file 00000000a99c8211b5d750e2cbbcbf41 200kb

ಸ್ಟಿಂಗ್ ಪ್ರಕರಣ : ಕುಮಾರಸ್ವಾಮಿ ನಿವಾಸದಲ್ಲಿ ಮೊಬೈಲ್ ಹಸ್ತಾಂತರ…!

CRIME Genaral STATE

ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಹೊಸ ತಿರುವು: ಕುಮಾರಸ್ವಾಮಿ ನಿವಾಸದಲ್ಲಿ ಮೊಬೈಲ್ ಹಸ್ತಾಂತರ?

ದೆಹಲಿಯ ಕರೋಲ್ ಬಾಗ್‌ನಲ್ಲಿ ಮೊಬೈಲ್ ಖರೀದಿ; ಕೇಂದ್ರ ಸಚಿವರ ಅಧಿಕೃತ ನಿವಾಸದಲ್ಲಿ ಪ್ರಜ್ವಲ್ ಪ್ರಸಾದ್‌ಗೆ ಹಸ್ತಾಂತರ – ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ

ಬೆಂಗಳೂರು, ನ.1:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಹೊಸ ಬೆಳವಣಿಗೆಗಳು ಬೆಳಕಿಗೆ ಬಂದಿವೆ. ಪ್ರಕರಣದಲ್ಲಿ ಬಳಕೆಯಾದ ಮೊಬೈಲ್ ಫೋನ್‌ಗಳನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ಹಸ್ತಾಂತರಿಸಲಾಗಿದೆ ಎಂದು ಆರೋಪಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಅಕ್ಟೋಬರ್ 24ರಂದು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ರಿತೇಶ್ ಪಾಂಡೆ ಎಂಬಾತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಅಂಗಡಿಯೊಂದರಲ್ಲಿ ಮೊಬೈಲ್ ಫೋನ್ ಖರೀದಿಸಿ, ಅದನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಪ್ರಜ್ವಲ್ ಪ್ರಸಾದ್‌ಗೆ ಹಸ್ತಾಂತರಿಸಿರುವುದಾಗಿ ಆರೋಪಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕರೋಲ್ ಬಾಗ್‌ನಲ್ಲಿ ಮೊಬೈಲ್ ಖರೀದಿ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಜ್ವಲ್ ಪ್ರಸಾದ್ ನೀಡಿದ ಸೂಚನೆಯಂತೆ ವಿನೋದ್ ಶರ್ಮಾ ಮತ್ತು ರಿತೇಶ್ ಪಾಂಡೆ ದೆಹಲಿಯ ಕರೋಲ್ ಬಾಗ್‌ಗೆ ತೆರಳಿ ಮೊಬೈಲ್ ಫೋನ್ ಖರೀದಿಸಿದ್ದರು ಎನ್ನಲಾಗಿದೆ. ಬಳಿಕ ಖರೀದಿಸಿದ ಮೊಬೈಲ್‌ಗಳನ್ನು ಪ್ರಜ್ವಲ್ ಪ್ರಸಾದ್‌ಗೆ ಹಸ್ತಾಂತರಿಸಿರುವುದಾಗಿ ರಿತೇಶ್ ಪಾಂಡೆ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಇಬ್ಬರು ಪ್ರಮುಖ ಆರೋಪಿಗಳು ನಾಪತ್ತೆ

ಪ್ರಕರಣದಲ್ಲಿ ಪ್ರಜ್ವಲ್ ಪ್ರಸಾದ್ ಮತ್ತು ವಿನೋದ್ ಶರ್ಮಾ ಅವರ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್ ಜಾರಿಗೊಳಿಸಲಾಗಿದೆ. ಆದರೆ ಇಬ್ಬರೂ ಪ್ರಸ್ತುತ ನಾಪತ್ತೆಯಾಗಿದ್ದು, ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಹಣಕಾಸಿನ ವಹಿವಾಟಿನ ಮೇಲೂ ತನಿಖೆ

ರಿತೇಶ್ ಪಾಂಡೆ ಮತ್ತು ಪ್ರಜ್ವಲ್ ಪ್ರಸಾದ್ ನಡುವೆ ನಡೆದಿರುವ ಅನುಮಾನಾಸ್ಪದ ಹಣಕಾಸಿನ ವಹಿವಾಟಿನ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆಕ್ಷೇಪಾರ್ಹ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲು ಯಾರ ಸೂಚನೆ ಇತ್ತು? ಇದರ ಹಿಂದೆ ಯಾರಾದರೂ ಪ್ರಭಾವಿಗಳ ಕೈವಾಡವಿದೆಯೇ? ಹಣಕಾಸಿನ ವ್ಯವಹಾರಗಳ ಮೂಲ ಯಾವುದು? ಎಂಬ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವವರ ಉದ್ದೇಶ, ವಿಡಿಯೋ ಅಪ್‌ಲೋಡ್‌ಗೆ ನೀಡಲಾದ ಸೂಚನೆಗಳು ಹಾಗೂ ಹಣಕಾಸಿನ ವ್ಯವಹಾರಗಳ ಸಂಪೂರ್ಣ ವಿವರಗಳನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ಸಪ್ತಸ್ವರ ನ್ಯೂಸ್ | ಬೆಂಗಳೂರು

Leave a Reply

Your email address will not be published. Required fields are marked *