ರೂ.1837.50 ಲಕ್ಷ ವೆಚ್ಚದಲ್ಲಿ
2,340 ಕುಶಲಕರ್ಮಿಗಳಿಗೆ ಸ್ವಯಂ ಉದ್ಯೋಗ ಸೃಷ್ಟಿಸುವ ಗುರಿ : ಪ್ರೊ. ಎನ್.ಲಿಂಗಣ್ಣ
ಬೆಂಗಳೂರು, ಡಿಸೆಂಬರ್ 02 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನಲ್ಲಿ 2,340 ಕುಶಲಕರ್ಮಿಗಳಿಗೆ ರೂ.1837.50 ಲಕ್ಷಗಳ ವೆಚ್ಚದಲ್ಲಿ ವಿವಿಧ ಯೋಜನೆಗಳಡಿ ಸ್ವಯಂ ಉದ್ಯೋಗ ಕಲ್ಪಿಸಲಾಗುವುದು ಎಂದು ಡಾ:ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ನೂತನ ಅಧ್ಯಕ್ಷ ಪ್ರೊ.ಲಿಂಗಣ್ಣ ತಿಳಿಸಿದರು.
ಅವರು ಇಂದು ಡಾ:ಬಾಬು ಜಗಜೀವನ ರಾಂ ಲಿಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ತಾವು ಡಿಸೆಂಬರ್ 01 ರಂದು ಅಧಿಕಾರ ವಹಿಸಿಕೊಂಡಿದ್ದು, ಈ ನಿಗಮದ ಆರ್ಥಿಕ ಸದೃಢತೆ, ಅಭಿವೃದ್ಧಿಗಾಗಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತೇನೆ ಎಂದರು.
ಪಾರಂಪರಿಕವಾಗಿ ಚರ್ಮಗಾರಿಕೆ ವೃತ್ತಿ ಮಾಡುತ್ತಿರುವ ಕುಟುಂಬಗಳ ಸರ್ವತೋಮುಖ ಅಭಿವೃದ್ಧಿಯ ಉದ್ದೇಶದಿಂದ ಹಾಗೂ ಅವರ ಆರ್ಥಿಕ ಮತ್ತು ಸಾಮಾಜಿಕ ಅಭ್ಯುದಯವನ್ನು ಗಮನದಲ್ಲಿಟ್ಟುಕೊಂಡು ನಿಗಮವು ಹಲವು ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಿದೆ ಎಂದರು.
2020-21ನೇ ಸಾಲಿಗೆ 40.00 ಕೋಟಿಗಳ ಅನುದಾನವನ್ನು ಮಂಜೂರು ಮಾಡಿದ್ದು, 65.89 ಕೋಟಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ಮಂಡಳಿ ಮತ್ತು ಸರ್ಕಾರದ ಅನುಮೋದನೆ ಪಡೆಯಲಾಗಿದೆ. ಈಗಾಗಲೆ ಎಲ್ಲಾ ಜಿಲ್ಲೆಗಳಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಯೋಜನೆಗಳ ಅನುಷ್ಠಾನ ಪ್ರಾರಂಭವಾಗಿದ್ದು, ಮಾರ್ಚ್ 2021ರ ಅಂತ್ಯದೊಳಗೆ ನಿಗಧಿತ ಗುರಿ ಸಾಧಿಸಿ ಪೂರ್ಣ ಅನುದಾನವನ್ನು ವೆಚ್ಚ ಮಾಡಲಾಗುವುದು ಎಂದರು.
ನಿಗಮವು ವಾಣಿಜ್ಯ ಚಟುವಟಿಕೆಗಳಡಿ ರಾಜ್ಯಾದ್ಯಂತ 15 ಲಿಡ್ಕರ್ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಈ ಮಳಿಗೆಗಳಲ್ಲಿ ಕುಶಲಕರ್ಮಿಗಳು ತಯಾರಿಸುವ ಉತ್ಪನ್ನಗಳನ್ನು ಲಿಡ್ಕರ್ ಬ್ರಾಂಡ್ ಅಡಿ ಮಾರಾಟ ಮಾಡಲಾಗುತ್ತಿದ್ದು, ಸಣ್ಣ ಪ್ರಮಾಣದ ಘಟಕಗಳು ತಯಾರಿಸುವÀ ಚರ್ಮದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಪ್ರಮುಖ ಹಬ್ಬಗಳಲ್ಲಿ ರಿಯಾಯಿರಿ ಮಾರಾಟವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸುಮಾರು 16 ಸಾವಿರಕ್ಕಿಂತ ಹೆಚ್ಚು ಚರ್ಮಕಾರರಿಗೆ ಪಾದುಕೆ ಕುಟೀರ, ಸ್ವಾವಲಂಬಿ ಮಾರಾಟ ಮಳಿಗೆ, ಸಂಚಾರಿ ಮಾರಾಟ ಮಳಿಗೆಗಳಿಗೆ ಬಂಡವಾಳ ಒದಗಿಸಲಾಗಿದೆ. 18 ಸಾವಿರಕ್ಕಿಂತ ಹೆಚ್ಚು ಚರ್ಮ ಕುಶಲಕರ್ಮಿಗಳಿಗೆ ಪಾದರಕ್ಷೆ ಮತ್ತು ಚರ್ಮ ವಸ್ತಗಳ ತಯಾರಿಕೆಯಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 750 ಕುಶಲಕರ್ಮಿಗಳಿಗೆ ರೂ.275.58 ಲಕ್ಷ ವೆಚ್ಚದಲ್ಲಿ ತರಬೇತಿ ನೀಡಲಾಗುತ್ತಿದೆ.
