ರಾಜ್ಯ ಸರ್ಕಾರದ ಮೇಲೆ ಪ್ರಧಾನಿಗಳಿಂದ ಹಿಡಿದು ಸಾಮಾನ್ಯರವರೆಗೂ ಯಾರಿಗೂ ವಿಶ್ವಾಸ ಇಲ್ಲ: ಡಿ.ಕೆ ಶಿವಕುಮಾರ್
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು, ಸಂಸದರು, ಮಂತ್ರಿಗಳು, ಶಾಸಕರು, ಅಧಿಕಾರಿಗಳು ಹಾಗೂ ಜನಸಾಮಾನ್ಯರವರೆಗೂ ಯಾರಿಗೂ ವಿಶ್ವಾಸ ಇಲ್ಲ. ಹೀಗಾಗಿ ನಾವು ಈ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ಪಕ್ಷ ಮಂಡಿಸಿರುವ ಅವಿಶ್ವಾಸ ನಿರ್ಣಯ ಪ್ರಸ್ತಾವನೆ ಚರ್ಚೆ ವೇಳೆ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ನಾನು 7ನೆ ಬಾರಿಗೆ ಸದನಕ್ಕೆ ಬಂದಿದ್ದೇನೆ. ಅನೇಕ ಚರ್ಚೆ ಗಮನಿಸಿದ್ದೇನೆ. ಈ ಹಿಂದೆ ಮಾಧುಸ್ವಾಮಿ ಅವರನ್ನು ನೋಡಿದ್ದೇನೆ. ಆದರೆ ಇವತ್ತು ಅವರು ಸದನದ ದಾರಿ ತಪ್ಪಿಸಿದ್ದು, ಶಾಸಕಾಂಗಕ್ಕೆ ಬಹು ದೊಡ್ಡ ಕಪ್ಪುಚುಕ್ಕೆಯಾಗಿದೆ.’
‘ನಾವು ಸಾರ್ವಜನಿಕ ಜೀವನದಲ್ಲಿದ್ದು, ಎಲ್ಲರೂ ಪ್ರಾಮಾಣಿಕವಾಗಿರಬೇಕು. 10 ವರ್ಷಗಳ ಹಿಂದೆ ಇದೇ ಸದನದಲ್ಲಿ ರಮೇಶ್ ಕುಮಾರ್ ಅವರು ಒಂದು ಮಾತು ಹೇಳಿದ್ದರು. ‘ಶಿಲೆಗೊಂದು ಕಾಲ, ಮನುಷ್ಯನಿಗೊಂದು ಕಾಲ, ಹಾಗೆಯೇ ಮನುಷ್ಯನಿಗೂ ಒಂದು ಕಾಲ’ ಹಾಗೆ ಎಲ್ಲರಿಗೂ ಒಂದೊಂದು ಕಾಲ.’
‘ಯಡಿಯೂರಪ್ಪ ಅವರು ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅವರ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಇಂತಹ ಕೆಟ್ಟ ಸಂದರ್ಭ ನಿರ್ಮಾಣವಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ.’
‘ನಾವು ಮಂಡಿಸಿರುವ ಈ ಅವಿಶ್ವಾಸ ನಿರ್ಣಯ ಕಾಂಗ್ರೆಸ್ ನದ್ದಲ್ಲ, ರಾಜ್ಯದ ಜನರದ್ದು.’
‘ಸರಕಾರದ ಕೋವಿಡ್ ನಿರ್ವಹಣೆ ಬಗ್ಗೆ ಯಾರಿಗೂ ವಿಶ್ವಾಸ ಇಲ್ಲ. ಕೊರೋನಾ ಸೇರಿದಂತೆ ಯಾವುದೇ ವಿಚಾರದಲ್ಲೂ ಭ್ರಷ್ಟಾಚಾರ ನಡೆದಿಲ್ಲ ಎಂಬ ವಿಶ್ವಾಸ ಇಲ್ಲ.’
‘ಈ ರಾಜ್ಯದ ರೈತನಿಗೆ, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ತಂದೆ-ತಾಯಿಯರಿಗೆ, ಕಾರ್ಮಿಕರಿಗೆ, ಶ್ರಮಿಕರಿಗೆ, ವೈದ್ಯಕೀಯ ಸಿಬ್ಬಂದಿಗೆ ಈ ಸರಕಾರದ ಬಗ್ಗೆ ವಿಶ್ವಾಸ ಇಲ್ಲ.’
