ಮನೆಬಾಗಿಲಿಗೇ ಮಾಸಾಶನ’ ಅಭಿಯಾನಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ
ಬೆಂಗಳೂರು, ಜನವರಿ 27 (ಕರ್ನಾಟಕ ವಾರ್ತೆ):
ಪಿಂಚಣಿ ಸೌಲಭ್ಯ ದೊರೆಯದ ಅರ್ಹರಿಗೆ ಅರ್ಜಿ ರಹಿತ ಹಾಗೂ ಮೊಬೈಲ್ ಆಪ್ ಆಧಾರಿತ ಪಿಂಚಣಿ ಮಂಜೂರು ಮಾಡುವ ಸ್ವಯಂಪ್ರೇರಿತ ಅಭಿಯಾನ ಕಾರ್ಯಕ್ರಮವನ್ನು ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಕಂದಾಯ ಇಲಾಖೆಯು ಹಮ್ಮಿಕೊಂಡಿದ್ದ ‘ಮನೆಬಾಗಿಲೆಗೇ ಮಾಸಾಶನ’ ಅಭಿಯಾನಕ್ಕೆ ದೀಪ ಹಚ್ಚುವ ಮೂಲಕ ಮುಖ್ಯಮಂತ್ರಿಗಳು ಚಾಲನೆ ನೀಡಿ ಮಾತನಾಡಿದರು.
ಮಧ್ಯವರ್ತಿಗಳ ಪ್ರವೇಶವಿರದೆ ನೇರವಾಗಿ ಬಡವರ ಮನೆಗೆ ಮಾಶಾಸನ ನೀಡುವ ಅಪರೂಪದ ಕಾರ್ಯಕ್ರಮ ಇದಾಗಿದೆ. ಮಧ್ಯವರ್ತಿಗಳ ಪ್ರವೇಶಕ್ಕೆ ಕಡಿವಾಣ ಹಾಕಿ ಸರ್ಕಾರದ ಪಿಂಚಣಿ ಸೌಲಭ್ಯವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ತಲುಪುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸೂಕ್ತ ಪ್ರಚಾರ ನೀಡಿ ಸರ್ಕಾರದ ಆಶಯವನ್ನು ಈಡೇರಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.
ರಾಜ್ಯದಲ್ಲಿನ ಅಶಕ್ತ ವೃದ್ಧರು, ಅಂಗವಿಕಲರು ಹಾಗೂ ಬಡತನದ ಅಂಚಿನಲ್ಲಿರುವ ಹಿರಿಯ ನಾಗರಿಕರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಮಾಸಿಕ ಪಿಂಚಣಿ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳ ಮೂಲಕ ಹಿರಿಯ ನಾಗರಿಕರ ಹಾಗೂ ಅಂಗವಿಕಲರು ಸ್ವಾವಲಂಭಿ ಜೀವನ ನಡೆಸಲು ಸರ್ಕಾರ ಉದ್ದೇಶಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 68.84 ಲಕ್ಷ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಪಿಂಚಣಿ ಮಂಜೂರು ಮಾಡಲಾಗಿದೆ . ಪಿಂಚಣಿಗಳಿಗೆ 12 ಸಾವಿರವಿದ್ದ ವಾರ್ಷಿಕ ಆದಾಯದ ಮಿತಿಯನ್ನು 35 ಸಾವಿರದವರೆಗೂ ಹೆಚ್ಚಳ ಮಾಡಿದ್ದೇವೆ. ಇದರಿಂದ ಅರ್ಹರಿಗೆ ಸವಲತ್ತು ಸಿಗಲಿದೆ ಎಂದರು
ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಸೇವೆ ನೀಡಲು ಮೊಬೈಲ್ ಆಪ್ ಸಹಕಾರಿಯಾಗಲಿದೆ. ನೇರ ಹಣ ಪಾವತಿ (ಡಿಬಿಟಿ) ಯೋಜನೆಯಡಿ ಬ್ಯಾಂಕ್ ಖಾತೆಗೆ ಪಿಂಚಣಿ ಪಾವತಿ ಮಾಡುವ ವಿನೂತನ ಅಭಿಯಾನ ಇದಾಗಿದೆ. ಮೊದಲನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಫಲಾನುಭವಿಗಳನ್ನು ಗುರುತಿಸಿ ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಗಳಡಿ ಪಿಂಚಣಿ ಸೌಲಭ್ಯ ಒದಗಿಸುವಲ್ಲಿ ಕ್ರಮ ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ವಿಧವಾ ವೇತನ ಹಾಗೂ ವಿಕಲಚೇತನ ಪಿಂಚಣಿ ಯೋಜನೆಗಳಿಗೆ ವಿಸ್ತರಿಸುವ ಉದ್ದೇಶವಿದೆ ಎಂದು ಹೇಳಿದರು.
ಅಸಹಾಯಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ನಮ್ಮ ಸರ್ಕಾರದಾಗಿದೆ. ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ವಯೋವೃದ್ಧರಿಗೆ ಮನೆ ಬಾಗಿಲಿಗೆ ತಲುಪಿಸುವ ಈ ಅಭಿಯಾನದ ಪ್ರಯೋಜನವನ್ನು ಅರ್ಹರು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ “ನವೋದಯ” ಆ್ಯಪ್ ಮತ್ತು ತಂತ್ರಾಂಶವನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮನೆ ಬಾಗಿಲಿಗೇ ಮಾಸಾಶನ ಅಭಿಯಾನವನ್ನು ಉಡುಪಿ ಮತ್ತು ಬಳ್ಳಾಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿ, ಯಶಸ್ಸು ಸಿಕ್ಕ ನಂತರ ಉಳಿದ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 7000 ಜನರಿಗೆ ಮಾಸಾಶನ ದೊರೆತಿದೆ.
ಹಿರಿಯ ನಾಗರೀಕರು ಪಿಂಚಣಿಗಾಗಿ ತಾಲ್ಲೂಕು ಕಛೇರಿಗಳಿಗೆ ಅಲೆಯಬೇಕಾಗಿಲ್ಲ. ಅವರ ಮನೆ ಬಾಗಿಲಿಗೆ ಪಿಂಚಣಿ ಹೋಗಬೇಕು. ಆಧಾರ್ ಸಂಖ್ಯೆ,ಆದಾಯ ಪತ್ರ ಎಲ್ಲ ದಾಖಲೆಗಳು ಕಂದಾಯ ಇಲಾಖೆಯ ಬಳಿ ಇರುತ್ತದೆ. ಗ್ರಾಮ ಲೆಕ್ಕಿಗರು 60 ರ್ಷ ದಾಟಿದ ಹಿರಿಯ ನಾಗರಿಕರ ಮನೆಗೆ ತೆರಳಿ ಅರ್ಹ ಫಲಾನುಭವಿಗಳ ಭಾವಚಿತ್ರ ಸೆರೆ ಹಿಡಿಯುತ್ತಾರೆ. ಫಲಾನುಭವಿಗಳ ಬ್ಯಾಂಕ್ ಖಾತೆಯ ವಿವರಗಳನ್ನು ಮೊಬೈಲ್ ಆ್ಯಪ್‍ನಲ್ಲಿ ಅಪ್ ಲೋಡ್ ಮಾಡುತ್ತಾರೆ. ನೇರ ಹಣ ಸಂದಾಯ ಮೂಲಕ ಫಲಾನುಭವಿಗಳ ಖಾತೆಗೆ ಪಿಂಚಣಿ ಮೊತ್ತವನ್ನು ಜಮಾ ಮಾಡಲಾಗುವುದು. ಒಂಭತ್ತು ತಿಂಗಳು ಫಲಾನುಭವಿಗಳು ಹಣವನ್ನು ಡ್ರಾ ಮಾಡದೆ ಇದ್ದರೆ ಅವರ ಖಾತೆಯನ್ನು ತಡೆಹಿಡಿಯಲಾಗುವುದು ಎಂದರು.
ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರು ಸ್ವಾಗತ ಭಾಷಣ ಮಾಡಿದರು. ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ನಿರ್ದೇಶಕರಾದ ಜಿ. ಪ್ರಭು ವಂದನಾರ್ಪಣೆ ಸಲ್ಲಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜಿ. ಮರಿಸ್ವಾಮಿ, ವಿಧಾನ ಪರಿಷತ್ ಶಾಸಕರಾದ ಹೆಚ್.ಎಂ. ರಮೇಶ್‍ಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್, ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಗಳಾದ ಜಿ.ಎನ್. ಶಿವಮೂರ್ತಿ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಜಗದೀಶ್, ಹಲವು ಗಣ್ಯರು ಉಪಸ್ಥಿತರಿದ್ದರು.