* ಚುನಾವಣೆ ಬಂದಾಗ ಟಿಕೆಟ್ ಕೇಳುವುದಲ್ಲ. ಈಗಿನಿಂದಲೇ ರಸ್ತೆಗಿಳಿದು, ಸಂಘಟನೆ ಮಾಡಿ ವ್ಯವಸಾಯ ಮಾಡಬೇಕು
* ಸ್ಥಳೀಯರ ಸಮಸ್ಯೆ, ಅಭಿಪ್ರಾಯವನ್ನು ಮನಗಂಡು, ಅವರ ಭಾವನೆಗಳ ಆಧಾರದ ಮೇಲೆ ಹೋರಾಟ
ಹುಬ್ಬಳ್ಳಿ: – ಕಾಂಗ್ರೆಸ್ ನ ಬ್ಲಾಕ್ ಹಾಗೂ ಇತರ ಅಧ್ಯಕ್ಷರುಗಳು ಪಕ್ಷದ ಅಧ್ಯಕ್ಷರ ರಾಯಭಾರಿಗಳು. ಇವರು ಜನರ ಮಧ್ಯೆ ಇದ್ದು, ಅವರ ಅಭಿಪ್ರಾಯವನ್ನು ನಮಗೆ ತಿಳಿಸಬೇಕು. ಜನಸಾಮಾನ್ಯರ ಧ್ವನಿ ಬ್ಲಾಕ್ ಅಧ್ಯಕ್ಷರ ಧ್ವನಿಯಾಗಬೇಕು. ಈ ಬ್ಲಾಕ್ ಅಧ್ಯಕ್ಷರ ಧ್ವನಿ ಕೆಪಿಸಿಸಿ ಅಧ್ಯಕ್ಷರ ಧ್ವನಿಯಾಗಬೇಕು.ಕಾಂಗ್ರೆಸ್ ನಾಯಕರ ಧ್ವನಿಯಾಗಬೇಕು. ಈ ಹಿನ್ನೆಲೆಯಲ್ಲಿ ಮಹಿಳಾ, ರೈತ ಹಾಗೂ ಇತರೆ ಘಟಕಗಳ ಪ್ರಮುಖರು, ಬ್ಲಾಕ್ ಹಾಗೂ ಜಿಲ್ಲಾಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಿದ್ದೇವೆ.
ಈ ವರ್ಷ ಹೋರಾಟ ಹಾಗೂ ಸಂಘಟನೆ ವರ್ಷ ಎಂದು ಘೋಷಿಸಿದ್ದೇವೆ. ಈ ಹೋರಾಟ ನನ್ನ ಹೋರಾಟ ಅಲ್ಲ. ಎಐಸಿಸಿಯಿಂದಾಗಲಿ, ಕೆಪಿಸಿಸಿಯಿಂದಾಗಲಿ ಸೂಚಿಸುವ ಹೋರಾಟ ಅಲ್ಲ. ಸ್ಥಳೀಯರ ಸಮಸ್ಯೆ, ಅಭಿಪ್ರಾಯವನ್ನು ಮನಗಂಡು, ಅವರ ಭಾವನೆಗಳ ಆಧಾರದ ಮೇಲೆ ಹೋರಾಟ ರೂಪಿಸುತ್ತೇವೆ.
ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೊಟ್ಟ ಸಲಹೆಯನ್ನು ಉದಾಹರಣೆಯಾಗಿ ಹೇಳುತ್ತೇನೆ. ಮಹಾತ್ಮ ಗಾಂಧೀಜಿ ಅವರ ಹೆಸರಿನ ವಾರ್ಡ ಅನ್ನು ಈ ಸರ್ಕಾರ ಅಟಲ್ ನಗರ ಎಂದು ಬದಲಿಸಲು ಮುಂದಾಗಿದೆ. ಇಂತಹ ಅನೇಕ ಭಾವನಾತ್ಮಕ ವಿಚಾರಗಳ ಜತೆಗೆ ನಮ್ಮ ಸರ್ಕಾರದ ಮಂಜೂರು ಮಾಡಿದ್ದ ಸಾವಿರಾರು ಕೋಟಿ ರುಪಾಯಿ ಯೋಜನೆಗಳನ್ನು ರದ್ದುಗೊಳಿಸುವ ಹುನ್ನಾರ ನಡೆಯುತ್ತಿದೆ.
