ಬೆಂಗಳೂರಿನ ವಿವಿಧ 10 ಸ್ಥಳಗಳ ಪರಿಶೀಲನೆ
ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ
ಬೆಂಗಳೂರು, ಜನವರಿ 30 (ಕರ್ನಾಟಕ ವಾರ್ತೆ): ಬೆಂಗಳೂರು ಮಿಷನ್ 2022 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದಂತೆ ಇಂದು ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.
ಬೆಂಗಳೂರು ಅಭಿವೃಧ್ಧಿಗೆ ಸಂಬಂಧಿಸಿದಂತಹ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಸಚಿವರುಗಳ ತಂಡದೊಂದಿಗೆ ಬೆಂಗಳೂರಿನ ವಿವಿಧ 10 ಸ್ಥಳಗಳ ಪರಿಶೀಲನೆಯನ್ನು ಬಿ.ಎಂ.ಟಿ.ಸಿ. ಬಸ್‍ನಲ್ಲಿ ಪ್ರಯಾಣಿಸಿ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.
ವಿಧಾನ ಸೌಧದಿಂದ ಆರಂಭವಾದ ಮುಖ್ಯಮಂತ್ರಿಗಳ ಕಾರ್ಯಕ್ರಮ ರೇಸ್‍ಕೋರ್ಸ್ ರಸ್ತೆಯಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಸೈಕಲ್‍ಟ್ರಾಕ್ ಪರಿಶೀಲಿಸಿದ ಮುಖ್ಯಮಂತ್ರಿಗಳಿಗೆ ಅಲ್ಲಿನ ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಾಂ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಮೇಲು ಸೇತುವೆ ನಿರ್ಮಿಸುವಂತೆ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ನಂತರ ರಾಜಾರಾಂ ಮೋಹನ್‍ರಾಂ ರಸ್ತೆಯ ರಿಚ್‍ಮಂಡ್ ಸರ್ಕಲ್ ಹತ್ತಿರದ ಕಾಮಗಾರಿಯನ್ನು ವೀಕ್ಷಿಸಿ ರೆಸಿಡೆನ್ಸಿ ರಸ್ತೆ ಮುಖಾಂತರ ಹೇನ್ಸ್ ರಸ್ತೆ ಕಾಲುನಡಿಗೆಯಲ್ಲಿ ಕಾಮಗಾರಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಹ್ಯಾರೀಸ್ ಅವರು ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ಅಶೋಕ್ ನಗರದ ವುಡ್ ಸ್ಟ್ರೀಟ್, ಎಂ.ಜಿ.ರಸ್ತೆಯಿಂದ ಎಸ್‍ಬಿಐ ಜಂಕ್ಷನ್ ನಡುವಿನ ರಸ್ತೆ, ರಾಜಭವನ ಜಂಕ್ಷನ್ ಹಾಗೂ ಜವಾಹರಲಾಲ್ ನೆಹರೂ ಪ್ಲಾನಿಟೋರಿಯಂ ರಸ್ತೆಯ ಕಾಮಗಾರಿಗಳನ್ನು ವೀಕ್ಷಿಸಿ ವಿಧಾನ ಸೌಧಕ್ಕೆ ಮರಳಿದ ಮುಖ್ಯಮಂತ್ರಿಗಳು ಮಾಧ್ಯಮಗಳ ಜೊತೆ ಮಾತನಾಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸ್ಮಾರ್ಟ್‍ಸಿಟಿ ಯೋಜನೆಯಡಿ ಬೆಂಗಳೂರಿನಲ್ಲಿ ಒಟ್ಟು ವಿವಿದ 37 ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದು ಅದರಲ್ಲಿ ಮುಖ್ಯವಾಗಿ ರಸ್ತೆ ಅಭಿವೃದ್ಧಿ, ಕೋವಿಡ್ ಆಸ್ಪತ್ರೆಗಳಿಗೆ ನೆರವು, ಐ.ಟಿ ಯೋಜನೆಗಳು, ಕಟ್ಟಡ ನಿರ್ಮಾಣ ಹಾಗೂ ಇತರೆ ಕಾಮಗಾರಿಗಳು ಸೇರಿ ಅಂದಾಜು ವೆಚ್ಚ 930 ಕೋಟಿ ರೂ. ಗಳಾಗಿವೆ ಎಂದು ತಿಳಿಸಿದರು.
ಈವರೆಗೆ 4 ನಾಲ್ಕು ಕಾಮಗಾರಿಗಳು ಪೂರ್ಣಗೊಂಡಿದ್ದು, 29 ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ ಇನ್ನು 4 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಈವರೆಗೆ ಒಟ್ಟು 103 ಕೋಟಿ ರೂ. ವೆಚ್ಚವಾಗಿದೆ.
ಈ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟದ ಕಾಮಗಾರಿಯನ್ನು ಖಾತರಿಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಂಗಳೂರು ನಗರ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಯ ಸಂದರ್ಭಲ್ಲಿ ಮುಖ್ಯಮಂತ್ರಿಗಳೊಂದಿಗೆ ಉಪ ಮುಖ್ಯಮಂತ್ರಿ ಡಾ : ಸಿ.ಎನ್. ಅಶ್ವಥ್‍ನಾರಾಯಣ್ ಸೇರಿದಂತೆ ಸಚಿವರುಗಳಾದ ಆರ್. ಅಶೋಕ್, ಬಿ.ಎ. ಬಸವರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.