file 00000000b7248211b2614eaa06713d6c 200kb

ರೈತರ ಖಾತೆ ಗೆ : ಪಿಎಂ-ಕಿಸಾನ್ 24ನೇ ಕಂತು ಬಿಡುಗಡೆ

BUSINESS Genaral STATE

ರೈತರ ಖಾತೆಗೆ ₹18,690 ಕೋಟಿ ಜಮೆ: ಪಿಎಂ-ಕಿಸಾನ್ 24ನೇ ಕಂತು ಬಿಡುಗಡೆ

9.34 ಕೋಟಿಗೂ ಹೆಚ್ಚು ರೈತರಿಗೆ ನೇರ ಹಣ ವರ್ಗಾವಣೆ | ಮಣ್ಣಿನ ಆರೋಗ್ಯ, ಸುಸ್ಥಿರ ಕೃಷಿಗೆ ಸಚಿವೆ ಶೋಭಾ ಕರಂದ್ಲಾಜೆ ಕರೆ

ಬೆಂಗಳೂರು, ಅ.30: ರೈತರ ಆರ್ಥಿಕ ಸಬಲೀಕರಣ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಐಸಿಎಆರ್-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ICAR-IIHR) ವತಿಯಿಂದ ಬೆಂಗಳೂರಿನ ಹೆಸರಘಟ್ಟ ಆವರಣದಲ್ಲಿ ಪಿಎಂ-ಕಿಸಾನ್ ಉತ್ಸವ ದಿವಸ್ ಹಾಗೂ ‘ಕ್ಷೇತ್ರ ಬಚಾವೋ ಅಭಿಯಾನ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ನರ್ಸರಿಯಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ರೈತರು ಕೃಷಿ ಪರಿಕರಗಳನ್ನು ವಿವೇಚನೆಯಿಂದ ಬಳಸಬೇಕು. ಸಾವಯವ ಕೃಷಿ ಪದ್ಧತಿಗಳಿಗೆ ಆದ್ಯತೆ ನೀಡುವ ಮೂಲಕ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುಜರಾತಿನ ಬನಾಸಕಾಂಠದಿಂದ ಪಿಎಂ-ಕಿಸಾನ್ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು, ದೇಶದ 9.34 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ₹18,690 ಕೋಟಿಗೂ ಅಧಿಕ ಹಣ ನೇರವಾಗಿ ವರ್ಗಾವಣೆಯಾಗುತ್ತಿದೆ ಎಂದು ತಿಳಿಸಿದರು.

ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ICAR-IIHR ವಿಜ್ಞಾನಿಗಳ ಸಲಹೆ ಪಡೆಯುವಂತೆ ರೈತರಿಗೆ ಕರೆ ನೀಡಿದ ಅವರು, ರೈತರ ಅನುಕೂಲಕ್ಕಾಗಿ 1,500ಕ್ಕೂ ಹೆಚ್ಚು ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಿರುವ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಂಗವಾಗಿ ಪ್ರಗತಿಪರ ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ಅಲ್ಲದೆ, ಕ್ಷೇತ್ರ ಬಚಾವೋ ಅಭಿಯಾನದಡಿ ಮಣ್ಣಿನ ಆರೋಗ್ಯ, ಸಮತೋಲಿತ ರಸಗೊಬ್ಬರ ಬಳಕೆ, ಸಮಗ್ರ ಕೀಟ ನಿರ್ವಹಣೆ, ಹವಾಮಾನ ಸ್ನೇಹಿ ಕೃಷಿ, ಬೆಳೆ ವೈವಿಧ್ಯೀಕರಣ ಹಾಗೂ ಜಲ ಸಂರಕ್ಷಣೆ ಕುರಿತು ತಜ್ಞ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸ ನೀಡಿದರು.

ರೈತರು ಮತ್ತು ವಿಜ್ಞಾನಿಗಳ ನಡುವೆ ನೇರ ಸಂವಾದ ಏರ್ಪಡಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿನ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ನಡೆಯಿತು.

ಸುಸ್ಥಿರ ಹಾಗೂ ಹವಾಮಾನ ಸ್ನೇಹಿ ತೋಟಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಂಶೋಧನೆ, ನೂತನ ತಂತ್ರಜ್ಞಾನಗಳ ವರ್ಗಾವಣೆ ಮತ್ತು ರೈತರಿಗೆ ವೈಜ್ಞಾನಿಕ ಮಾರ್ಗದರ್ಶನ ನೀಡಲು ICAR-IIHR ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ಸಪ್ತಸ್ವರ ನ್ಯೂಸ್

 

 

 

Leave a Reply

Your email address will not be published. Required fields are marked *