ನಿಗಮವು ಇದುವರೆವಿಗೂ ಸುಮಾರು 7,500 ಕ್ಕಿಂತ ಹೆಚ್ಚು ಕುಶಲಕರ್ಮಿಗಳಿಗೆ ವಸತಿ ಕಾರ್ಯಾಗಾರಗಳನ್ನು ನಿರ್ಮಿಸಿಕೊಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 400 ವಸತಿ ಕಾರ್ಯಾಗಾರಗಳನ್ನು 992.44 ಲಕ್ಷ ವೆಚ್ಚದಲ್ಲಿ ಒದಗಿಸಲಾಗಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ 11,772 ಚರ್ಮ ಕುಶಲಕರ್ಮಿಗಳಿಗೆ ರೂ. 5 ಸಾವಿರದಂತೆ 5.89 ಕೋಟಿ ರೂ.ಗಳ ವಿತರಿಸಲಾಗಿದೆ.
ನಿಗಮವನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳಲ್ಲಿ ಲಿಡ್ಕರ್ ಮಾರಾಟ ಮಳಿಗೆಗಳಿಲ್ಲದ 17 ಜಿಲ್ಲೆಗಳಲ್ಲಿ ಫ್ರಾಂಚೈಸಿಗಳ ಮೂಲಕ ಮಾರಾಟ ಮಳಿಗೆಗಳನ್ನು ತೆರೆದು ಮಾರಾಟ ಜಾಲವನ್ನು ವಿಸ್ತರಿಸಲಾಗುವುದು. ಎಂ.ಜಿ ರಸ್ತೆಯಲ್ಲಿರುವ ಕಾವೇರಿ ಆಟ್ರ್ಸ್ ಮತ್ತು ಕ್ರಾಫ್ಟ್ಸ್ ಎಂಪೋರಿಯಂನಲ್ಲಿ ಕೊಲ್ಹಾಪುರಿ ಪಾದರಕ್ಷೆಗಳ ಮಾರಾಟ ಕೇಂದ್ರವನ್ನು ತೆರೆಯಲಾಗುವುದು.
ಮಧುಮೇಹ ಮತ್ತು ಕೀಲು ಸಮಸ್ಯೆಗಳುಳ್ಳ ಗ್ರಾಹಕರಿಗೆ ಅವರ ಪಾದಗಳ ಸಮಸ್ಯೆಗಳಿಗೆ ಸರಿಹೊಂದುವಂತೆ ಕಸ್ಟಮೈಸ್ ಮಾಡಿ ಪಾದರಕ್ಷೆಗಳನ್ನು ಸಿದ್ಧಪಡಿಸುವ ವ್ಯವಸ್ಥೆಯನ್ನು ಪ್ರಥಮವಾಗಿ ಜಯನಗರ ಮಾರಾಟ ಮಳಿಗೆಯಲ್ಲಿ ಮಾಡಲಾಗುವುದು.
ಕರ್ನಾಟಕ ರಾಜ್ಯದಲ್ಲಿ ಜಿ.ಐ. ಟ್ಯಾಗ್ ಪಡೆದ ಉತ್ಪನ್ನಗಳ ಮಾರಾಟಕ್ಕಾಗಿ ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಷನ್ ಸೆಂಟರ್ ರವರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳಿಗೆ ತೆರೆಯುತ್ತಿದ್ದು ಅದರಲ್ಲಿ ಕೊಲ್ಹಾಪುರಿ ಚಪ್ಪಲಿಗಳ ಮಾರಾಟ ಕೌಂಟರ್ ತೆರೆಯಲಾಗುವುದು.
ಚರ್ಮ ಕುಶಲಕರ್ಮಿಗಳಿಗೆ ನೀಡಲಾಗುತ್ತಿರುವ ಕೌಶಲ್ಯ ಅಭಿವೃದ್ಧಿ ತರಬೇತಿಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಲೆದರ್ ಸೆಕ್ಟರ್ ಸ್ಕಿಲ್ ಕೌನ್ಸಿಲ್, ಚೆನ್ನೈ ರವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಕೋವಿಡ್-19 ಸಂಕಷ್ಟಕ್ಕೊಳಗಾಗಿರುವ ಚರ್ಮ ಕುಶಲಕರ್ಮಿಗಳಿಗೆ ಜೀವನೋಪಯಕ್ಕಾಗಿ ಪ್ರಥಮ ಬಾರಿಗೆ ನೇರ ಸಾಲ ಯೋಜನೆ ಜಾರಿಗೆ ತರಲಾಗಿದೆ. ಕುಶಲಕರ್ಮಿಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಅಧ್ಯಯನ ಮಾಡಲು ಮತ್ತು ನಿಖರವಾದ ಸಂಖ್ಯೆ ತಿಳಿಯಲು ಐಎಸ್‍ಇಸಿ ಸಂಸ್ಥೆಯ ಮೂಲಕ ಸಮೀಕ್ಷೆ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ: ನಟರಾಜ್ ಉಪಸ್ಥಿತರಿದ್ದರು
ಪ್ರೊ ಎನ್ ಲಿಂಗಣ್ಣ ಅವರ ಸಂದರ್ಶನ ಇಲ್ಲಿ ಕ್ಲಿಕ್ ಮಾಡಿ…….