‘ಕೋವಿಡ್ ಸಮಯದಲ್ಲಿ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿತ್ತು. ಆದರೆ ಅದು ಯಾರಿಗೂ ಸರಿಯಾಗಿ ತಲುಪಲಿಲ್ಲ. ಹಾಗಿದ್ದ ಮೇಲೆ ಶ್ರಮಿಕರು, ರೈತರು, ನೇಕಾರರು, ಕ್ಷೌರಿಕರು ಮತ್ತಿತರ ವರ್ಗದವರಿಗೆ ವಿಶ್ವಾಸ ಹೇಗೆ ಬರಬೇಕು..?
‘ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಚಿವ ಸಿ.ಟಿ ರವಿ ಅವರು ತಮ್ಮ ಒಂದೇ ಇಲಾಖೆಯಲ್ಲಿ 30 ಲಕ್ಷ ಉದ್ಯೋಗ ನಷ್ಟ ಎಂದರು. ಇನ್ನೂ ಹೋಟೆಲ್, ಗಾರ್ಮೆಂಟ್ಸ್ ಸೇರಿದಂತೆ ಅನೇಕ ಉದ್ಯಮಗಳು ಕಷ್ಟಕ್ಕೆ ಸಿಲುಕಿವೆ. ಇವರಿಗೆಲ್ಲ ಸರ್ಕಾರದ ಮೇಲೆ ವಿಶ್ವಾಸ ಇಲ್ಲ?’
‘ಸದನದಲ್ಲಿರುವ 60-70 ಜನರಿಗೆ ವಿಶ್ವಾಸ ಅಲ್ಲ. ರಾಜ್ಯದ ಆರೂವರೆ ಕೋಟಿ ಜನರ ವಿಶ್ವಾಸ ಬೇಕಲ್ಲ? ಅದು ಎಲ್ಲಿದೆ? ರಾಜ್ಯದಲ್ಲಿ ಪಿಂಚಣಿ ನೀಡಿಲ್ಲ, ಪಡಿತರ ಆಹಾರ ಪದಾರ್ಥ ನೀಡಿಲ್ಲ.’
‘ಇವತ್ತು 25 ಜನ ಬಿಜೆಪಿ ಸಂಸದರಿದ್ದಾರೆ. ಅವರಿಗೆ ಈ ಸರ್ಕಾರದ ಮೇಲೆ, ಸಿಎಂ ಮೇಲೆ ವಿಶ್ವಾಸ ಇಲ್ಲ. ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ, ನೆರವು ನೀಡಿ ಅಂತಾ ಪ್ರಧಾನಿಗಳ ಮುಂದೆ ಸಿಎಂ ಪರವಾಗಿ ಹೇಳಿಲ್ಲ. ಅವರ ಮನವಿಗೆ ಧ್ವನಿಯಾಗಿಲ್ಲ.’
‘ಗರೀಬ್ ಕಲ್ಯಾಣ ಯೋಜನೆಯಡಿ ಪ್ರಧಾನ ಮಂತ್ರಿಗಳು 50 ಸಾವಿರ ಕೋಟಿ ರುಪಾಯಿ ಹಣ ಕೊಟ್ಟಿದ್ದಾರೆ. ನಮ್ಮ ಜಿಲ್ಲೆಯಿಂದ ಕೋಲಾರದಿಂದ, ಕೆಜಿಎಫ್ ನಿಂದ ಹೀಗೆ ಲಕ್ಷಾಂತರ ಜನ ಬೆಂಗಳೂರಿಗೆ ಬಂದಿದ್ದಾರೆ. ಆದರೆ ನಮ್ಮ ರಾಜ್ಯದ ಒಂದು ಜಿಲ್ಲೆಯೂ ಈ ಯೋಜನೆಗೆ ಸೇರಿಲ್ಲ. ದೇಶದ 116 ಜಿಲ್ಲೆಗೆ ಅನುಕೂಲ ಆಗಲು ರೂಪಿಸಿದ್ದ ಈ ಯೋಜನೆ ಕೇವಲ ಉತ್ತರ ಪ್ರದೇಶ, ಬಿಹಾರ ಸೇರಿ ಆರು ರಾಜ್ಯಕ್ಕೆ ಮಾತ್ರ ಸೀಮಿತವಾಯಿತು. ಕರ್ನಾಟಕ ಮಾಡಿದ್ದ ಪಾಪವಾದರೂ ಏನು?’
‘ಕೇಂದ್ರ ಸರ್ಕಾರಕ್ಕೂ ರಾಜ್ಉ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ರಾಜ್ಯದ ರೈಲ್ವೆ ಮಾರ್ಗ ಖಾಸಗೀಕರಣ ಮಾಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಆದರೆ ಒಬ್ಬನೇ ಒಬ್ಬ ಬಿಜೆಪಿ ಸಂಸದ, ನಮ್ಮ ಸಿಎಂ ಇದರ ವಿರುದ್ಧ ಧ್ವನಿ ಎತ್ತಲಿಲ್ಲ. ನಮ್ಮ ರಾಜ್ಯದ ಉದ್ಯೋಗ, ಆಸ್ತಿ ಬಗ್ಗೆ ಅವರಾರಿಗೂ ಕಾಳಜಿ ಇಲ್ಲ.’
