ಲಂಚ ಕೇಳಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ: ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ
ಹಿರಿಯೂರಿನ ಪ್ರಜಾಸೇವೆಯಲ್ಲಿ ಜನರ ಅಹವಾಲು ಆಲಿಸಿದ ಮುಖ್ಯಮಂತ್ರಿ 85 ವರ್ಷದ ಅಜ್ಜಿಗೆ ಭೂಮಿ ಮಂಜೂರಾತಿ ಭರವಸೆ; ಗರ್ಭಿಣಿಯರಿಗಾಗಿ ಬಸ್ ನಿಲುಗಡೆಗೆ ಸೂಚನೆ ಅರ್ಜಿದಾರನೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಜನರ ಮನ ಗೆದ್ದ ಸಿಎಂ
ಹಿರಿಯೂರು, ನ.21: ಖಾತೆ ಮಾಡಿಕೊಡಲು ಲಂಚ ಕೇಳಿದ ಅಧಿಕಾರಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಹಿರಿಯೂರು ತಾಲ್ಲೂಕಿನ ಕೆ.ಎಂ. ಕೊಟ್ಟಿಗೆ ಎಕೆ ಕಾಲೋನಿಯ ಕೆ. ಚಂದ್ರು ಎಂಬುವರು ಖಾತೆ ಮಾಡಿಕೊಡಲು ಅಧಿಕಾರಿ ಲಂಚ ಕೇಳುತ್ತಿರುವ ಬಗ್ಗೆ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಿದರು.
ದೂರಿಗೆ ತೀವ್ರವಾಗಿ ಸ್ಪಂದಿಸಿದ ಮುಖ್ಯಮಂತ್ರಿ, “ಲಂಚ ಕೇಳಿರುವುದು ನಿಜವೆಂದು ಪರಿಶೀಲನೆಯಲ್ಲಿ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡಿ. ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಇಂದೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಇಂತಹ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹಿರಿಯೂರಿನಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ರೈತರಿಗೆ ಜಮೀನುಗಳಿಗೆ ತೆರಳಲು ರಸ್ತೆ ಇಲ್ಲದಿರುವುದು, ಗರ್ಭಿಣಿಯರು ಮತ್ತು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ದೊರೆಯದಿರುವುದು, ಶಾಲೆಗಳಿಗೆ ಕಟ್ಟಡದ ಕೊರತೆ, ಬಡವರಿಗೆ ನಿವೇಶನ ಮಂಜೂರಾತಿ ಸೇರಿದಂತೆ ಹತ್ತಾರು ಸಮಸ್ಯೆಗಳು ಮುಖ್ಯಮಂತ್ರಿಗಳ ಗಮನಕ್ಕೆ ಬಂದವು.
ತಾಯಿ, ಟೆನ್ಷನ್ ಮಾಡಿಕೊಳ್ಳಬೇಡಿ; ನಾನಿದ್ದೇನೆ!
ಯರಿಚಿಕ್ಕನಹಳ್ಳಿಯ ಮಾನಸ ಮತ್ತು ರವಿ ಎಂಬುವರು ತಮ್ಮ ಜಮೀನಿನ ಮೇಲೆ ಹೈಟೆನ್ಷನ್ ವಿದ್ಯುತ್ ಮಾರ್ಗ ಹಾದುಹೋಗುವುದರಿಂದ ಕೃಷಿ ಜಮೀನು ಹಾಗೂ ಅಡಿಕೆ ತೋಟಗಳಿಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ತಾಲ್ಲೂಕಿನ 22 ಗ್ರಾಮಗಳ ರೈತರು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದಾಗ, “ತಾಯಿ, ಟೆನ್ಷನ್ ಮಾಡಿಕೊಳ್ಳಬೇಡಿ. ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ” ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. ಎರಡು ಮೂರು ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗರ್ಭಿಣಿಯರಿದ್ದರೂ ಬಸ್ ನಿಲ್ಲಿಸದಿರುವುದೇಕೆ?
ಪತ್ರಿಕಾ ವಿತರಕ ಏಕಾಂತಪ್ಪ ಅವರು ಕೆಎಸ್ಆರ್ಟಿಸಿ ಬಸ್ಗಳು ಪಟ್ಟಣದೊಳಗೆ ಬಾರದೆ ಬೈಪಾಸ್ನಲ್ಲಿ ನಿಲ್ಲಿಸುತ್ತಿರುವುದರಿಂದ ಮಹಿಳೆಯರು, ಗರ್ಭಿಣಿಯರು, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ, “ಗರ್ಭಿಣಿಯರಿದ್ದರೂ ಬಸ್ ಏಕೆ ನಿಲ್ಲಿಸುವುದಿಲ್ಲ? ಮಾನವೀಯತೆ ಇಲ್ಲವೇ? ಕೂಡಲೇ ಸಮಸ್ಯೆ ಬಗೆಹರಿಸಿ ವರದಿ ನೀಡಬೇಕು. ಈ ಸಮಸ್ಯೆ ಮತ್ತೆ ಪುನರಾವರ್ತನೆಯಾಗಬಾರದು” ಎಂದು ಕೆಎಸ್ಆರ್ಟಿಸಿ ವಿಭಾಗೀಯ ಅಧಿಕಾರಿಗೆ ಸೂಚಿಸಿದರು.
85 ವರ್ಷದ ಅಜ್ಜಿಗೆ ಭೂಮಿ ಮಂಜೂರಾತಿ ಭರವಸೆ
ಕಸವನಹಳ್ಳಿಯ 85 ವರ್ಷದ ಲಕ್ಷ್ಮಮ್ಮ ಅವರು ತಮಗೆ ಸ್ವಂತ ಭೂಮಿ ಇಲ್ಲ. ಬದುಕಲು ಸ್ವಲ್ಪ ಜಮೀನು ಮಂಜೂರು ಮಾಡಿಕೊಡಿ ಎಂದು ಮುಖ್ಯಮಂತ್ರಿಗಳ ಕೈಹಿಡಿದು ಮನವಿ ಮಾಡಿದರು.
ಅಜ್ಜಿಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, “ಅಜ್ಜಿ, ನಿಮಗೆ ಭೂಮಿ ಮಂಜೂರು ಮಾಡಿಸಿಕೊಡುತ್ತೇವೆ. ಯಾವುದೇ ಚಿಂತೆ ಮಾಡಬೇಡಿ” ಎಂದು ಭರವಸೆ ನೀಡಿದರು. ಇದರಿಂದ ಲಕ್ಷ್ಮಮ್ಮ ಅವರ ಮುಖದಲ್ಲಿ ಸಂತಸ ಮೂಡಿತು.
15 ಹೊಲಗಳಿಗೆ ಸಂಪರ್ಕ ರಸ್ತೆಯೇ ಇಲ್ಲ!
ತಹಶೀಲ್ದಾರ್ ಅವರಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಸುಮಾರು 10ರಿಂದ 15 ಹೊಲಗಳಿಗೆ ತೆರಳಲು ದಾರಿ ಇಲ್ಲದಂತಾಗಿದೆ ಎಂದು ರೈತರು ಅಹವಾಲು ಸಲ್ಲಿಸಿದರು. ರೈತರ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸರ್ಕಾರಿ ಶಾಲೆಗೆ ಕಟ್ಟಡವಿಲ್ಲ, ಎಲ್ಕೆಜಿಗೂ ಅವಕಾಶವಿಲ್ಲ!
ಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಕೊರತೆಯಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಎಲ್ಕೆಜಿ ಆರಂಭಿಸಲು ಅವಕಾಶ ಕಲ್ಪಿಸಬೇಕು ಎಂದು ಪ್ರಸನ್ನ ಎಂಬುವರು ಮನವಿ ಮಾಡಿದರು.
ಈ ಹಿಂದೆ ಡಿಡಿಪಿಐ ಎರಡು ಬಾರಿ ಭೇಟಿ ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ದೂರಿದರು. ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ, ಡಿಡಿಪಿಐ ಅವರನ್ನು ಕರೆದು ಅರ್ಜಿ ಪಡೆದು ಮೊದಲು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ವಕೀಲರ ಭವನಕ್ಕೆ ₹3 ಕೋಟಿ ಅನುದಾನಕ್ಕೆ ಮನವಿ
ಹಿರಿಯೂರಿನಲ್ಲಿ 250ಕ್ಕೂ ಹೆಚ್ಚು ವಕೀಲರು ಕಾರ್ಯನಿರ್ವಹಿಸುತ್ತಿದ್ದು, ವಕೀಲರ ಭವನ ಹಾಗೂ ಮೂಲಸೌಕರ್ಯಗಳ ಕೊರತೆ ಇದೆ. ಭವನ ನಿರ್ಮಾಣಕ್ಕೆ ₹3 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ಮಾಡುವಂತೆ ವಕೀಲರ ಪ್ರತಿನಿಧಿಗಳು ಮನವಿ ಸಲ್ಲಿಸಿದರು.
ಮಹಿಳೆಯರಿಗೆ ಉದ್ಯಾನವನ, ಸಾರ್ವಜನಿಕರಿಗೆ ಶೌಚಾಲಯ
ಧರ್ಮಪುರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಹಾಗೂ ಹಿರಿಯೂರಿನಲ್ಲಿ ಇಂದಿರಾ ಗಾಂಧಿ ಉದ್ಯಾನವನ ಸ್ಥಾಪಿಸಿ ಮಹಿಳೆಯರಿಗೆ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಮನೆ ನಿರ್ಮಾಣದ ಬಿಲ್ ಬಾಕಿ: ಸಮಸ್ಯೆ ಪರಿಹರಿಸಲು ಸೂಚನೆ
ಮನೆ ನಿರ್ಮಾಣ ಪೂರ್ಣಗೊಂಡಿದ್ದರೂ ಫಲಾನುಭವಿಗಳಿಗೆ ಬಿಲ್ ಪಾವತಿಯಾಗಿಲ್ಲ ಎಂಬ ದೂರುಗಳು ಕೇಳಿಬಂದವು. ಅರ್ಜಿ ಸಲ್ಲಿಕೆಯಲ್ಲಿ ಲೋಪಗಳಿದ್ದರೆ ಅವುಗಳನ್ನು ಸರಿಪಡಿಸಿ, ಬಾಕಿ ಸಮಸ್ಯೆಗಳನ್ನು ಪರಿಹರಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.
ಯುವಕನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮುಖ್ಯಮಂತ್ರಿ!
ಅಲೆಮಾರಿ ಸಮುದಾಯದವರಿಗೆ ಮನೆಗಳಿಲ್ಲ, ವಾಸಿಸಲು ಸೂರಿಲ್ಲ ಎಂದು ಯುವಕನೊಬ್ಬ ಅರ್ಜಿ ಹಿಡಿದು ಬಂದಿದ್ದ. ಆತನ ಅಹವಾಲನ್ನು ಆಲಿಸಿದ ಮುಖ್ಯಮಂತ್ರಿ, “ಆಯ್ತು ಬಿಡಪ್ಪ, ಮನೆ ಕೊಡಿಸೋಣ. ನಾನಿದ್ದೇನೆ, ಯಾವುದೇ ಚಿಂತೆ ಬೇಡ” ಎಂದು ಧೈರ್ಯ ತುಂಬಿದರು.
ಬಳಿಕ ಯುವಕನ ಮೊಬೈಲ್ ಪಡೆದು ಆತನೊಂದಿಗೆ ಸ್ವತಃ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮುಖ್ಯಮಂತ್ರಿಗಳೇ ಸೆಲ್ಫಿ ತೆಗೆದುಕೊಂಡಿದ್ದರಿಂದ ಯುವಕನ ಮುಖದಲ್ಲಿ ಸಂತಸ ಮನೆಮಾಡಿತು.
ಮಾಜಿ ಸೈನಿಕನಿಗೂ ನಿವೇಶನದ ಮನವಿ
ಹೊಸ ಎಳನಾಡಿನ ನಿವಾಸಿ, ಮಾಜಿ ಸೈನಿಕ ವೆಂಕಟೇಶ್ ಅವರು ದೇಶಸೇವೆ ಮಾಡಿರುವ ತಮಗೆ ನಿವೇಶನ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.
ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ಈಶ್ವರಗೆರೆಯ ಸುರೇಶ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವಂತೆ ಕೋರಿದರು. ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ ಮುಖ್ಯಮಂತ್ರಿ, ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ ಬಿಸಿಯೂಟ ನೌಕರರನ್ನು ರಕ್ಷಿಸಬೇಕು, ಕ್ಲೌಡ್ ಕಿಚನ್ ವ್ಯವಸ್ಥೆ ಬೇಡ ಎಂದು ನಿಂಗಮ್ಮ ಮನವಿ ಸಲ್ಲಿಸಿದರು. ಜಿ.ಎನ್. ಕೋಟೆ ಕೆರೆಗೆ ಭದ್ರಾ ನೀರು ಹರಿಸುವಂತೆ ರೈತ ಸಂಘದ ಮಂಜುನಾಥ್, ಪಾಯಯ್ಯ ಮತ್ತು ಶಿವಕುಮಾರ್ ಮನವಿ ಸಲ್ಲಿಸಿದರು.
ಒಟ್ಟಿನಲ್ಲಿ ಹಿರಿಯೂರಿನ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿ, ಹಲವು ವಿಚಾರಗಳಲ್ಲಿ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿ ಜನರ ಅಹವಾಲುಗಳಿಗೆ ಸ್ಪಂದಿಸಿದರು.
