2047ರ ವೇಳೆಗೆ ಕರ್ನಾಟಕದ ನಗರವಾಸಿಗಳ ಸಂಖ್ಯೆ ಶೇ.70ಕ್ಕೆ ಏರಿಕೆ! 7 ಪ್ರಮುಖ ನಗರಗಳ ಅಭಿವೃದ್ಧಿಗೆ ಸರ್ಕಾರದ ಮಾಸ್ಟರ್ ಪ್ಲಾನ್
ಬೆಂಗಳೂರು ಮಾತ್ರವಲ್ಲ, ರಾಜ್ಯದ ಎಲ್ಲ ನಗರಗಳಿಗೂ ಅಭಿವೃದ್ಧಿಯ ಭಾಗ್ಯ: ಡಿಸಿಎಂ ಡಿ.ಕೆ. ಶಿವಕುಮಾರ್
ನಗರಗಳ ಆರ್ಥಿಕ ಶಕ್ತಿ ಹಳ್ಳಿಗಳ ಅಭಿವೃದ್ಧಿಗೂ ಬಳಕೆ; ಪ್ರಾದೇಶಿಕ ನಗರೀಕರಣ ಯೋಜನೆ-2047 ವರದಿ ಬಿಡುಗಡೆ
ಬೆಂಗಳೂರು, ಅ.30: ಕರ್ನಾಟಕದ ಸಮಗ್ರ ಮತ್ತು ಸಮತೋಲಿತ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, 2047ರ ವೇಳೆಗೆ ರಾಜ್ಯದ ನಗರವಾಸಿಗಳ ಪ್ರಮಾಣ ಶೇ.46ರಿಂದ ಶೇ.70ಕ್ಕೆ ಏರಿಕೆಯಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಪ್ರಾದೇಶಿಕ ನಗರೀಕರಣ ಯೋಜನೆ-2047 ರೂಪಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳು ಆರ್ಥಿಕವಾಗಿ ಬಲಿಷ್ಠವಾದರೆ ಮಾತ್ರ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಅಭಿವೃದ್ಧಿ ಸಂಪನ್ಮೂಲ ಒದಗಿಸಲು ಸಾಧ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಶುಕ್ರವಾರ ನಡೆದ ‘ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047’ ವರದಿ ಬಿಡುಗಡೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಗರಗಳ ಬೆಳವಣಿಗೆಯಿಂದ ಹಳ್ಳಿಗಳ ಅಭಿವೃದ್ಧಿ
ನಗರಗಳ ಬೆಳವಣಿಗೆಯಿಂದ ಪಟ್ಟಣಗಳು ಅಭಿವೃದ್ಧಿಯಾಗಬೇಕು, ಪಟ್ಟಣಗಳ ಬೆಳವಣಿಗೆಯಿಂದ ಗ್ರಾಮೀಣ ಬದುಕು ಸಮೃದ್ಧವಾಗಬೇಕು. ಇದೇ ಸರ್ಕಾರದ ಅಭಿವೃದ್ಧಿಯ ಚಿಂತನೆಯಾಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನಗರಗಳಲ್ಲೂ ಕೈಗಾರಿಕೆ, ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾಗಬೇಕು ಎಂದು ಹೇಳಿದರು.
ರಾಜ್ಯದ ಪ್ರಸ್ತುತ ಜನಸಂಖ್ಯೆ ಸುಮಾರು 6.9 ಕೋಟಿ ಇದ್ದು, 2047ರ ವೇಳೆಗೆ 7.7ರಿಂದ 7.8 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಈಗ ಶೇ.46ರಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, 2047ರ ವೇಳೆಗೆ ಈ ಪ್ರಮಾಣ ಶೇ.70ಕ್ಕೆ ಏರಿಕೆಯಾಗಬಹುದು. ಇದಕ್ಕೆ ಮುಂಚಿತವಾಗಿ ಯೋಜಿತ ನಗರಾಭಿವೃದ್ಧಿ ಅಗತ್ಯವಿದೆ ಎಂದರು.
ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಲು ಪ್ರಾದೇಶಿಕ ಅಭಿವೃದ್ಧಿ
ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಗ್ರಾಮೀಣ ಪ್ರದೇಶಗಳಿಂದ ಜನರು ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ, ವಸತಿ ಸಮಸ್ಯೆ ಸೇರಿದಂತೆ ಹಲವು ಸವಾಲುಗಳು ಎದುರಾಗುತ್ತಿವೆ. ಜನರು ತಮ್ಮ ಊರು, ತಾಲೂಕು ಮತ್ತು ಜಿಲ್ಲೆಗಳಲ್ಲಿಯೇ ಉದ್ಯೋಗ ಪಡೆಯುವಂತಹ ವಾತಾವರಣ ನಿರ್ಮಿಸುವುದು ಅಗತ್ಯ ಎಂದು ತಿಳಿಸಿದರು.
