file 0000000034008211ae1ee9cecaa02619 200kb

ಬದರಿನಾಥ ಯಾತ್ರೆ : ಹೆಲಿಕಾಪ್ಟರ್ ಪತನ, ಆರು ಮಂದಿ ಸಾವು…!

National - ಕನ್ನಡ

 

# ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ಕರ್ನಾಟಕದ ಐವರು ಯಾತ್ರಿಕರು ಸೇರಿ 6 ಮಂದಿ ಸಾವು!

**ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ | ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ರಾಜ್ಯ ಸರ್ಕಾರದ ತುರ್ತು ಕ್ರಮ**

**ಬೆಂಗಳೂರು, ಅ.30:*ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಕರ್ನಾಟಕದ ಐವರು ಯಾತ್ರಿಕರು ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಇಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಹಾಥಿ ಪರ್ವತ ಪ್ರದೇಶದ ಬೆಟ್ಟಗುಡ್ಡಗಳಲ್ಲಿ ಪತನಗೊಂಡಿದೆ.

ಈ ದುರಂತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಕರ್ನಾಟಕದ ಐವರು ಪ್ರಯಾಣಿಕರು ಹಾಗೂ ಓರ್ವ ಪೈಲಟ್ ಮೃತಪಟ್ಟಿರುವುದಾಗಿ ಉತ್ತರಾಖಂಡ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮಾಹಿತಿ ನೀಡಿದೆ.

ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆಗಳು

ದುರಂತದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಉತ್ತರಾಖಂಡ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭಾರತೀಯ ಸೇನೆ, ಎಸ್‌ಡಿಆರ್‌ಎಫ್, ಐಟಿಬಿಪಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ತಂಡಗಳನ್ನು ಸ್ಥಳಕ್ಕೆ ರವಾನಿಸಿತು.

ತಕ್ಷಣ ಕಾರ್ಯಾಚರಣೆ ಆರಂಭಿಸಿದ ರಕ್ಷಣಾ ತಂಡಗಳು ಪೈಲಟ್ ಸೇರಿದಂತೆ ಮೃತಪಟ್ಟ ಎಲ್ಲಾ ಆರು ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆದಿವೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಜೋಶಿಮಠಕ್ಕೆ ರವಾನಿಸಲಾಗುತ್ತಿದೆ.

### ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಸರ್ಕಾರದ ಸಮನ್ವಯ

ಮೃತರ ಪಾರ್ಥಿವ ಶರೀರಗಳನ್ನು ಆದಷ್ಟು ಬೇಗ ಕರ್ನಾಟಕಕ್ಕೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿಗಳ ಕಚೇರಿ ಹಾಗೂ ಕರ್ನಾಟಕ ವಿಪತ್ತು ಪರಿಹಾರ ಆಯುಕ್ತರು ಉತ್ತರಾಖಂಡ ಸರ್ಕಾರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಇದರ ಜೊತೆಗೆ ದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಕಚೇರಿಯೂ ಉತ್ತರಾಖಂಡದ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯ ಸಾಧಿಸುತ್ತಿದೆ.

ಕುಟುಂಬಗಳಿಗೆ ನೆರವಿನ ಭರವಸೆ

ಈ ದುಃಖದ ಸಂದರ್ಭದಲ್ಲಿ ಮೃತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವು ಮತ್ತು ಸಹಕಾರ ಒದಗಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಇಲಾಖೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಹಾಗೂ ವಿಪತ್ತು ನಿರ್ವಹಣಾ ಆಯುಕ್ತರಾದ ಹೊನ್ನಾಂಬ ಎಸ್., ಐಎಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತರಾಖಂಡದ ಈ ದುರಂತ ರಾಜ್ಯದ ಜನತೆಯಲ್ಲಿ ತೀವ್ರ ಶೋಕ ಮೂಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹಾಗೂ ನೆರವು ಒದಗಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.

 

Leave a Reply

Your email address will not be published. Required fields are marked *