IMG 20210206 153546 rotated

ದೇಶದ ಅಭಿವೃದ್ಧಿಗೆ ಪೂರಕ ಬಜೆಟ್….!

STATE Genaral

 

ದೇಶದ ಅಭಿವೃದ್ಧಿಗೆ ಪೂರಕ ಕೇಂದ್ರ ಬಜೆಟ್- ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ

ಬೆಂಗಳೂರು: ಮೂಲಸೌಕರ್ಯ ವೃದ್ಧಿ, ಆರೋಗ್ಯ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡುವ ಕೇಂದ್ರದ 2021ರ ಬಜೆಟ್‍ನಿಂದ ದೇಶವು ಪ್ರಗತಿಪಥದಲ್ಲಿ ಸಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರಾದ ಶ್ರೀ ಪ್ರಲ್ಹಾದ ಜೋಷಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಆಂತರಿಕವಾಗಿ ಉದ್ಯೋಗಾವಕಾಶಗಳೂ ವೃದ್ಧಿಸಲಿವೆ. ದೇಶದ ಆರ್ಥಿಕತೆಯನ್ನು 2025ರ ವೇಳೆಗೆ 5 ಲಕ್ಷ ಕೋಟಿ ಡಾಲರ್‍ಗೇರಿಸುವ ಮೂಲಕ ವಿಶ್ವದ ಪ್ರಮುಖ ರಾಷ್ಟ್ರವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು. ಆರೋಗ್ಯ ಕ್ಷೇತ್ರಕ್ಕೆ ಹಿಂದಿನ 94 ಸಾವಿರ ಕೋಟಿ ಬದಲಾಗಿ ಈ ಬಾರಿ 2,23,000 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು. 17,788 ಗ್ರಾಮೀಣ ಮತ್ತು 11,024 ನಗರ ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದಕ್ಕಾಗಿ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಯ ಮೂಲಕ ನೆರವಾಗಲು ಮುಂದಾಗಿದ್ದೇವೆ ಎಂದು ಅವರು ವಿವರಿಸಿದರು.
602 ಜಿಲ್ಲೆಗಳು, 12 ಕೇಂದ್ರ ಸಂಸ್ಥೆಗಳಲ್ಲಿ ತುರ್ತು ಆರೈಕೆ ಬ್ಲಾಕ್ ಆರಂಭಿಸಲಾಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಈ ಮೂಲಕ ವಿಶೇಷ ಒತ್ತು ನೀಡುವ ಬಜೆಟ್ ಇದಾಗಿದೆ ಎಂದರು.
ಶುದ್ಧ ನೀರು ಪೂರೈಕೆಗೆ ವಿಶೇಷ ಆದ್ಯತೆ ಕೊಡಲಾಗುವುದು. 112 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ “ಮಿಷನ್ ಪೋಷಣ್” ಯೋಜನೆಯ ಅನುಷ್ಠಾನಕ್ಕೆ ತೀವ್ರ ಪ್ರಯತ್ನ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 24,435 ಕೋಟಿ ರೂಪಾಯಿ ಮೀ¸ಲಿಡಲಾಗುವುದು. 4,378 ನಗರದ ಸ್ಥಳೀಯ ಪ್ರದೇಶದ ಎಲ್ಲ ಮನೆಗಳಿಗೆ ಕೊಳವೆ ನೀರಿನ ಸಂಪರ್ಕ ನೀಡುವ “ಜಲ್ ಜೀವನ್” ಮಿಷನ್” (ನಗರ) ಯೋಜನೆಯನ್ನು 500 ಅಮೃತ ನಗರಗಳಲ್ಲಿ ಆರಂಭಿಸಲಾಗುವುದು. 2024ರೊಳಗೆ 2.87 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದಾದ್ಯಂತ ಎಲ್ಲ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಪೂರೈಕೆಯ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