ಮೈಸೂರು, ಶಿವಮೊಗ್ಗ, ಮಂಗಳೂರು, ಕಲಬುರಗಿ, ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪ್ರಮುಖ ನಗರಗಳಲ್ಲಿ ಕೈಗಾರಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮೂಲಕ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲಾಗುವುದು ಎಂದರು.
ಪ್ರತಿ ನಗರಕ್ಕೂ ರಿಂಗ್ ರಸ್ತೆ ನಿರ್ಮಾಣದ ಚಿಂತನೆ
ದೊಡ್ಡ ನಗರಗಳಿಂದ ಸಣ್ಣ ಪಟ್ಟಣಗಳವರೆಗೆ ವರ್ತುಲ ರಸ್ತೆ (ರಿಂಗ್ ರಸ್ತೆ) ನಿರ್ಮಿಸುವ ಚಿಂತನೆಯಿದೆ. ಪಟ್ಟಣಗಳ ಹೊರವಲಯದಲ್ಲಿ ರಿಂಗ್ ರಸ್ತೆ ನಿರ್ಮಿಸುವುದರಿಂದ ವಾಹನಗಳ ಸಂಚಾರ ಸುಗಮವಾಗಲಿದೆ. ಬೆಂಗಳೂರು ನಗರಕ್ಕೆ ಮೆಟ್ರೋ, ರಸ್ತೆ, ಸುರಂಗ ಮಾರ್ಗ ಸೇರಿದಂತೆ ವಿವಿಧ ಸಾರಿಗೆ ಯೋಜನೆಗಳ ಕುರಿತು ಸುಮಾರು ₹1.5 ಲಕ್ಷ ಕೋಟಿ ಮೊತ್ತದ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಏಳು ಪ್ರಮುಖ ಆದ್ಯತೆಗಳೊಂದಿಗೆ ಅಭಿವೃದ್ಧಿ
ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಏಳು ಪ್ರಮುಖ ವಲಯಗಳನ್ನು ಗುರುತಿಸಲಾಗಿದೆ.
- ಉದ್ಯಮ ಕರ್ನಾಟಕ – ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕೆ ಮತ್ತು ಉದ್ಯೋಗ ಸೃಷ್ಟಿ.
- ಸೇವಾ ಉನ್ನತಿ ಕರ್ನಾಟಕ – ಗುಣಮಟ್ಟದ ಸೇವೆಗಳು ಹಾಗೂ ಮೂಲಸೌಕರ್ಯ ವಿಸ್ತರಣೆ.
- ಸಂಚಾರ ಕರ್ನಾಟಕ – ಸುಧಾರಿತ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ.
- ಪರಿಸರ ಕರ್ನಾಟಕ – ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ನಗರಾಭಿವೃದ್ಧಿ.
- ಪ್ರತಿಭಾ ಕರ್ನಾಟಕ – ಶಿಕ್ಷಣ, ಕೌಶಲ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ.
- ಸಮೃದ್ಧಿ ಕರ್ನಾಟಕ – ಎಲ್ಲ ಪ್ರದೇಶಗಳ ಸಮಗ್ರ ಆರ್ಥಿಕ ಬೆಳವಣಿಗೆ.
- ಡಿಜಿಟಲ್ ಕರ್ನಾಟಕ – ತಂತ್ರಜ್ಞಾನ ಆಧಾರಿತ ಆಡಳಿತ ಮತ್ತು ಸೇವೆಗಳ ವಿಸ್ತರಣೆ.
