ಬರ ನಿರ್ವಹಣೆ ಪರಿಶೀಲನೆ: ಪಾವಗಡಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭೇಟಿ
ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ | ಬರ ಪರಿಹಾರ, ವಿದ್ಯುತ್ ವ್ಯತ್ಯಯ ಹಾಗೂ ರೈತರ ಸಮಸ್ಯೆಗಳ ಕುರಿತು ಪರಿಶೀಲನೆ
ಪಾವಗಡ: ತಾಲ್ಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಗುರುವಾರ ಪಾವಗಡ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ನಿರ್ವಹಣಾ ಕಾರ್ಯಗಳ ಪ್ರಗತಿ ಪರಿಶೀಲಿಸಿದರು. ಕುಡಿಯುವ ನೀರಿನ ಸಮಸ್ಯೆ, ಕೃಷಿ ಬೆಳೆಗಳ ಸ್ಥಿತಿ, ಜಾನುವಾರುಗಳಿಗೆ ನೀರು ಮತ್ತು ಮೇವಿನ ಲಭ್ಯತೆ ಸೇರಿದಂತೆ ಗ್ರಾಮೀಣ ಭಾಗದ ವಿವಿಧ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ರಾಜವಂತಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ರಾಜವಂತಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಜಲ ಜೀವನ್ ಮಿಷನ್ ಯೋಜನೆಯಡಿ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎಂದು ದೂರಿದರು. ಪಂಚಾಯಿತಿ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕುಡಿಯುವ ನೀರಿಗಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸ್ಥರ ದೂರಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಧುಸೂದನ್ ಹಾಗೂ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಬಸವಲಿಂಗಪ್ಪ ಅವರಿಗೆ ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇದೇ ವೇಳೆ ಗ್ರಾಮದಲ್ಲಿ ಬರ ಪರಿಹಾರದಡಿ ಕೊರೆಸಿರುವ ನೂತನ ಕೊಳವೆಬಾವಿಯನ್ನು ಪರಿಶೀಲಿಸಿ, ನೀರಿನ ಲಭ್ಯತೆ ಮತ್ತು ವಿತರಣಾ ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು. ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಖುದ್ದಾಗಿ ಪರಿಶೀಲಿಸಿದರು.
ಪಿಡಿಒಗಳು, ವಾಟರ್‌ಮನ್‌ಗಳಿಗೆ ಖಡಕ್ ಸೂಚನೆ
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಿಡಿಒಗಳು ಹಾಗೂ ವಾಟರ್‌ಮನ್‌ಗಳ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಪಂಚಾಯಿತಿವಾರು ಕುಡಿಯುವ ನೀರಿನ ಪ್ರಸ್ತುತ ಸ್ಥಿತಿ ಮತ್ತು ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಪಡೆದರು.
ತಾಲ್ಲೂಕಿನ ಯಾವುದೇ ಗ್ರಾಮದಲ್ಲಿಯೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವ ಗ್ರಾಮಗಳನ್ನು ಗುರುತಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಹಾಗೂ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವುದಿಲ್ಲ ಎಂಬ ರೈತರ ದೂರಿನ ಹಿನ್ನೆಲೆಯಲ್ಲಿ, ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.
ರೈತ ಸಂಘದಿಂದ ವಿವಿಧ ಬೇಡಿಕೆಗಳ ಮನವಿ
ದೊಡ್ಡಹಟ್ಟಿ ಗ್ರಾಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಅವರ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.
ಜಾನುವಾರುಗಳಿಗೆ ಕೊಳವೆಬಾವಿ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಬ್ಯಾಡನೂರು ಗ್ರಾಮಕ್ಕೆ ವಾಟರ್‌ಮನ್ ನೇಮಕ ಮಾಡಬೇಕು ಹಾಗೂ ಪ್ರತಿ ಎಕರೆಗೆ ₹25 ಸಾವಿರ ಬರ ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಶಿವು ಎಂಬುವರು, ಶಾಲೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು, ದಾನಿಗಳು ನೀಡಿರುವ ನಾಲ್ಕು ಎಕರೆ ಜಮೀನು ಒತ್ತುವರಿಯಾಗುತ್ತಿರುವ ಸಮಸ್ಯೆ ಪರಿಹರಿಸಬೇಕು ಹಾಗೂ ಬ್ಯಾಡನೂರು ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ರೈತರು ಹಾಗೂ ಗ್ರಾಮಸ್ಥರು ಸಲ್ಲಿಸಿದ ಮನವಿಗಳ ಕುರಿತು ಪರಿಶೀಲಿಸಿ, ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ತುಂಗಭದ್ರಾ ಯೋಜನೆಯ ನೀರು ಬಳಸಲು ಸಲಹೆ
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ತುಂಗಭದ್ರಾ ಯೋಜನೆಯಿಂದ ಶುದ್ಧೀಕರಿಸಿ ಪೂರೈಸಲಾಗುವ ಕುಡಿಯುವ ನೀರನ್ನು ತಾಲ್ಲೂಕಿನ ಜನರು ಬಳಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ 30 ಸಾವಿರ ಲೀಟರ್‌ನಷ್ಟು ಹೆಚ್ಚಳವಾಗಿದ್ದರೂ, ಪಾವಗಡದಲ್ಲಿ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಹಾಲಿನ ಉತ್ಪಾದನೆ ಇಳಿಕೆಯಾಗಿದೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.
ಮುಂದಿನ 14 ವಾರಗಳವರೆಗೆ ಮೇವಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಾಲ್ಲೂಕಿನಲ್ಲಿ ವಿದ್ಯುತ್ ವ್ಯತ್ಯಯ ತಪ್ಪಿಸುವಂತೆ ಬೆಸ್ಕಾಂ ಅಧೀಕ್ಷಕ ಎಂಜಿನಿಯರ್‌ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬರ ಪರಿಸ್ಥಿತಿಗೆ ಸಂಬಂಧಿಸಿದ ದೂರುಗಳು ಹಾಗೂ ಸಮಸ್ಯೆಗಳನ್ನು ದಾಖಲಿಸಲು ಜಿಲ್ಲಾಧಿಕಾರಿ ಕಚೇರಿಯ 24 ಗಂಟೆಗಳ ಸಹಾಯವಾಣಿ 0816-2213400 ಸಂಪರ್ಕಿಸಬಹುದು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಅಧಿಕಾರಿಗಳು ಭಾಗಿ
ಸಭೆಯಲ್ಲಿ ತಹಶೀಲ್ದಾರ್ ವೈ. ರವಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಧುಸೂದನ್, ಕುಡಿಯುವ ನೀರು ವಿಭಾಗದ ಎಂಜಿನಿಯರ್ ಬಸವಲಿಂಗಪ್ಪ, ಸಹಾಯಕ ನಿರ್ದೇಶಕ ಮಾರುತಿ ಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ಜಾಫರ್, ಕೃಷಿ ಇಲಾಖೆಯ ಅಜಯ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸಲು.ಎ
ಸಪ್ತಸ್ವರ ನ್ಯೂಸ್