IMG 20210206 153514
ಮೂಲ ಸೌಕರ್ಯಕ್ಕೆ ದಾಖಲೆ ಮಟ್ಟದಲ್ಲಿ ಬಂಡವಾಳ ವೆಚ್ಚ ಮಾಡಲಾಗುತ್ತಿದೆ. 2021-22 ರ ಸಾಲಿನಲ್ಲಿ ದೇಶದಾದ್ಯಂತ ಆಧುನಿಕ ಭಾರತವನ್ನು ಪ್ರತಿಬಿಂಬಿಸುವ ಮೂಲ ಸೌಕರ್ಯ ಹೆಚ್ಚಿಸಲು 5.54 ಲಕ್ಷ ಕೋಟಿ ರೂಪಾಯಿ ಬಂಡವಾಳ ವೆಚ್ಚ ಮಾಡಲಾಗುತ್ತದೆ. ಬಂದರು ಮತ್ತು ಜಲಮಾರ್ಗ: ಸುಮಾರು 2,000 ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗೀ ಪಾಲುದಾರಿಕೆಯಲ್ಲಿ ಹೊಸದಾದ 7 ಯೋಜನೆಗಳನ್ನು ಪ್ರಮುಖ ಬಂದರುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಆರಂಭಿಸಲಾಗುವುದು. ಒಳನಾಡು ಸಾರಿಗೆ, ಬಂದರು ಕ್ಷೇತ್ರದಲ್ಲಿ ಹೊಸದಾಗಿ 1.5 ಲಕ್ಷ ಉದ್ಯೋಗ ಸೃಷ್ಟಿಸುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
ಮೂಲ ಸೌಕರ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಎಕ್ಸ್‍ಪ್ರೆಸ್ ಹೆದ್ದಾರಿಗೆ 1,18,101 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿದ್ದು, ಭಾರತ್‍ಮಾಲಾ ಯೋಜನೆಯಡಿ 3.3 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 13,000 ಕಿ.ಮೀ ರಸ್ತೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದರು.
“ಮೇಕ್ ಇನ್ ಇಂಡಿಯಾ” ಯೋಜನೆಯಡಿ 2030ರ ವೇಳೆಗೆ ಭವಿಷ್ಯದ ರೈಲ್ವೆಯನ್ನು ಸಜ್ಜುಗೊಳಿಸುವುದು ಭಾರತೀಯ ರೈಲ್ವೆಇಲಾಖೆಯ 2030ರ ರಾಷ್ಟ್ರೀಯ ಯೋಜನೆಯ ಉದ್ದೇಶ ಹೊಂದಲಾಗಿದೆ. ಪ್ರಸಕ್ತ ವರ್ಷದಲ್ಲಿ ಭಾರತೀಯ ರೈಲ್ವೆಯಲ್ಲಿ ದಾಖಲೆಯ 1.07 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಾಗುವುದು. 2021ರ ಅಂತ್ಯಕ್ಕೆ ಶೇ 72ರಷ್ಟು ಹಾಗೂ 2023ರ ಡಿಸೆಂಬರ್ ವೇಳೆಗೆ ಶೇ 100 ರಷ್ಟು ಎಲ್ಲ ಬ್ರಾಡ್‍ಗೇಜ್ ಮಾರ್ಗಗಳ ವಿದ್ಯುದ್ದೀಕರಣ ನಡೆಯಲಿದೆ ಎಂದರು.

IMG 20210206 153619
ಉಜ್ವಲ ಯೋಜನೆಯಡಿ ಇನ್ನೂ 1 ಕೋಟಿ ಮಹಿಳೆಯರಿಗೆ ಸಬ್ಸಿಡಿ ಸಹಿತ ಉಚಿತ ಅಡುಗೆ ಅನಿಲದ ಸಂಪರ್ಕ ಒದಗಿಸಲಾಗುವುದು ಎಂದ ಅವರು, ಈ ಬಜೆಟ್ ದೇಶಿಯ ಉತ್ಪಾದನೆಗೆ ಉತ್ತೇಜನ ನೀಡಲಿದ್ದು, ಆತ್ಮನಿರ್ಭರ ಭಾರತಕ್ಕೆ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 2ನೇ ಹಂತದ ಬೆಂಗಳೂರು ಮೆಟ್ರೋ ನಿರ್ಮಾಣ ಕಾಮಗಾರಿಗೆ 14,788 ಕೋಟಿ ರೂಪಾಯಿ ನೀಡಲಾಗುತ್ತಿದೆ. 33 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು, 1,197 ಕಿ.ಮೀ. ಹೆದ್ದಾರಿಗೆ ಸಂಬಂಧಿಸಿ 10,904 ಕೋಟಿ ರೂಪಾಯಿ ಹಣ ಹೂಡಿಕೆ ಆಗಲಿದೆ. ಮುಂದಿನ ವರುಷ ಕರ್ನಾಟಕದಲ್ಲಿ 1,16,144 ಕೋಟಿ ರೂಪಾಯಿಯ ಮೂಲ ಸೌಕರ್ಯ ವ್ಯವಸ್ಥೆ ನಿರ್ಮಾಣಗೊಳ್ಳಲಿವೆ ಎಂದರು. ಬಂದರುಗಳ ಅಭಿವೃದ್ಧಿ, ರಸ್ತೆ ಸೌಕರ್ಯ ಹೆಚ್ಚಳ ಸೇರಿದಂತೆ ಮೂಲಸೌಕರ್ಯ ವೃದ್ಧಿಯಿಂದ ದೇಶದತ್ತ ವಿದೇಶಿ ಬಂಡವಾಳವೂ ಹರಿದುಬಂದು ಹೆಚ್ಚು ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಿದರು.
ರಾಜ್ಯ ಸಹಕಾರ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್, ಪಕ್ಷದ ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಧ್ಯಮ ವಿಭಾಗದ ರಾಜ್ಯ ಸಂಚಾಲಕರಾದ ಶ್ರೀ ಕರುಣಾಕರ ಖಾಸಲೆ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.