‘ಬಿಡಿಎ ಹಗರಣದಲ್ಲಿ ಆರೋಪಿಯಾಗಿರುವ ವ್ಯಕ್ತಿ, ಅವರ ಹೆಸರು ಹೇಳಲು ನಾನು ಹೋಗುವುದಿಲ್ಲ. ಆದರೆ ಅವರು ಸುದ್ದಿ ವಾಹಿನಿ ಮೇಲೆ, ನಮ್ಮ ನಾಯಕರಾದ ಸುರ್ಜೇವಾಲ ಅವರ ವಿರುದ್ಧ ಟ್ವೀಟ್ ಮಾಡಿದ್ದಾರೆ. ಅವರದ್ದೇ ಸರ್ಕಾರ ಇದೆ. ಸುದ್ದಿ ವಾಹಿನಿ ಅಥವಾ ಸುರ್ಜೆವಾಲ ಅವರು ತಪ್ಪು ಮಾಡಿದ್ದರೆ, ಟ್ವೀಟ್ ಮಾಡುವುದು ಬೇಡ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಲಿ. ನನ್ನನ್ನೂ ಕಳುಹಿಸಲಿ. ನಮ್ಮ ನಾಯಕರಾದ ಸಿದ್ದರಾಮಯ್ಯ ಅವರನ್ನೂ ಕಳುಹಿಸಲಿ. ತಪ್ಪು ಮಾಡಿದ್ದರೆ ಅದನ್ನು ಅಬುಭವಿಸಲು ನಾವು ಸಿದ್ಧ.’
‘ಆದರೆ ಸದನದಲ್ಲಿ ಯಾರ ವಿಚಾರವನ್ನು ಮಾತನಾಡಬಾರದು ಎಂದು ಮಾಧುಸ್ವಾಮಿ ಹೇಳಿದ್ದಾರೆ. ನಾವೆಲ್ಲ ರಾಜಕಾರಣದಲ್ಲಿದ್ದೇವೆ. ಸಾರ್ವಜನಿಕ ಬದುಕಿನಲ್ಲಿ ಇದ್ದೇವೆ. ಯಾರೂ ನಿವೃತ್ತರಾಗುವುದು ಬೇಡ. ನಾವು ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಇರಬೇಕಲ್ಲ.. ನಾವು ತಪ್ಪು ಮಾಡಿದರೆ ತನಿಖೆ ಮಾಡಲಿ, ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ, ಅನುಭವಿಸೋಣ.’
‘ಈ ವಿಚಾರದಲ್ಲಿ ನಮ್ಮ ವಿರೋಧ ಪಕ್ಷದ ನಾಯಕರ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಅಧಿಕಾರಿಗಳು, ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಿ. ಅವತ್ತೇ ಮಾಡಬಹುದಿತ್ತಲ್ಲ, ಅವರನ್ನು ಯಾಕೆ ರಕ್ಷಿಸುತ್ತಿದ್ದೀರಿ? ನಾನು ಎದುರಿಸುತ್ತಿಲ್ಲವೇ? ಕೊಡಿ, ಸಿಬಿಐಗೆ, ಇಡಿಗೆ. ನಮ್ಮ ಸರ್ಕಾರದ ಇದ್ದಾಗ ಏನೇನು ಅಕ್ರಮ ಇದೆಯೋ ತನಿಖೆಗೆ ಆದೇಶಿಸಿ. ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಅದೇ ರೀತಿ ನಿಮ್ಮ ವಿರುದ್ಧ, ನಿಮ್ಮ ಕುಟುಂಬದ ಸದಸ್ಯರ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆಯೂ ತನಿಖೆ ಆಗಲಿ. ನೀವು ನಿರ್ಮಲರಾಗಿದ್ದರೆ ಗೆದ್ದು ಬನ್ನಿ. ಹಿಂದೆ ನಿಮ್ಮ ವಿರುದ್ಧ ಏನೇನೂ ಆರೋಪ ಬಂದಿತ್ತು, ಯಾಕಾಗಿ ಬಂದಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಈಗೇಕೆ ತನಿಖೆಗೆ ಹೆದರುತ್ತಿದ್ದೀರಿ. ಅದರರ್ಥ ನೀವೂ ಈ ಹಗರಣದಲ್ಲಿ ಷಾಮೀಲಾಗಿದ್ದೀರಿ ಎಂಬ ಭಾವನೆ ಮೂಡುತ್ತದೆ.’