file 00000000d1b08211aa801793ca8e8540 200kb

ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆಯಲು ಸಫಲ್‌ಗೆ ಹೊಸ ರೂಪ….!

BUSINESS Genaral STATE

ಖಾಸಗಿ   ಕಂಪನಿಗಳಿಗೆ ಸೆಡ್ಡು ಹೊಡೆಯಲು ಸಫಲ್‌ಗೆ ಹೊಸ ರೂಪ!

ನಂದಿನಿ, ಮೈಸೂರು ಸ್ಯಾಂಡಲ್ ಮಾದರಿಯಲ್ಲಿ ಸಫಲ್ ಬ್ರ್ಯಾಂಡ್ ಬೆಳೆಸಲು ಕರೆ – ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಗ್ರಾಹಕರಿಗೆ ಗುಣಮಟ್ಟದ ಖಾದ್ಯ ತೈಲ ಪೂರೈಕೆಗೆ ಸರ್ಕಾರದ ಒತ್ತು

ಬೆಂಗಳೂರು, ಅ.29: ಸಹಕಾರಿ ಸಂಸ್ಥೆಗಳು ಪರಸ್ಪರ ಒಗ್ಗಟ್ಟಿನಿಂ ಕಾರ್ಯನಿರ್ವಹಿಸಿ ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ನಂದಿನಿ ಮತ್ತು ಮೈಸೂರು ಸ್ಯಾಂಡಲ್ ಮಾದರಿಯಲ್ಲಿ ಸಫಲ್ ಬ್ರ್ಯಾಂಡ್ ಕೂಡ ಜನರ ವಿಶ್ವಾಸ ಗಳಿಸಿ ರಾಜ್ಯದ ಗಡಿ ದಾಟಿ ದೇಶಾದ್ಯಂತ ಜನಪ್ರಿಯವಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಫಲ್ ಬ್ರ್ಯಾಂಡ್‌ನ ನವೀಕೃತ ಲೋಗೋ ಹಾಗೂ ಹೊಸ ವಿನ್ಯಾಸದ ಪ್ಯಾಕೆಟ್‌ಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

1984ರಲ್ಲಿ ಆರಂಭವಾದ ಸಫಲ್ ಬ್ರ್ಯಾಂಡ್‌ಗೆ ಹೊಸ ರೂಪ ನೀಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ. ಗುಣಮಟ್ಟ ಮತ್ತು ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ಮೂಲಕ ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಫಲ್‌ನ ಯಶಸ್ಸು ಕೇವಲ ಒಂದು ಕಂಪನಿ ಅಥವಾ ಒಕ್ಕೂಟದ ಯಶಸ್ಸಲ್ಲ. ಇದು ಸಹಕಾರ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ನಾಂದಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆನ್‌ಲೈನ್ ಮಾರುಕಟ್ಟೆಯಲ್ಲೂ ಸಫಲ್ ಹೆಜ್ಜೆ ಗುರುತು ಮೂಡಿಸಲಿ

ಇಂದಿನ ದಿನಗಳಲ್ಲಿ ಗ್ರಾಹಕರು ಆನ್‌ಲೈನ್ ಮೂಲಕವೇ ಹೆಚ್ಚಿನ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಫಲ್ ಉತ್ಪನ್ನಗಳನ್ನು ರಾಜ್ಯದ ಪ್ರತಿಯೊಂದು ಮನೆಗೂ ತಲುಪಿಸುವ ಪ್ರಯತ್ನ ಮಾಡಬೇಕು.

ಸಹಕಾರಿ ಸಂಸ್ಥೆಗಳು ಉತ್ಪಾದನೆಗೆ ಮಾತ್ರ ಸೀಮಿತವಾಗದೆ ಮಾರುಕಟ್ಟೆ ವಿಸ್ತರಣೆ, ಗ್ರಾಹಕರ ವಿಶ್ವಾಸ ಗಳಿಕೆ ಹಾಗೂ ಹೊಸ ಮಾರಾಟ ವ್ಯವಸ್ಥೆಗಳತ್ತ ಗಮನಹರಿಸಬೇಕು ಎಂದು ಸಿಎಂ ಸಲಹೆ ನೀಡಿದರು.

ರೈತರ ಎಣ್ಣೆಕಾಳುಗಳಿಗೆ ಮೌಲ್ಯವರ್ಧನೆ ಅಗತ್ಯ

ಕರ್ನಾಟಕದಲ್ಲಿ ಕಡಲೆಕಾಯಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಎಣ್ಣೆಕಾಳುಗಳನ್ನು ರೈತರು ಬೆಳೆಯುತ್ತಿದ್ದಾರೆ. ತೆಂಗು ಕೂಡ ಪ್ರಮುಖ ಖಾದ್ಯ ತೈಲ ಉತ್ಪಾದಕ ಬೆಳೆಯಾಗಿದೆ. ರೈತರು ಬೆಳೆದ ಇಂತಹ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಉತ್ತಮ ಮಾರುಕಟ್ಟೆ ಕಲ್ಪಿಸುವುದು ಅತ್ಯಗತ್ಯ ಎಂದು ಹೇಳಿದರು.

ಎಣ್ಣೆ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿದೆ. ಅಡುಗೆಯಿಂದ ಹಿಡಿದು ವಿವಿಧ ಬಳಕೆಗಳವರೆಗೆ ಎಣ್ಣೆಗೆ ವಿಶೇಷ ಮಹತ್ವವಿದೆ. ಹೀಗಾಗಿ ರೈತರು ಬೆಳೆದ ಎಣ್ಣೆಕಾಳುಗಳಿಂದ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಬಲಗೊಳ್ಳಬೇಕು ಎಂದರು.

ನಾನು ಕಡಲೆಕಾಯಿ ಬೆಳೆಯುವ ಪ್ರದೇಶದಿಂದ ಬಂದವನಾಗಿದ್ದು, ಎಣ್ಣೆ ಉತ್ಪಾದನೆಗಾಗಿ ರೈತರು ಪಡುವ ಶ್ರಮದ ಅರಿವಿದೆ. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುವಂತೆ ಮಾಡುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.

ಸಹಕಾರ ಕ್ಷೇತ್ರವೇ ರೈತರ ಶಕ್ತಿ

1983ರಲ್ಲಿ ಕನಕಪುರದಲ್ಲಿ ಸಹಕಾರ ಕ್ಷೇತ್ರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಸಹಕಾರ ಕ್ಷೇತ್ರದೊಂದಿಗೆ ನನಗೆ ದೀರ್ಘಕಾಲದ ನಂಟಿದೆ. ಒಗ್ಗಟ್ಟಿನಿಂದ ಚರ್ಚಿಸಿ, ಸಾಮೂಹಿಕ ಪ್ರಯತ್ನದ ಮೂಲಕ ಯಶಸ್ಸು ಸಾಧಿಸುವುದೇ ಸಹಕಾರದ ಮೂಲ ಆಶಯ ಎಂದು ಸಿಎಂ ಹೇಳಿದರು.

ಸಹಕಾರಿ ಸಂಸ್ಥೆಗಳು ರೈತರ ಬೆನ್ನೆಲುಬಾಗಿವೆ. ಖಾಸಗಿ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತಿದ್ದ ಸಂದರ್ಭಗಳಲ್ಲಿ ಸಹಕಾರಿ ಬ್ಯಾಂಕುಗಳು ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ನೆರವಾಗಿವೆ. ಇಂತಹ ಸಂಸ್ಥೆಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಸಹಕಾರಿ ಸಂಸ್ಥೆಗಳ ನಿರ್ವಹಣೆಯಲ್ಲಿ ಆಡಳಿತ, ಹಣಕಾಸು ಮತ್ತು ಮಾರುಕಟ್ಟೆ ಸೇರಿದಂತೆ ಹಲವು ಸವಾಲುಗಳಿವೆ. ಆದರೂ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸಬಹುದು ಎಂದು ಅಭಿಪ್ರಾಯಪಟ್ಟರು.

ರೈತರ ಹಿತ ಕಾಯಲು ಸರ್ಕಾರ ಬದ್ಧ

ಕೃಷಿ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಕೀಟನಾಶಕಗಳು ಹಾಗೂ ಕಾರ್ಮಿಕರ ಕೂಲಿ ಸೇರಿದಂತೆ ಕೃಷಿಗೆ ಸಂಬಂಧಿಸಿದ ವೆಚ್ಚಗಳು ಹೆಚ್ಚಾಗಿವೆ. ಮತ್ತೊಂದೆಡೆ ಬೆಳೆಗಳಿಗೆ ನಿರೀಕ್ಷಿತ ಬೆಲೆ ಸಿಗದಿರುವುದು ರೈತರ ಸಂಕಷ್ಟವನ್ನು ಹೆಚ್ಚಿಸಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ರೈತರಿಗೆ ವಿದ್ಯುತ್ ಸಬ್ಸಿಡಿ ನೀಡಲು ಸುಮಾರು ₹30,000 ಕೋಟಿ ವೆಚ್ಚ ಮಾಡುತ್ತಿದೆ. ನೀರಾವರಿ ಸೇರಿದಂತೆ ಕೃಷಿಗೆ ಅಗತ್ಯವಾದ ನೆರವು ಒದಗಿಸುವ ಮೂಲಕ ರೈತರ ಬದುಕನ್ನು ಸುಧಾರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ರೈತರ ಹಿತದೃಷ್ಟಿಯಿಂದ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ನಿರ್ಧಾರಗಳನ್ನು ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗಿದೆ. ರೈತರ ಸಂಕಷ್ಟಗಳಿಗೆ ಸ್ಪಂದಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಅವರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿ ಆದಾಯ ಹೆಚ್ಚಿಸುವ ಪ್ರಯತ್ನಗಳಿಗೆ ಸರ್ಕಾರ ಸದಾ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಸಪ್ತಸ್ವರ ನ್ಯೂಸ್

Leave a Reply

Your email address will not be published. Required fields are marked *