ವಿದ್ಯುತ್ ಬೇಡಿಕೆ 50 ಸಾವಿರ ಮೆಗಾವಾಟ್ಗೆ ಏರಿಕೆ ನಿರೀಕ್ಷೆ
2047ರ ವೇಳೆಗೆ ಕರ್ನಾಟಕದ ವಿದ್ಯುತ್ ಬೇಡಿಕೆ 40 ಸಾವಿರದಿಂದ 50 ಸಾವಿರ ಮೆಗಾವಾಟ್ಗೆ ತಲುಪುವ ನಿರೀಕ್ಷೆಯಿದೆ. ಪ್ರತಿ ವರ್ಷ ವಿದ್ಯುತ್ ಬೇಡಿಕೆ ಶೇ.10ರಿಂದ 12ರಷ್ಟು ಹೆಚ್ಚುತ್ತಿದೆ. ಹೀಗಾಗಿ ಸೌರ ವಿದ್ಯುತ್ ಉತ್ಪಾದನೆ, ಬ್ಯಾಟರಿ ಸಂಗ್ರಹಣೆ ಮತ್ತು ನಿರಂತರ ವಿದ್ಯುತ್ ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪಾವಗಡದ ಸೋಲಾರ್ ಪಾರ್ಕ್ನಲ್ಲಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳದೆ ಗುತ್ತಿಗೆ ಮಾದರಿಯಲ್ಲಿ ಪಡೆದು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇದರಿಂದ ರೈತರಿಗೆ ಗುತ್ತಿಗೆ ಆದಾಯವೂ ದೊರೆಯುತ್ತಿದೆ ಎಂದು ವಿವರಿಸಿದರು.
ಬೆಂಗಳೂರು ಹೊರಗೂ ಐಟಿ-ಬಿಟಿ ವಿಸ್ತರಣೆ
ಮೈಸೂರು, ಬೆಳಗಾವಿ, ಧಾರವಾಡ, ಮಂಗಳೂರು ಸೇರಿದಂತೆ ಬೆಂಗಳೂರು ಹೊರಗಿನ ನಗರಗಳಲ್ಲೂ ಐಟಿ-ಬಿಟಿ ಉದ್ಯಮಗಳನ್ನು ವಿಸ್ತರಿಸಲು ಸರ್ಕಾರ ಆದ್ಯತೆ ನೀಡುತ್ತಿದೆ. ಬಳ್ಳಾರಿಯಲ್ಲಿ ಉಕ್ಕು ಉದ್ಯಮ, ಹುಬ್ಬಳ್ಳಿ-ಧಾರವಾಡದಲ್ಲಿ ವಿದ್ಯುತ್ ವಾಹನಗಳ ಉತ್ಪಾದನೆ ಹಾಗೂ ಮಂಗಳೂರಿನಲ್ಲಿ ಡೇಟಾ ಸೆಂಟರ್ ಸ್ಥಾಪನೆ ಸೇರಿದಂತೆ ಪ್ರಾದೇಶಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆ ಆಕರ್ಷಿಸುವ ಉದ್ದೇಶವಿದೆ ಎಂದರು.
ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವುದು, ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಉತ್ತೇಜನ ನೀಡುವುದು ಹಾಗೂ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ನಗರ ಮಕ್ಕಳಿಗೆ ಮೂರು ದಿನಗಳ ಗ್ರಾಮ ವಾಸ್ತವ್ಯ
ನಗರಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಸಲು ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಮೂರು ದಿನಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಲಾಗಿದೆ. ರೈತರ ಬದುಕು, ಕೃಷಿ ಚಟುವಟಿಕೆ, ಹೈನುಗಾರಿಕೆ ಮತ್ತು ಗ್ರಾಮೀಣ ಜೀವನದ ಶ್ರಮವನ್ನು ಮಕ್ಕಳು ಅರಿತುಕೊಳ್ಳಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಯೋಜನೆ ವರದಿ ಬಿಡುಗಡೆ ಮಾಡಿದ ಯತೀಂದ್ರ ಸಿದ್ದರಾಮಯ್ಯ
ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ಸಮಾನ ಆರ್ಥಿಕ ಬೆಳವಣಿಗೆ ಸಾಧಿಸುವ ಉದ್ದೇಶದಿಂದ ಮುಂದಿನ ಎರಡು ದಶಕಗಳ ದೂರದೃಷ್ಟಿಯೊಂದಿಗೆ ಈ ವರದಿ ಸಿದ್ಧಪಡಿಸಲಾಗಿದೆ ಎಂದರು.
ರಾಜ್ಯವನ್ನು ಮೂರು ಮುಖ್ಯ ವಲಯಗಳಾಗಿ ವಿಂಗಡಿಸಿ, ಮೈಸೂರು, ಶಿವಮೊಗ್ಗ, ಮಂಗಳೂರು, ಕಲಬುರಗಿ, ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡ ಸೇರಿದಂತೆ ಪ್ರಮುಖ ಪ್ರದೇಶಗಳ ನಗರಾಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಹೊಸ ಉಪನಗರಗಳು ಮತ್ತು ವ್ಯವಸ್ಥಿತ ಪಟ್ಟಣಗಳ ನಿರ್ಮಾಣದ ಜೊತೆಗೆ ರಸ್ತೆ, ಕುಡಿಯುವ ನೀರು, ಒಳಚರಂಡಿ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
