file 000000005d388208b8f095835107fb8b 200kb

JD (S) : 2028ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಜನಾದೇಶ…..!

National - ಕನ್ನಡ POLATICAL STATE

*ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎಪಿ ರಂಗನಾಥ್ ಗೆಲುವು*

*ಸತ್ಯಮೇವ ಜಯತೆ ಎಂದ ಹೆಚ್.ಡಿ. ಕುಮಾರಸ್ವಾಮಿ*

*ಈ ಗೆಲುವು ಐತಿಹಾಸಿಕ; 2028ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಜನಾದೇಶ*

*ಈ ದೀಪಾವಳಿಯಿಂದಲೇ ನರಕಾಸುರನ ಪತನ ಆರಂಭ ಎಂದ HDK*

*ನವದೆಹಲಿ 27 ಅಕ್ಟೋಬರ್ 2026* ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎಪಿ ರಂಗನಾಥ್ ಭರ್ಜರಿ ಗೆಲುವು ಸಾಧಿಸಿದ್ದು, ಆ ಗೆಲುವನ್ನು *ಸತ್ಯಮೇವ ಜಯತೆ* ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಬಣ್ಣಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಸುಳ್ಳು, ದುರಾಡಳಿತ, ಹಣಬಲ, ತೋಳ್ಬಲಗಳು ಸೋತಿವೆ. ಈ ಚುನಾವಣೆ ಹೊಸ ಭರವಸೆಯ ಸೂರ್ಯೋದಯಕ್ಕೆ ನಾಂದಿ ಹಾಡಿದೆ ಎಂದಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು ಭರ್ಜರಿ ಜಯಭೇರಿ ಸಾಧಿಸಿದ್ದು, ನಮ್ಮ ಒಮ್ಮತದ ಅಭ್ಯರ್ಥಿ ಶ್ರೀ ಎ.ಪಿ.ರಂಗನಾಥ್ ಅವರಿಗೆ ಅಭಿನಂದನೆಗಳು. ಹಾಗೆಯೇ, ಉಳಿದ ಮೂರು ಕ್ಷೇತ್ರಗಳಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಈ ಸಂತೋಷದ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಸಮಸ್ತ ಕಾರ್ಯಕರ್ತ ಬಂಧುಗಳು, ಮುಖಂಡರು ಹಾಗೂ ಆಮಿಷ, ಅಧಿಕಾರದ ದರ್ಪವನ್ನು ದಿಕ್ಕರಿಸಿ ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಿದ ಶಿಕ್ಷಕರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಗುರುವೇ ದಾರಿ ಎನ್ನುವಂತೆ ಮುಂದಿನ ಬದಲಾವಣೆಗೆ ಭಾಷ್ಯ ಬರೆದಿದ್ದಾರೆ ಎಂದು ಕೇಂದ್ರ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಗೆಲವು ಐತಿಹಾಸಿಕ. 2028ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಜನಾದೇಶ. ಒಗ್ಗಟ್ಟು ಮತ್ತು ಮೈತ್ರಿಯಲ್ಲಿ ಶಕ್ತಿ ಇದೆ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಈ ದೀಪಾವಳಿಯಿಂದಲೇ ನರಕಾಸುರನ ಪತನ ಆರಂಭ, ಮುಂದಿನ ದೀಪಾವಳಿಗೆ ಕನ್ನಡ ನಾಡಿನಲ್ಲಿ ಮೈತ್ರಿಯ ಮುಂಬೆಳಕು ಮೂಡುವುದು ಖಚಿತ ಎಂದಿರುವ ಅವರು; ನಮ್ಮ ಮೈತ್ರಿಯ ಪ್ರೇರಕಶಕ್ತಿ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೂ ನನ್ನ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *