ಕೇಂದ್ರ – ರಾಜ್ಯ ಸರ್ಕಾರಗಳ ಯೋಜನೆಯನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಲಿ; ಸಚಿವ ಎಸ್ ಟಿ ಎಸ್
* ಬೆಳಗಾವಿ ಬಿಜೆಪಿ ಕಚೇರಿಗೆ ಭೇಟಿ, ಪದಾಧಿಕಾರಿಗಳ ಜತೆ ಸಭೆ
ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಜನರ ಮನೆ ಮನೆಗೆ ಮುಟ್ಟಿಸುವಲ್ಲಿ ಶ್ರಮವಹಿಸಬೇಕು. ಈ ಮೂಲಕ ಪಕ್ಷವನ್ನು ಬೇರುಮಟ್ಟದಿಂದ ಗಟ್ಟಿಗೊಳಿಸಬೇಕು ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಕರೆ ನೀಡಿದರು.
ಬೆಳಗಾವಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಚಿವರು, ಪ್ರಮುಖ ಪದಾಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದರು.
ನಾನು ಪ್ರತಿ ಜಿಲ್ಲೆಯಲ್ಲಿ ಪ್ರವಾಸ ಮಾಡುವ ಸಂದರ್ಭದಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿ ಚರ್ಚಿಸುವ ಪರಿಪಾಠವನ್ನು ಇಟ್ಟುಕೊಂಡಿದ್ದೇನೆ. ಈ ಮೂಲಕ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ಅವರಿಗೂ ಸಹ ಬಲ ತುಂಬುವ ಕೆಲಸವನ್ನು ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸಹಕಾರ ಇಲಾಖೆಗೆ ಸಂಬಂಧಪಟ್ಟ ಯಾವುದೇ ಕೆಲಸಗಳಿದ್ದರೂ ಸಹ ಕಾರ್ಯಕರ್ತರು ನನ್ನ ಗಮನಕ್ಕೆ ತಂದರೆ ಸಾಧ್ಯವಾದಷ್ಟರ ಮಟ್ಟಿಗೆ ಮಾಡಿಕೊಡುವ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.
ಸಹಕಾರಿ ಸಂಘ- ಸಂಸ್ಥೆಗಳ ಹಣ ದುರ್ಬಳಕೆ ವಿರುದ್ಧ ಕಠಿಣ ಕ್ರಮ
ಸಹಕಾರಿ ಸಂಘ ಸಂಸ್ಥೆಗಳಲ್ಲಿ ಹಣ ದುರ್ಬಳಕೆಗಳಂತಹ ಪ್ರಕರಣಗಳು ಕಂಡುಬಂದಲ್ಲಿ ನಮ್ಮ ಸರ್ಕಾರ ಸಹಿಸುವುದಿಲ್ಲ. ಯಾರೇ ತಪ್ಪು ಮಾಡಿದ್ದರೂ ಸಹ ಸರ್ಕಾರವು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ. ಸಾರ್ವಜನಿಕರ ಒಂದು ರೂಪಾಯಿಯನ್ನೂ ಸಹ ನಷ್ಟವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ನಮ್ಮದು ಸಾರ್ವಜನಿಕರ ಪರವಾಗಿ ಮಿಡಿಯುವ ಸರ್ಕಾರವಾಗಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲಿ
ಇನ್ನು ಸ್ಥಳೀಯ ಚುನಾವಣೆಗಳು ಒಂದೊಂದಾಗಿ ಪ್ರಾರಂಭವಾಗಲಿವೆ. ಗ್ರಾಮ ಪಂಚಾಯಿತಿ ಚುನಾವಣೆ ಶೀಘ್ರದಲ್ಲೇ ಬರಲಿದ್ದು, ಪಕ್ಷವು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರವನ್ನು ಹಿಡಿಯುವತ್ತ ಕಾರ್ಯಕರ್ತರು ಶ್ರಮವಹಿಸಬೇಕು. ಇದು ಕಾರ್ಯಕರ್ತರ ಚುನಾವಣೆ ಆಗಿರುವುದರಿಂದ ನಾಯಕರ ಬೆಂಬಲ ನಿಮಗೆ ಇದ್ದೇ ಇರುತ್ತದೆ ಎಂದು ಸಚಿವರು ಹೇಳಿದರು.