ನೀರಾವರಿ ಭೂಮಿ ಖರೀದಿಸಿದರೆ ಅದನ್ನು ಕೃಷಿಗೆ ಮಾತ್ರ ಬಳಸಬೇಕು : ಬಿ.ಎಸ್.ಯಡಿಯೂರಪ್ಪ
ಬೆಂಗಳೂರು, ಡಿಸೆಂಬರ್ 08 (ಕರ್ನಾಟಕ ವಾರ್ತೆ) : ನೀರಾವರಿ ಭೂಮಿ ಖರೀದಿಸಿದರೆ ಅದನ್ನು ಕೃಷಿಗೆ ಮಾತ್ರ ಬಳಕೆ ಮಾಡಬೇಕು ಎಂಬ ಷರತ್ತು ಹಾಕಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಅವರು ಇಂದು ವಿಧಾನಪರಿಷತ್‍ನಲ್ಲಿ ಮರಿತಿಬ್ಬೇಗೌಡ ಅವರು, ಕರ್ನಾಟಕ ಭೂಸುಧಾರಣಾ ವಿಧೇಯಕ ಕುರಿತ ಚರ್ಚೆಯಲ್ಲಿ ಮಾತನಾಡಿದಾಗ, ಮುಖ್ಯಮಂತ್ರಿಗಳು ಮಾತನಾಡಿ ಭೂ ಸುಧಾರಣಾ ಕಾಯ್ದೆಯಲ್ಲಿ 79 ಎ,ಬಿ ನಿಬಂಧನೆಗಳು ಅನೇಕ ರಾಜ್ಯಗಳಲ್ಲಿ ಇಲ್ಲ. ಮಹಾರಾಷ್ಟ್ರ, ತೆಲಂಗಾಣ, ಕೇರಳ, ತಮಿಳುನಾಡು ಆಂಧ್ರಪ್ರದೇಶದಲ್ಲಿಯೂ ಇಲ್ಲ. ಕರ್ನಾಟಕದಲ್ಲಿ ಮಾತ್ರ ಇದ್ದು ಅದನ್ನು ತೆಗೆದು ಹಾಕಿದ್ದೇವೆ ಎಂದರು.
ರೈತರು ಬುದ್ಧಿವಂತರಾಗಿದ್ದು, ಕಾನೂನು ಬಂದ ತಕ್ಷಣ ಯಾವ ರೈತರು ಭೂಮಿ ಮಾರಿಕೊಳ್ಳುವುದಿಲ್ಲ. ಅವರಿಗೆ ಈ ಕುರಿತು ತಿಳುವಳಿಕೆ ಇದೆ ಎಂದ ಮುಖ್ಯಮಂತ್ರಿಗಳು, ಸರ್ಕಾರವು ರೈತರಿಗೆ ತೊಂದರೆಯಾಗುವ ಯಾವುದೇ ಕಾನೂನುಗಳನ್ನು ಜಾರಿಗೆ ತರುವುದಿಲ್ಲ ಎಂದರು.
ರಾಜ್ಯದಲ್ಲಿ ಶೇ. 2ರಷ್ಟು ಭೂಮಿ ಮಾತ್ರ ಕೈಗಾರಿಕೆಗೆ ಬಳಕೆ ಮಾಡಿದ್ದೇವೆ. ಕೈಗಾರಿಕೆಗೆ ಅನುಕೂಲ ಕಲ್ಪಿಸಿಕೊಡಲು ಈ ಕಾನೂನು ರೂಪಿಸಿದ್ದೇವೆ ಎಂದರು.
ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರಮೇಶ್ ಗೌಡ, ಭೂ ಸುಧಾರಣಾ ಕಾಯ್ದೆಯಲ್ಲಿ 79 ಎ, ಬಿ ನಿಬಂಧನೆಗಳನ್ನು ತೆಗೆದು ಹಾಕಿರುವುದನ್ನು ಸ್ವಾಗತಿಸುತ್ತೇನೆ ಎಂದರು.