ವಿಕೆಂಡ್ ಕರ್ಫ್ಯೂ ವಿಸ್ತರಣೆ ಊಹಾಪೋಹಗಳ ಬಗ್ಗೆ ವ್ಯಾಖ್ಯಾನ ಮಾಡಲ್ಲ
ವೀಕೆಂಡ್ ಕರ್ಫ್ಯೂ ವಿಸ್ತರಣೆ ಕುರಿತು ಸರ್ಕಾರದ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ
ವೀಕೆಂಡ್ ಕರ್ಫ್ಯೂ ರಾಜ್ಯಾದ್ಯಂತ ಯಶಸ್ವಿ
ಬೆಂಗಳೂರು: ಸದ್ಯಕ್ಕೆ ವೀಕೆಂಡ್ ಕರ್ಫ್ಯೂ ಮಾತ್ರ ಜಾರಿಯಲ್ಲಿರುತ್ತದೆ. ಅದನ್ನು ವಾರದ ದಿನಗಳಿಗೂ ವಿಸ್ತರಿಸುವ ಊಹಾಪೋಹಗಳ ಕುರಿತು ವ್ಯಾಖ್ಯಾನ ಮಾಡುವುದಿಲ್ಲ ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ಫ್ಯೂ ವಿಸ್ತರಣೆ ಬಗ್ಗೆ ಇದುವರೆಗೆ ಯಾವುದೇ ಚರ್ಚೆಯಾಗಿಲ್ಲ ಎಂದು ತಿಳಿಸಿದರು.
ವೀಕೆಂಡ್ ಕರ್ಫ್ಯೂ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಜನ ಸಹಕರಿಸಿದ್ದಾರೆ. ಇದು ಕೋವಿಡ್ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಆದರೆ ವೀಕೆಂಡ್ ಕರ್ಫ್ಯೂ ವಿಸ್ತರಣೆ ಕುರಿತು ಸರ್ಕಾರದ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಶನಿವಾರ ಸಂಜೆ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯಲ್ಲಿಯೂ ಈ ಕುರಿತು ಚರ್ಚೆ ಆಗಿಲ್ಲ. ಸದ್ಯಕ್ಕೆ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಈ ಕೇಂದ್ರ ಸರ್ಕಾರ ನಾವು ಕೇಳಿರುವುದಕ್ಕಿಂತಲೂ ಹೆಚ್ಚಿನ ಅಂದರೆ ೮೦೦ ಟನ್ ಆಮ್ಲಜನಕವನ್ನು ನೀಡಿದೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಆಮ್ಲಜನಕದ ಬೇಡಿಕೆ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಬರುವ ದಿನಗಳಲ್ಲಿ ಎಲ್ಲರಿಗೂ ಆಕ್ಸಿಜನ್ ಸಿಗಲಿದೆ ಎಂದರು. ಎಪ್ರಿಲ್ 30ರವರೆಗೆ ರಾಜ್ಯ ಸರ್ಕಾರದ ಬಳಿ 50000 ರೆಮ್‌ಡಿಸಿವಿರ್ ಔಷಧೀಯ ಸಂಗ್ರಹ ಇತ್ತು. ಕೇಂದ್ರ ಸರ್ಕಾರ 1.22 ಲಕ್ಷ ರೆಮ್ ಡಿಸಿವಿರ್ ಔಷಧವನ್ನು ಪೂರೈಸುವ ಭರವಸೆ ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಮೇ 1 ರನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಮೊದಲ ಡೋಸ್ ನೀಡಲಾಗುವುದು. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ. ಲಸಿಕೆಯ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವೀಕೆಂಡ್ ಕರ್ಫ್ಯೂ ಗೆ ಜನ ಸ್ವಯಂಪ್ರೇರಣೆಯಿಂದ ಸ್ಪಂದಿಸಿದ್ದಾರೆ. ಮನೆಯಿಂದ ಹೊರಬರದೆ ಕೋವಿಡ್ ಚೈನ್ ಬ್ರೇಕ್ ಮಾಡಲು ಸಹಕರಿಸಿದ್ದಾರೆ. ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಜನ ಸ್ವಯಂ ಪ್ರೇರಿತರಾಗಿ ನಿಯಂತ್ರಣ ಹೇರಿಕೊಳ್ಳಬೇಕು. ಆಗ ಕೋವಿಡ್ ಎರಡನೇ ಅಲೆ ನಿಯಂತ್ರಣ ಸಾಧ್ಯ ಎಂದು.ಬಸವರಾಜ ಬೊಮ್ಮಾಯಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.