೇಕು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳುತ್ತಿದ್ದಾರೆ. ರಸ್ತೆ, ಚರಂಡಿ ಬೇಡ, ಲವ್ ಜಿಹಾದ್ ಅಂತಾರೆ. ಮುಂದಿನ ಪೀಳಿಗೆಗೆ ಇದನ್ನು ಹೇಳಿದರೆ ಮುಂದೆ ಏನಾಗಲಿದೆ. ಬಿಜೆಪಿ ನಡಳಿಕೆಯಿಂದ ವಿದೇಶಿ ಹೂಡಿಕೆ ಏನಾಗಿದೆ?. ದೇವೇಗೌಡರು ಟೆಕ್ ಪಾರ್ಕ್ ಗೆ ಅಡಿಪಾಯ ಹಾಕಿದ್ದರು. ಜನರ ಬದುಕಿಗೆ ಏನು ಕಾರ್ಯಕ್ರಮ ಕೊಡಬೇಕು ಅಂತ ಜನಪ್ರತಿನಿಧಿಗೆ ಗೊತ್ತಿರಬೇಕು. ಕರ್ನಾಟಕ ಸಂಪದ್ಬರಿತವಾದ ರಾಜ್ಯ. ಕೊರೊನ ಅನಾಗುತಗಳು ಅನೇಕ ಆಗಿವೆ. ಸರ್ಕಾರದ ಅನೇಕ ನ್ಯೂನ್ಯತೆಗಳು ಇವೆ. ಯಾವುದೋ ಕಪಿಮುಷ್ಟಿ ಯಲ್ಲಿ ಸರ್ಕಾರ ಇದೆ. ಲವ್ ಜಿಹಾದ್ ಅಂತ ಹೇಳಿ ಎಲ್ಲಿಗೆ ತೆಗೆದುಕೊಂಡು ಹೋಗ್ತಾ ಇದ್ದೀರಾ?. ಬಿಹಾರ್, ಉತ್ತರ ಪ್ರದೇಶ ರೀತಿ ಮಾಡುತ್ತಿದ್ದಿರಾ. ನನ್ನ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಅತಂತ್ರ ಸರ್ಕಾರ ಬರಲ್ಲ:

ಇನ್ನೂ ಅಭಿವೃದ್ಧಿ ಮಾಡೋದು ಇಲ್ಲಿ ಸಾಧ್ಯ ಇದೆ. ಉತ್ತರ ಕರ್ನಾಟಕದ ಅನೇಕ ಶಾಸಕರು ಇದ್ದಾರೆ.ಆ ಜನರ ಕಷ್ಟ ಸರ್ಕಾರಕ್ಕೆ ಮುಟ್ಟಲೇ ಇಲ್ಲ. ಜನರ ನಾಡಿ ಮಿಡಿತ ನಾನು ನೋಡ್ತಾನೇ ಇದ್ದೇನೆ. ಸಂಪೂರ್ಣ ಸ್ವತಂತ್ರ ಸರ್ಕಾರ ಬರಲಿದೆ. ನಾವು ಮೂರ್ನಾಲ್ಕು ಜಿಲ್ಲೆಗೆ ಸೀಮಿತ ಆಗಲ್ಲ. ನಮಗೆ ಸಂಪೂರ್ಣ ವಿಶ್ವಾಸ ಇದೆ ಅಧಿಕಾರಕ್ಕೆ ಬರುತ್ತೇವೆ. ಕಳೆದ ಒಂದು ವರ್ಷದ ಹಿಂದೆಯೇ ಅಭ್ಯರ್ಥಿಗಳ ಕಾರ್ಯಗಾರ ಮಾಡಿ ಅವರಿಗೆ ಕೆಲಸ ವಹಿಸಿದ್ದೇನೆ. ಕಳೆದ ಮೂರ್ನಾಲ್ಕು ತಿಂಗಳಿಂದಲೇ ಕೆಲಸ ಆರಂಭ ಮಾಡಿದ್ದಾರೆ. ಅವರೆಲ್ಲಾ ಪಾದಯಾತ್ರೆ ಹಳ್ಳಿ ಹಳ್ಳಿಗೆ ಹೋಗ್ತಾ ಇದ್ದಾರೆ. ಸಮಯ ತುಂಬಾ ಇದೆ, ಅವರೆಲ್ಲಾ ಜನರಿಗೆ ಕನೆಕ್ಟ್ ಆಗಿದ್ದಾರೆ. ನನ್ನ ಅಭಿಪ್ರಾಯ ದಲ್ಲಿ ಅತಂತ್ರ ಸರ್ಕಾರ ಬರಲ್ಲ. ಅದಕ್ಕಾಗಿಯೇ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ, ವರದಿಗಾರರ ಕೂಟದ ಅಧ್ಯಕ್ಷ ಚಂದ್ರಶೇಖರ ಹಾಜರಿದ್ದರು.