ಹೀಗೆ ಪ್ರತಿ ಕ್ಷೇತ್ರದಲ್ಲೂ ಅನೇಕ ಅನ್ಯಾಯಗಳಾಗಿವೆ. ಅದರ ಅನ್ವಯ ಹೋರಾಟ ಮಾಡಲು ಸಿದ್ಧತೆ ಮಾಡಿಕೊಳ್ಳಲಿದ್ದೇವೆ. ಪಕ್ಷ ಸಂಘಟನೆ ಮತ್ತಷ್ಟು ಬಲವಾಗಿ ನಡೆಯಲಿದೆ.
ಕಲಬುರ್ಗಿ ಸಮಾವೇಶದ ನಂತರ ಒಂದು ದಿನಾಂಕ ನಿಗದಿ ಮಾಡಿ ರಾಜ್ಯದಲ್ಲಿ ಪಕ್ಷ ಸೋತಿರುವ ವಿಧಾನಸಭಾ ಕ್ಷೇತ್ರಗಳಿಗೆ ಆದ್ಯತೆ ಮೇರೆಗೆ ಪ್ರವಾಸ ಮಾಡುತ್ತೇವೆ. ವಿರೋಧ ಪಕ್ಷದ ನಾಯಕರು ಎಲ್ಲ ಭಾಗಕ್ಕೂ ಬರಲು ಸಾಧ್ಯವಾಗುವುದಿಲ್ಲ. ಕೆಲವು ಭಾಗಗಳಲ್ಲಿ ಅವರು ನಮ್ಮ ಜತೆ ಇರುತ್ತಾರೆ. ಉಳಿದೆಡೆ ಇತರೆ ರಾಜ್ಯ ನಾಯಕರ ಜತೆ ಹೋರಾಟ ಮಾಡುತ್ತೇವೆ.
ಈ ಮಧ್ಯದಲ್ಲಿ ಯಾರು ಅರ್ಹ ನಾಯಕರಿದ್ದಾರೆ, ಯಾರು ಪಕ್ಷ ಸಂಘಟನೆ ಮಾಡುತ್ತಾರೆ ಎಂಬುದನ್ನು ಗಮನಿಸುತ್ತೇವೆ. ಚುನಾವಣೆ ಬಂದಾಗ ಟಿಕೆಟ್ ಕೇಳುವುದಲ್ಲ. ಈಗಿನಿಂದಲೇ ರಸ್ತೆಗಿಳಿದು, ಸಂಘಟನೆ ಮಾಡಿ ವ್ಯವಸಾಯ ಮಾಡಬೇಕು. ಈ ಹಿನ್ನೆಲೆಯಲ್ಲಿ ನಾನು ಎಲ್ಲೋ ಕೂತು ತೀರ್ಮಾನ ಮಾಡುವ ಬದಲು ನನ್ನ ಕಣ್ಣಾರೆ ನೋಡಿ ತೀರ್ಮಾನ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ಅದಕ್ಕಾಗಿ ಕಾರ್ಯಕರ್ತರ ಬಳಿಗೆ ಧಾವಿಸಲಿದ್ದೇನೆ.
ಬಿಎಲ್ಎಯಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಎಲ್ಲರಿಗೂ ಪಕ್ಷದ ವಿಚಾರದ ಬಗ್ಗೆ ತರಬೇತಿ ನೀಡಲು ನಿರ್ಧರಿಸಿದ್ದೇವೆ. ರಾಜ್ಯ ಮಟ್ಟದಲ್ಲಿ ಸತೀಶ್ ಜಾರಕಿಹೊಳಿ ಇದರ ನೇತೃತ್ವ ವಹಿಸಲಿದ್ದಾರೆ.
ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಕೇಂದ್ರ ಹಾಗೂ ರಾಜ್ಯದ ಜನವಿರೋಧಿ ಬಿಜೆಪಿ ಸರಕಾರಗಳ ವಿರುದ್ಧ ಹೋರಾಟ ರೂಪಿಸುವ ಸಂಬಂಧ ಸಲಹೆ ನೀಡಿದ್ದಾರೆ. ಅದನ್ನು ಅನುಷ್ಠಾನಕ್ಕೆ ತರುತ್ತೇವೆ.